ಬ್ಯಾಂಕುಗಳು ಒಂದೊಂದಾಗಿ ದಿವಾಳಿಯಾಗುತ್ತಿರುವ ಹೊತ್ತಿಗೇ ಗ್ರಾಹಕರಿಗೆ ಮತ್ತೊಂದು ಆಘಾತಕಾರಿ ಸುದ್ದಿ ಬ್ಯಾಂಕಿಂಗ್ ವಲಯದಿಂದ ಬಂದಿದೆ. ನಿಮ್ಮ ನಿಗದಿತ ಠೇವಣಿ(ಫಿಕ್ಸೆಡ್ ಡಿಪಾಸಿಟ್) ಮೊತ್ತದ ಮೇಲೆ ಬರುವ ಬಡ್ಡಿ, ಈಗ ಉಳಿತಾಯ ಖಾತೆಯ ಹಣದ ಮೇಲಿನ ಬಡ್ಡಿಗಿಂತ ಕಡಿಮೆ ಎಂಬುದೇ ಆ ಹೊಸ ಸುದ್ದಿ!
ಹೌದು, ದೇಶದ ಪ್ರಮುಖ ಬ್ಯಾಂಕುಗಳ ಬಡ್ಡಿ ದರಗಳಲ್ಲಿ ಆಗಿರುವ ಇತ್ತೀಚಿನ ಬದಲಾವಣೆಗಳ ಪರಿಣಾಮವಾಗಿ ಸಾಮಾನ್ಯ ಉಳಿತಾಯ ಖಾತೆಗಳಿಗಿಂತ ನಿಗದಿತ ಠೇವಣಿ ಖಾತೆಗಳಿಗೆ ಬ್ಯಾಂಕ್ ನೀಡುವ ಬಡ್ಡಿ ಕಡಿಮೆಯಾಗಿದೆ. ಅದರಲ್ಲೂ ಅಲ್ಪಾವಧಿ ಠೇವಣಿಗಳ ಮೇಲೆ ಬ್ಯಾಂಕು ನೀಡುವ ಬಡ್ಡಿದರದಲ್ಲಿ ಭಾರೀ ವ್ಯತ್ಯಾಸವಾಗಿದ್ದು, ಕೆಲವು ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ಹಣದ ಮೇಲಿನ ಬಡ್ಡಿ ದರಕ್ಕೆ ಹೋಲಿಸಿದರೆ, ಶೇ.05ರಷ್ಟು ಭಾರೀ ಕಡಿತ ಮಾಡಲಾಗಿದೆ.
ಲಾಕ್ ಡೌನ್ ಮತ್ತು ಕರೋನಾ ಸಂಕಷ್ಟದಿಂದಾಗಿ ದೇಶದ ಆರ್ಥಿಕ ಚಟುವಟಿಕೆಗಳು ನೆಲಕಚ್ಚಿರುವ ಹಿನ್ನೆಲೆಯಲ್ಲಿ ಹಣಕಾಸು ವಹಿವಾಟು ಕುಸಿದಿದೆ. ಮುಖ್ಯವಾಗಿ ಉದ್ಯಮಿಗಳು ಮತ್ತು ಉತ್ಪಾದನಾ ಚಟುವಟಿಕೆಗಳಿಗೆ ಬಳಕೆಯಾಗುತ್ತಿದ್ದ ಬ್ಯಾಂಕ್ ಹಣ ಇದೀಗ ಉದ್ಯಮ ಚಟುವಟಿಕೆಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬ್ಯಾಂಕುಗಳಲ್ಲೇ ಕೊಳೆಯತೊಡಗಿದೆ. ಬ್ಯಾಂಕಿನಲ್ಲಿ ಹೆಚ್ಚುತ್ತಿರುವ ಯಾವುದೇ ವರಮಾನ ತರದ ನಗದು ಪ್ರಮಾಣ ಮತ್ತು ಸಾಲಕ್ಕೆ ಕುಸಿದಿರುವ ಬೇಡಿಕೆ ಹಿನ್ನೆಲೆಯಲ್ಲಿ ಬ್ಯಾಂಕುಗಳು ಅಲ್ಪಾವಧಿ ಮತ್ತು ದೀರ್ಘಾವಧಿ ಠೇವಣಿ ಮೇಲೆ ತಾವು ಗ್ರಾಹಕರಿಗೆ ಪಾವತಿಸಬೇಕಾದ ಬಡ್ಡಿ ಹೊರೆ ಕಡಿತ ಮಾಡಿಕೊಳ್ಳಲು ಬಡ್ಡಿ ದರ ಕಡಿತದ ಕ್ರಮಕೈಗೊಂಡಿವೆ. ಪರಿಣಾಮವಾಗಿ ಹೆಚ್ಚು ಬಡ್ಡಿ ತರುತ್ತಿದ್ದ ಕಾರಣಕ್ಕೆ ಉಳಿತಾಯದಾರರ ಮೆಚ್ಚಿನ ಖಾತೆಗಳಾದ ನಿಗದಿತ ಠೇವಣಿ ಈಗ ಸಾಮಾನ್ಯ ಉಳಿತಾಯ ಖಾತೆಗಿಂತ ಕಡಿಮೆ ಬಡ್ಡಿದರ ನೀಡುವ ಸ್ಥಿತಿ ಬಂದೊದಗಿದೆ.
ದೇಶದ ಅತಿದೊಡ್ಡ ಬ್ಯಾಂಕ್ ಆದ SBI ಈಗ 7ರಿಂದ 45 ದಿನಗಳ ಅಲ್ಪಾವಧಿ ನಿಗದಿತ ಠೇವಣಿ ಮೇಲೆ 2.9 ಶೇ. ಬಡ್ಡಿ ನೀಡುತ್ತಿದೆ. ಆ ಬ್ಯಾಂಕ್ ಉಳಿತಾಯ ಖಾತೆ ಮೇಲೆ ನೀಡುವ ಶೇ.2.7 ಬಡ್ಡಿ ದರಕ್ಕೆ ಹೋಲಿಸಿದರೆ ಈ ನಿಗದಿತ ಠೇವಣಿ ಬಡ್ಡಿ ದರ ಚೂರು ಉತ್ತಮ. ಆದರೆ, ಇದೇ ಮಾತನ್ನು ಇತರ ಬ್ಯಾಂಕುಗಳ ವಿಷಯದಲ್ಲಿ ಹೇಳಲಾಗದು. ಮತ್ತೊಂದು ಅತಿ ದೊಡ್ಡ ಬ್ಯಾಂಕ್ ಆದ ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಉಳಿತಾಯ ಖಾತೆ ಗ್ರಾಹಕರಿಗೆ ಶೇ.3.5ರಷ್ಟು ಬಡ್ಡಿ ದರ ನೀಡಿದರೆ, ನಿಗದಿತ ಠೇವಣಿ(ಅಲ್ಪಾವಧಿ) ಮೇಲೆ ಕೇವಲ ಶೇ.3.25ರಷ್ಟು ಬಡ್ಡಿ ದರ ನಿಗದಿ ಮಾಡಿದೆ.
ಹಾಗೇ ಖಾಸಗೀ ವಲಯದ ಪ್ರಮುಖ ಬ್ಯಾಂಕುಗಳಲ್ಲಿ ಕೂಡ ನಿಗದಿತ ಠೇವಣಿ ಮೇಲಿನ ಬಡ್ಡಿದರದಲ್ಲಿ ಭಾರೀ ಕಡಿತ ಮಾಡಲಾಗಿದ್ದು, ಬಹುತೇಕ ಖಾಸಗೀ ಬ್ಯಾಂಕುಗಳಲ್ಲಿ ಅಲ್ಪಾವಧಿ ಠೇವಣಿ ಖಾತೆಗಳಿಗೆ ಉಳಿತಾಯ ಖಾತೆ ಮೇಲಿನ ಬಡ್ಡಿ ದರಕ್ಕಿಂತ ಕಡಿಮೆ ಬಡ್ಡಿ ನಿಗದಿ ಮಾಡಲಾಗಿದೆ. ಪ್ರಮುಖ ಖಾಸಗಿ ಬ್ಯಾಂಕ್ HDFC ತನ್ನ ಉಳಿತಾಯ ಖಾತೆ ಗ್ರಾಹಕರಿಗೆ ಶೇ.3.25ರಷ್ಟು ಬಡ್ಡಿ ನೀಡಿದರೆ, ಅಲ್ಪಾವಧಿ ಠೇವಣಿ ಮೇಲೆ ಕೇವಲ ಶೇ.3ರಷ್ಟು ಬಡ್ಡಿ ನಿಗದಿ ಮಾಡಿದೆ. ಹಾಗೆಯೇ ಕೊಟಕ್ ಬ್ಯಾಂಕ್ ಕೂಡ ಉಳಿತಾಯ ಖಾತೆಗೆ ಶೇ.3.5ರಷ್ಟು ಬಡ್ಡಿ ನೀಡಿದರೆ, ಅಲ್ಪಾವಧಿ ಠೇವಣಿಗೆ ಕೇವಲ ಶೇ.3ರಷ್ಟು ಬಡ್ಡಿ ನಿಗದಿ ಮಾಡಿದೆ.
ಖಾಸಗಿ ವಲಯದ ಪೈಕಿ ICICI ಕೆಲ ಮಟ್ಟಿಗೆ ನಿಗದಿತ ಠೇವಣಿದಾರರಿಗೆ ನಿರಾಳವೆನಿಸುವ ಮಟ್ಟಿನ ಬಡ್ಡಿ ದರ ನಿಗದಿ ಮಾಡಿದ್ದು, ಅದರ ಉಳಿತಾಯ ಖಾತೆ ಗ್ರಾಹಕರಿಗಿಂತ ಅಲ್ಪಾವಧಿ ಠೇವಣಿ ಗ್ರಾಹಕರು ಶೇ0.25ರಷ್ಟು ಅಧಿಕ ಬಡ್ಡಿ ದರ ಪಡೆಯಲಿದ್ದಾರೆ. ಉಳಿತಾಯ ಖಾತೆಗೆ ಆ ಬ್ಯಾಂಕಿನಲ್ಲಿ ಶೇ.3ರಷ್ಟು ಬಡ್ಡಿ ದರ ನಿಗದಿ ಮಾಡಿದ್ದರೆ, ಅಲ್ಪಾವಧಿ ಠೇವಣಿಗೆ ಶೇ.3.25ರಷ್ಟು ಬಡ್ಡಿ ದರ ನಿಗದಿ ಮಾಡಲಾಗಿದೆ.
ಪ್ರಮುಖವಾಗಿ ಈ ಬಡ್ಡಿ ದರ ಕಡಿತದ ಪರಿಣಾಮವಾಗಿ ಈಗಾಗಲೇ ಆತಂಕಕಾರಿ ಪ್ರಮಾಣದಲ್ಲಿ ಕುಸಿಯುತ್ತಿರುವ ಉಳಿತಾಯ ಪ್ರಮಾಣ ಇನ್ನಷ್ಟು ಕುಸಿಯಲಿದೆ ಮತ್ತು ಪ್ರಮುಖವಾಗಿ ಜನರಲ್ಲಿ ಉಳಿತಾಯ ಮನೋಧರ್ಮ ಉತ್ತೇಜನಕ್ಕೂ ಇದು ತೊಡಕಾಗಲಿದೆ ಎನ್ನಲಾಗುತ್ತಿದೆ. ಮತ್ತೊಂದು ಕಡೆ ಠೇವಣಿ ಬಡ್ಡಿ ಕಡಿತದ ಹಿನ್ನೆಲೆಯಲ್ಲಿ ಬ್ಯಾಂಕ್ ಠೇವಣಿಯ ಬದಲಾಗಿ ಉಳಿತಾಯಗಾರರು ಇತರೆ ಉಳಿತಾಯ ಮಾರ್ಗೋಪಾಯಗಳತ್ತ ಚಿತ್ತ ಹರಿಸುತ್ತಿದ್ದು, ಮ್ಯೂಚುವಲ್ ಫಂಡ್ ಮತ್ತು ಚಿನ್ನದ ಮೇಲಿನ ಹೂಡಿಕೆಯತ್ತ ಗಮನ ಹರಿಸಿದ್ದಾರೆ. ಇದು ದೇಶದ ಬ್ಯಾಂಕಿಂಗ್ ಮತ್ತು ಸಾಲ ವಲಯದ ಮೇಲೆ ದೀರ್ಘಾವಧಿಯ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ ಎಂಬ ಆತಂಕ ಕೂಡ ವ್ಯಕ್ತವಾಗಿದೆ.

ಆದರೆ, ಸದ್ಯದ ಸ್ಥಿತಿಯಲ್ಲಿ ನಗದು ಸಂಚಯನ ಹೆಚ್ಚಾಗುತ್ತಿದ್ದು, ಸಾಲದ ಬೇಡಿಕೆ ಕುಸಿಯುತ್ತಿರುವುದರಿಂದ ಬ್ಯಾಂಕುಗಳು ತಮ್ಮಲ್ಲಿ ಇರಿಸಿಕೊಂಡಿರುವ ಠೇವಣಿಗಳಿಗೆ ನೀಡುವ ಬಡ್ಡಿ ದೊಡ್ಡ ಹೊರೆಯಾಗಿ ಪರಿಣಮಿಸುತ್ತಿದೆ. ಹಾಗಾಗಿ ಬ್ಯಾಂಕುಗಳಿಗೂ ಬಡ್ಡಿ ಕಡಿತದ ಹೊರತು ಬೇರೆ ದಾರಿಗಳಿಲ್ಲ ಎಂಬುದು ವಾಸ್ತವ.
ಬಡ್ಡಿ ದರ ಕಡಿತದ ಪರಿಣಾಮ ಕೇವಲ ನಿಗದಿತ ಠೇವಣಿಗಳ ಮೇಲಷ್ಟೇ ಅಲ್ಲದೆ, ಒಟ್ಟಾರೆ ಬ್ಯಾಂಕ್ ಠೇವಣಿ ವಹಿವಾಟಿನ ಮೇಲೆಯೂ ಆಗಿದೆ. 2019ರ ಹಣಕಾಸು ವರ್ಷದಲ್ಲಿ ಶೇ.10ರಷ್ಟಿದ್ದ ಠೇವಣಿ ಬೆಳವಣಿಗೆ ದರ, 2020ನೇ ಹಣಕಾಸು ವರ್ಷದಲ್ಲಿ ಶೇ.8ಕ್ಕೆ ಕುಸಿದಿದೆ. ಈ ವರ್ಷ ಆ ಪ್ರಮಾಣ ಇನ್ನಷ್ಟು ಕುಸಿಯುವ ಆತಂಕವಿದೆ ಎಂದು ಹೇಳಲಾಗಿದೆ. ಜೊತೆಗೆ ಈಗಾಗಲೇ ಹದಿನೈದು ವರ್ಷಗಳ ಕನಿಷ್ಟ ಮಟ್ಟಕ್ಕೆ ತಲುಪಿರುವ ದೇಶದ ಉಳಿತಾಯ ಪ್ರಮಾಣದ ಮೇಲೆಯೂ ಈ ಬಡ್ಡಿ ಕಡಿತ ಪರಿಣಾಮಬೀರಲಿದೆ. ಹಾಗಾಗಿ ಇದು ಒಟ್ಟಾರೆಯಾಗಿ ಒಳ್ಳೆಯ ಬೆಳವಣಿಗೆಯಲ್ಲ ಎಂಬ ಅಭಿಪ್ರಾಯವೂ ಇದೆ.