ಪ್ರಧಾನಿ ನರೇಂದ್ರ ಮೋದಿ ಹಾಗು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂ ಅಭಿನಂದನೆ ಸಲ್ಲಿಸಿದ್ದಾರೆ. ಹೊಸದಾಗಿ ತೆರಿಗೆ ಹಾಕದೆ ವಿನೂತನ ರೀತಿಯ ಬಜೆಟ್ ಮಂಡಿಸಿದ್ದಾರೆ. ರೈತರು, ಬಡವರು ಮತ್ತು ಗ್ರಾಮೀಣ ಭಾಗಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ರೈತನ ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದಾರೆ. ರೈತರ ಸಮಗ್ರ ಅಭಿವೃದ್ಧಿಗೆ ಬಜೆಟ್ನಲ್ಲಿ ಅನುಕೂಲ ಮಾಡಿಕೊಟ್ಟಿದ್ದಾರೆ. ವಿದ್ಯುತ್ ಸ್ವಾವಲಂಬನೆ ಸಾಧಿಸಲು ಕ್ರಮ ಕೈಗೊಂಡಿದ್ದಾರೆ. ಸೌರ ಪಂಪ್ ಸೆಟ್ ಒದಗಿಸಲು ಯೋಜನೆ ತಂದಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಬಣ್ಣಿಸಿದ್ದಾರೆ.
ಆಯುಷ್ಮಾನ್ ಭಾರತ ಯೋಜನೆಗೂ ಒತ್ತು ಕೊಡಲಾಗಿದೆ. ದೇಶದ ಜಿಡಿಪಿ ಪ್ರಗತಿಗೆ ಈ ಬಜೆಟ್ ಕಾರಣವಾಗಲಿದೆ. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಅನುಮೋದನೆ ಕೊಡುವ ಮೂಲಕ ನಮ್ಮ ಬಹಳ ವರ್ಷದ ಬೇಡಿಕೆ ಈಡೇರಿದಂತಾಗಿದೆ. ಕೇಂದ್ರ ಹಾಗೂ ರಾಜ್ಯದ ಸಹಯೋಗದಲ್ಲಿ ಯೋಜನೆ ಪೂರ್ಣಗೊಳಿಸುತ್ತೇವೆ ಎಂದಿದ್ದಾರೆ.
ಇನ್ನು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು, ಕೇಂದ್ರ ಸರ್ಕಾರ ಮಂಡಿಸಿರುವ ಇಂದಿನ ಬಜೆಟ್ ಅತ್ಯಂತ ನಿರಾಶಾದಾಯಕ. ದೇಶದ ಪ್ರಗತಿ ಬಗ್ಗೆ ಮುಂದಿನ ದಿನಗಳಲ್ಲಿ ಆಸೆ ಇಟ್ಟುಕೊಳ್ಳಲು ಸಾಧ್ಯವಾಗದಂತೆ ಬಜೆಟ್ ಮಂಡಿಸಲಾಗಿದೆ. ಇದು ಕೇವಲ ಅಂಕಿ ಅಂಶಗಳ ಬಜೆಟ್. ಕಳೆದ 5 ವರ್ಷಗಳಲ್ಲಿ ಘೋಷಣೆ ಆಗಿರುವ ಎಷ್ಟು ಯೋಜನೆಗಳು ಜಾರಿಯಾಗಿವೆ ಅನ್ನೋ ಮಾಹಿತಿಯೇ ಬಜೆಟ್ನಲ್ಲಿ ಇಲ್ಲ. ಹಣ ಹಂಚಿಕೆಯಲ್ಲೂ ಭಾರಿ ಕಡಿತವಾಗಿದೆ. ಜಲ ಮಿಷನ್ ಗೆ ಮೀಸಲಿಟ್ಟಿರುವ ಹಣದಲ್ಲಿ ಯಾವುದೇ ಜನರಿಗೆ ಅನುಕೂಲ ಆಗಲ್ಲ ಎಂದಿದ್ದಾರೆ.
ಕೆಲವೊಂದು ಯೋಜನೆಗಳಿಗೆ ಹೊಸ ಹೆಸರು ಕೊಟ್ಟಿರಬಹುದು ಅಷ್ಟೆ ಎಂದಿರುವ ಕುಮಾರಸ್ವಾಮಿ, ಕಿಸಾನ್ ಉಡಾನ್ ಹೆಸರಲ್ಲಿ ರೈತರನ್ನ ಆಕಾಶದ ಮೇಲೆ ಓಡಾಡಿಸ್ತಾರಾ..? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಯುವಕರಿಗೆ ಯಾವ ರೀತಿ ಉದ್ಯೋಗ ಕೊಡ್ತೀವಿ ಎಂದು ಹೇಳಿಲ್ಲ. ಇಂಟರ್ನ್ಶಿಪ್ ಮಾಡಿಸುತ್ತೇವೆ ಎಂದು ಹೇಳಿದ್ದಾರೆ, ಆದ್ರೆ ಅವರಿಗೆ ಉದ್ಯೋಗ ಕೊಡೋದು ಯಾರು..? ದೇಶದ ಆರ್ಥಿಕ ಪ್ರಗತಿಯನ್ನ ಸರಿಪಡಿಸಲು ಈ ಬಜೆಟ್ ಸಹಕರಿಸಲ್ಲ. ಮತ್ತಷ್ಟು ಅಧೋಗತಿಗೆ ತಳ್ಳುತ್ತದೆ. ಲ್ಯಾಂಡ್ ಅಕ್ವೈರ್ ಌಕ್ಟ್ನಲ್ಲಿ ಯಾರಿಗೆ ಬೇಕಾದರೂ ಭೂಮಿ ಕೊಡುತ್ತೇವೆ ಎಂದಿದ್ದಾರೆ. ಈ ಕಾಯ್ದೆ ಮತ್ತೊಂದು ಪೌರತ್ವ ತಿದ್ದುಪಡಿ ಕಾಯ್ದೆಯೇ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ನಿರ್ಮಲಾ ಸೀತಾರಾಮನ್ ವಿಫಲ: ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಕೇಂದ್ರ ಬಜೆಟ್ ಟಿಂಕ್ರಿಂಗ್ ಬಜೆಟ್ ಆಗಿದೆ. ಯಾವ ಯೋಜನೆಯನ್ನು ಪೂರ್ತಿಯಾಗಿ ಜಾರಿ ಮಾಡಿಲ್ಲ. ಹಳೆ ಯೋಜನೆಗಳನ್ನ ಮತ್ತೆ ಹೇಳಿದ್ದಾರೆ. ಬೆಂಗಳೂರಿಗೆ ಸರ್ಬನ್‌ಬನ್ ರೈಲು ಯೋಜನೆ ಕೊಡ್ತಿವಿ ಎಂದು ಹೇಳಿದ್ದಾರೆ. ಇದನ್ನು ಕಳೆದ ಬಾರಿಯೇ ಘೋಷಣೆ ಮಾಡಿದ್ರು. ಆದ್ರೆ ಒಂದೆ ಒಂದು ಕಿಲೋಮೀಟರ್ ಕೆಲಸ ಕೂಡ ಆಗಿಲ್ಲ. ಬೆಂಗಳೂರಿಗರು ಸುಮ್ಮನೆ ಖುಷಿ ಪಡಬೇಕು ಅಷ್ಟೆ. ಬಜೆಟ್ ಏನೂ ಇಲ್ಲ ಎಂದಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಲಹೆ ಪಡೆಯಲಿಲ್ಲ. ಯಾವ ಆರ್ಥಿಕ ತಜ್ಞರ ಸಲಹೆಯನ್ನು ಪಡೆದಿಲ್ಲ ಎಂದು ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರಿಗೆ ಆರ್ಥಿಕ ಪರಿಸ್ಥಿತಿಯ ಮುನ್ನೋಟ ಇಲ್ಲ. ದೇಶದ ಜನರು ಇಟ್ಟುಕೊಂಡಿದ್ದ ನಿರೀಕ್ಷೆ ಹುಸಿಯಾಗಿದೆ. ಇದೊಂದು ನಿರಾಶಾದಾಯಕ ಬಜೆಟ್ ಎಂದಿದ್ದಾರೆ. ನಾವೆಲ್ಲ ತಾಳಿ ಮಾರೋದು ತೀರ ಕಷ್ಟ ಬಂದಾಗ. ಕೊನೆಯದಾಗಿ ಎಲ್ಲವನ್ನು ಬಿಟ್ಟು ತಾಳಿ ಕಳೆದುಕೊಳ್ತೀವಿ. ಹಾಗೆಯೇ ಕೇಂದ್ರ ಸರ್ಕಾರ ಕೊನೆಯದಾಗಿ ಎಲ್‌ಐಸಿ ಷೇರು ಮಾರಲು ಮುಂದಾಗಿದೆ. ಇದು ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ದೇಶದ ಪರಿಸ್ಥಿತಿ. ಎಂಥ ಪರಿಸ್ಥಿತಿಗೆ ನಾವು ಬಂದಿದ್ದೇವೆ ಎಂದು ಟೀಕಿಸಿದ್ದಾರೆ.
ನಿರ್ಮಲಾ ಸೀತರಾಮನ್ ವಿಫಲ ಆರ್ಥಿಕ ಸಚಿವೆ ಎಂದಿರುವ ಸಿದ್ದರಾಮಯ್ಯ, ನಮ್ಮ ರಕ್ಷಣಾ ವ್ಯವಸ್ಥೆಗೆ ಹೆಚ್ಚು ಹಣ ಇಟ್ಟಿದ್ದರೆ ಅಕ್ಕಪಕ್ಕದ ದೇಶಗಳು ಎಚ್ಚರಿಕೆಯಿಂದ ಇರುತ್ತಿದ್ದವು. ದೇಶವನ್ನ ಸುಭದ್ರವಾಗಿ ಇಡ್ತಿವಿ ಅಂತಾರೆ. ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೂ ಮಹತ್ವ ಕೊಡಲ್ಲ. ಕೃಷಿಕಾ ಉಢಾನ್‌ನಲ್ಲಿ ಅದ್ಯಾವ ಬೋರೆಗೌಡ ಕೃಷಿ ವಸ್ತುಗಳನ್ನ ಇನ್ನೊಂದು ರಾಜ್ಯಕ್ಕೆ ವಿಮಾನದಲ್ಲಿ ಕೊಂಡ್ಯೊಯ್ತಾನೆ ಎಂದು ಅಣಕಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ
ಕೇಂದ್ರ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ ಅನ್ನೋದನ್ನ ಬಜೆಟ್ ತೋರಿಸಿದೆ ಎಂದಿರುವ ಖರ್ಗೆ, ಕೆಲ ಕಾರ್ಪೋರೇಟ್ಗಳಿಗೆ ಟ್ಯಾಕ್ಸ್ ಕಡಿಮೆ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ 2 ಕೋಟಿ ಉದ್ಯೋಗ ಕೊಡ್ತೀನಿ ಅಂತ ಹೇಳಿದ್ರು, ಆದ್ರೆ ಅದರ ಬಗ್ಗೆ ಯಾವುದೇ ಚಿಂತನೆ ಬಜೆಟ್ನಲ್ಲಿ ಇಲ್ಲ. ಹೊಸ ಉದ್ಯಮ ಸೃಷ್ಟಿ ಮಾಡೋಕೆ ಏನೂ ಯೋಜನೆ ಇಲ್ಲ. ಇತಿಹಾಸದಲ್ಲೇ ಇದು ದೊಡ್ಡ ಉದ್ದದ ಬಜೆಟ್, ಹೆಚ್ಚಿಗೆ ಮಾತನಾಡಿ, ಕಡಿಮೆ ಕೆಲಸ ಮಾಡಿದ ಬಜೆಟ್. ಬೆಟ್ಟ ಕಡಿದು ಇಲಿ ಹಿಡಿದ ಬಜೆಟ್ ಇದು. 2 ಗಂಟೆ 46 ನಿಮಿಷ ಮಾತಾಡಿದ್ದಾರೆ ಅದೆಲ್ಲವೂ ನಿರಾಶೆಯ ಹೇಳಿಕೆಗಳು. ಜಿಡಿಪಿ ಗ್ರೋತ್ 10 % ಮಾಡೋದಾಗಿ ವಿಶ್ವಾಸದಿಂದ ಹೇಳ್ತಾರೆ. ಮತ್ತೊಂದ್ಕಡೆ ಆರ್ಥಿಕ ತಜ್ಞರು ಹೇಳ್ತಾರೆ 3.5 % ಇದೆ ಅಂತ. ಆಯುಷ್ಮಾನ್ ಭಾರತ್ ಯೋಜನೆ ಜಾರಿಯಲ್ಲಿದೆ ಎಂದಿದ್ದಾರೆ. ಈ ಯೋಜನೆ ಅಡಿಯಲ್ಲಿ ಆಸ್ಪತ್ರೆಗೆ ರೋಗಿಗಳು ಹೋದ್ರೆ ತಿರಸ್ಕರಿಸಿ ವಾಪಸ್ ಕಳುಹಿಸ್ತಾರೆ. ಈ ಬಜೆಟ್ ನಿಂದ ಜನರಿಗೆ ಉಪಯೋಗವೂ ಆಗಿಲ್ಲ, ಜನಪರವೂ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಅಂಗನವಾಡಿ ಮೇಡಂಗೆ ಫೋನ್ ಕೊಟ್ಟರೆ ಆಗುತ್ತಾ: ರೇವಣ್ಣ
ಮಾಜಿ ಸಚಿವ ಹೆಚ್.ಡಿ ರೇವಣ್ಣ ಮಾತನಾಡಿ ಅಂಗನವಾಡಿ ಮೇಡಂಗೆ ಫೋನ್ ಕೊಟ್ಟರೆ ಆಗುತ್ತಾ..? ಎಂದು ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯವಾಡಿದ್ದಾರೆ. ಪ್ರಾಥಮಿಕ ಶಿಕ್ಷಣಕ್ಕೆ ಬಜೆಟ್ನ ಕೊಡುಗೆ ಏನು..? 71ನೇ ವರ್ಷದ ಗಣರಾಜ್ಯೋತ್ಸವ ಆಚರಿಸಿದ್ದೇವೆ.. ಆದರೆ ಪ್ರಾಥಮಿಕ ಶಾಲೆ ಬಾಗಿಲು ಮುಚ್ಚುವ ಹಂತ ತಲುಪಿವೆ.. ನಮ್ಮ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ಕೊಡಲು ಆಗುತ್ತಿಲ್ಲ.. ಎಲ್ಲ ಸರ್ಕಾರಿ ಶಾಲೆ ಖಾಸಗಿಯವರ ಹಿಡಿತಕ್ಕೆ ಹೋಗುವ ಸ್ಥಿತಿಯಲ್ಲಿವೆ.. ಶಿಕ್ಷಣ ಇಲಾಖೆ ಸಂಪೂರ್ಣ ಖಾಸಗೀಕರಣ ಆಗೋದು ಸತ್ಯ ಎಂದು ಕಿಡಿಕಾರಿದ್ದಾರೆ.
ನಿರಾಶಾದಾಯಕ ಬಜೆಟ್: ಈಶ್ವರ್ ಖಂಡ್ರೆ
ಕೇಂದ್ರದ ಬಜೆಟ್ ನಿರಾಶಾದಾಯಕ ಬಜೆಟ್ ಆಗಿದೆ. ಬಡವರಿಗೆ ಅನಾನುಕೂಲವಾದ ಬಜೆಟ್. ಕೇವಲ ಉದ್ಯಮಿಗಳ ಬಜೆಟ್ ಆಗಿದೆ. ಆರ್ಥಿಕ ಪುನಶ್ಚೇತನಕ್ಕೆ ಯಾವುದೇ ಕಾರ್ಯಕ್ರಮ ಘೋಷಣೆ ಮಾಡಿಲ್ಲ. ರೈತ ಪರ ಯೋಜನೆಗಳಿಲ್ಲ. ಕರ್ನಾಟಕ ರಾಜ್ಯಕ್ಕೂ ವಿಷೇಶ ಕಾರ್ಯಕ್ರಮಗಳ ಘೋಷಣೆ ಆಗಲಿಲ್ಲ. ರಾಷ್ಟ್ರೀಯ ಹೆದ್ದಾರಿಗಳಿಗೆ ಹೆಚ್ಚಿನ ಹಣ ಇಲ್ಲ. ಏರ್ ಇಂಡಿಯಾ ಮಾರಾಟಕ್ಕಿಟ್ಟಿದ್ದಾರೆ. ಸಾರ್ವಜನಿಕ ಉದ್ಯಮಗಳನ್ನ ಖಾಸಗೀಕರಣ ಮಾಡುವುದು ಖಂಡನೀಯ. ಜಿಡಿಪಿ 5% ಕ್ಕಿಂತ ಕಡಿಮೆ ಇದೆ. ಈಗ 10ಕ್ಕೆ ಏರಿಸುತ್ತೇವೆ ಅನ್ನೋದು ಉಡಾಫೆ ಮಾತು. ಬಜೆಟ್ ಮಂಡನೆ ಆಗುತ್ತಿದ್ದಂತೆ ಷೇರು ಮಾರುಕಟ್ಟೆ ಕುಸಿತ ಕಂಡಿದೆ. ಇದರಿಂದ ಯುವಕರಿಗೆ, ರೈತರಿಗೆ, ಮಹಿಳೆಯರಿಗೆ ಹೆಚ್ಚಿನ ಲಾಭವಾಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕಿಸಿದ್ದಾರೆ.