ಕೇಂದ್ರದ ತೆರಿಗೆ ಕಡಿತ, ರಾಜ್ಯದಲ್ಲಿ ತೆರಿಗೆ ಸಂಗ್ರಹ ಕುಸಿತ, ಅಭಿವೃದ್ಧಿ ಚಟುವಟಿಕೆಗಳ ಹಿನ್ನಡೆ, ನಿರೀಕ್ಷಿತ ಪ್ರಮಾಣದಲ್ಲಾಗದ ಸಂಪನ್ಮೂಲ ಕ್ರೋಢೀಕರಣ- ಸೇರಿದಂತೆ ಹಲವು ಈ ಬೃಹತ್ ಸಮಸ್ಯೆಗಳ ಸಂಕೋಲೆಯಲ್ಲಿ ಸಿಕ್ಕಿರುವ ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ ಸಿದ್ದಪಡಿಸುತ್ತಿದ್ದಾರೆ. ಹಲವು ಬಜೆಟ್ ಮಂಡಿಸಿರುವ ಯಡಿಯೂರಪ್ಪ ಅವರಿಗೆ 2020-2021ನೇ ಸಾಲಿನ ಬಜೆಟ್ ಅತ್ಯಂತ ಕಠಿಣವಾದ ಸವಾಲು. ಇಡೀ ದೇಶದ ಆರ್ಥಿಕತೆ ಮಂದಗತಿಗೆ ಜಾರಿದ್ದು ಹಿಂಜರಿತದತ್ತ ದಾಪುಗಾಲು ಹಾಕಲು ಹವಣಿಸುತ್ತಿದೆ. ರಾಜ್ಯದ ಪರಿಸ್ಥಿತಿ ದೇಶದ ಪರಿಸ್ಥಿತಿಗಿಂತ ಭಿನ್ನವಾಗೇನೂ ಇಲ್ಲ. ರಾಜ್ಯ ಸರ್ಕಾರದ ಬೊಕ್ಕಸ ಬರಿದಾಗಿದೆ. ಸರ್ಕಾರಿ ನೌಕರರ ವೇತನ ಪಾವತಿ ವಿಳಂಬವಾಗುತ್ತಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಬೇಕಾದ ಪಾಲಿನ ತೆರಿಗೆ ಪಾಲನ್ನು ನೀಡುತ್ತಿಲ್ಲ. ಅದನ್ನು ಹಕ್ಕು ಎಂಬಂತೆ ಕೇಂದ್ರದ ಮುಂದೆ ಪ್ರತಿಪಾದಿಸುವ ಸ್ಥಿತಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಲ್ಲ. ರಾಜ್ಯ ಪ್ರವಾಹ ಸಂಕಷ್ಟ ಎದುರಿಸಿದಾಗ ಸಕಾಲದಲ್ಲಿ ಸೂಕ್ತ ನೆರವು ನೀಡುವಂತೆ ಬಹಿರಂಗ ಸಭೆಯಲ್ಲಿ ಪ್ರಧಾನಿ ನರೇಂದ್ರಮೋದಿಗೆ ಒತ್ತಾಯಿಸಿದಾಗ ಯಡಿಯೂರಪ್ಪ ಅವರನ್ನು ಕೇಂದ್ರದ ನಾಯಕರು ಆಕ್ಷೇಪಿಸಿದ್ದಲ್ಲದೇ ನಿರ್ಲಕ್ಷಿಸುವ ಪ್ರಯತ್ನ ಮಾಡಿದ್ದರೆಂಬುದು ಗುಟ್ಟಾಗಿ ಉಳಿದಿಲ್ಲ.
ಪ್ರಸಕ್ತ ವಿತ್ತೀಯ ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿನ ರಾಜ್ಯದ ಆರ್ಥಿಕ ಸ್ಥಿತಿಗತಿ ಗಮನಿಸಿದರೆ, ಆಶಾದಾಯಕವಾಗೇನೂ ಇಲ್ಲ. ಕೇಂದ್ರ ಸರ್ಕಾರದಿಂದ ಬರಬೇಕಾದ ತೆರಿಗೆಯ ಪಾಲು ಶೇ.56.62ರಷ್ಟು ಬಂದಿದೆ. ಇತರೆ ಆದಾಯ ಶೇ.42ರಷ್ಟು, ಸ್ವಂತ ತೆರಿಗೇಯತರ ಆದಾಯ ಶೇ.58.44ರಷ್ಟು ಮಾತ್ರ ಇದೆ. ಪ್ರಮುಖ ಆದಾಯ ಮೂಲಗಳ ಪೈಕಿ ಅಬ್ಕಾರಿ ತೆರಿಗೆ ಮಾತ್ರ ಮೂರು ತ್ರೈಮಾಸಿಕಗಳಿಂದ ಶೇ. ಶೇ.77.41ರಷ್ಟು ಸಂಗ್ರಹವಾಗಿದೆ. ವಾಣಿಜ್ಯ ತೆರಿಗೆ, ಮುಂದ್ರಾಂಕ ಮತ್ತು ನೊಂದಣಿ, ಮೋಟಾರು ವಾಹನ ತೆರಿಗೆ ಸಂಗ್ರಹಗಳು ಶೇ. 69-70ರ ಆಜುಬಾಜಿನಲ್ಲಿವೆ. ಕಳೆದ ವರ್ಷದ ಸಂಗ್ರಹಕ್ಕೆ ಹೋಲಿಸಿದರೆ ಯಾವುದು ಎರಡಂಕಿಯಷ್ಟು ಹೆಚ್ಚಳ ಸಾಧಿಸಿಲ್ಲ.
ಯಡಿಯೂರಪ್ಪ ಅವರ ಮುಂದಿರುವ ಸವಾಲುಗಳು:
ರಾಜ್ಯ ಅತಿ ಭೀಕರವಾದ ಪ್ರವಾಹ ಪರಿಸ್ಥಿತಿ ಎದುರಿಸಿದೆ. ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವುದಿರಲಿ, ತಾತ್ಕಾಲಿಕ ಪರಿಹಾರ ಒದಗಿಸಲು ಸಾಧ್ಯವಾಗದ ಸ್ಥಿತಿ ರಾಜ್ಯದ ಮುಂದಿದೆ. ಆರ್ಥಿಕ ಹಿಂಜರಿತದ ಕಾರ್ಮೋಡಗಳು ಕರಗುವ ಬದಲು ಮತ್ತಷ್ಟು ದಟ್ಟವಾಗುತ್ತಿವೆ. ನಿಧಾನವಾಗಿ ಇದು ರಾಜ್ಯದ ಆರ್ಥಿಕ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದಿರುವುದರಿಂದ ತೆರಿಗೆ ಮೂಲಗಳನ್ನು ವಿಸ್ತರಿಸುವ ಸಾಧ್ಯತೆ ಕಡಮೆಯಾಗಿದೆ. ಅದೇ ಪೆಟ್ರೋಲು, ಡೀಸೇಲು ಮತ್ತು ಮದ್ಯಪಾನೀಯಗಳ ಮೇಲೆ ಮತ್ತಷ್ಟು ತೆರಿಗೆ ಹೇರಬೇಕಾಗಿದೆ. ಈ ಹಿನ್ನೆಲೆಗಳಲ್ಲಿ ಸಂಪನ್ಮೂಲ ಕ್ರೋಢೀಕರಣ ಯಡಿಯೂರಪ್ಪ ಅವರ ಮುಂದಿರುವ ಅತಿದೊಡ್ಡ ಸವಾಲು. ಹೊಸ ತೆರಿಗೆ ಆದಾಯ ಮೂಲಗಳಾವೂ ಉಳಿದಿಲ್ಲ. ತೆರಿಗೆ ಸೋರಿಕೆ ತಡೆ ಮತ್ತು ವಿತವ್ಯಯಗಳು ಮಾತ್ರ ಸದ್ಯಕ್ಕೆ ಪರಿಹಾರದ ರೂಪದಲ್ಲಿವೆ. ಅದನ್ನು ಯಶಸ್ವಿಯಾಗಿ ಜಾರಿಗೊಳಿಸುವುದು ಸಹ ದೊಡ್ಡ ಸವಾಲು.
ಒಂದು ಸಮಾಧಾನದ ಅಂಶ ಎಂದರೆ ಕರ್ನಾಟಕ ರಾಜ್ಯವು ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆಯಡಿ (FRBMM) ನಿರ್ದೇಶಿತವಾಗಿರುವ ಪ್ರಮಾಣದ ಮಿತಿಯೊಳಗೆ ತನ್ನ ವಿತ್ತೀಯ ಕೊರತೆಯನ್ನು ಕಾಯ್ದುಕೊಂಡಿದೆ. ಎಫ್ಆರ್ಬಿಎಂ ಕಾಯ್ದೆ ಪ್ರಕಾರ ರಾಜ್ಯ ಸರ್ಕಾರವು ತನ್ನ ರಾಜ್ಯದ ಒಟ್ಟು ಉತ್ಪನ್ನದ (SGDP) ಶೇ.3.5ರಷ್ಟು ವಿತ್ತೀಯ ಕೊರತೆ ಮಿತಿಯನ್ನು ವಿಸ್ತರಿಸಿಕೊಳ್ಳಬಹುದು. ಸದ್ಯ 2019-20 ನೇ ಸಾಲಿನ ರಾಜ್ಯದ ಅಂದಾಜು ವಿತ್ತೀಯ ಕೊರತೆ ಪ್ರಮಾಣವು ಶೇ.2.48ರಷ್ಟಿದೆ. ಅಂದರೆ ರಾಜ್ಯದ ಒಟ್ಟು ಉತ್ಪನ್ನವು 16,98,685 ಕೋಟಿ ಎಂದು ಅಂದಾಜಿಸಿದ್ದು 42,051 ಕೋಟಿ ರುಪಾಯಿಗಳಷ್ಟು ವಿತ್ತೀಯ ಕೊರತೆಯನ್ನು ಅಂದಾಜಿಸಲಾಗಿದೆ. SGDP ಶೇ.7 ಅಥವಾ ಶೇ.8ರ ಅಂದಾಜಿನಲ್ಲಿ ಅಭಿವೃದ್ಧಿ ದಾಖಲಿಸಿದರೂ 2020-21ರ SGDP 18 ಲಕ್ಷ ಕೋಟಿ ರುಪಾಯಿ ದಾಟಬಹುದೆಂದು ಅಂದಾಜಿಸಿದರೆ ವಿತ್ತೀಯ ಕೊರತೆಯ ಪ್ರಮಾಣವನ್ನು 63,000 ಕೋಟಿಗೆ ಹಿಗ್ಗಿಸಿಕೊಳ್ಳಬಹುದು. ಅಂದರೆ, ರಾಜ್ಯ ಸರ್ಕಾರ ತನ್ನ ಸಾಲದ ಪ್ರಮಾಣವನ್ನು ಹಿಗ್ಗಿಸಿಕೊಳ್ಳಬಹುದು.
ಇದರಿಂದಾಗಿ ರಾಜ್ಯ ಸರ್ಕಾರ ಮಾಡಬಹುದಾದ ಬಂಡವಾಳ ವೆಚ್ಚದ ಪ್ರಮಾಣವು ಹೆಚ್ಚುತ್ತದೆ. ಅದು ಆರ್ಥಿಕ ಚಟುವಟಿಕೆಗಳಿಗೆ ಚೇತರಿಕೆ ನೀಡುವುದರಿಂದ ಒಟ್ಟಾರೆ ಒಟ್ಟು ಉತ್ಪನ್ನದವು ವೃದ್ಧಿಯಾಗುತ್ತದೆ. ಇದು ಆರ್ಥಿಕ ಚಕ್ರ ಸರಾಗವಾಗಿ ಚಲಿಸಲು ಕೀಲೆಣ್ಣೆಯಾಗಿ ಕಾರ್ಯನಿರ್ವಹಿಸುತ್ತದೆ. ಆದರೆ, ರಾಜ್ಯ ಸರ್ಕಾರ ಪಡೆದ ಸಾಲದ ಹೆಚ್ಚಿನ ಮೊತ್ತವು ಬಂಡವಾಳ ವೆಚ್ಚಕ್ಕೆ ವಿನಿಯೋಗವಾಗುವಂತೆ ನೋಡಿಕೊಳ್ಳಬೇಕು.
ಈ ಬಾರಿ ಯಡಿಯೂರಪ್ಪ ತಾವು ಮುಖ್ಯಮಂತ್ರಿ ಎಂಬುದನ್ನು ಒಂದು ಕ್ಷಣ ಮರೆತು ತಾವು ಈ ರಾಜ್ಯದ ಹಣಕಾಸಿನ ಜವಾಬ್ದಾರಿ ಹೊತ್ತಿರುವ ವಿತ್ತ ಸಚಿವ ಎಂಬುದನ್ನು ನೆನಪಿಟ್ಟುಕೊಂಡು ಬಜೆಟ್ ಮಂಡಿಸುವುದು ಒಳಿತು. ಮುಖ್ಯಮಂತ್ರಿಯಾಗಿ ಅವರು ಮಂಡಿಸಿದ ಬಜೆಟ್ ಗಳು ವಿವಿಧ ಸಮುದಾಯಗಳ ಮಠಮಾನ್ಯಗಳಿಗೆ ಕೋಟಿ ಕೋಟಿ ಅನುದಾನ ಒದಗಿಸಿವೆ. ಅದೇ ಹೊತ್ತಿಗೆ ಮೂಲಭೂತವಾಗಿ ಒದಗಿಸಬೇಕಾದ ಮತ್ತು ದೀರ್ಘಾವಧಿಯಲ್ಲಿ ಅತಿದೊಡ್ಡ ಸಂಪನ್ಮೂಲವಾಗಿ ರೂಪುಗೊಳ್ಳುವ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತಸೌಲಭ್ಯಗಳನ್ನು ನಿರ್ಲಕ್ಷಿಸಿದ್ದು ನಮ್ಮ ಮುಂದಿದೆ.
ಸಬ್ಸಿಡಿ ತಗ್ಗಿಸುವುದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಸಿದ್ಧಾಂತ. ಆದರೆ, ಅದೇ ಪಕ್ಷದಿಂದ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಅವರು ಸಬ್ಸಿಡಿ ಪ್ರಯೋಜನ ಪಡೆಯುವ ಜನ ಸಮುದಾಯವಾದ ರೈತರು, ಬಡವರ ನಾಯಕ. ಈ ವೈರುಧ್ಯಗಳ ಮಧ್ಯೆ ಯಡಿಯೂರಪ್ಪ ಬಜೆಟ್ ಮಂಡಿಸುತ್ತಿದ್ದಾರೆ. ಸಬ್ಸಿಡಿ ನೀಡುವುದು ದುರ್ಬಲರನ್ನು ಸಬಲಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಮಾಡಬೇಕಾದ ಜವಾಬ್ದಾರಿ. ಅದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಗೊತ್ತಿದೆ.
ರಾಜಕೀಯ ಒತ್ತಡಗಳಿಗೆ ಮಣಿದು ಅಲ್ಪಕಾಲದ ಗುರಿಯಿರುವ ಅಥವಾ ಗೊತ್ತು ಗುರಿಯೇ ಇಲ್ಲದಂತಹ ಯೋಜನೆಗಳನ್ನು ಘೋಷಿಸಿ, ಅನುದಾನ ಒದಗಿಸುವ ಬದಲು ದೀರ್ಘಕಾಲದವರೆಗೆ ಮುಂದಿನ ತಲೆಮಾರುಗಳಿಗೆ ಅನುಕೂಲವಾಗುವಂತಹ ಯೋಜನೆಗಳ ಸೃಷ್ಟಿಸುವುದು ಮತ್ತು ಜಾರಿ ಮಾಡುವುದು ಈ ಹೊತ್ತಿನ ಅಗತ್ಯ. ಹಾಗಾಗಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಶ್ವತ ಪರಿಹಾರ ಒದಗಿಸಲು ಯಡಿಯೂರಪ್ಪ ಬಜೆಟ್ ನಲ್ಲಿಯೇ ಉದಾರವಾಗಿ ಅನುದಾನ ಮೀಸಲಿಡಬೇಕಿದೆ. ಸಂತ್ರಸ್ತರ ಕಣ್ಣೀರು ಪ್ರವಾಹದಲ್ಲೇ ಕೊಚ್ಚಿ ಹೋಗಿದೆ ನಿಜ. ಆದರೆ ಆ ಜನರು ನಿತ್ಯವು ಸಂಕಷ್ಟಗಳ ಪ್ರವಾಹದಲ್ಲಿ ನಲುಗುತ್ತಿದ್ದಾರೆಂಬುದನ್ನು ಮರೆಯಬಾರದು.