ಎರಡು ವರ್ಷಗಳ ಹಿಂದೆ, ಆಸ್ಟ್ರೇಲಿಯಾದ ಸಂಸದೆ ಎರಡು ತಿಂಗಳ ಮಗುವಿಗೆ ಸಂಸತ್‌ನಲ್ಲಿ ಎದೆಹಾಲು ಕುಡಿಸಿದ ಫೋಟೋ ಜಗತ್ತಿನಾದ್ಯಂತ ಮೆಚ್ಚುಗೆ ಗಳಿಸಿತ್ತು, ಕೆಲಸದ ಬಗ್ಗೆ ಆಕೆಗೆ ಇರುವ ಬದ್ಧತೆಯನ್ನ ಎಲ್ಲರೂ ಕೊಂಡಾಡಿದ್ದರು, ಆಸ್ಟ್ರೇಲಿಯಾದ ಗ್ರೀನ್ ಪಾರ್ಟಿಯಿಂದ ಆಯ್ಕೆಯಾಗಿದ್ದ ಲಾರಿಸ್ಸಾ ವಾಟರ್ಸ್ ಗೆ ಅಂದು ಮಹತ್ವದ ದಿನವಾಗಿತ್ತು, ಹಸಿರು ನೀತಿ ಕುರಿತಾದ ಮಸೂದೆಯನ್ನ ತನ್ನ ಪಕ್ಷ ಮಂಡಿಸಿತ್ತು, ಮಸೂದೆಗೆ ಈಕೆಯ ಮತ ಬಹಳ ಮುಖ್ಯವಾಗಿತ್ತು, ಹಾಗಾಗಿ ತನ್ನ ಎರಡು ತಿಂಗಳ ಮಗಳು ಆಲಿಯಾ ಜಾಯ್‌ನೊಂದಿಗೆ ಸಂಸತ್ ಕಲಾಪದಲ್ಲಿ ಪಾಲ್ಗೊಂಡಿದ್ದಳು.
ಇದಾಗಿ ವರ್ಷ ಕಳೆದಿತ್ತು, ನಾವೆಲ್ಲಾ ನೋಡುತ್ತಾ ಕುಳಿತ್ತಿದ್ವಿ, ನಮ್ಮ ರಾಜ್ಯದಲ್ಲಿ ಸರ್ಕಾರ ಏರುಪೇರಾಗಿ ಕಲಾಪಕ್ಕೆ ಹದಿನೇಳು ಶಾಸಕರು ಗೈರಾದರು, ಕೊನೆಗೆ ಸರ್ಕಾರವನ್ನೇ ಕೆಡುವಿಕೊಂಡು ಹೊಸ ಸರ್ಕಾರ ರಚಿಸಿದರು, ಈಗ ಹೊಸ ಹುರುಪಿನೊಂದಿಗೆ ಬಜೆಟ್ ಅಧಿವೇಶನಕ್ಕೆ ಕಾತರರಾಗಿದ್ದಾರೆ, ಇದರಲ್ಲಿ ಎಷ್ಟು ಶಾಸಕರು ಪಾಲ್ಗೊಳ್ಳುತ್ತಾರೆ, ಬಜೆಟ್ ಮೇಲೆ ಸುದೀರ್ಘ ಚರ್ಚೆಯಲ್ಲಿ ಎಷ್ಟು ಮಂದಿ ಇರುತ್ತಾರೋ ಗೊತ್ತಿಲ್ಲ, ಆದರೆ ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಮಹಿಳಾ ಶಾಸಕಿಯೊಬ್ಬರು ಎಂಟು ತಿಂಗಳ ಗರ್ಭೀಣಿಯಾಗಿದ್ದರೂ ಬಜೆಟ್ ಅಧಿವೇಶನಕ್ಕೆ ಆಗಮಿಸಿ ಹೊಸ ಭಾಷ್ಯ ಬರೆದಿದ್ದಾರೆ.
ನಮಿತಾ ಮುಂಡದ ಮಹಾರಾಷ್ಟ್ರದ ಭೀಡ್ ಜಿಲ್ಲೆಯ ಕೈಜ್ ತಾಲೂಕಿನ ಶಾಸಕಿ, ಎಂಟು ತಿಂಗಳ ಗರ್ಭಿಣಿ. ಬಜೆಟ್ ಅಧಿವೇಶನದಲ್ಲಿ ತನ್ನ ಕ್ಷೇತ್ರದ ಸಾಕಷ್ಟು ಸಮಸ್ಯೆಗಳನ್ನ ಸದನದ ಗಮನಕ್ಕೆ ತರಬೇಕಿದೆ, ಈ ಅಧಿವೇಶನ ಬಿಟ್ಟರೆ ಮುಂಗಾರು ಅಧಿವೇಶನಕ್ಕೆ ಬರಲು ಸಾಧ್ಯವಾಗದೇ ಇರಬಹುದು ಎಂಬ ಕಾರಣಕ್ಕೆ ಅಧಿವೇಶನಕ್ಕೆ ಹಾಜರಾಗುತ್ತಿದ್ದಾರೆ. ಸಂಸತ್ ಅಧಿವೇಶನ ಇರಬಹುದು, ವಿಧಾನಸಭಾ ಅಧಿವೇಶನಗಳಿರಬಹುದು, ಮೊದಲ ದಿನದಿಂದಲೇ ಚಕ್ಕರ್ ಹಾಕುವ ಜನಪ್ರತಿನಿಧಿಗಳ ಮಧ್ಯೆ ಮಹಿಳಾ ಶಾಸಕಿಯೊಬ್ಬರ ಮಾದರಿ ಕೆಲಸ ಎಲ್ಲರಿಗೂ ಅನುಕರಣೀಯವಾಗಬೇಕು.
ಮಾಧ್ಯಮಗಳೂ ನಮಿತಾರನ್ನ ಪ್ರಶ್ನೆ ಮಾಡಿವೆ. ಇದಕ್ಕೆ ಆಕೆ ಪ್ರತಿಕ್ರಿಯಿಸಿ, ಈ ಅಧಿವೇಶನ ನನಗೆ ಬಹಳ ಮುಖ್ಯವಾದದ್ದು, ನನ್ನ ಕ್ಷೇತ್ರದ ಸಮಸ್ಯೆಗಳನ್ನ ನಾನು ಹೇಳಿ ಕೊಳ್ಳಲೇಬೇಕು. ಹೌದು ನಾನು ಗರ್ಭಿಣಿಯಾಗಿದ್ದೇನೆ ಆದರೆ ಅದು ಮಹಾವ್ಯಾದಿ ಎಂದೇಕೆ ಪರಿಗಣಿಸಬೇಕು, ಸಮಯ ಸಿಕ್ಕಾಗ ಸಭಾಂಗಣದ ಹೊರಗೆ ವಾಕ್ ಮಾಡುತ್ತೇನೆ, ಸರಿಯಾದ ಸಮಯಕ್ಕೆ ಊಟ ಮಾಡುತ್ತೇನೆ, ಚಕ್ಕರ್ ಹಾಕುವಷ್ಟು ಸಮಸ್ಯೆ ಏನಿಲ್ಲ, ಏಪ್ರಿಲ್ ನಲ್ಲಿ ನಾನು ತಾಯಿಯಾಗುತ್ತೇನೆ, ಮುಂದಿನ ಮಾನ್‌ಸೂನ್ ಅಧಿವೇಶನಕ್ಕೆ ನನಗೆ ಭಾಗವಹಿಸಲು ಆಗದೇ ಇರಬಹುದು ಹಾಗಾಗಿ ನಾನು ಬರಲೇಬೇಕಿತ್ತು ಎನ್ನುತ್ತಾರೆ. ನಮಿತಾ ಶಿಶುಹತ್ಯೆಗೆ ಕುಖ್ಯಾತಿ ಪಡೆದ ಭೀಡ್ ಜಿಲ್ಲೆಯವರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಸಿಪಿಯಿಂದ ಬಿಜೆಪಿಗೆ ಪಲ್ಲಟಗೊಂಡು ವಿಧಾನಸಭೆಗೆ ಆಯ್ಕೆಯಾಗಿದ್ದರು, ಈಕೆಯ ತಾಯಿ ಎನ್‌ಸಿಪಿಯಿಂದ ಮಂತ್ರಿಯಾಗಿದ್ದವರು.
ನಮಿತಾ ಕಥೆ ಇಷ್ಟಾದರೆ, ನಮ್ಮ ಪುರುಷ ಶಾಸಕರು ತದ್ವಿರುದ್ಧ, ಇನ್ನೇನು ಮಾರ್ಚ್ ೫ ಬಂದೇ ಬಿಡ್ತು, ಮಾನ್ಯ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರ ಬಹು ನಿರೀಕ್ಷಿತ ಬಜೆಟ್ ಮಂಡನೆಗೆ ಚಾತಕ ಪಕ್ಷಿಗಳಂತೆ ಜನರೂ ಕಾದು ಕುಳಿತಿದ್ದಾರೆ, ಎಷ್ಟು ಜನ ಅಧಿವೇಶನದಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ, ಎಷ್ಟು ಗೈರಾಗುತ್ತಾರೆ, ಎಷ್ಟು ಜನರು ನಿದ್ದೆ ಮಾಡುತ್ತಾರೋ ಗೊತ್ತಿಲ್ಲ, ಈಗಾಗಲೇ ದೊರೆಸ್ವಾಮಿ ಮೇಲೆ ಬಸನಗೌಡ ಪಾಟೀಲ ಯತ್ನಾಳ ನೀಡಿರುವ ಹೇಳಿಕೆಯನ್ನ ಬಲವಾಗಿ ಹಿಡಿದುಕೊಂಡಿರುವ ಕಾಂಗ್ರೆಸ್ ಈಗಾಗಲೇ ಸದನ ಭಹಿಷ್ಕರಿಸುವ ಮಾತನ್ನಾಡಿದೆ. ಸದನದ ಪ್ರಾಮುಖ್ಯತೆಯನ್ನ ಕಳೆದುಕೊಂಡು ಸಿಎಎ, ಮೋದಿ, ದೊರೆಸ್ವಾಮಿ ಎಂದು ಕೆಸರೆರಚಾಡಲು ಸಿದ್ಧರಿರುವ ನಮ್ಮ ಶಾಸಕರನ್ನ ನೋಡಿದಾಗ ತುಂಬು ಗರ್ಭಿಣಿ ನಮಿತಾ ನೆನಪಾಗದೇ ಇರಲಾರಳು.