ಕೊಡಗು ವೀರರ ನಾಡು, ಶೌರ್ಯ ಸಾಹಸಿಗರ ಬೀಡು ಅನ್ನೋದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಇಲ್ಲಿಂದ ಸೇನಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರ ಸಂಖ್ಯೆ ಗಮನಿಸಿದರೆ ಮೇಲ್ನೋಟಕ್ಕೆ ಇದು ಗೋಚರವಾಗುತ್ತದೆ . ಇಂದು ಸರ್ಕಾರ ಎಷ್ಟೇ ಕಠಿಣ ಕಾನೂನುಗಳನ್ನು ಮಾಡಿದರೂ ಪ್ರತೀ ದಿನವೂ ಮಹಿಳಾ ದೌರ್ಜನ್ಯ ವರದಿ ಆಗುತ್ತಲೇ ಇದೆ. ನಿತ್ಯ ಪತ್ರಿಕೆ, ಟಿವಿಗಳಲ್ಲಿ ಲೈಂಗಿಕ ದೌರ್ಜನ್ಯ ,ಹಲ್ಲೆ ಸುದ್ದಿಗಳೇ ಪ್ರಮುಖವಾಗಿ ಪ್ರಕಟವಾಗುತ್ತಿವೆ. ಈ ನಡುವೆ ಕೊಡಗಿನ ಮಹಿಳೆಯರು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಲು ಮುಂದಾಗಿದ್ದು ಇದು ದೇಶದ ಇತರ ಮಹಿಳೆಯರಿಗೂ ಮಾದರಿ ಆಗಿದೆ.
ಜಿಲ್ಲೆಯ ವನಿತೆಯರು ಈಗ ಪೋಲೀಸ್ ಇಲಾಖೆಯು ನೀಡುವ ಬಂದೂಕು ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಆಸಕ್ತಿ ತೋರಿಸುತಿದ್ದು ಕಳೆದ ಎರಡು ವರ್ಷದಲ್ಲಿ ಸುಮಾರು 150 ಮಹಿಳೆಯರು ಬಂದೂಕು ತರಬೇತಿ ಪಡೆದಿದ್ದಾರೆ. ಈ ಮಹಿಳೆಯರಿಗೆ ಪುರುಷರ ಜತೆಗೇ ಇಲಾಖೆಯು ತಂಡಗಳಲ್ಲಿ ಆಯಾ ಪೋಲೀಸ್ ಠಾಣಾ ವ್ಯಾಪ್ತಿಯಲ್ಲೇ ತರಬೇತಿ ನೀಡಿದೆ. ಅದರಲ್ಲೂ ದಕ್ಷಿಣ ಕೊಡಗಿನಲ್ಲಿ ಪೋಲೀಸರಿಂದ ತರಬೇತಿ ಪಡೆಯಲು ಮುಂದಾಗಿರುವುದು ಇಲ್ಲಿ ಹೆಚ್ಚುತ್ತಿರುವ ಕಾಡು ಪ್ರಾಣಿಗಳ ಉಪಟಳ ತಡೆಯಲು ಹಾಗೂ ಅತ್ಮ ರಕ್ಷಣೆಗಾಗಿ ಎಂದು ಹೇಳಲಾಗಿದೆ.
ಕೋವಿಯು ಕೊಡಗಿನ ಸಾಂಪ್ರದಾಯಿಕ ಆಯುಧವಾಗಿದ್ದು ಇದು ಇಲ್ಲಿನ ಸಂಸ್ಕೃತಿ ಹಾಗೂ ಪರಂಪರೆಯ ಭಾಗವೂ ಅಗಿದೆ. ಇಲ್ಲಿನ ಪ್ರತೀ ಕೃಷಿಕರ ಮನೆಯಲ್ಲೂ ಒಂದು ಅಥವಾ ಎರಡು ಕೋವಿಗಳು ಇದ್ದೇ ಇರುತ್ತವೆ. ಮೂಲನಿವಾಸಿಗಳ ಈ ಕೋವಿಗಳಿಗೆ ಸರ್ಕಾರವೂ ಲೈಸೆನ್ಸ್ ಪಡೆದುಕೊಳ್ಳುವುದರಿಂದ ವಿನಾಯ್ತಿ ನೀಡಿದೆ. ಇದು ಬ್ರಿಟಿಷರ ಕಾಲದಿಂದಲೂ ನಡೆದುಕೊಂಡು ಬಂದಿದ್ದು ರಾಜರ ಕಾಲದಲ್ಲಿ ನೀಡಲಾದ ಭೂಮಿಯನ್ನು ಜಮ್ಮಾ ಭೂಮಿ ಎಂದು ಕರೆಯಲಾಗುತಿದ್ದು ಈ ಭೂಮಿ ಹೊಂದಿದವರಿಗೆ ಮಾತ್ರ ಲೈಸನ್ಸ್ ನಿಂದ ವಿನಾಯ್ತಿ ನೀಡಲಾಗಿದೆ. ಇವರಿಗೆ ಮಾತ್ರ ಬಂದೂಕು ಲೈಸೆನ್ಸ್ ಪಡೆಯುವ ಇತರ ಪ್ರಕ್ರಿಯೆಗಳಿಂದ ವಿನಾಯ್ತಿ ನೀಡಿದ್ದರೂ ಲೈಸೆನ್ಸ್ ಪಡೆದುಕೊಳ್ಳಲೇಬೇಕಿದೆ.
ಕಾಕತಾಳಿಯವೆಂಬಂತೆ ಇಲ್ಲಿನ ಪೋಲೀಸ್ ಮುಖ್ಯಾಧಿಕಾರಿಯೂ ಮಹಿಳೆಯೇ ಆಗಿದ್ದು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ಕೂಡ ಸಿಗುತ್ತಿದೆ. ಸಾಮಾನ್ಯವಾಗಿ ಬಂದೂಕು ಬಳಸುವುದು ಪುರುಷರಾದ್ದರಿಂದ ಪುರುಷರೇ ಪರವಾನಗಿ ಪಡೆದುಕೊಳ್ಳುತ್ತಾರೆ. ಅದರೆ ಹೊಸದಾಗಿ ಪರವಾನಗಿ ಪಡೆದುಕೊಳ್ಳುವವರಿಗೆ ಪೊಲೀಸ್ ಇಲಾಖೆಯಿಂದ ಬಂದೂಕು ಬಳಕೆಯ ಕುರಿತು ತರಬೇತಿ ಆಗಿರಲೇಬೇಕು ಎಂಬ ನಿಬಂಧನೆ ವಿಧಿಸಲಾಗಿದ್ದು ಪ್ರತಿಯೊಬ್ಬರೂ ಕಡ್ಡಾಯವಾಗಿ ತರಬೇತಿ ಪಡೆಯಲೇಬೇಕಾಗಿದೆ.
ಕಳೆದ ಭಾನುವಾರ ಪೋಲೀಸ್ ಇಲಾಖೆಯ ಸಶಸ್ತ್ರ ಪಡೆಯು ಮಡಿಕೇರಿ ಸಮೀಪದ ಗೋಣಿಕೊಪ್ಪದಲ್ಲಿ ನೀಡಿದ ೫ ದಿನಗಳ ಬಂದೂಕು ತರಬೇತಿ ಶಿಬಿರದಲ್ಲಿ ಸುಮಾರು 8 ಮಹಿಳೆಯರು ಹಾಗೂ 45 ಪುರುಷರೂ ತರಬೇತಿ ಪಡೆದುಕೊಂಡಿದ್ದಾರೆ. ಈ ಶಿಬಿರದಲ್ಲಿ ಪಾಲ್ಗೊಂಡಿದ್ದ ಭಾರತಿ ಬೋಪಣ್ಣ ಅವರನ್ನು ಮಾತಾಡಿಸಿದಾಗ ನಾವು ಬೆಳಿಗ್ಗೆ ಬೇಗನೇ ಎದ್ದು 25 ಕಿಲೋಮೀಟರ್ ದೂರ ಕ್ರಮಿಸಿ ಬಂದೂಕು ತರಬೇತಿ ನೀಡುವ ಸ್ಥಳಕ್ಕೆ ಬರುತಿದ್ದೇವೆ. ಈ ತರಬೇತಿ ನೀಡುವ ಬಗ್ಗೆ ನನ್ನ ಸ್ನೇಹಿತೆಯೊಬ್ಬರು ವಾಟ್ಸ್ ಅಪ್ ಸಂಧೇಶ ಕಳಿಸಿದ್ದರು. ಇಬ್ಬರೂ ಸೇರಿಕೊಂಡಿದ್ದೇವೆ ಎಂದರಲ್ಲದೆ ಈ ತರಬೇತಿಯಿಂದಾಗಿ ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳಲು ಹೆಚ್ಚಿನ ಸಹಾಯವಾಗುತ್ತಿದೆ ಎಂದರು.
ಗುಡ್ಡಗಾಡು ಪ್ರದೇಶವಾಗಿರುವುದರಿಂದ ಕೊಡಗಿನಲ್ಲಿ ಮನೆಗಳು ದೂರ ದೂರ ಇರುತ್ತವೆ ಕೆಲವೊಮ್ಮೆ ಹಾಡ ಹಗಲೇ ಮನೆಯಲ್ಲಿ ದರೋಡೆ , ಚಿನ್ನದ ಸರ ಕಸಿತ ಪ್ರಕರಣಗಳೂ ನಡೆದಿವೆ. ಇಂತಹ ಸಂದರ್ಭದಲ್ಲಿ ಬಂದೂಕು ಇದ್ದರೆ ಮನೆಯಲ್ಲಿ ಹಗಲು ಹೊತ್ತು ಒಂಟಿಯಾಗಿರುವುದಕ್ಕೆ ಭಯವಾಗುವುದಿಲ್ಲ ಎಂದರು. ಇತ್ತೀಚೆಗೆ ನಾಗರಹೊಳೆಗೆ ತಾಗಿಕೊಂಡಿರುವ ಶ್ರೀಮಂಗಲ, ಕುಟ್ಟ ,ವ್ಯಾಪ್ತಿಯಲ್ಲಿ ಹುಲಿ ಹಾಗೂ ಚಿರತೆ ಧಾಳಿ ಹೆಚ್ಚಾಗಿದ್ದು ಪ್ರತೀ ವಾರದಲ್ಲೂ ಒಂಟಿಯಾಗಿರುವ ಮನೆಗಳ ಜಾನುವಾರುಗಳು ಹುಲಿಗಳಿಗೆ ಬಲಿಯಾಗುತ್ತಿವೆ. ಇಂತಹ ಸಂದರ್ಭದಲ್ಲೂ ಬಂದೂಕ ಉಪಯೋಗಿಸಿ ಜಾನುವಾರುಗಳನ್ನು ರಕ್ಷಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಮತ್ತೋರ್ವ ಮಹಿಳೆ ಏ ಬಿ ಆರತಿ ಅವರನ್ನು ಮಾತಾಡಿಸಿದಾಗ ತಾವು ತಮ್ಮ 20 ವರ್ಷದ ಮಗಳೊಂದಿಗೆ ತರಬೇತಿ ಪಡೆಯುತಿದ್ದು ಈ ತರಬೇತಿಯು ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದಲ್ಲದೆ ಆತ್ಮರಕ್ಷಣೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ತರಬೇತಿ ಹೊಂದಿದ ಮಹಿಳೆ ಇದ್ದರೆ ಅಕ್ರಮಣಕಾರರೂ ಹೆದರುತ್ತಾರೆ ಎಂದೂ ಅವರು ಅಭಿಪ್ರಾಯ ಪಟ್ಟರು.
ಈ ಕುರಿತು ಮಾತನಾಡಿದ ಕೊಡಗು ಎಸ್ಪಿ ಸುಮನ್ ಪೆನ್ನೆಕರ್ ಅವರು ಜಿಲ್ಲೆಯಲ್ಲಿ 1962 ರಿಂದ ನಾಗರಿಕ ಬಂದೂಕು ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು ಎಂದು ಹೇಳಿದರು, ಆದರೆ ಜಿಲ್ಲೆಯಲ್ಲಿ ಇದನ್ನು ನಿಯಮಿತವಾಗಿ ನಡೆಸುತ್ತಿರಲಿಲ್ಲ. ತಾವು ಅಧಿಕಾರ ವಹಿಸಿಕೊಂಡ ನಂತರ ಎರಡು -ಮೂರು ತಿಂಗಳಿಗೊಮ್ಮೆ ನಾಗರಿಕರ ಅರ್ಜಿಗಳನ್ನು ನೋಡಿಕೊಂಡು ತರಬೇತಿಯನ್ನು ಆಯೋಜಿಸಲಾಗುತ್ತಿದೆ ಎಂದರು.
ಈ ತರಬೇತಿಯ ಮೂಲಕ ಪ್ರತಿಯೊಬ್ಬರಿಗೂ ಬಂದೂಕನ್ನು ಬಳಸುವುದು ಹೇಗೆ ಎಂಬ ಜ್ಞಾನ ಸಿಗುತ್ತದಲ್ಲದೆ ಬಂದೂಕನ್ನು ಬಳಸುವಾಗ ವಹಿಸಬೇಕಾದ ಎಚ್ಚರಿಕೆ , ಜವಾಬ್ದಾರಿಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ ಎಂದರು.