ದಕ್ಷಿಣ ಬಂಗಾಳ ಕೊಲ್ಲಿಯಲ್ಲಿ ಮುಂದಿನ 24 ಗಂಟೆಯೊಳಗೆ ವಾಯುಭಾರ ಕುಸಿತ ಸಂಭವಿಸಲಿದೆ. ಇದರ ಪರಿಣಾಮ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ವಾಯುಭಾರ ಕುಸಿತದಿಂದ ನಿವಾರ್ ಚಂಡ ಮಾರುತ ಅಪ್ಪಳಿಸಲಿದೆ. ಹಾಗಾಗಿ ನಾಳೆಯಿಂದ ಎರಡು ದಿನಗಳ ಕಾಲ ಜೋರು ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್ ಪಾಟೀಲ್ ಕೂಡ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಸಿ.ಎಸ್ ಪಾಟೀಲ್, ರಾಜ್ಯದ ಹಲವೆಡೆ ಭಾರೀ ಮಳೆಯಾಗಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಜಿಲ್ಲೆಗಳಲ್ಲಿ ಯೆಲ್ಲೋ ಆಲರ್ಟ್ ಘೋಷಣೆ ಮಾಡಲಾಗಿದೆ. ಜತೆಗೆ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ ಎಂದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು, ಪುದುಚೇರಿ ಮತ್ತು ಕಾರೈಕಾಲ್‌ನಲ್ಲೂ ಮಳೆಯಾಗಲಿದೆ. ಹಾಗಾಗಿಯೇ ನವೆಂಬರ್ 24 ರಿಂದ 26ರವರೆಗೆ ರೆಡ್ ಅಲರ್ಟ್ ಘೋಷಿಸಿ ಆದೇಶ ಹೊರಡಿಸಲಾಗಿದೆ.
ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ‘ಯಲ್ಲೋ-ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಹವಾಮಾನ ವೈಪರೀತ್ಯದ ಕಾರಣ ಯಾರು ಕೂಡ ಈ ಪ್ರದೇಶಗಳಲ್ಲಿ ಸಮುದ್ರಕ್ಕೆ ತೆರಳದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ನಿವಾರ್ ಸೈಕ್ಲೋನ್: ನವೆಂಬರ್ 25ರಂದು ತಮಿಳಿನಾಡಿನ ಕಾರೈಕಾಲ್ ಮತ್ತು ಮಾಮಲ್ಲಪುರಂ ನಡುವೆ ವಾಯುವ್ಯ ದಿಕ್ಕಿನಲ್ಲಿ ಚಂಡಮಾರುತ ಚಲಿಸಲಿದೆ. ಇದು ಮುಂದೆ ತಮಿಳುನಾಡು ಮತ್ತು ಪುದುಚೇರಿ ಕರಾವಳಿಗಳನ್ನು ದಾಟಿ ದೇಶದ ಪೂರ್ವ ಕರಾವಳಿಯನ್ನು ತಲುಪುವ ನಿರೀಕ್ಷೆ ಇದೆ. ಈ ಚಂಡಮಾರುತಕ್ಕೆ ‘ನಿವಾರ್’ ಎಂದು ಹೆಸರಿಡಲಾಗಿದೆ.