ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರ ಸ್ಮರಣಾರ್ಥ ಸ್ಮಾರಕ ನಿರ್ಮಾಣಕ್ಕಾಗಿ 1 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರ 87 ನೇ ಜನ್ಮ ದಿನಾಚರಣೆಯಂದು ಸೋಮವಾರ ಸೊರಬ ಪಟ್ಟಣದಲ್ಲಿ ನಿರ್ಮಿಸಲಾದ ಉದ್ಯಾನವನವನ್ನು ಉದ್ಘಾಟಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ಸೊರಬ ಪಟ್ಟಣ ಪಂಚಾಯತ್ ಉದ್ಯಾನವನದ ನಿರ್ವಹಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲಿದೆ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಾಜಿ ಮುಖ್ಯಮಂತ್ರಿಯನ್ನು ಗೌರವದಿಂದ ನೆನಪಿಸಿದ ಯಡಿಯೂರಪ್ಪ, ಶಿಕ್ಷಣ, ಆರೋಗ್ಯ ಮತ್ತು ಕೃಷಿಯಲ್ಲಿನ ಪ್ರಗತಿಪರ ಮತ್ತು ದೂರದೃಷ್ಟಿಯ ಯೋಜನೆಗಳಿಗಾಗಿ ಬಂಗಾರಪ್ಪ ಅವರನ್ನು ಜನರು ಇನ್ನೂ ಸ್ಮರಿಸುತ್ತಾರೆ. ಕೃಷಿ ಕಾರ್ಮಿಕರು, ದೀನ ದಲಿತರು ಮತ್ತು ಗ್ರಾಮೀಣ ಜನರ ಕಲ್ಯಾಣಕ್ಕಾಗಿ ಬಂಗಾರಪ್ಪ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆದ್ದರಿಂದ, ಅವರನ್ನು ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಕರೆಯಲಾಗುತ್ತದೆ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸದ ಬಿ ವೈ ರಾಘವೇಂದ್ರ, ಎಂಎಲ್ಸಿ ಅಯನೂರ್ ಮಂಜುನಾಥ್, ಮಲ್ನಾಡ್ ಪ್ರದೇಶ ಅಭಿವೃದ್ಧಿ ಮಂಡಳಿ ಗುರುಮೂರ್ತಿ, ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಕೆ ಎಂ ಶಾಂತರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ ಎಲ್ ವಿಶಾಲಿ ಉಪಸ್ಥಿತರಿದ್ದರು. ಸೊರಬ ಪಟ್ಟಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಶಾಸಕ ಕುಮಾರ್ ಬಂಗಾರಪ್ಪ ಅಧ್ಯಕ್ಷತೆ ವಹಿಸಿದ್ದರು.











