ಭಾರತೀಯ ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ಸದಸ್ಯರನ್ನು ಒಳಗೊಂಡ ಅಂತರರಾಷ್ಟ್ರೀಯ ಸಮಿತಿಯೊಂದು ಸಲ್ಲಿಸಿರುವ ವರದಿಯ ಪ್ರಕಾರ ಮೀನುಗಾರಿಕಾ ಬಲೆಯ ತ್ಯಾಜ್ಯದ ಅಸುರಕ್ಷಿತ ನಿರ್ವಹಣೆಯಿಂದಾಗಿ ಅಳಿವಿನಂಚಿನಲ್ಲಿರುವ ಗಂಗಾನದಿಯ ಡಾಲ್ಫಿನ್ ಮತ್ತು ಮೂರು ಪಟ್ಟೆಯ ಆಮೆಗಳು ಅಪಾಯವನ್ನು ಎದುರಿಸುತ್ತಿದೆ. ‘ಜರ್ನಲ್ ಸೈನ್ಸ್’ನಲ್ಲಿ ಪ್ರಕಟವಾದ ಸಮೀಕ್ಷೆಯ ಪ್ರಕಾರ ಗಂಗಾನದಿಯ ಉಗಮಸ್ಥಾನವಾದ ಬಾಂಗ್ಲಾದೇಶದಿಂದ ಆರಂಭವಾಗಿ ಅದು ಹರಿಯುವ ಪ್ರದೇಶಗಳ ಉದ್ದಕ್ಕೂ ಮೀನುಗಾರಿಕಾ ತ್ಯಾಜ್ಯಗಳು ಅಸಮರ್ಪಕವಾಗಿ ನಿರ್ವಹಿಸಲ್ಪಟ್ಟಿವೆ.
ಸಂಶೋಧಕರ ಪ್ರಕಾರ ಪ್ಲಾಸ್ಟಿಕ್ ನಿಂದ ತಯಾರಿಸಲ್ಪಟ್ಟ ಮೀನುಗಾರಿಕಾ ಬಲೆಗಳು ಇಡೀ ಗಂಗಾನದಿಯುದ್ದಕ್ಕೂ ಮಾಲಿನ್ಯವನ್ನು ಸೃಷ್ಟಿಸುತ್ತಿದೆ. ಸಮಿತಿಯಲ್ಲಿದ್ದ ಇಂಗ್ಲೆಂಡಿನ ಸಾರಾ ನೆಲ್ಮ್ಸ್ ಎನ್ನುವ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ಸ್ಥಳೀಯ ಮೀನುಗಾರರನ್ನು ಸಂದರ್ಶಿಸಿ “ಜಗತ್ತಿನ ಅತ್ಯಂತ ದೊಡ್ಡ ಒಳನಾಡು ಮೀನುಗಾರಿಕೆ ಗಂಗಾ ತಟದಲ್ಲಿ ನಡೆಯುತ್ತದೆ ಮತ್ತು ಒಳನಾಡು ಮೀನುಗಾರಿಕೆ ಗಂಗಾ ನದಿಯು ಅತ್ಯಂತ ಪ್ರಶಸ್ತ ಜಲಮೂಲವಾಗಿದೆ. ಹೀಗಿದ್ದೂ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ಬಗೆಗೆ ಸಂಶೋಧನೆಗಳು ನಡೆದೇ ಇಲ್ಲ. ಇದರ ನೇರ ಪರಿಣಾಮ ವನ್ಯಜೀವಿಗಳ ಮೇಲಾಗುತ್ತಿದೆ” ಎಂಬ ಹೇಳಿಕೆ ದಾಖಲಿಸಿದ್ದಾರೆ. ಮೇಲಾಗಿ “ಅತಿಯಾದ ಪ್ಲಾಸ್ಟಿಕ್ ಸೇವನೆಯಿಂದ ವನ್ಯಜೀವಿಗಳ ಜೀವಕ್ಕೆ ಅಪಾಯವಿರುವುದರ ಜೊತೆ ಜೊತೆಗೆ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಅಪರೂಪದ ಜಲಚರಗಳು ಜೀವ ಕಳೆದುಕೊಳ್ಳುತ್ತಿವೆ” ಎಂದಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಮಿತಿಯು ಪ್ರಸ್ತುತ ಲಭ್ಯವಿರುವ ಮಾಹಿತಿಯ ಜೊತೆಗೆ ಹೊಸದಾಗಿ ಸಿಕ್ಕಿರುವ ಮಾಹಿತಿಗಳನ್ನು ಸಂಗ್ರಹಿಸಿ ಯಾವೆಲ್ಲಾ ಜಾತಿಯ ಜಲಚರಗಳು ಹೆಚ್ಚು ಅಪಾಯದಲ್ಲಿವೆ ಎಂಬ ಪಟ್ಟಿ ರಚಿಸಿದೆ. ಜೊತೆಗೆ ” ಮೀನುಗಾರರಿಗೆ ತಮ್ಮ ಬಲೆಗಳು ಮರುಬಳಕೆ ಮಾಡುವ ಯಾವ ವ್ಯವಸ್ಥೆಯೂ ಇಲ್ಲ. ಸ್ವತಃ ಮೀನುಗಾರರೇ ಮರುಬಳಕೆಯ ಅವಕಾಶವಿದ್ದಿದ್ದರೆ ಅಂತಹ ಬಲೆಗಳನ್ನೇ ಬಳಸುತ್ತಿದ್ದೆವು. ಈಗ ಬೇರೆ ಆಯ್ಕೆಗಳೇ ಇಲ್ಲದಿರುವುದರಿಂದ ಅನಿವಾರ್ಯ ತ್ಯಾಜ್ಯಗಳನ್ನು ನದಿಗೆ ಬಿಡುತ್ತೇವೆ ಅಂದಿದ್ದಾರೆ” ಎಂದೂ ಹೇಳಿದೆ. ಕೆಲವು ಮೀನುಗಾರರು ನದಿಯು ಎಲ್ಲಾ ತ್ಯಾಜ್ಯಗಳನ್ನು ಸಂಸ್ಕರಿಸುತ್ತದೆ ಎಂದೂ ನಂಬಿಕೊಂಡಿದ್ದಾರಂತೆ.
ಝುವಲಾಜಿಕಲ್ ಸೊಸೈಟಿ ಆಫ್ ಲಂಡನ್ (zoological society of London)ನ ಪ್ರೊಫೆಸರ್ ಹೀದರ್ ಕೋಲ್ಡೆವೇ ಪ್ರಕಾರ ಅತಿ ಹೆಚ್ಚಿನ ಮೀನುಗಾರಿಕಾ ಬಲೆಗಳು ನೈಲಾನ್6 (nylon 6) ಯಿಂದ ರಚಿಸಲ್ಪಟ್ಟಿವೆ. ಮತ್ತು ಈ ನೈಲಾನನ್ನು ಬಳಸಿಕೊಂಡು ಬಟ್ಟೆಗಳನ್ನು ಹಾಗೂ ಕಾರ್ಪೆಟ್‌ಗಳನ್ನು ಉತ್ಪಾದಿಸಬಹುದು. ನೈಲಾನ್ 6 ತ್ಯಾಜ್ಯವನ್ನು ಸಂಗ್ರಹಿಸಿ ಮರುಬಳಕೆ ಮಾಡುವುದರಿಂದ ಪ್ಲಾಸ್ಟಿಕ್ ಸಮಸ್ಯೆ ಪರಿಹಾರವೂ ಆಗುತ್ತದೆ ಮತ್ತು ಆದಾಯದ ಮೂಲವೂ ಆಗುತ್ತದೆ.
ಆದರೆ ಬೆಕ್ಕಿಗೆ ಗಂಟೆ ಕಟ್ಟುವವರಾರು? ಈಗಾಗಲೇ ಗಂಗಾನದಿಯ ನೀರಿನಲ್ಲಿ ಕರಗಿರುವ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಿದೆ. ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ 2017ರ ವರದಿಯ ಪ್ರಕಾರ ಗಂಗಾನದಿಗೆ ಜೈವಿಕ ರಾಸಾಯನಿಕ ಆಮ್ಲಜನಕದ ಅಗತ್ಯ ಅತ್ಯಧಿಕ ಮಟ್ಟದಲ್ಲಿದೆ. ಗಂಗಾನದಿಯ ಹರಿವಿನ ಹೆಚ್ಚಿನ ಪ್ರದೇಶಗಳಲ್ಲಿ ಆಮ್ಲಜನಕದ ಪ್ರಮಾಣ ನಿರಂತರವಾಗಿ ಕಡಿಮೆಯಾಗುತ್ತಿದೆ.
ಮಾಲಿನ್ಯ ನಿಯಂತ್ರಣ ಮಂಡಳಿಯು 1980 ರಿಂದೀಚಿಗೆ ಪ್ರತಿವರ್ಷ ನಿರಂತರವಾಗಿ ಗಂಗಾನದಿ ನೀರಿನ ಗುಣಮಟ್ಟವನ್ನು ಪರೀಕ್ಷಿಸುತ್ತಲೇ ಬಂದಿದೆ. 2,525ಕಿ.ಮೀ ವಿಸ್ತೀರ್ಣದ ಗಂಗಾನದಿಯ 80 ತಾಣಗಳನ್ನು ಪರೀಕ್ಷಿಸುತ್ತಿದ್ದು, 2017ರ ವರದಿಯ ಪ್ರಕಾರ ಅವುಗಳಲ್ಲಿ 36 ತಾಣಗಳ ಬಿಒಡಿ (ಜೈವಿಕ ವರ್ಗಗಳಿಗೆ ಅಗತ್ಯವಿರುವ ಆಮ್ಲಜನಕದ ಪ್ರಮಾಣ) ಮಟ್ಟವು ಪ್ರತಿ ಲೀಟರಿಗೆ ಮೂರು ಮಿಲಿಗ್ರಾಂನಷ್ಟಿದ್ದವು.
ಸಿಸಿಪಿಬಿ ಮಾನದಂಡದ ಪ್ರಕಾರ ನೀರಿನ ಬಿಒಡಿ ಮಟ್ಟವು ಪ್ರತಿ ಲೀಟರಿಗೆ ಎರಡು ಮಿಲಿಗ್ರಾಮ್ ಅಥವಾ ಅದಕ್ಕಿಂತ ಕಡಿಮೆ ಇದ್ದು ಕರಗಿದ ಆಮ್ಲಜನಕದ ಮಟ್ಟವು 6 ಮಿ.ಗ್ರಾಂಗೆ ಅಧಿಕವಿದ್ದಲ್ಲಿ ಆ ನೀರು ಕುಡಿಯಲು ಯೋಗ್ಯವಾದುದಾಗಿದೆ. ಬಿಒಡಿ ಮಟ್ಟವು ಎರಡು ಅಥವಾ ಮೂರು ಮಿಲಿಗ್ರಾಂನಷ್ಟಿದ್ದರೆ ಸಂಸ್ಕರಿಸಿದ ನಂತರವಷ್ಟೇ ಬಳಸಬಹುದು. ಮೂರು ಮಿ.ಗ್ರಾಂಗಿಂತಲೂ ಅಧಿಕ ಇದ್ದರೆ ಆ ನೀರು ಸ್ನಾನಕ್ಕೂ ಯೋಗ್ಯವಲ್ಲ. ಗಂಗಾನದಿಯ ಹಲವೆಡೆಯ ನೀರು ಕುಡಿಯಲು ಬಿಡಿ ಮನೆಬಳಕೆಗೂ ಯೋಗ್ಯವಾಗಿಲ್ಲ. ರೈತರು ನೀರಾವರಿ ಉದ್ದೇಶಕ್ಕೆ ಬಳಸಲೂ ಸಾಧ್ಯವಿಲ್ಲದಷ್ಟು ಮಲಿನವಾಗಿದೆ.
2014ರಲ್ಲಿ ಮೋದಿಯವರು ಪ್ರಧಾನ ಮಂತ್ರಿಯಾದಾಗ “ಗಂಗಾಮಾತೆಯ ಸೇವೆ ಸಲ್ಲಿಸುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಪುಣ್ಯ ಎಂದು ಭಾವಿಸುತ್ತೇನೆ” ಎಂದು ಭಾವುಕವಾಗಿ ನುಡಿದಿದ್ದರು. ಗಂಗಾನದಿಯನ್ನು ಮಾಲಿನ್ಯ ಮುಕ್ತವಾಗಿಸಲು 20,000 ಕೋಟಿ ವೆಚ್ಚದ ಪ್ರಸ್ತಾಪ ವನ್ನು ‘ನಮಾಮಿ ಗಂಗೆ’ಯ ಹೆಸರಲ್ಲಿ ಕೇಂದ್ರ ಮಂತ್ರಿಮಂಡಲದ ಮುಂದಿಟ್ಟು ಒಪ್ಪಿಗೆ ಪಡೆದುಕೊಂಡಿತ್ತು. ಈ ಯೋಜನೆಯಡಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಚರಂಡಿ ನೀರಿನ ವಿಲೇವಾರಿ, ಕೈಗಾರಿಕಾ ಮಾಲಿನ್ಯ ವಿಲೇವಾರಿ, ಮೇಲ್ಮೈ ಶುದ್ಧೀಕರಣ, ನದಿ ಮುಖದ ನೈರ್ಮಲ್ಯ, ನದಿ ದಂಡೆಗಳನ್ನು ಕಟ್ಟುವುದು, ಜೀವ ವೈವಿಧ್ಯತೆಯ ಸಂರಕ್ಷಣೆಗಳಂತಹ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ಆದರೆ ‘ನಮಾಮಿ ಗಂಗೆ’ಯ ಭಾವನಾತ್ಮಕ ಅಭಿಪ್ರಾಯ ರೂಪುಗೊಂಡಷ್ಟು ದಕ್ಷವಾಗಿ ಕೆಲಸ ನಡೆದೇ ಇಲ್ಲ. ನದಿ ತಪ್ಪಲಿನ ಶುದ್ಧೀಕರಣಕ್ಕಾಗಿ ರೂಪಿಸಿದ್ದ 67 ಯೋಜನೆಗಳಲ್ಲಿ 24ನ್ನು ಮಾತ್ರವೇ ಪೂರ್ಣಗೊಳಿಸಲಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದ ಪರಿಸರವಾದಿ, ದಿವಂಗತ ಪ್ರೊ. ಜೆ.ಡಿ ಅಗರ್ವಾಲರು ಶುದ್ಧೀಕರಣ ಯೋಜನೆಯ ಅದಕ್ಷತೆಯ ಬಗ್ಗೆ ಗಮನ ಸೆಳೆದು, ಇಡೀ ಯೋಜನೆ ಕಾರ್ಪೋರೆಟ್ ವಲಯಕ್ಕೆ ಉಪಕಾರಿಯಾಗುವಂತೆ ಮಾತ್ರ ಇದೆ ಎಂಬ ಸಂದೇಹ ವ್ಯಕ್ತಪಡಿಸಿದ್ದರು.
ಆಧ್ಯಾತ್ಮಿಕ ಮತ್ತು ಧಾರ್ಮಿಕ ಆಯಾಮ ಮಾತ್ರವಲ್ಲದೆ ಆರ್ಥಿಕತೆಯ ಮೇಲೂ ಪರಿಣಾಮ ಬೀರುವ ಭಾರತದ ಅತಿ ಮಹತ್ವಪೂರ್ಣ ನದಿಯೊಂದರ ಶುದ್ದೀಕರಣ ಯೋಜನೆಯಂತಹ ಯೋಜನೆಯೂ ಈ ದೇಶದಲ್ಲಿ ನೆನಗುದಿಗೆ ಬೀಳುತ್ತದೆ ಎಂಬುವುದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಕರೋನ ಲಾಕ್ಡೌನ್ ಕಾಲದಲ್ಲಿ ಗಂಗೆ ತಾನೇ ತಾನಾಗಿ ಸ್ವಚ್ಛವಾಗಿತ್ತು. ಮನುಷ್ಯನ ಹಸ್ತಕ್ಷೇಪ ಇರದೇ ಇದ್ದರೆ ಪ್ರಕೃತಿ ತನಗೆ ಬೇಕಾದ ನೈರ್ಮಲ್ಯವನ್ನು ತಾನೇ ತಾನಾಗಿ ಸಾಧಿಸಿಕೊಳ್ಳುತ್ತದೆ. ಆದರೆ ಅದು ತಾತ್ಕಾಲಿಕ. ಮನುಷ್ಯನ ಹಸ್ತಕ್ಷೇಪದಿಂದ ಮಲಿನವಾಗಿರುವ ಗಂಗೆಯನ್ನು ಮತ್ತೆ ಮಾಲಿನ್ಯ ಮುಕ್ತವಾಗಿಸುವುದು ಮನುಷ್ಯನದೇ ಜವಾಬ್ದಾರಿ. ನಮ್ಮನಾಳುವ ಸರ್ಕಾರಕ್ಕೆ ಇಚ್ಛಾಶಕ್ತಿಯೊಂದಿದ್ದರೆ ಗಂಗೆಯನ್ನೇಕೆ ಭಾರತದ ಅಷ್ಟೂ ನದಿಗಳನ್ನು ಸ್ವಚ್ಛವಾಗಿಸಬಹುದು.