ಮೈಸೂರು ವಿಶ್ವವಿದ್ಯಾಲಯದ ನೂರನೇ ಘಟಿಕೋತ್ಸವದ ಸಂದರ್ಭದಲ್ಲಿ ಹೊಸದಿಲ್ಲಿಯಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹದಿಂದ ಸಂತ್ರಸ್ಥರಾದ ಜನರಿಗೆ ಸಹಾನಭೂತಿಯನ್ನು ವ್ಯಕ್ತಪಡಿಸಿದ್ದಾರೆ.
“ಪ್ರವಾಹ ಪೀಡಿತ ಕುಟುಂಬಗಳಿಗೆ ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ. ನೆರೆ ಬಾಧಿತ ಕುಟುಂಬಗಳಿಗೆ ಪರಿಹಾರ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪ್ರಯತ್ನ ನಡೆಯುತ್ತಿದೆ,” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಈ ದಶಕವನ್ನು ಭಾರತದ ದಶಕವನ್ನಾಗಿಸಲು ಹಾಗೂ ಕೋಟ್ಯಾಂತರ ಯುವಕರ ಭವಿಷ್ಯದ ಹಿತದೃಷ್ಟಿಯಿಂದ ಪ್ರತಿಯೊಂದು ವಲಯದಲ್ಲಿಯೂ ಅಗತ್ಯವಾಗಿ ಆಗಬೇಖಾದ ಬೆಳವಣಿಗೆಗಳಲ್ಲಿ ಬದಲಾವಣೆಯನ್ನು ತರಲಾಗುತ್ತಿದೆ. ನಾವು ತಳಪಾಯವನ್ನು ಭಧ್ರಗೊಳಿಸಿದಾಗ ಮಾತ್ರ ಈ ದಶಕ ಭಾರತದ್ದಾಗಲು ಸಾಧ್ಯ. ಯುವಕರಿಗೆ ಅಪಾರ ಅವಕಾಶಗಳನ್ನು ನೀಡಿದ ದಶಕವಿದು, ಎಂದು ಅವರು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರಾಷ್ಟ್ರದಲ್ಲಿ ಜಾರಿಗೊಳಿಸಲಾಗಿರುವ ನೂತನ ಶೀಕ್ಷಣ ನೀತಿಯು, ಉನ್ನತ ಮಟ್ಟದ ಕೌಶಲ್ಯದ ಕಡೆಗೆ ಗಮನವನ್ನು ಕೇಂದ್ರೀಕರಿಸಿ ರಚಿಸಲಾಗಿದೆ. ದೇಶವನ್ನು ಉನ್ನತ ಶಿಕ್ಷಣದ ಜಾಗತಿಕ ಕೇಂದ್ರವನ್ನಾಗಿ ಮಾಡಲು ಮತ್ತು ದೇಶದ ಯುವಕರನ್ನು ಸ್ಪರ್ಧಾತ್ಮಕವಾಗಿಸಲು ಎಲ್ಲಾ ಹಂತದಲ್ಲೂ ಪ್ರಯತ್ನಗಳು ನಡೆಯುತ್ತಿವೆ, ಎಂದರು.
ಕರೋನಾ ಸೋಂಕಿನ ಕಾರಣದಿಂದ ಹಾಗೂ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದಲ್ಲಿ ಹಬ್ಬದ ವಾತಾವರಣ ಮಂಕಾಗಿದೆ, ಎಂದ ಪ್ರಧಾನಿಯವರು ರಾಜ್ಯದ ಜನತೆಗೆ ದಸರಾ ಹಬ್ಬದ ಶುಭಾಷಯಗಳನ್ನು ತಿಳಿಸಿದ್ದಾರೆ.
ಮೈಸೂರು ವಿವಿಯ ಗುಣಗಾನ:
ಮೈಸೂರು ವಿವಿ ಪ್ರಾರಂಭವಾದಾಗಿಂದಲೂ ಈವರೆಗಿನ ಘಟಿಕೋತ್ಸವಗಳಲ್ಲಿ ಭಾಷಣವನ್ನು ಮಾಡಿದ ಎರಡನೇ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಗುರುತಿಸಿಕೊಂಡಿದ್ದಾರೆ. ಜವಹರ್‌ಲಾಲ್ ನೆಹರೂ ನಂತರ ಇದೇ ಮೊದಲ ಬಾರಿಗೆ ದೇಶದ ಪ್ರಧಾನಿಯವರು ಮೈಸೂರು ವಿವಿಯ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಮೈಸೂರು ವಿವಿಯ ಗುಣಗಾನ ಮಾಡಿರುವ ಪ್ರಧಾನಿ ಮೋದಿ ಅವರು ಶಿಕ್ಷಣ ಕ್ಷೇತ್ರಕ್ಕೆ ವಿವಿಯ ಕೊಡುಗೆ ಅಪಾರ ಎಂದು ಹೇಳಿದ್ದಾರೆ. ಕುವೆಂಪು ಅವರು ಮೈಸೂರು ವಿವಿಗೆ ಮಾನಸ ಗಂಗೋತ್ರಿ ಎಂದು ಹೆಸರಿಟ್ಟಿದ್ದಾರೆ. ಈ ಸಂಸ್ಥೆಯು ಇನ್ನಷ್ಟು ಉತ್ತುಂಗಕ್ಕೆ ಏರುವ ಕಡೆಗೆ ಗಮನ ಹರಿಸಬೇಕು ಎಂದು ಅವರು ಹೇಳಿದ್ದಾರೆ.
ಈ ಬಾರಿಯ ಘಟಿಕೋತ್ಸವದಲ್ಲಿ ಒಟ್ಟು 600 ಮಂದಿ ಪಿ.ಹೆಚ್‌ಡಿ ಪದವಿಯನ್ನು ಪಡೆದಿದ್ದಾರೆ.