ದೇಶದ ಜನರ ಆಧಾರ್ ಮಾಹಿತಿಯನ್ನು ತಮ್ಮ ಆಪ್ತ ಮುಖೇಶ್ ಅಂಬಾನಿಗೆ ಉಡುಗೊರೆಯಾಗಿ ನೀಡಿ ರಿಲಯನ್ಸ್ ಜಿಯೋಗೆ ಆಧಾರವಾದ ಪ್ರಧಾನಿ ನರೇಂದ್ರ ಮೋದಿ ಈಗ ಜನರ ‘ಆರೋಗ್ಯ ಸೇತು ಮಿತ್ರ’ ಆಪ್ ಮಾಹಿತಿಯನ್ನೂ ಧಾರೆ ಎರೆಯಲು ಮುಂದಾಗಿದ್ದಾರೆಯೇ? ಆ ಮೂಲಕ ದೇಶದಲ್ಲಿ ಇನ್ನೂ ಕಾನೂನುಬದ್ಧವಲ್ಲದ ಆನ್ಲೈನ್ ಔಷಧ ವಿತರಣೆಯ ವ್ಯವಹಾರಕ್ಕೆ ಪ್ರಧಾನಿ ಮೋದಿ ಮುಖೇಶ್ ಅಂಬಾನಿಗೆ ಸಹಾಯ ನೀಡುತ್ತಿದ್ದಾರೆಯೇ? ಸಂವಿಧಾನಿಕ ಹುದ್ದೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕಾನೂನುಬಾಹಿರ ವಹಿವಾಟು ನಡೆಸುವ ತಮ್ಮ ಆಪ್ತನಿಗೆ ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆಯೇ? ಆ ಮೂಲಕ ಕೊರೊನಾ ಸೋಂಕು ತಡೆಯುವ ಹೆಸರಿನಲ್ಲಿ ಸಂಗ್ರಹಿಸಲಾದ ಜನರ ಆರೋಗ್ಯದ ಮಾಹಿತಿಯನ್ನು ನೀಡುತ್ತಿದ್ದಾರೆಯೇ?
ಆಧಾರ್ ಮಾಹಿತಿಯು ಮೊದಲಿಗೆ ಕೇವಲ ರಿಲಯನ್ಸ್ ಜಿಯೋಗೆ ದಕ್ಕಿದ ಸಂದರ್ಭವನ್ನು ಗಮನಿಸಿದರೆ, ಮೇಲಿನ ಪ್ರಶ್ನೆಗಳು ಉತ್ಪ್ರೇಕ್ಷೆ ಎನಿಸಲಾರವು, ಮತ್ತು ಉತ್ತರವೂ ಸ್ಪಷ್ಟವಾಗತ್ತದೆ!
ಹಾಗಂತ ನಾವು ಆರೋಪ ಮಾಡ್ತಾ ಇಲ್ಲಾ. ದೇಶವ್ಯಾಪಿ ಹರಡಿರುವ 8,50,000 ಪ್ರತಿನಿಧಿಗಳನ್ನು ಒಳಗೊಂಡಿರುವ ಆಲ್ ಇಂಡಿಯಾ ಆರ್ಗನೈಸೆಷ್ ಆಫ್ ಕೆಮಿಸ್ಟ್ ಅಂಡ್ ಡ್ರಗಿಸ್ಟ್ (AIOCD) ಇಂತಹ ಪೂರಕ ಮಾಹಿತಿಯನ್ನು ಒದಗಿಸಿದೆ.
ಆಗಿರುವುದೇನೆಂದರೆ- ಪ್ರಧಾನಿ ನರೇಂದ್ರಮೋದಿ ಆಪ್ತ ಮುಖೇಶ್ ಅಂಬಾನಿ ಆನ್ಲೈನ್ ಫಾರ್ಮ ಕಂಪನಿ ನೆಟ್ಮೆಡ್ಸ್ ಅನ್ನು ಖರೀದಿಸಿದ್ದಾರೆ. ಚನ್ನೈ ಮೂಲದ ನೆಟ್ಮೆಡ್ಸ್ (ವಿಟಾಲಿಕ್ ಹೆಲ್ತ್ಕೇರ್ ಪ್ರೈವೆಟ್ ಲಿ.)ನಲ್ಲಿ ಶೇ.60ರಷ್ಟು ಪಾಲನ್ನು ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆ ರಿಲಯನ್ಸ್ ವೆಂಚರ್ಸ್ 620 ಕೋಟಿ ರುಪಾಯಿಗಳಿಗೆ ಖರೀದಿ ಮಾಡಿದೆ. ಇದು ಆನ್ಲೈನ್ ಔಷಧಿ ವಿತರಿಸುವ ಕಂಪನಿಯಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮುಖ್ಯ ವಿಷಯ ಏನಪ್ಪಾ ಅಂದರೆ- ದೇಶದಲ್ಲಿ ಆನ್ಲೈನ್ ನಲ್ಲಿ ಔಷಧ ವಿತರಿಸುವುದು ಕಾನೂನು ಬಾಹಿರ!
ಮುಖೇಶ್ ಅಂಬಾನಿಯು ನೆಟ್ಮೆಡ್ಸ್ (NETMEDS) ಕಂಪನಿಯಲ್ಲಿ ಪಾಲು ಖರೀದಿ ಮಾಡುವುದಕ್ಕೆ ಎಐಒಸಿಡಿ ವಿರೋಧ ವ್ಯಕ್ತಪಡಿಸಿದೆ. ವಿರೋಧ ವ್ಯಕ್ತ ಪಡಿಸಲು ಕಾರಣ ಏನೆಂದರೆ ದೇಶದಲ್ಲಿ ಆನ್ಲೈನ್ ಔಷಧಿ ವಿತರಣೆಯು ಈಗಲೂ ಕಾನೂನು ಬಾಹಿರವಾಗಿದೆ. ಕಾನೂನುಬಾಹಿರವಾಗಿ ವಹಿವಾಟು ನಡೆಸುತ್ತಿರುವ ಕಂಪನಿಯನ್ನು ಖರೀದಿಸುವುದು ಕೂಡಾ ಕಾನೂನುಬಾಹಿರ ಎಂಬುದು ಎಐಒಸಿಡಿಯ ವಾದ. ಈ ಹಿನ್ನೆಲೆಯಲ್ಲಿ ಎಐಒಸಿಡಿ ಮುಖೇಶ್ ಅಂಬಾನಿಗೆ ನೆಟ್ಮೆಡ್ಸ್ ಖರೀದಿ ಮಾಡುವುದಕ್ಕೆ ವಿರೋಧ ವ್ಯಕ್ತ ಪಡಿಸಿ ಪತ್ರ ಬರೆದಿದೆ. ಆ ಪತ್ರದ ಪ್ರತಿಯನ್ನು ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯುಷ್ ಗೋಯಲ್ ಸೇರಿದಂತೆ ಸರ್ಕಾರದ ಪ್ರಮುಖ ಸಚಿವರು ಹಾಗೂ ಉನ್ನತ ಅಧಿಕಾರಿಗಳಿಗೆ ರವಾನಿಸಿದೆ ಎಂದು ‘ಬ್ಯುಸಿನೆಸ್ ಸ್ಟ್ಯಾಂಡರ್ಡ್’ ವರದಿ ತಿಳಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ನಂತಹ ಘನತೆವೆತ್ತ ಕಂಪನಿಯು ದೇಶದಲ್ಲಿ ಕಾನೂನುಬಾಹಿರ ಆಗಿರುವ ವಹಿವಾಟು ನಡೆಸುತ್ತಿರುವ ಕಂಪನಿಯನ್ನು ಖರೀದಿಸಲು ಮುಂದಾಗಿರುವುದು ನಮ್ಮಲ್ಲಿ ತೀವ್ರ ನಿರಾಶೆ ಮೂಡಿಸಿದೆ. ಔಷಧ ಆಮದು, ಉತ್ಪಾದನೆ, ಮಾರಾಟ, ವಿತರಣೆ ಸೇರಿದಂತೆ ಔಷದೋದ್ಯಮದ ನಿಯಂತ್ರಿಸುವ ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ (ಡ್ರಗ್ಸ್ ಮತ್ತು ಕಾಸ್ಮೆಟಿಕ್ ಆಕ್ಟ್) ಅಡಿಯಲ್ಲಿ ಆನ್ಲೈನ್ ಔಷಧಿ ಮಾರಾಟಕ್ಕೆ ಅನುಮೋದನೆ ಸಿಕ್ಕಿಲ್ಲ ಎಂದು ಎಐಒಸಿಡಿ ಹೇಳಿದೆ.
‘ದೇಶದ ಕಾನೂನಿನಡಿ ಮಾನ್ಯತೆ ಪಡೆಯದ ವ್ಯಾಪಾರ ನಡೆಸುತ್ತಿರುವ ಕಂಪನಿಯೊಂದಿಗೆ ವಹಿವಾಟು ನಡೆಸಲು ಮುಂದಾಗಿರುವ ರಿಲಯನ್ಸ್ ಕಂಪನಿಯ ಬಗ್ಗೆ ಅದರ ಷೇರುದಾರರು ಹೇಗೆ ಸ್ಪಂದಿಸುತ್ತಾರೆ ಎಂಬ ಬಗ್ಗೆ ನಮಗೆ ಅಚ್ಚರಿಇದೆ. ಮುಖೇಶ್ ಅಂಬಾನಿಯವರೇ, ಆನ್ಲೈನ್ ಔಷಧ ವ್ಯಾಪಾರವು ನಮ್ಮ ಲಕ್ಷಾಂತರ ನಾಗರಿಕರ ಜೀವನೋಪಾಯಕ್ಕೆ ಧಕ್ಕೆ ತರುವುದಷ್ಟೇ ಅಲ್ಲಾ ಇದು ಪರಿಪೂರ್ಣ ಸ್ಪರ್ಧಾ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸೃಷ್ಟಿಸುತ್ತದೆ, ಲಕ್ಷಾಂತರ ಮಂದಿ ಔಷಧ ವ್ಯಾಪಾರಿಗಳ ಜೀವನೋಪಾಯದ ಮಾರ್ಗವಾಗಿರುವ ವಹಿವಾಟಿನ ಲಾಭವು ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಜೇಬು ಸೇರುತ್ತಾ, ಸಂಪತ್ತು ಒಂದೇ ಕಡೆ ಕ್ರೋಢೀಕರಣಗೊಳ್ಳುತ್ತದೆ’ ಎಂದು ಎಐಒಸಿಡಿ ಆತಂಕ ವ್ಯಕ್ತಪಡಿಸಿದೆ. ಒಂದು ಉದ್ಯಮವಾಗಿ ಮತ್ತು ವ್ಯಾಪಾರ ಸಂಘಟನೆಯಾಗಿರುವ ಎಐಒಸಿಡಿ, ತನ್ನ ಸದಸ್ಯರು ಎದುರಿಸಬಹುದಾದ ಸಂಕಷ್ಟಗಳ ಬಗ್ಗೆ ಆತಂಕಗೊಂಡಿದೆ, ಈಗಾಗಲೇ ದೂರಸಂಪರ್ಕ ಮತ್ತು ಚಿಲ್ಲರೆ ವ್ಯಾಪಾರ ವಲಯವು ಎದುರಿಸುತ್ತಿರುವ ಸಂಕಷ್ಟಗಳನ್ನು ಮುಂದೆ ನಾವೂ ಎದರಿಸಬೇಕಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದೆ.
ಈಗಾಗಲೇ ಎಐಒಸಿಡಿ ಸಹಸಂಸ್ಥೆಯು ಆರೋಗ್ಯ ಸೇತು ಆಪ್ಲಿಕೇಶನ್ ಅನ್ನು ಇ ಫಾರ್ಮಸಿಗಳ ಅಕ್ರಮ ಪ್ರಚಾರಕ್ಕೆ ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವುದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಹೈಕೋರ್ಟ್ ನಲ್ಲಿ ದಾವೆ ಹೂಡಿದೆ. ಪ್ರಕರಣದ ವಿಚಾರಣೆ ವೇಳೆಯಲ್ಲಿ, ಭಾರತೀಯ ಜಂಟಿ ಔಷಧ ನಿಯಂತ್ರಕರು ಸಲ್ಲಿಸಿರುವ ಅಫಿಡವಿಟ್ ನಲ್ಲಿ ಆನ್ಲೈನ್ ಔಷಧಿ ಮಾರಾಟವು ಪ್ರಸ್ತುತ ಪರಿಗಣನೆ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ ಆರೋಗ್ಯ ಸೇತು ಮಿತ್ರ ವೆಬ್ ಲಿಂಕ್ ಮೂಲಕ ಸೇವೆ ನೀಡುತ್ತಿರುವ ಆನ್ಲೈನ್ ಫಾರ್ಮಿಸಿಗಳು ನೊಂದಾಯಿಸಲ್ಪಟ್ಟಿವೆಯೇ, ಲೈಸೆನ್ಸ್ ಪಡೆದಿವೆಯೇ ಎಂಬ ಪ್ರಶ್ನೆಗೆ, ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ 1940, ಔಷಧ ಮತ್ತು ಸೌಂದರ್ಯವರ್ಧಕ ನಿಯಮ 1945ಗರ ಅಡಿಯಲ್ಲಿ ಅದಕ್ಕೆ ಅವಕಾಶ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆಯಡಿ ಎಂದೂ ಔಷಧಗಳನ್ನು ಮನೆಗೆ ತಲುಪಿಸಲು ಅವಕಾಶ ನೀಡಿಲ್ಲ. ಆದರೆ, ಕೊರೊನಾ ಸೋಂಕು ಹರಡಿದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನೆರೆಯ ಔಷಧ ಅಂಗಡಿಗಳಿಂದ ಮಾತ್ರ ಮನೆಗೆ ಔಷಧ ತಲುಪಿಸಲು ಅವಕಾಶ ನೀಡಿ ಅಧಿಸೂಚನೆ ನೀಡಿದೆ ಎಂದು ಎಐಒಸಿಡಿ ಸ್ಪಷ್ಟಪಡಿಸಿದೆ.
ಅಮೆಜಾನ್ ಇ ಕಾಮರ್ಸ್ ಔಷಧಿಗಳನ್ನು ಆನ್ಲೈನ್ ನಲ್ಲಿ ವಿತರಿಸುವುದನ್ನು ವಿರೋಧಿಸಿ ಎಐಒಸಿಡಿ ಅಮೆಜಾನ್ ಮುಖ್ಯಸ್ಥ ಜೆಫ್ ಬಿಜೋಸ್ ಗೆ ಕೂಡಾ ಇಂತಹದ್ದೇ ಪತ್ರವನ್ನು ಬರೆದಿದೆ. ಈಗಾಗಲೇ ನ್ಯಾಯಾಲಯದಲ್ಲಿ ಈ ಸಂಬಂಧ ದಾವೆ ಇರುವುದರಿಂದ ತಾವು ಆನ್ಲೈನ್ ಫಾರ್ಮಸಿ ಕಂಪನಿಗಳ ಔಷಧಿಗಳನ್ನು ಮನೆಗೆ ತಲುಪಿಸುವುದಿಲ್ಲ ಎಂದು ಅಮೇಜಾನ್ ತಿಳಿಸಿದೆ.
ಮುಖೇಶ್ ಅಂಬಾನಿ ಪ್ರವೇಶಕ್ಕೆ ಕಾರಣವೇನು?
ಭಾರತದ ಇ- ಹೆಲ್ತ್ ವಲಯವು ಭವಿಷ್ಯದಲ್ಲಿ ಬೃಹತ್ ಸಂಪನ್ಮೂಲ ಸೃಷ್ಟಿಸುವ ಅವಕಾಶ ಹೊಂದಿದೆ. 2025ರ ವೇಳೆಗೆ 16 ಬಿಲಿಯನ್ ಡಾಲರ್ ವಹಿವಾಟು ನಡೆಯುವ ಮುನ್ನಂದಾಜು ಇದೆ. ಪ್ರಸ್ತುತ 1.2 ಬಿಲಿಯನ್ ಡಾಲರ್ ವಹಿವಾಟು ನಡೆಸುತ್ತಿರುವ ಈ ಉದ್ಯಮವು ವಾರ್ಷಿಕ ಶೇ.60ಕ್ಕಿಂತ ಹೆಚ್ಚು ಅಭಿವೃದ್ಧಿ ದಾಖಲಿಸುವ ಅವಕಾಶ ಹೊಂದಿದೆ ಎಂದು ರೆಡ್ಸೀರ್ ಕನ್ಸಲ್ಟಿಂಗ್ ಸಂಸ್ಥೆಯು ತನ್ನ ಸಂಶೋಧನಾ ವರದಿಯಲ್ಲಿ ತಿಳಿಸಿದೆ. ಈ ಬೃಹದವಕಾಶವನ್ನು ನಗದೀಕರಿಸಲು ಮುಂದಾಗಿರುವ ಇ-ಹೆಲ್ತ್ ಕಂಪನಿಗಳಾದ ಮೆಡ್ಲೈಫ್ ಮತ್ತು ಫಾರ್ಮ್ಈಸಿ ಕಂಪನಿಗಳು ವಿಲೀನಗೊಳ್ಳಲು ಒಡಂಬಡಿಕೆ ಮಾಡಿಕೊಂಡಿದ್ದು, ಈ ಸಂಬಂಧ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ (ಸಿಸಿಐ) ಅನುಮೋದನೆ ಕೋರಿವೆ. ಮೆಡ್ಲೈಫ್ ಮತ್ತು ಫಾರ್ಮಈಸಿ ಕಂಪನಿಗಳು ವಿಲೀನಗೊಂಡ ನಂತರ ಏಕೀಕೃತ ಕಂಪನಿಯ ಮಾರುಕಟ್ಟೆ ಮೌಲ್ಯವು 1 ಬಿಲಿಯನ್ ಡಾಲರ್ ಗಳಾಷ್ಟಗಲಿದೆ ಎಂದು ಅಂದಾಜಿಸಲಾಗಿದೆ.
ಈಗಾಗಲೇ ಭಾರತೀಯ ಜಂಟಿ ಔಷಧ ನಿಯಂತ್ರಕರು ಆನ್ಲೈನ್ ಔಷಧಿ ಮಾರಾಟವು ಪ್ರಸ್ತುತ ಸರ್ಕಾರದ ಪರಿಗಣನೆಯ ಹಂತದಲ್ಲಿದೆ ಎಂದು ದೆಹಲಿ ಹೈಕೋರ್ಟ್ ಗೆ ತಿಳಿಸಿದ್ದಾರೆ. ಅಂದರೆ, ನರೇಂದ್ರಮೋದಿ ಸರ್ಕಾರವು ಆನ್ಲೈನ್ ಮೂಲಕ ಔಷಧಿ ಮಾರಾಟಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಮುಕ್ತ ಮನಸ್ಸು ಹೊಂದಿದೆ. ಏಕಾಏಕಿ ಮೋದಿ ಸರ್ಕಾರ ಈ ಮನಸ್ಸು ಮಾಡಲು ಕಾರಣವೇನು?
ಕಾರಣ ಸ್ಪಷ್ಟ. ಮುಖೇಶ್ ಅಂಬಾನಿ ಆನ್ಲೈನ್ ಔಷಧ ಮಾರಾಟಕ್ಕೆ ಪ್ರವೇಶ ಮಾಡುವುದಕ್ಕೆ ಮೋದಿ ಸರ್ಕಾರವು ವೇದಿಕೆ ಸಿದ್ದ ಮಾಡಿಕೊಡುತ್ತಿದೆ. ಈಗ ಮುಖೇಶ್ ಅಂಬಾನಿ ನೆಟ್ಮೆಡ್ಸ್ ಖರೀದಿಸಿದ್ದಾರೆ. ನೆಟ್ಮೆಡ್ಸ್ ಖರೀದಿ ಮಾಡಿದ ಮುಖೇಶ್ ಅಂಬಾನಿಗೆ ಮುಂಬರುವ ದಿನಗಳಲ್ಲಿ ಮೆಡ್ಲೈಫ್ ಮತ್ತು ಫಾರ್ಮಈಸಿ ಕಂಪನಿಗಳನ್ನು ಖರೀದಿಸುವುದು ಕಷ್ಟವೇನಲ್ಲ. ಅಷ್ಟಕ್ಕೂ ಮೆಡ್ಲೈಫ್ ಮತ್ತು ಫಾರ್ಮಈಸಿ ವಿಲೀನಗೊಂಡ ನಂತರದ ಮಾರುಕಟ್ಟೆ ಮೌಲ್ಯವು 1 ಬಿಲಿಯನ್ ಡಾಲರ್ ಅಂದರೆ ಸುಮಾರು 7,500 ಕೋಟಿ ರುಪಾಯಿಗಳಷ್ಟಾಗುತ್ತದೆ. ರಿಲಯನ್ಸ್ ಇಂಡಸ್ಟ್ರೀಸ್ ನ ಮಾರುಕಟ್ಟೆ ಬಂಡವಾಳ ಮೌಲ್ಯವು ಈಗ 14 ಲಕ್ಷ ಕೋಟಿ ಆಜುಬಾಜಿನಲ್ಲಿದೆ. ಮೆಡ್ಲೈಫ್ ಮತ್ತು ಫಾರ್ಮಸಿ ಕಂಪನಿಗಳನ್ನು ಖರೀದಿಸಿದರೆ, ಇಡೀ ಆನ್ಲೈನ್ ಔಷಧಿ ಮಾರುಕಟ್ಟೆಯಲ್ಲಿ ಏಕಸ್ವಾಮ್ಯತೆ ಸಾಧಿಸಬಹುದು ಎಂಬುದು ಮುಖೇಶ್ ಅಂಬಾನಿಯ ಲೆಕ್ಕಾಚಾರ ಇರಬಹುದು.
ಪ್ರಧಾನಿ ಮೋದಿ ಸರ್ಕಾರವು ಉಡುಗೊರೆಯಾಗಿ ನೀಡಿದ ಆಧಾರ್ ಮಾಹಿತಿ ಬಳಸಿಕೊಂಡು ದಿನಬೆಳಗಾಗುವುದರೊಳಗೆ ಕೋಟ್ಯಂತರ ಮೊಬೈಲ್ ಗ್ರಾಹಕರನ್ನು ಪಡೆದ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ನಾಲ್ಕು ವರ್ಷ ತುಂಬುವ ಮುನ್ನವೇ ನಂಬರ್ ಒನ್ ಮೊಬೈಲ್ ಕಂಪನಿಯಾಗಿ ರೂಪುಗೊಂಡಿದೆ. ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ (BSNL) ಮತ್ತು ಮಹಾನಗರ ಸಂಚಾರ ನಿಗಮ (MTNL) ಸಂಸ್ಥೆಗಳಿಗೆ ದಕ್ಕದ ಆಧಾರ್ ಸೌಲಭ್ಯವನ್ನು ಜಿಯೋಗೆ ಧಾರೆ ಎರೆದಿದ್ದರು ಪ್ರಧಾನಿ ಮೋದಿ. ಆ ಮೂಲಕ ದೇಶದ ಸಂಪರ್ಕ ಸೇತುಗಳನ್ನೇ ಕಡಿದುಹಾಕುವ ದುಸ್ಸಾಹಸ ಮಾಡಿದ್ದರು. ಅದಕ್ಕಾಗಿ ಪ್ರತಿಯಾಗಿ ಜಿಯೋ ಮಾಲೀಕ ಮುಖೇಶ್ ಅಂಬಾನಿ ಒಡೆತನದಲ್ಲಿರುವ ಇಂಡಿಪೆಂಡೆಂಟ್ ಮಿಡಿಯಾ ಟ್ರಸ್ಟ್ ನಡೆಸುತ್ತಿರುವ ನೆಟ್ವರ್ಕ್ 18 ಮತ್ತು ಟಿವಿ 18 ಸಂಸ್ಥೆಗಳ ಸುಮಾರು ಎರಡು ಡಜನ್ ಸುದ್ದಿ ಚಾನಲ್ ಗಳು ಮೋದಿ ಸರ್ಕಾರದ ಆತ್ಮನಿರ್ಭರ ಘೋಷಣೆಯನ್ನು ನಿತ್ಯವೂ ಪ್ರಚಾರ ಮಾಡುತ್ತಿವೆ.
ಅಲ್ಲದೇ ಆಧಾರ್ ಮಾಹಿತಿಯನ್ನು ಮುಖೇಶ್ ಅಂಬಾನಿಗೆ ಉಡುಗೊರೆ ನೀಡಿದ ಮೋದಿ ಸರ್ಕಾರವು ಆರೋಗ್ಯ ಸೇತು ಮಿತ್ರ ಆಪ್ ಮಾಹಿತಿಯನ್ನು ನೀಡದೇ ಇರುತ್ತದೆಯೇ? ಈಗ ಕೇಂದ್ರ ಸರ್ಕಾರವು ಆನ್ಲೈನ್ ನಲ್ಲಿ ಔಷಧಿ ವಿತರಣೆಗೆ ಅವಕಾಶ ಮಾಡಿಕೊಡುವುದೆಂದರೆ ಅದು ನೇರವಾಗಿ ಪ್ರಧಾನಿ ಮೋದಿ ತಮ್ಮ ಆಪ್ತ ಮುಖೇಶ್ ಅಂಬಾನಿಗೆ ಅನುಕೂಲ ಮಾಡಿಕೊಟ್ಟಂತೆಯೇ!
ಅಷ್ಟೇ ಅಲ್ಲಾ, ದೇಶವ್ಯಾಪಿ ಹರಡಿರುವ 8,50,000 ಔಷಧ ವ್ಯಾಪಾರಿಗಳು ಮತ್ತು ಈ ವ್ಯಾಪಾರಿಗಳನ್ನು ಅವಲಂಬಿಸಿರುವ ಸುಮಾರು 85 ಲಕ್ಷ ಜನರ ಉದ್ಯೋಗದ ಶವಕ್ಕೆ ಕೊನೆ ಮೊಳೆ ಜಡಿದಂತೆಯೇ!