“ಬಿಜೆಪಿ ಸಂಸದ ಪ್ರತಾಪ್ ಸಿಂಹ ಪೇಟೆ ರೌಡಿ, ಇಂತವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಮಂಡ್ಯ ಲೋಕಸಭಾ ಚುನಾವಣೆ ಸಂದರ್ಭದಿಂದಲೂ ಇಂತಹ ಮಾತುಗಳನ್ನು ಎದುರಿಸುತ್ತಾ ಬಂದಿದ್ದೇನೆ. ನನ್ನ ಗಂಡ ಅಂಬರೀಶ್ ಬದುಕಿದ್ದಾಗ ಯಾರಿಗೂ ಈ ರೀತಿ ಮಾತಾಡಲು ಧೈರ್ಯ ಮಾಡುತ್ತಿರಲಿಲ್ಲ. ಈಗ ಎಲ್ಲರೂ ಮಾತಾಡಲು ಶುರು ಮಾಡಿದ್ದಾರೆ. ಇರಲಿ, ನಾನು ನನ್ನ ಕ್ಷೇತ್ರದ ಜನರಿಗೆ ಉತ್ತರ ನೀಡಬೇಕೇ ಹೊರತು ಪೇಟೆ ರೌಡಿ ರೀತಿ ಮಾತಾಡೋರಿಗಲ್ಲ” ಎನ್ನುವ ಮೂಲಕ ಸಂಸದೆ ಸುಮಲತಾ ಅಂಬರೀಶ್ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ್ದಾರೆ.
ತಾನು ಮಂಡ್ಯ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ನಾಲಿಗೆ ಹರಿಬಿಟ್ಟ ಸಂಸದ ಪ್ರತಾಪ ಸಿಂಹ ಹೇಳಿಕೆಗೆ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದರು. ಪ್ರತಾಪ್ ಸಿಂಹ ಒಬ್ಬ ಪೇಟೆ ರೌಡಿ ರೀತಿ ಮಾತಾಡೋದಾದರೆ, ನನ್ನ ಪ್ರತಿಕ್ರಿಯೆಗೆ ಅರ್ಹರಲ್ಲ. ಪಕ್ಕದ ಮೈಸೂರು ಕ್ಷೇತ್ರದ ಸಂಸದರಿಗೆ ನನ್ನ ಕ್ಷೇತ್ರದ ಬಗ್ಗೆ ಮಾತಾಡುವ ಹಕ್ಕಿಲ್ಲ. ಇವರ ಹೇಳಿಕೆಗೆ ಅಂಬರೀಶ್ ಅಭಿಮಾನಿಗಳು, ನನ್ನ ಮತದಾರರು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಗೊತ್ತಿದೆ ಎಂದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರತಾಪ್ ಸಿಂಹ ಸಂಸದರಾಗಿ ಮತ್ತೊಬ್ಬ ಸಂಸದರ ಬಗ್ಗೆ ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ. ಸಂಸದರ ಭಾಷೆ ಬದಲಿಗೆ ಪೇಟೆ ರೌಡಿ ಭಾಷೆ ಬಳಸಿದ ಇವರಿಗೆ ನಾನು ಉತ್ತರ ನೀಡೋಲ್ಲ ಎಂದು ಸುಮಲತಾ ಕುಟುಕಿದರು.
ನಾನು ಕೇವಲ ಮಂಡ್ಯಗೆ ಮಾತ್ರವಲ್ಲದೇ ಮೈಸೂರಿನ ಒಂದು ಭಾಗ ಕೆ.ಆರ್. ನಗರಕ್ಕೂ ಸಂಸದೆ. ಹೀಗಾಗಿ ರಾಜಕಾರಣಿಗಳು ಹೋದಾಗ ಜನ ಬಂದು ದೂರು ಹೇಳುವುದು ಸಾಮಾನ್ಯ. ನನಗೂ ಹಲವರು ಕೊಡಗಿನಲ್ಲಿ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ ಎಂದು ದೂರು ನೀಡಿದ್ದಾರೆ. ಅಂತಹ ಸಂದರ್ಭದಲ್ಲಿ ಸಂಸದರು ಜವಾಬ್ದಾರಿಯಿಂದ ವರ್ತಿಸಬೇಕು ಎಂದರು.
Also Read: ರಾಯಣ್ಣನನ್ನು ಕೇವಲ ರಾಜ್ಯಕ್ಕೆ ಸೀಮಿತಗೊಳಿಸಿದ ಪ್ರತಾಪ ಸಿಂಹ
ಇನ್ನು, ಪ್ರತಾಪ್ ಸಿಂಹ ಅವರ ಈ ರೀತಿಯ ಹೇಳಿಕೆಗಳು ತಮ್ಮ ಬೇಜವಾಬ್ದಾರಿತನವನ್ನು ತೋರಿಸುತ್ತವೆ. ಎರಡು ಬಾರಿ ಸಂಸದರಾದವರು, ಅದನ್ನು ಅರಿತು ನಡೆದುಕೊಳ್ಳಬೇಕು ಎಂದು ಕಿಡಿಕಾರಿದರು.

ಘಟನೆ ಹಿನ್ನೆಲೆಯೇನು?: ಈ ಹಿಂದೆ ಸಂಸದೆ ಸುಮಲತಾ ಏನೂ ಕೆಲಸ ಮಾಡುವುದಿಲ್ಲ. ಮಂಡ್ಯದ ಯಾವುದೇ ಕೆಲಸ ಇದ್ದರೂ ನನಗೆ ಹೇಳಿ ಎಂದು ಟೀಕಿಸಿರುವ ಪ್ರತಾಪ್ ಸಿಂಹ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಬೆಂಗಳೂರು-ಮೈಸೂರು ದಶಪಥ ರಸ್ತೆ ಕಾಮಗಾರಿ ವಿಚಾರ ಸಂಬಂಧ ಸಂಸದರು ಕೆಲಸ ಮಾಡುವುದಕ್ಕೆ ಬಿಡಲ್ಲ ಎಂದು ಸುಮಲತಾ ವಿರುದ್ಧ ಅಧಿಕಾರಿಯೊಬ್ಬರು ಪ್ರತಾಪ್ ಸಿಂಹಗೆ ದೂರು ನೀಡಿದ್ದರು. ಈ ವೇಳೆ ಅಧಿಕಾರಿ ಜೊತೆ ಕರೆಯಲ್ಲಿ ಮಾತಾಡುವಾಗ ಪ್ರತಾಪ್ ಸಿಂಹ ಈ ರೀತಿ ಸುಮಲತಾರನ್ನ ಟೀಕಿಸಿದ್ದಾರೆ.
ಹೆಚ್.ಡಿ. ದೇವೇಗೌಡರ ಕುಟುಂಬದವರನ್ನು ಸೋಲಿಸಲು ಮಂಡ್ಯ ಕ್ಷೇತ್ರದಲ್ಲಿ ಸಂಸದೆ ಸುಮಲತಾರನ್ನ ಗೆಲ್ಲಿಸಿದ್ದೇವೆ. ಆದರೆ, ಸಂಸದೆ ಸುಮಲತಾ ಏನೂ ಕೆಲಸ ಮಾಡುವುದಿಲ್ಲ. ಯಾವುದೇ ಕೆಲಸ ಇದ್ದರೂ ನನಗೆ ಹೇಳಿ ಎಂದು ಸಂಸದೆಯನ್ನು ಟೀಕಿಸುತ್ತಾ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದರು. ಹೀಗಾಗಿ ಪ್ರತಾಪ್ ಸಿಂಹ ವಿರುದ್ಧ ಸುಮಲತಾ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Also Read: ಸಚಿವ ರವಿ, ಸಿಂಹ, ಸೂರ್ಯರ ಬಳಗ ಸೇರಲು ಸೋಮಶೇಖರ್ ರೆಡ್ಡಿ ಹಾತೊರೆವುದೇಕೆ?