ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ ಅವರು ಸುಪ್ರೀಂ ಕೋರ್ಟಿಗೆ ಹೋಗಿದ್ದಾರೆ.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬಂದಿರುವ ಮುಸ್ಲಿಂಯೇತರ ಸಮುದಾಯಕ್ಕೆ ಪೌರತ್ವ ನೀಡುವ ದುರುದ್ದೇಶದಿಂದ ಈ ಕಾಯ್ದೆಯನ್ನು ತಿದ್ದುಪಡಿ ಮಾಡಿ ಜಾರಿಗೆ ತರಲು ಹೊರಟಿದೆ ಎಂದು ಅವರು ದೂರಿದ್ದಾರೆ.
ಶುಕ್ರವಾರ ಈ ಸಂಬಂಧ ಅರ್ಜಿ ಸಲ್ಲಿಸಿರುವ ಮಹುವಾ ಮೊಯಿತ್ರಾ ಪರ ವಕೀಲರು ತುರ್ತಾಗಿ ಈ ಅರ್ಜಿಯ ವಿಚಾರಣೆ ನಡೆಸಬೇಕೆಂದು ಮುಖ್ಯನ್ಯಾಯಾಧೀಶ ಎಸ್.ಎ.ಬೋಬ್ಡೆ ನೇತೃತ್ವದ ಪೀಠಕ್ಕೆ ಮನವಿ ಮಾಡಿದ್ದಾರೆ.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರವಾಗುತ್ತಿದ್ದಂತೆಯೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಿದ್ದುಪಡಿ ಮಸೂದೆಗೆ ಅಂಕಿತ ಹಾಕಿದ್ದಾರೆ. 2014 ರ ಡಿಸೆಂಬರ್ 31 ಕ್ಕೆ ಮುನ್ನ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬಂದ ಹಿಂದೂಗಳು, ಬೌದ್ಧರು, ಸಿಖ್ಖರು, ಪಾರ್ಸಿಗಳು, ಜೈನರು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವ ಕೊಟ್ಟು ಅವರಿಗೆ ಭಾರತೀಯರಿಗೆ ಸಿಗುತ್ತಿರುವ ಸವಲತ್ತುಗಳನ್ನು ನೀಡಲು ಈ ಕಾಯ್ದೆ ಅವಕಾಶ ಕಲ್ಪಿಸಿಕೊಡುತ್ತದೆ. ಈ ಪೌರತ್ವ ಸಿಕ್ಕ ತಕ್ಷಣ ಇವರಿಗೆ ಅಕ್ರಮ ವಲಸಿಗರು ಎಂಬ ಹಣೆಪಟ್ಟಿ ಅಳಿಸಿ ಹೋಗಲಿದೆ.
ಮತ್ತೊಂದೆಡೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಕೇಂದ್ರ ಸರ್ಕಾರ ಈ ಪೌರತ್ವ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸಂವಿಧಾನ ನೀಡಿರುವ ಸಮಾನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತಾಗಿದೆ. ಅಲ್ಲದೇ ಧರ್ಮದ ಆಧಾರದಲ್ಲಿ ಅಕ್ರಮ ವಲಸಿಗರಿಗೆ ಶಾಶ್ವತ ಪೌರತ್ವ ಕೊಡುವ ಮೂಲಕ ಕೆಲವೇ ಕೆಲವು ವರ್ಗಕ್ಕೆ ಅನುಕೂಲ ಮಾಡಿಕೊಡಲು ಹೊರಟಿದೆ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದೆ.
ದೇಶದಲ್ಲಿ ಕೇವಲ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಮಾತ್ರ ಪೌರತ್ವ ನೀಡಿ ಮುಸ್ಲಿಂ ಸಮುದಾಯವನ್ನು ಕಡೆಗಣಿಸಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ತಳೆದಿದೆ ಎಂದು ಐಯುಎಂಎಲ್ ಸಲ್ಲಿಸಿರುವ ಅರ್ಜಿಯಲ್ಲಿ ಆರೋಪಿಸಿದೆ.
ವಲಸಿಗರಿಗೆ ಪೌರತ್ವ ನೀಡುವ ವಿಚಾರದಲ್ಲಿ ನಮ್ಮದೇನೂ ತಕರಾರಿಲ್ಲ. ಆದರೆ, ಸರ್ಕಾರ ಧರ್ಮದ ಆಧಾರದಲ್ಲಿ ಸಮುದಾಯಗಳನ್ನು ಒಡೆಯುತ್ತಿರುವ ಮತ್ತು ತಾರತಮ್ಯ ಮಾಡುತ್ತಿರುವ ಕ್ರಮ ಸರಿಯಿಲ್ಲ ಎಂಬ ಆಕ್ಷೇಪ ನಮ್ಮದಾಗಿದೆ ಎಂದು ಅರ್ಜಿಯಲ್ಲಿ ಅಲವತ್ತುಕೊಳ್ಳಲಾಗಿದೆ.
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಿಂದ ಹಲವಾರು ದಶಕಗಳ ಹಿಂದೆಯೇ ವಲಸೆ ಬಂದು ಭಾರತದ ಅಂಗದಂತಿರುವ ಅಹ್ಮದೀಯರು, ಶಿಯಾಗಳು ಮತ್ತು ಹಜಾರಾಗಳನ್ನು ಈ ತಿದ್ದುಪಡಿ ಕಾಯ್ದೆಯಿಂದ ಹೊರಗಿಟ್ಟಿರುವ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಸ್ಪಷ್ಟನೆ ನೀಡಿಲ್ಲ. ನೆರೆ ರಾಷ್ಟ್ರಗಳಿಂದ ವಲಸೆ ಬಂದಿರುವವರನ್ನು ಆಯ್ಕೆ ಮಾಡುವ ವಿಚಾರದಲ್ಲಿ ಸರ್ಕಾರ ಯಾವುದೇ ನೀತಿ–ತತ್ತ್ವಗಳನ್ನು ಪಾಲಿಸುತ್ತಿಲ್ಲ. ಶ್ರೀಲಂಕಾ, ಮ್ಯಾನ್ಮಾರ್, ನೇಪಾಳ ಮತ್ತು ಭೂತಾನ್ ದೇಶಗಳಿಂದಲೂ ವಲಸೆ ಬಂದಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆಯೂ ಯಾವುದೇ ಪ್ರಸ್ತಾಪ ಮಾಡಿಲ್ಲ. ಇದು ಸರ್ಕಾರ ಧಾರ್ಮಿಕ ತಾರತಮ್ಯ ಮಾಡುತ್ತಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂಬುದು ಐಯುಎಂಎಲ್ ನ ಆರೋಪ.