ಕರೋನಾದಿಂದಾಗಿ ಆರ್ಥಿಕ ಸಮಸ್ಯೆ ಎದುರಾದರು ಕೂಡ ಖಾಸಗಿ ಶಾಲೆಗಳು ಅಧಿಕ ಶುಲ್ಕ ವಸೂಲಾತಿ ಕುರಿತು ಪೋಷಕರು ಶಾಲಾ ವ್ಯವಸ್ಥಾಪಕ ಮಂಡಳಿಯ ವಿರುದ್ಧ ಪ್ರತಿಭಟಿಸಿ ಸರ್ಕಾರದ ಗಮನ ಸೆಳೆದಿದ್ದರು. 2020ರಲ್ಲಿ ಬಹಳ ದಿನ ತರಗತಿಗಳು ನಡೆದಿಲ್ಲ ಮತ್ತು ಕರೋನಾ ಸಂಬಂಧ ಲಾಕ್ಡೌನ್ನಿಂದ ಸಂಪಾದನೆಯೂ ಇಲ್ಲದಿರುವುದರಿಂದ ಹಿಂದಿನಂತೆ ಶುಲ್ಕ ಪಾವತಿಸಲು ಆಗುವುದಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡಿದ್ದರು.
ಈ ವಿಚಾರ ಕರ್ನಾಟಕ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ಹೆಚ್ಚು ಚರ್ಚೆಯಾಗಿತ್ತು. ಶಾಲೆಗಳಲ್ಲಿ ಪೂರ್ತಿ ಶುಲ್ಕ ಕಟ್ಟಿ ಎಂಬ ಒತ್ತಡ ಸರಿಯಲ್ಲ, ಈ ವರ್ಷದ ಖರ್ಚು ವೆಚ್ಚ ಆಧರಿಸಿ ಶುಲ್ಕ ನಿಗದಿ ಮಾಡಿ. ಬಲವಂತವಾಗಿ ಶುಲ್ಕ ನಿಗದಿ ಮಾಡಬೇಡಿ ಎಂದು ಕರ್ನಾಟಕ ಖಾಸಗಿ ಪ್ರಾಥಮಿಕ ಪೌಢಶಾಲೆಗಳ ಆಡಳಿತ ಮಂಡಳಿ ಒಕ್ಕೂಟವು ತನ್ನ ವ್ಯಾಪ್ತಿಯಲ್ಲಿನ ಸಂಸ್ಥೆಗಳಿಗೆ ಮನವಿ ಮಾಡಿಕೊಂಡಿದೆ. ಇದು ಉತ್ತಮ ಬೆಳವಣಿಗೆ ಎಂದು ಶಿಕ್ಷಣ ಸಚಿವ ಸುರೇಶ್ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ವರ್ಷ ಅನೇಕ ಶೈಕ್ಷಣಿಕ ಚಟುವಟಿಕೆಗಳು ನಡೆಯುವುದಿಲ್ಲ. ಇದರಿಂದಾಗಿ ಪಠ್ಯಕ್ರಮ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಶುಲ್ಕ ನಿಗದಿ ಪಡಿಸಿದ್ದರೆ ಅದನ್ನು ಕೈಬಿಡಬೇಕು. ಮೊದಲಿನಂತೆ ಪೋಷಕರಿಂದ ಸಂಪೂರ್ಣವಾಗಿ ಶುಲ್ಕ ಪಡೆಯುವುದು ಪೋಷಕರೊಂದಿಗೆ ಚರ್ಚೆ ಮಾಡಿ ಶುಲ್ಕದಲ್ಲಿ ರಿಯಾಯಿತಿ ನೀಡಿದರೆ. ಪೋಷಕರು ಕಟ್ಟಲು ಒಪ್ಪುತ್ತಾರೆ ಎಂದು ಕ್ಯಾಮ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶ್ರೀ ಡಿ ಶಶಿಕುಮಾರ್ ತಿಳಿಸಿದ್ದಾರೆ.
ಖಾಸಗಿ ಶಾಲೆಯ ವ್ಯವಸ್ಥಾಪಕರು ಮತ್ತು ಶಾಲೆಯ ಮಕ್ಕಳ ಪೋಷಕರು ಆರ್ಥಿಕ ಸ್ಥಿತಿ ಅರಿಯ ಬೇಕೆಂದು ಹಾಗೂ ಆರ್ಥಿಕ ಸ್ಥಿತಿ ಉತ್ತಮ ಇರುವ ಪೋಷಕರು ಶಿಕ್ಷಕರ ಜೀವನ ನಿರ್ವಹಣೆಯ ಬಗ್ಗೆಯೂ ಕಾಳಜಿವಹಿಸ ಬೇಕೆಂದು ಶಿಕ್ಷಣ ಸಚಿವರು ಮನವಿಮಾಡಿಕೊಂಡಿದ್ದಾರೆ.
ಆಂಧ್ರ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನವೆಂಬರ್ 2020 ರಲ್ಲಿ ಖಾಸಗಿ ಶಾಲಾ ಕಾಲೇಜುಗಳಲ್ಲಿ ಶುಲ್ಕ ವಿನಾಯಿತಿ ನೀಡುವಂತೆ ನವೆಂಬರ್ 2020 ರಲ್ಲಿ ಘೋಷಿಸಿತ್ತು. ಅಂದರೆ ಶುಲ್ಕದಲ್ಲಿ ಶೇಕಡಾ 30 ರಷ್ಟು ರಿಯಾಯಿತಿ ಮಾಡಬೇಕೆಂದು ಸಿಎಂ ಜಗನ್ಮೋಹನ್ ರೆಡ್ಡಿ ಸರ್ಕಾರ ಘೋಷಿಸಿತ್ತು.
ಇನ್ನು ತಮಿಳುನಾಡಿನ ವೆಲ್ಲೂರು ಜಿಲ್ಲೆ ಸೇರಿದಂತೆ ಇತರೆಡೆ 10 ಖಾಸಗಿ ಶಾಲೆಗಳು ಹೆಚ್ಚು ಶುಲ್ಕ ಪಡೆದಿರುವ ಆರೋಪದ ಸರ್ಕಾರದ ಗಮನಕ್ಕೆ ಬಂದು ಅಲ್ಲಿನ ಶಿಕ್ಷಣ ಸಚಿವ ಸೆಂಗೊಟ್ಟಾಯನ್ ಈ ಬಗ್ಗೆ ಕ್ರಮಕೈಗೊಂಡಿದ್ದರು.
ಇನ್ನು, ರಾಜಸ್ಥಾನ ಹೈಕೋರ್ಟ್ ಮಹತ್ವದ ಆದೇಶವನ್ನು ನೀಡಿದೆ. ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳು ಶುಲ್ಕ ವಸೂಲಾತಿಯ ಕುರಿತು ಸರ್ಕಾರ ಹೊರಡಿಸಿದ ಸೂಚನೆಯನ್ನು ಅನುಸರಿಸಬೇಕು ಎಂದು ಹೇಳಿದೆ. ಸರ್ಕಾರಿ ಶಾಲೆಗಳಲಿ ಶೇಕಡಾ 60 ರಷ್ಟು ಶುಲ್ಕ ವಿಧಿಸಿ ಶೇಕಡಾ 40 ರಷ್ಟು ಕಡಿತಗೊಳಿಸ ಬೇಕು. ಖಾಸಗಿ ಶಾಲೆಗಳು ಶೇಕಡಾ 70 ರಷ್ಟು ಶುಲ್ಕ ವಿಧಿಸಿ, ಶೇಕಡಾ 30 ರಷ್ಟು ಕಡಿತಗೊಳಿಸಬೇಕೆಂದು ತಿಳಿಸಿದೆ.