ತಾನು ತನ್ನ ಹುದ್ದೆಗೆ ರಾಜಿನಾಮೆ ನೀಡಲು ಕೆಫೆ ಕಾಫಿ ಡೇ ಮಾಲಿಕ ದಿವಂಗತ ಸಿದ್ಧಾರ್ಥ ಕಾರಣ ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದ್ದಾರೆ. ವಿಜಿ ಸಿದ್ದಾರ್ಥ ಹೆಗ್ಡೆ ಅವರ ಪುತ್ಥಳಿ ಅನಾವರಣ ಮಾಡಲು ಚಿಕ್ಕಮಗಳೂರಿಗೆ ಬಂದ ಅಣ್ಣಾಮಲೈ, ತನ್ನ ಹುದ್ದೆಗೆ ರಾಜಿನಾಮೆ ನೀಡುವುದರ ಹಿಂದಿನ ಸತ್ಯವನ್ನು ಬಹಿರಂಗಗೊಳಿಸಿದ್ದಾರೆ.
ತಾನು 10 ವರ್ಷ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ಆಮೇಲೆ ಡಿಐಜಿ, ಐಜಿ ಆಗಿ ಎಸಿ ರೂಮಲ್ಲಿ ಕೂತು ಕೆಲಸ ಮಾಡಲು ಆಸಕ್ತಿ ಇರಲಿಲ್ಲ, ತನ್ನ ಹುದ್ದೆಗೆ ರಾಜಿನಾಮೆ ನೀಡಬೇಕೆ ಬೇಡವೇ ಎಂಬ ಗೊಂದಲದಲ್ಲಿದ್ದಾಗ ಸಿದ್ಧಾರ್ಥ್ ಅಣ್ಣ(ಕೆಫೆ ಕಾಫಿ ಡೇ ಮಾಲೀಕ) ಮಾತ್ರ ಧೈರ್ಯವಾಗಿ ರಾಜೀನಾಮೆ ಕೊಡಿ, ನಾನಿದ್ದೇನೆ ಎಂದಿದ್ದರು. ನನ್ನ ರಾಜೀನಾಮೆ ನಿರ್ಧಾರವನ್ನು ನಾವಿಬ್ಬರೂ ಸೇರಿ ಮಾಡಿರುವುದು ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಬಳಿ ಕೆಫೆ ಕಾಫಿ ಡೇ ಮಾಲೀಕ ದಿವಂಗತ ಸಿದ್ಧಾರ್ಥ್ ಹೆಗ್ಡೆ ಅವರ ಪುತ್ಥಳಿ ನಿರ್ಮಾಣದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇದೇ ವೇಳೆ, ಮಾತನಾಡಿದ ಅವರು, ನಾನು ಮತ್ತು ಸಿದ್ಧಾರ್ಥ್ ಹೆಗ್ಡೆ ಅವರ ಕೆಫೆ ಡೇ ಚೇಂಬರ್ ರೂಂನಲ್ಲಿ ಕೂತು ಮೂರೂವರೆ ಗಂಟೆ ಮಾತನಾಡಿದ್ದೆವು. ಇಬ್ಬರು ಕಾರ್ ಡೋರ್ ಓಪನ್ ಮಾಡಿ ಬಿಡುತ್ತಾರೆ. ನಾಲ್ಕು ಜನ ಸೆಲ್ಯೂಟ್ ಮಾಡುತ್ತಾರೆ. ನನಗೆ ಅದರಿಂದ ಸಂತೋಷವಿಲ್ಲ. ಕೃಷಿ ಮಾಡಬೇಕು. ಊರಿಗೆ ಹೋಗಬೇಕು. ಸಾಧಾರಣ ಮನುಷ್ಯನಂತೆ ಬದುಕಬೇಕು ಹಾಗೂ ಸಾಮಾನ್ಯ ಮನುಷ್ಯನ ಜೀವನವನ್ನ ಬದಲಾವಣೆ ಮಾಡಬೇಕು ಎಂದು ಆಸೆ ಸರ್ ಎಂದು ಅವರಿಗೆ ಹೇಳಿದ್ದೆ. ಆಗ ಅವರು, ಧೈರ್ಯವಾಗಿ ಹೇಳಿದ್ದರು. ರಾಜೀನಾಮೆ ಕೊಡಿ ನಾನಿದ್ದೇನೆ ಎಂದಿದ್ದರು ಎಂದು ಸಿದ್ಧಾರ್ಥ್ ಹೆಗ್ಡೆಯವರೊಂದಿಗಿನ ದಿನಗಳನ್ನು ಮೆಲುಕು ಹಾಕಿದ್ದಾರೆ.
ಸಿದ್ದಾರ್ಥ್ ಅವರೊಂದಿಗೆ ಅಣ್ಣಾಮಲೈಗೆ ಒಳ್ಳೆಯ ಬಾಂಧವ್ಯವಿತ್ತು. ಸಿದ್ಧಾರ್ಥ ಅವರು ಮೃತಪಟ್ಟ ಸುದ್ದಿ ಬಂದಾಗ, ಸಿದ್ದಾರ್ಥ ಅವರ ಸಾವಿನಿಂದ ಚಿಕ್ಕಮಗಳೂರಿಗೆ ಆದ ನಷ್ಟ ಎಂದು ಅಣ್ಣಾಮಲೈ ಪ್ರತಿಕ್ರಿಯಿಸಿದ್ದರು.
ಸದ್ಯ ತನ್ನ ಪೊಲೀಸ್ ಹುದ್ದೆಗೆ ರಾಜಿನಾಮೆ ನೀಡಿರುವ ಅಣ್ಣಾಮಲೈ ತಮಿಳುನಾಡು ಬಿಜೆಪಿ ಸೇರಿಕೊಂಡಿದ್ದಾರೆ. ಸಕ್ರಿಯವಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ.