2019ರ ಲೋಕಸಭಾ ಚುನಾವಣೆಗಿಂತಲೂ ಹಿಂದೆ ನಡೆದ ಪುಲ್ವಾಮ ದಾಳಿಯನ್ನು ಪಾಕಿಸ್ತಾನವೇ ಮಾಡಿತ್ತು ಎಂದು ಪಾಕಿಸ್ತಾನದ ಕೇಂದ್ರ ಸಚಿವ ಫಾವದ್ ಚೌಧರಿ ಅಲ್ಲಿನ ಸದನದಲ್ಲಿ ಹೇಳಿಕೆ ನೀಡಿದ್ದಾರೆ. ಪುಲ್ವಾಮ ದಾಳಿಯ ನಂತರ ಮೊತ್ತ ಮೊದಲ ಬಾರಿಗೆ ಪಾಕಿಸ್ತಾನ ಸರ್ಕಾರದ ಪರವಾಗಿ ಅಧಿಕೃತವಾಗಿ ದಾಳಿಯ ಹೊಣೆಯನ್ನು ಹೊರಲಾಗಿದೆ.
ಬುಧವಾರ ಸದನದಲ್ಲಿ ಮಾತನಾಡಿದ ಫಾವದ್ ಚೌಧರಿ, ಪುಲ್ವಾಮಾ ದಾಳಿಯು ಇಮ್ರಾಣ್ ಖಾನ್ ಸರ್ಕಾರದ ಅತ್ಯಂತ ದೊಡ್ಡ ಯಶಸ್ಸು, ಎಂದಿದ್ದಾರೆ. “ಭಾರತದ ನೆಲದ ಒಳಗೆ ನುಗ್ಗಿ ಹೊಡೆದಿದ್ದೇವೆ. ನಮ್ಮ ಜನರ ಯಶಸ್ಸು ಇಮ್ರಾನ್ ಖಾನ್ ಅವರ ನಾಯಕತ್ವದ ಯಶಸ್ಸು. ನೀವೆಲ್ಲರೂ ಆ ಯಶಸ್ಸಿಗೆ ಪಾತ್ರರು,” ಎಂದು ಫಾವದ್ ಹೇಳಿದ್ದಾರೆ.
ಪಾಕಿಸ್ತಾನ ಮುಸ್ಲಿಂ ಲೀಗ್ – ನವಾಝ್ ಪಕ್ಷದ ನಾಯಕ ಸರ್ದಾರ್ ಆಯಾಝ್ ಸಾದಿಕ್ ಅವರು ಪಾಕಿಸ್ತಾನದ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ, ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವಾಗ ಪಾಕಿಸ್ತಾನದ ಆರ್ಮಿ ಜನರಲ್ ಚೀಫ್ ಕಮರ್ ಜಾವೇದ್ ಬಾಜ್ವಾ ಅವರ ಕಾಲು ನಡುಗುತ್ತಿದ್ದವು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಉತ್ತರವಾಗಿ, ಫಾವದ್ ಅವರು ಸದನದಲ್ಲಿ ಉತ್ತರ ನೀಡುವಾಗ ಪುಲ್ವಾಮ ದಾಳಿಯ ಹೊಣೆ ಹೊತ್ತಿದ್ದಾರೆ.
ಪುಲ್ವಾಮ ದಾಳಿಯಲ್ಲಿ ಭಾರತದ 40 ಯೋಧರು ಸಾವನ್ನಪ್ಪಿದ್ದರು. ಈ ದಾಳಿಯ ಕುರಿತಾಗಿ NIA ಸಲ್ಲಿಸಿದ್ದ ಚಾರ್ಜ್‌ಶೀಟ್ ಅನ್ನು ಪಾಕಿಸ್ತಾನವು ಸಾರಾಸಗಟಾಗಿ ತಿರಸ್ಕರಿಸಿತ್ತು. ದಾಳಿಯಲ್ಲಿ ಪಾಕಿಸ್ತಾನದ ISI ಕೂಡಾ ಪಾಲ್ಗೊಂಡಿತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿತ್ತು.