ಇತಿಹಾಸದಲ್ಲಿ ಸೂಕ್ತವಾಗಿ ದಾಖಲಿಸಲಾಗದ ಅದೆಷ್ಟು ಸಾಂಕ್ರಾಮಿಕ ಪೀಡೆಗಳಿಗೆ ಅದೆಷ್ಟು ಜನರು ಬಲಿಯಾಗಿದ್ದಾರೋ ಎಂಬುದನ್ನು ಊಹಿಸುವುದು ಕಷ್ಟ. ವಿವಿಧ ರಾಜ, ನವಾಬರುಗಳು, ನಂತರ ಬ್ರಿಟಿಷರ ಕಾಲದಲ್ಲಿಯೂ ಭಾರತವು ಸ್ಪ್ಯಾನಿಷ್ ಫ್ಲೂ, ಕೊಲೆರಾ, ಪ್ಲೇಗ್, ಮಲೇರಿಯಾ ಇತ್ಯಾದಿ ಹಲವಾರು ಪಿಡುಗುಗಳನ್ನು ಎದುರಿಸಿದ ದಾಖಲೆಗಳು ಸಿಗುತ್ತವೆ. ಈಗಿನಂತೆ ಆರೋಗ್ಯ ಸೇವಾಜಾಲಗಳು, ಔಷಧಿಗಳು ಇಲ್ಲದ ಕಾಲದಲ್ಲಿ ಎಲ್ಲವನ್ನೂ ದೇವಿ, ಮಾರಿಯಂತಹ ದೇವರ ತಲೆಗೆ ಕಟ್ಟಿ “ಹಣೆಬರಹ”ಕ್ಕೆ ಎಲ್ಲವನ್ನೂ ಒಪ್ಪಿಸಿಬಿಡುವುದು ಸಾಮಾನ್ಯವಾಗಿತ್ತು. ತಮ್ಮ ಪ್ರಜೆಗಳಿಗೆ ಸಾಧ್ಯವಾದಷ್ಟು ಶುಶ್ರೂಷೆ, ಪರಿಹಾರ ಒದಗಿಸುವುದು ರಾಜ, ನವಾಬ, ಮಾಂಡಲೀಕರ ಜವಾಬ್ದಾರಿಯಾಗಿತ್ತು. ಕೇವಲ ಆಯುರ್ವೇದ, ಯುನಾನಿ ಮತ್ತು ಸ್ವಲ್ಪವೇ ಮಟ್ಟಿಗೆ ಪಾಶ್ಚಾತ್ಯ ಔಷಧ ಪದ್ಧತಿಗಳು ಮಾತ್ರವಿದ್ದ ಕಾಲದಲ್ಲಿ ಕೆಲವರು ಶಕ್ತಿ ಮೀರಿ ಪ್ರಯತ್ನಿಸಿದರೆ, ಕೆಲವರು ಸಂಪೂರ್ಣ ಅಸಡ್ಡೆ ತೋರಿ ತಮ್ಮ ಐಷಾರಾಮಿಯಲ್ಲಿಯೇ ಮುಳುಗಿದರು. ಪರಿಣಾಮ ಲಕ್ಷಾಂತರ ಸಂಖ್ಯೆಯಲ್ಲಿ ಜನರ ಮಾರಣಹೋಮ. ಇಡೀ ಪ್ರಪಂಚದಲ್ಲಿ ನಡೆದದ್ದು ಇದೇ ಕತೆ.
ಭಾರತಕ್ಕೆ ಪಾಶ್ಚಾತ್ಯ ವೈದ್ಯಕೀಯ ಪದ್ಧತಿ ಬಂದದ್ದೇ 1600ರ ಶತಮಾನದಲ್ಲಿ, ಈಸ್ಟ್ ಇಂಡಿಯಾ ಕಂಪೆನಿ ಜೊತೆಗೆ ಬಂದಿದ್ದ ಎರಡು ಡಜನ್ ಸರ್ಜನ್‌ಗಳ ಜೊತೆ. 1857ರ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ಈಸ್ಟ್ ಇಂಡಿಯಾ ಕಂಪೆನಿಗೆ ಗೇಟ್‌ಪಾಸ್ ಸಿಕ್ಕಿ ಬಹುತೇಕ ಭಾರತವು ಬ್ರಿಟನ್‌ನ ರಾಣಿಯ ಮಹಾ ಸಾಮ್ರಾಜ್ಯದ ಭಾಗವಾದಾಗ, ಆರೋಗ್ಯ ಸೇವೆ ಮತ್ತು ಆರೋಗ್ಯ ಇಲಾಖೆಯ ಪರಿಕಲ್ಪನೆಯೂ ಭಾರತದಲ್ಲಿ ಬೆಳೆಯಿತು. ಸಾಂಕ್ರಾಮಿಕ ರೋಗಗಳು ಬಂದಾಗ ಹೆಚ್ಚು ವ್ಯವಸ್ಥಿತವಾದ ಸೇವೆಗಳು ಹೆಚ್ಚು ಜನದಟ್ಟಣೆ ಇರುವ ಪ್ರದೇಶಗಳಲ್ಲಾದರೂ ಜನರಿಗೆ ಸಿಗಲು ಆರಂಭಿಸಿದವು. ಆಗ ಭಾರತ ಎದುರಿಸಿದ ಬವಣೆಗಳ ಚಿತ್ರಣ ಒದಗಿಸುವುದು ಈ ಬರಹದ ಉದ್ದೇಶವಲ್ಲ. ಇಲ್ಲಿ ಎರಡು ಗಮನಾರ್ಹ ಅಂಶಗಳನ್ನು ಗುರುತಿಸಿ, ಈಗಿನ ಕರೋನ ಸೋಂಕು ಉಂಟುಮಾಡಿರುವ ವಿಷಮ ಪರಿಸ್ಥಿತಿಯನ್ನು ಆ ಹಿನ್ನೆಲೆಯಲ್ಲಿ ಗುರುತಿಸಬೇಕು.
ದೇವರು ಮತ್ತು ಹಣೆಬರಹದ ಮೇಲೆ ಅತೀವ ವಿಶ್ವಾಸ ಇಟ್ಟಿರುವ ಭಾರತೀಯ ಹಿಂದೂ, ಮುಸ್ಲಿಂ, ಕ್ರೈಸ್ತರು ಈ ರೋಗಗಳಿಗೆ ದೇವರ ಕೋಪ ಕಾರಣವೆಂದು ನಂಬಿದ್ದು, ಪ್ರಾರ್ಥಿಸಿದ್ದು, ನಂಬಲೂ ಸಾಧ್ಯವಿಲ್ಲದ ಮೂಢನಂಬಿಕೆಗಳಿಗೆ ಮೊರೆಹೋದದ್ದು ಆ ಕಾಲದಲ್ಲಿ ಸಹಜವಾಗಿತ್ತು- ಅದೂ ವಿಜ್ಞಾನಗಳು ಕೂಡಾ ನಂಬಲು ಸಾಧ್ಯವಾಗದಿರುವ ಸಾಧನೆಗಳನ್ನು ಮಾಡಿರುವ ಈ ಹೊತ್ತಿನಲ್ಲಿಯೂ ಜನರು ಮೂಢನಂಬಿಕೆಗೆ ನೇತುಬಿದ್ದಿರುವಾಗ. ಆದರೆ, ಆಗಲೂ- ಯಾರೇ ಆಗಲೀ- ಈ ರೋಗಗಳು ಮನುಷ್ಯರಿಗೆ ದೇವರು (“ಯಾರ” ದೇವರು ಎಂದು ಯಾರೂ ಚಿಂತಿಸಲಿಲ್ಲ) ಕೊಡುವ ಶಿಕ್ಷೆ ಅಥವಾ ಒಡ್ಡುವ ಪರೀಕ್ಷೆ ಎಂದು ಭಾವಿಸಿದ್ದರೇ ಹೊರತು, ಈಗಿನಂತೆ ಸಾಂಕ್ರಾಮಿಕ ರೋಗವೊಂದಕ್ಕೆ ನಿರ್ದಿಷ್ಟ ಧರ್ಮದ ಬಣ್ಣಹಚ್ಚಿ, ಅದರ ಹರಡುವಿಕೆಗೆ ಒಂದು ನಿರ್ದಿಷ್ಟ ಧರ್ಮದವರು ಕಾರಣ ಎಂದು ಎಂದೂ ಭಾವಿಸಿರಲಿಲ್ಲ.
ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನದಲ್ಲಿ ಹಲವಾರು ಧಾರ್ಮಿಕ/ಸಾಮಾಜಿಕ ಸಂಸ್ಥೆಗಳು, ಸಂಘಟನೆಗಳು ಜೀವದ ಹಂಗುತೊರೆದು ಸೇವಾ ಮನೋಭಾವದಿಂದ ಇಂತಹ ಸಾಂಕ್ರಾಮಿಕ ಪಿಡುಗುಗಳ ವೇಳೆ ರೋಗಿಗಳಿಗೆ ಶುಶ್ರೂಷೆ, ಚಿಕಿತ್ಸೆ ಒದಗಿಸಿದ್ದವು. ಇವುಗಳಲ್ಲಿ ಬ್ರಿಟಿಷ್ ಸರಕಾರದ ಅಧಿಕೃತ ಇಲಾಖೆಗಳ ಜೊತೆಗೆ ಕ್ರೈಸ್ತ ಮಿಷನರಿಗಳು ಮತ್ತು ವಾಯವ್ಯ ಭಾರತದಲ್ಲಿ ಸಿಕ್ಖ್ ಗುರುದ್ವಾರಗಳಿಂದ ನಿಯೋಜಿತ ಸಂಸ್ಥೆಗಳು, ಹಿಂದೂ , ಮುಸ್ಲಿಂ, ಪಾರ್ಸಿ ಸುಧಾರಣಾವಾದಿ ಪಂಥಗಳು, ಗುಂಪುಗಳು ಶಕ್ತಿಮೀರಿ ದುಡಿದವು. ಹಲವಾರು ಉದಾರಿ ಶ್ರೀಮಂತರೂ ಧರ್ಮ ಭೇದ ಬಿಟ್ಟು ಇದು ಧರ್ಮಕಾರ್ಯವೆಂದು ತಮ್ಮ ಸಂಪತ್ತನ್ನು ಬಿಡುಗೈಯಿಂದ ಚೆಲ್ಲಿದ್ದೂ ಉಂಟು. ಆದರೆ, ತಮ್ಮ ಆರಾಧನಾ ಸ್ಥಳಗಳಲ್ಲಿ ಸಂಪತ್ತು ರಾಶಿಹಾಕಿ ಕೊಳೆಸುತ್ತಿದ್ದ ಯಾವುದೇ ಧರ್ಮದ ಪುರೋಹಿತಶಾಹಿ ವ್ಯವಸ್ಥೆ ಇಂತಹಾ ಸೇವಾಕಾರ್ಯಗಳಲ್ಲಿ ತೊಡಗಿಕೊಳ್ಳಲಿಲ್ಲ. ಇದರ ಅರ್ಥವೇನು? ಅಂತಹ ವ್ಯವಸ್ಥೆಯೇ ಇಂದು ರೋಗಕ್ಕೆ ಕೋಮುಬಣ್ಣ ಹಚ್ಚಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿರುವುದು.
ಈ ಸಾಂಕ್ರಾಮಿಕ ರೋಗಗಳ ಜೊತೆ ಧಾರ್ಮಿಕ ನಂಬಿಕೆಗಳು ತಳಕುಹಾಕಿಕೊಂಡಿದ್ದವೇ ಹೊರತು, ಯಾವುದೇ ಧರ್ಮದವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿರಲಿಲ್ಲ. ಹಿಂದೂ ಮೇಲ್ಜಾತಿಗಳು ಕೆಳಜಾತಿಗಳವರನ್ನು ರೋಗವಿಲ್ಲದಿದ್ದರೂ ದೂರ ಇಡುತ್ತಿದ್ದ ರೋಗವಂತೂ ಹಿಂದೆಯೂ ಇತ್ತು; ಈಗಲೂ ಉಳಿದುಕೊಂಡಿದೆ. ಈ ರೀತಿಯಾಗಿ ಸೇವೆಯಲ್ಲಿ ತೊಡಗಿಕೊಂಡವರು, ಮುಖ್ಯವಾಗಿ ಮಿಷನರಿಗಳು ಯಾವುದೇ ರೀತಿಯ ಜಾತಿ, ಧರ್ಮ ಭೇದ ತೋರಿಸಲಿಲ್ಲ. ಅವರೆಲ್ಲರಲ್ಲೂ ತಮ್ಮ ತಮ್ಮ ಮತಧರ್ಮಗಳ ಪ್ರಚಾರದ ಸ್ವಾರ್ಥ, ಉದ್ದೇಶ ಇದ್ದಿರಬಹುದು. ಆದರೆ, ಅವರ ತಕ್ಷಣದ ಕಾಳಜಿಯಾಗಿದ್ದುದು ಮಾನವೀಯ ಸಂಕಷ್ಟಗಳ ಪರಿಹಾರ. ರೋಗದ ನಡುವೆ ಧಾರ್ಮಿಕ ಭೇದಭಾವಗಳನ್ನು ತರುವುದು ಪಾಪಕಾರ್ಯವೆಂದೇ ಭಾವಿಸಲಾಗುತ್ತಿತ್ತು.
ಆ ಕಾಲದ ಮತ್ತು ಕೆಲವರ್ಷಗಳ ಹಿಂದಿನ ತನಕ ಮಾಧ್ಯಮಗಳು ಕೂಡಾ ಸಾಂಕ್ರಾಮಿಕ ರೋಗದಂತಹ ಬಿಕ್ಕಟ್ಟಿನ ಸಂದರ್ಭಗಳಲ್ಲಿ “ಮನುಷ್ಯ” ಎಂದು ಯೋಚಿಸುತ್ತಿದ್ದವೇ ಹೊರತು ಜಾತಿ, ಧರ್ಮಗಳನ್ನು ಎಳೆದುತಂದದ್ದಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಪತ್ರಿಕೆಗಳು ದೇಶದ ಮೂಲೆಮೂಲೆಗಳನ್ನು ತಲಪುತ್ತಿರಲಿಲ್ಲವಾದರೂ, ಸರಕಾರದ ಮೇಲೆ ಪ್ರಭಾವ ಬೀರಬಹುದಾದ ವರ್ಗಗಳನ್ನು ತಲಪುತ್ತಿದ್ದವು. ಆಗ ಜೀವದ ಹಂಗುತೊರೆದ ಪತ್ರಕರ್ತರು ದೇಶದ ಮೂಲೆ ಮೂಲೆಗಳಿಂದ ಜನರ ಸಂಕಷ್ಟವನ್ನು ಆಳುವ ವರ್ಗಗಳ ಗಮನಕ್ಕೆ ತರುತ್ತಿದ್ದವು. ವಿದ್ಯಾವಂತರು ವಿದ್ಯೆ ಇಲ್ಲದವರಿಗೆ ತಿಳಿಹೇಳಲು ಸಾಧ್ಯವಾಗುವಂತೆ ಮಾಹಿತಿಗಳನ್ನು ಒದಗಿಸುತ್ತಿದ್ದವು. ಸ್ವಾತಂತ್ರ್ಯಾನಂತರದ ಪಿಡುಗುಗಳ ಸಂದರ್ಭಗಳಲ್ಲಿಯೂ ಮಾಧ್ಯಮಗಳು ಈ ಜಾಗೃತಿ ಮೂಡಿಸುವ ಮತ್ತು ನೆರವು ಸಂಗ್ರಹಿಸುವ ಕಾರ್ಯದಲ್ಲಿ ನೆರವಾದವು. ತಮ್ಮ ಕರ್ತವ್ಯವನ್ನು ನಿಭಾಯಿಸಿ ಜನರು ತಮ್ಮ ಮೇಲಿಟ್ಟ ಗೌರವಕ್ಕೆ ನ್ಯಾಯ ಸಲ್ಲಿಸಿದವು. (ಉದಾ: ಮುಂಬಯಿ, ಕೋಲ್ಕತ್ತಾ, ಸೂರತ್ ಪ್ಲೇಗ್)
ಆದರೆ ಈಗ, ಈ ಕರೋನ ಪಿಡುಗಿನ ಕಾಲದಲ್ಲಿ ನಮ್ಮ ಮಾಧ್ಯಮಗಳು ಹೇಗೆ ಕಾರ್ಯ ನಿರ್ವಹಿಸುತ್ತಿವೆ? ಇದನ್ನು ತಿಳಿಯಲು ಬಹುತೇಕ ಪತ್ರಿಕೆಗಳಲ್ಲಿ ಒಂದನ್ನು ತೆರೆದು ಓದಿದರೆ, ಬಹುತೇಕ ಟಿವಿ ಚಾನೆಲ್‌ಗಳಲ್ಲಿ ಒಂದನ್ನು ನೋಡಿದರೆ ಸಾಕು- ಮಾಧ್ಯಮವು ತಲಪಿರುವ ಅಧಃಪಾತಾಳದ ಕಲ್ಪನೆ ಬರುತ್ತದೆ. ಪೂರ್ವ ಸೂಚನೆ ಇದ್ದರೂ ಯಾವುದೇ ಮುನ್ನೆಚ್ಚರಿಕೆ ಅಥವಾ ಸಿದ್ಧತೆ ನಡೆಸದ ಸರಕಾರದ ಬೇಜವಾಬ್ದಾರಿ, ಸೋಂಕು ಪೀಡಿತ ದೇಶಗಳ ಪ್ರಜೆಗಳನ್ನು ಸ್ವತಃ ಆಹ್ವಾನಿಸಿ ಯಾವುದೇ ಪರೀಕ್ಷೆ ಇಲ್ಲದೇ ದೇಶದೊಳಗೆ ಸೇರಿಸಿದ್ದು, ದೊಡ್ಡಣ್ಣನನ್ನು ಮೆಚ್ಚಿಸಲು ನೂರು ಕೋಟಿ ರೂ. ಖರ್ಚು ಮಾಡಿ ಲಕ್ಷಾಂತರ ಜನರನ್ನು ಸೇರಿಸಿ “ನಮಸ್ತೇ ಟ್ರಂಪ್” ಎಂಬ ಜನಮರುಳು ಕಾರ್ಯಕ್ರಮ ಮಾಡಿದ್ದು, ಇದೇ ಗುಜರಾತ್ ಈಗ ಕರೋನ ಮೃತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ನಿಂತಿರುವುದು, ಡೊನಾಲ್ಡ್ ಟ್ರಂಪ್ ಕಾರ್ಯಕ್ರಮ ನಡೆದ ಅಹಮದಾಬಾದ್ ನಗರ ಸಾವಿನ ಸಂಖ್ಯೆಯಲ್ಲಿ ದಿಲ್ಲಿ, ಮುಂಬಯಿಯಂತಹ ಮಹಾನಗರಗಳನ್ನು ಮೀರಿಸಿರುವುದು… ಇವುಗಳನ್ನು ಕುರಿತು ಮಾಧ್ಯಮಗಳು ಜನರಿಗೆ ತಿಳಿಸಬೇಕಿತ್ತು; ಪ್ರಶ್ನಿಸಬೇಕಿತ್ತು. ಆದರೆ, ಅವು ಹಾಗೆ ಮಾಡಲಿಲ್ಲ!
ನಂತರ ಮೂರು ದಿನಗಳ ಧಾರಾಳ ಕಾಲಾವಕಾಶ ನೀಡಿ, “ಜನತಾ ಕರ್ಫ್ಯೂ” ಎಂದು ಹೇಳಿ, ವಸ್ತುಶಃ ಪೊಲೀಸರನ್ನು ಜನರ ಮೇಲೆ ಛೂಬಿಟ್ಟದ್ದು; ಅದಾದ ಬಳಿಕ ರಾತ್ರಿ ಕೇವಲ ಮೂರು ಗಂಟೆಗಳ ಕಾಲಾವಕಾಶ ನೀಡಿ ದೇಶದಾದ್ಯಂತ ದಿಢೀರ್ ಲಾಕ್‌ಡೌನ್ ಹೇರಿ, ಕೋಟ್ಯಂತರ ಜನರನ್ನು ಇನ್ನಿಲ್ಲದ ಸಂಕಷ್ಟಕ್ಕೆ ತಳ್ಳಿದ್ದು; ಲಾಕ್‌ಡೌನ್ ಅಗತ್ಯವಾದ ಒಂದು ಕ್ರಮವಾಗಿತ್ತು ಎಂದು ಒಪ್ಪಿಕೊಂಡರೂ, ತಮ್ಮ ರಾಜ್ಯ, ತಮ್ಮ ಮನೆಗಳಿಂದ ನೂರಾರು ಮೈಲಿ ದೂರವಿರುವ ವಲಸೆ ಕಾರ್ಮಿಕರ ಗತಿಯೇನು; ದಿನದ ಕೂಲಿಯಿಂದ ಆ ದಿನ ಮಾತ್ರ ಬದುಕುವ ಕೋಟ್ಯಂತರ ಜನರ ಗತಿಯೇನು, ಸಣ್ಣಪುಟ್ಟ ಉದ್ಯೋಗಗಳಿಂದ ಹೊಟ್ಟೆಹೊರೆಯುವವರ ಗತಿಯೇನು; ಇದ್ಯಾವುದನ್ನೂ ಯೋಚಿಸದೇ, ಅವರಿಗೆ ಬದುಕಿನ ವ್ಯವಸ್ಥೆಯನ್ನೂ ಮಾಡದೆ, ಅವರು ಪಶುಗಳಂತೆ ಗುಂಪುಸೇರಿ ರೋಗ ಇನ್ನಷ್ಟು ಹರಡುವುದಕ್ಕೆ ಕಾರಣವಾದದ್ದು-ಇವುಗಳನ್ನು ಕುರಿತು ಮಾಧ್ಯಮಗಳು ಜನರಿಗೆ ತಿಳಿಸಬೇಕಿತ್ತು; ಪ್ರಶ್ನಿಸಬೇಕಿತ್ತು. ಆದರೆ, ಅವು ಹಾಗೆ ಮಾಡಲಿಲ್ಲ!
ನಂತರದಲ್ಲಿ ಯಾವುದೇ ವೈಜ್ಞಾನಿಕ ನೆಲೆಗಳಿಲ್ಲದೆ- ಕೇವಲ ವಿಶ್ವಾಸ ಮೂಡಿಸುವ ಕ್ರಮ, ವೈದ್ಯಕೀಯ ಮತ್ತು ಸ್ವಚ್ಛತಾ ಕಾರ್ಯಕರ್ತರಿಗೆ ಧನ್ಯವಾದ ಹೇಳಲು ಎಂದಿತ್ಯಾದಿಯಾಗಿ ಜನರಿಗೆ ಚಪ್ಪಾಳೆ ಜಾಗಟೆ ಬಾರಿಸಲು ಹೇಳಿದ್ದು, ನಂತರ ದೀಪ ಉರಿಸಲು ಹೇಳಿದ್ದು; ಈ ರೀತಿಯಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ಧಾರ್ಮಿಕ ಸಂಕೇತಗಳ ಮೂಲಕ ಈ ಪಿಡುಗಿಗೆ ಧಾರ್ಮಿಕ ಬಣ್ಣಹಚ್ಚಲು ಪ್ರಯತ್ನಿಸಿದ್ದು; ಈ ಕರೆಗಳಿಂದ ಹುಚ್ಚೆದ್ದ ಜನರು ಜಾಗಟೆ ಬಾರಿಸುತ್ತಾ, ದೊಂದಿಗಳನ್ನು, ದೀಪಗಳನ್ನು ಹಿಡಿದು ಪುಡಿ ಪುಡಾರಿಗಳ ನೇತೃತ್ವದಲ್ಲಿ ಪೋಲೀಸರ ಸಮ್ಮುಖದಲ್ಲಿಯೇ- ಕೆಲವು ಸಲ ಅವರ ರಕ್ಷಣೆಯಲ್ಲಿಯೇ ಲಾಕ್‌ಡೌನ್ ಉಲ್ಲಂಘಿಸಿ ರೋಗ ಇನ್ನಷ್ಟು ಹರಡುವುದಕ್ಕೆ ಕಾರಣವಾದದ್ದು; ಬೆಂಕಿಯಿಂದ ವೈರಸ್ ನಾಶ, ಕಂಪನದಿಂದ ವೈರಸ್ ನಾಶ ಇತ್ಯಾದಿ ಮೂಡನಂಬಿಕೆಗಳನ್ನು ಸರಕಾರಿ ಕೃಪಾಶ್ರಯದಲ್ಲಿಯೇ ನಡೆಸಿದ್ದು- ಇವುಗಳನ್ನು ಕುರಿತು ಮಾಧ್ಯಮಗಳು ಜನರಿಗೆ ತಿಳಿಸಬೇಕಿತ್ತು; ಪ್ರಶ್ನಿಸಬೇಕಿತ್ತು. ಆದರೆ, ಅವು ಹಾಗೆ ಮಾಡಲಿಲ್ಲ!
ನಂತರ ಹಣಕಾಸು ಸಚಿವರು ಹಳೆಯ ಯೋಚನೆಗಳ ಚಿಂದಿಗಳನ್ನೆಲ್ಲಾ ಹೊಲಿದು ತಯಾರಿಸಿದ ಹರಕಲು ದುಪ್ಪಟ್ಟಿಯನ್ನು ಪರಿಹಾರ ಪ್ಯಾಕೇಜ್ ಎಂದು ಅಸಹಾಯಕ ಜನರಿಗೆ ಹೊದೆಸಿದ್ದು; ಸಾವಿರಾರು ವಲಸಿಗರು ಮನೆಗೆ ಸೇರಲು ಹಸಿದ ಹೊಟ್ಟೆಯಲ್ಲಿ ನೂರಾರು ಕಿ.ಮೀ. ನಡೆದದ್ದು; ಈ ಪ್ರಯತ್ನದಲ್ಲಿ ಸಾವಿಗೀಡಾದ ಜನರು; ಜೀವನೋಪಾಯ ಕಳೆದುಕೊಂಡ ಜನರು ಹತಾಶರಾಗುತ್ತಿರುವುದು; ವೈದ್ಯರು, ಆರೋಗ್ಯ ಮತ್ತು ಸ್ವಚ್ಛತಾ ಕಾರ್ಯಕರ್ತರು ಇನ್ನೂ ಸೂಕ್ತ ಸುರಕ್ಷಾ ಸಾಧನಗಳಿಲ್ಲದೇ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡಬೇಕಾಗಿ ಬಂದಿರುವುದು; ಕುಸಿಯುತ್ತಿರುವ ಆರ್ಥಿಕತೆ; ದಾನಿಗಳು, ಮಾನವಪ್ರೇಮಿಗಳು ಸರಕಾರೇತರ ಸಂಘಟನೆಗಳೇ ಸರಕಾರಕ್ಕಿಂತ ಹಲವು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿರುವುದು- ಇವುಗಳನ್ನು ಕುರಿತು ಮಾಧ್ಯಮಗಳು ಜನರಿಗೆ ತಿಳಿಸಬೇಕಿತ್ತು; ಪ್ರಶ್ನಿಸಬೇಕಿತ್ತು. ಆದರೆ, ಅವು ಹಾಗೆ ಮಾಡಲಿಲ್ಲ!
ಕಾನೂನುಬದ್ಧವಾದ ಪ್ರಧಾನಿ ರಾಷ್ಟ್ರೀಯ ವಿಕೋಪ ಪರಿಹಾರ ನಿಧಿ ಇರುವಾಗಲೂ- ಭ್ರಷ್ಟಾಚಾರದ ವಾಸನೆ ಹೊಡೆಯುವ, ಯಾವುದೇ ನಿಯಂತ್ರಣಕ್ಕೆ ಒಳಪಡದ, ಖಾಸಗಿ ಟ್ರಸ್ಟ್ ಮಾದರಿಯ ಪಿಎಂ ಕೇರ್ಸ್ ಎಂಬ ನಿಧಿ ಸ್ಥಾಪಿಸಿ, ಭ್ರಷ್ಟ ಉದ್ಯಮಿಗಳಿಂದ ಹಣ ಪಡೆಯುತ್ತಿರುವುದು; ದೇಶಬಿಟ್ಟು ಓಡಿಹೋಗಿರುವ- ಮುಖ್ಯವಾಗಿ ಗುಜರಾತಿ, ಮಾರ್ವಾಡಿ- ಉದ್ಯಮಿಗಳ ಲಕ್ಷಾಂತರ ಕೋಟಿ ರೂ. ಬ್ಯಾಂಕ್ ಸಾಲಕ್ಕೆ ಎಳ್ಳುನೀರು ಬಿಟ್ಟಿರುವಾಗಲೇ, ಕರೋನ ಹೆಸರಲ್ಲಿ ತಿರುಪೆ ಎತ್ತಲು, ತೆರಿಗೆ ಏರಿಸಲು ಹೊರಟಿರುವುದು; ಎಲ್ಲವನ್ನೂ ರಾಜ್ಯ ಸರಕಾರಗಳ ತಲೆಗೆ ಹೊರಿಸಿ, ಅವುಗಳಿಗೆ ನೆರವು ನೀಡುವುದು ಬಿಡಿ- ಜಿಎಸ್‌ಟಿ ಪಾಲನ್ನೂ ನೀಡದಿರುವುದು; ಅವುಗಳ ಕೆಲಸದ ಶ್ರೇಯವನ್ನು ತಾನೇ ಬಾಚಿಕೊಳ್ಳುತ್ತಿರುವುದು; ಒಂದೇ, ಎರಡೇ? ಇವುಗಳನ್ನು ಕುರಿತು ಮಾಧ್ಯಮಗಳು ಜನರಿಗೆ ತಿಳಿಸಬೇಕಿತ್ತು; ಪ್ರಶ್ನಿಸಬೇಕಿತ್ತು. ಆದರೆ, ಅವು ಹಾಗೆ ಮಾಡಲಿಲ್ಲ!
ಹಾಗಾದರೆ, ಈ ಮುಖ್ಯವಾಹಿನಿಯ ಮಾಧ್ಯಮಗಳು ಮಾಡುತ್ತಿರುವುದಾದರೂ ಏನನ್ನು? ಏನು ಮಾಡಬೇಕಿತ್ತೋ ಅದಕ್ಕೆ ಮತ್ತು ಸ್ವಂತ ಮಾಧ್ಯಮ ಧರ್ಮಕ್ಕೆ ತದ್ವಿರುದ್ಧವಾಗಿರುವುದನ್ನು! ಅದೆಂದರೆ, ಈ ಪಿಡುಗಿಗೆ ಧರ್ಮ ಮತ್ತು ಕೋಮು ಬಣ್ಣ ಹಚ್ಚಿದ್ದು, ಸತ್ಯವನ್ನು ಬಹಿರಂಗಪಡಿಸುವ ಬದಲು ಶುದ್ಧ ಸುಳ್ಳನ್ನೇ ಹರಡಿದ್ದು, ಭಯ-ಸಂಶಯಗಳನ್ನು ಹುಟ್ಟಿಸಿದ್ದು, ಸರಕಾರದ ತಪ್ಪುಗಳನ್ನು ಮುಚ್ಚಿಟ್ಟದ್ದು ಮಾತ್ರವಲ್ಲ; ಮಹಾರಾಜ-ನವಾಬರುಗಳ ಭಟ್ಟಂಗಿಗಳೂ ನಾಚುವಂತೆ ಏಕ ವ್ಯಕ್ತಿ ಮತ್ತು ಸರಕಾರವನ್ನು ಹೊಗಳಿದ್ದು- ಹೀಗೆ ಒಂದೇ ಎರಡೇ? ಈ ಕುರಿತು ವಿವರಗಳನ್ನು ಬರೆಯುತ್ತಾ ಹೋದಲ್ಲಿ ಹಲವಾರು ಲೇಖನಗಳನ್ನು ಬರೆಯಬಹುದು.
ಆದರೆ, ಇತಿಹಾಸದಲ್ಲಿ ಸ್ಥಾಯಿಯಾಗಿ ನಿಲ್ಲುವಂತದ್ದೆಂದರೆ, ಈ ಲೇಖನದ ಆರಂಭದಲ್ಲಿ ಹೇಳಿರುವ ವಿಷಯ. ಅದೆಂದರೆ, ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಭಾರತೀಯ ಮಾಧ್ಯಮಗಳು ಸರಕಾರದ ಮತ್ತು ಆಳುವ ಪಕ್ಷಗಳ ಕೃಪಾಶ್ರಯದಲ್ಲಿ ರೋಗವೊಂದಕ್ಕೆ ಧರ್ಮದ ಬಣ್ಣ ಹಚ್ಚಿ ಕೋಮುವಿಷ ಹರಡುವಲ್ಲಿ ಯಶಸ್ವಿಯಾದವು. ಹಿಟ್ಲರನ ಜರ್ಮನಿಯಲ್ಲಿ ಯಹೂದಿಗಳನ್ನು ಗುರಿಯಾಗಿಸಿ, ಎಲ್ಲಾ ರೋಗರುಜಿನಗಳಿಗೆ ಅವರೇ ಕಾರಣವೆಂದು ಅಲ್ಲಿನ ಮಾಧ್ಯಮಗಳು ಬಿಂಬಿಸಿದ್ದವು. ಭಾರತೀಯ ಮಾಧ್ಯಮಗಳು ಇಂದು ತಾವೇನು ಕಡಿಮೆ ಇಲ್ಲವೆಂದು ತೋರಿಸುತ್ತಿವೆ.