ಪಿಎಂ ಕೇರ್ಸ್ʼ ಫಂಡ್‌ನಲ್ಲೂ ಧರ್ಮ ಬೆರೆಸಿದ್ದು ಸರೀನಾ..?ಇಡೀ ವಿಶ್ವವೇ ಕರೋನಾ ಎಂಬ ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿದೆ. ಜಾಗತಿಕ ಆರ್ಥಿಕತೆ ಕುಸಿದು ಪಾತಾಳಕ್ಕೆ ಬಿದ್ದಿದೆ. ಭಾರತದ ಆರ್ಥಿಕ ಪರಿಸ್ಥಿತಿಯೇನು ಉತ್ತಮವಾಗಿಲ್ಲ. ಸರ್ಕಾರ ಕರೋನಾ ನಿಯಂತ್ರಣಕ್ಕೆ ಎಂದು ಘೋಷಣೆ ಮಾಡಿದ್ದ ಲಾಕ್‌ಡೌನ್ ಆರ್ಥಿಕ ಸಂಕಷ್ಟದಿಂದಲೇ ತೆರವಾಗಿದೆ. ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಪಿಎಂ ಕೇರ್ಸ್ ಎಂಬ ಖಾತೆ ತೆರದಿದ್ದು, ಉಳ್ಳವರು, ದಾನಿಗಳು, ಸಹಾಯ ಮಾಡಬೇಕು ಎಂಬ ಮನಸ್ಸು ಇದ್ದವರು ನೇರವಾಗಿ ಆ ಖಾತೆಗೆ ಹಣ ವರ್ಗಾವಣೆ ಮಾಡಬಹುದು ಎಂದು ಕೇಳಿಕೊಂಡಿದ್ದಾರೆ. ದೊಡ್ಡ ದೊಡ್ಡ ಕಂಪನಿಗಳಿಂದ ಹಿಡಿದು ಸಣ್ಣ ಪುಟ್ಟ ವ್ಯಾಪಾರಸ್ಥರು, ವಿದ್ಯಾರ್ಥಿಗಳು ಕೂಡ ತಮ್ಮ ಕೈಲಾದ ಸಹಾಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಪಿಎಂ ಕೇರ್ಸ್ ಫಂಡ್‌ಗೆ ವರ್ಗಾವಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ 20 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ ಯಾರಿಗೆಲ್ಲಾ ಏನೇನು ಸಿಕ್ಕಿದೆ ಎಂಬ ಚರ್ಚೆ ಇಲ್ಲಿ ನಗಣ್ಯ. ಆದರೆ ಬಡವರೂ ಸಹಿತ ಪಿಎಂ ಕೇರ್ಸ್ ಫಂಡ್‌ಗೆ ತಮ್ಮ ಕೈಲಾದ ಧನಸಾಹಯ ಮಾಡಿದ್ದಾರೆ ಎನ್ನುವುದು ಮಾತ್ರ ಸತ್ಯ.
ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಾಪಿಸಿರೋದು ಯಾವುದೇ ಧರ್ಮಾಧಾರಿತವಾಗಿ ಇರುವ ಫಂಡ್ ಅಲ್ಲ. ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಇದ್ದಾಗಲೇ ಪಿಎಂ ಕೇರ್ ಯಾಕೆ ಸ್ಥಾಪಿಸಿದ್ದು, ಅದರ ಹಿಂದಿನ ಉದ್ದೇಶ ಏನು ಎನ್ನುವ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಲೇ ಇದೆ. ಭಾರತದ ಸ್ವಾತಂತ್ರ್ಯಗೊಂಡು ಪಾಕಿಸ್ತಾನ ಬೇರ್ಪಟ್ಟ ಬಳಿಕ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯನ್ನು ಸ್ಥಾಪಿಸಿದ್ದರು. ದೇಶದಲ್ಲಿ ಯಾವುದೇ ಸಮಸ್ಯೆ ತಲೆದೋರಿದಾಗ ಈ ಹಣದಿಂದ ಪ್ರಧಾನ ಮಂತ್ರಿಗಳು ಹಣದ ನೆರವನ್ನೂ ನೀಡಬಹುದಿತ್ತು. ಜನಸಾಮಾನ್ಯರೂ ಕೂಡ ಈ ನಿಧಿಗೆ ಹಣದ ನೆರವನ್ನೂ ನೀಡಬಹುದಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಾಕಿರುವ ಪಿಎಂ ಕೇರ್ಸ್ ಫಂಡ್ ಕೂಡ ಅದೇ ರೀತಿಯಲ್ಲಿದೆ. ಆದರೆ ಹೆಸರು ಮಾತ್ರ ಸ್ವಲ್ಪ ಬದಲಾವಣೆ ಆಗಿದೆ ಅಷ್ಟೆ. ಆದರೆ ಇದರಲ್ಲೂ ಯಾವುದೇ ಧರ್ಮಾಧಾರಿತ ಸಹಾಯಕ್ಕಲ್ಲ. ದೇಶದ ಯಾವುದೇ ರಾಜ್ಯದಲ್ಲಿ ಪ್ರಕೃತಿ ವಿಕೋಪ ಸೇರಿದಂತೆ ಕರೋನಾ ರೀತಿಯ ಕಷ್ಟಗಳು ಎದುರಾದ ಕೂಡಲೇ ಪ್ರಧಾನಿ ಸ್ವಯಂ ಪ್ರೇರಣೆಯಿಂದ ಸಹಾಯದ ನೆರವು ನೀಡಲು ಅಧಿಕಾರ ಇರಲಿದೆ.
ಈ ಮೊದಲು 1948ರಲ್ಲಿ ಜವಾಹರ ಲಾಲ್ ನೆಹರು ಸ್ಥಾಪಿಸಿದ್ದ P M N R F ಗೆ ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 10 ಮತ್ತು 139ರ ಅಡಿಯಲ್ಲಿ ವಿನಾಯಿತಿ ನೀಡಿತ್ತು. ಪ್ರಧಾನ ಮಂತ್ರಿ ರಾಷ್ಟ್ರೀಯ ವಿಪತ್ತು ನಿಧಿಗೆ ನೀಡುವ ದೇಣಿಗೆಗೆ ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 80 (ಜಿ) ಅಡಿಯಲ್ಲಿ ಶೇಕಡ 100ರಷ್ಟು ಕಡಿತದ ಅವಕಾಶವಿದೆ ಎಂದು. ಇದೀಗ ಪ್ರಧಾನಿ ನರೇಂದ್ರ ಮೋದಿ ಸ್ಥಾಪಿಸಿರುವ ಪಿಎಂ ಕೇರ್ಸ್ ಫಂಡ್‌ಗೂ ಕೂಡ ಅದೇ ನಿಯಮ ಅನ್ವಯ ಆಗುತ್ತಿದೆ. ಆದರೂ ಪ್ರಧಾನಿ ನರೇಂದ್ರ ಮೋದಿ ಸ್ಥಾಪಿಸಿರುವ ಪಿಎಂ ಕೇರ್ಸ್ ಫಂಡ್ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಈಗಾಗಲೇ ಒಂದು ಅಕೌಂಟ್ ಇದ್ದಾಗ ಮತ್ತೊಂದು ಅಕೌಂಟ್ ತೆರೆದ ಉದ್ದೇಶವೇನು ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಈ ಪ್ರಶ್ನೆ ಸರಿಯಾಗಿರಬಹುದು. ಈ ಪ್ರಶ್ನೆಗೆ ಉತ್ತರದಾಯಿಗಳು ಸೂಕ್ತ ಕಾಲದಲ್ಲಿ ಉತ್ತರವನ್ನೂ ನೀಡುತ್ತಾರೆ. ಆದರೆ ನಮ್ಮ ಕರ್ನಾಟಕದಲ್ಲಿ ಪಿಎಂ ಕೇರ್ಸ್ ಫಂಡ್ ಬಗ್ಗೆ ಧರ್ಮದ ನೆಲೆಯಲ್ಲಿ ನಿಂತು ಮಾತನಾಡಿರುವುದು ಜನರನ್ನು ಕೋಪಗೊಳ್ಳುವಂತೆ ಮಾಡಿದೆ.
ಕರೋನಾ ಸಂಕಷ್ಟದ ನಡುವೆ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಧರ್ಮಾಂಧತೆ ಮೆರದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೋವಿಡ್ 19 ನಿಧಿ, ಪಿಎಂ ಕೇರ್ಸ್‌ಗೆ ವಕ್ಫ್ ಬೋರ್ಡ್‌ನಿಂದ ಹಣ ಕೊಡುವುದು ಬೇಡ ಎನ್ನುವುದು ಜಮೀರ್ ಅವರ ನಿಲುವು. ಘಟನೆ ಆಗಿದ್ದಿಷ್ಟು, ಪಿಎಂ ಕೇರ್ಸ್‌ಗೆ ಹಣ ಹಾಕುವ ಇಚ್ಛೆ ಇದೆಯಾ ..? ಎಂದು ಎಲ್ಲಾ ವಿಭಾಗ ಸಂಘ ಸಂಸ್ಥೆಗಳನ್ನು ಕೇಳಿಕೊಳ್ಳಲಾಗ್ತಿದೆ. ದೆಹಲಿಯ ಏಮ್ಸ್ ಆಸ್ಪತ್ರೆ ಆಡಳಿತ ಮಂಡಳಿಯೂ ವೈದ್ಯರನ್ನು ಕೇಳಿದ ಬಳಿಕ ಆಕ್ರೋಶಕ್ಕೆ ತುತ್ತಾಗಿತ್ತು. ಅದೇ ರೀತಿ ಕೇಂದ್ರ ವಕ್ಫ್ ಬೋರ್ಡ್‌ನಿಂದ ರಾಜ್ಯ ವಕ್ಫ್ ಬೋರ್ಡ್‌ಗೆ ಪತ್ರವೊಂದು ಬಂದಿತ್ತು. ನೀವು ಪಿಎಂ ಕೇರ್ಸ್ ಫಂಡ್‌ಗೆ ದೇಣಿಗೆ ನೀಡಿದ್ದೀರಾ..? ಅಥವಾ ಸಹಾಯ ಮಾಡಲು ಇಚ್ಛೆ ಹೊಂದಿದ್ದೀರಾ..? ಎಂದು ಕೇಳಲಾಗಿತ್ತು. ಈ ಪತ್ರವನ್ನೇ ಆಧಾರವಾಗಿ ಇಟ್ಟುಕೊಂಡು ರಾಜ್ಯ ವಕ್ಫ್ ಬೋರ್ಡ್ ತನ್ನ ವ್ಯಾಪ್ತಿಯಲ್ಲಿ ಬರುವ 40 ಸಾವಿರ ಸಂಘ ಸಂಸ್ಥೆಗಳಿಗೆ ಪತ್ರ ಬರೆದು ದೇಣಿಗೆ ನೀಡುತ್ತೀರಾ..? ಎಂದು ಕೇಳಿತ್ತು. ಟಿಪ್ಪು ಸುಲ್ತಾನ್ ವಕ್ಫ್ ಎಸ್ಟೇಟ್‌ನವರು 20 ಲಕ್ಷ ನೀಡಲು ಮುಂದೆ ಬಂದಿದ್ದು, ಒಟ್ಟು 50 ಲಕ್ಷ ರೂಪಾಯಿ ಹಣವನ್ನು ಪಿಎಂ ಕೇರ್ಸ್ ಫಂಡ್‌ಗೆ ನೀಡಲು ಮುಂದಾಗಿತ್ತು. ಆದರೆ ಪಿಎಂ ಕೇರ್ಸ್‌ಗೆ ಹಣ ನೀಡದೆ ಇರುವಂತೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅಡ್ಡಗಾಲು ಹಾಕಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ನಡೆಯನ್ನೂ ತೀವ್ರವಾಗಿ ಖಂಡಿಸಿರುವ ಸಚಿವ ಸಿ ಟಿ ರವಿ, ಜಮೀರ್ ಅಹ್ಮದ್ ಖಾನ್ ಇನ್ನೂ ಜಿನ್ನಾ ಮಾನಸಿಕತೆಯಿಂದ ಹೊರ ಬಂದಿಲ್ಲ. ಮುಸ್ಲಿಮರ ಹಣ ಕರೋನಾಗೆ ಬಳಸುವುದು ಬೇಡ ಎನ್ನುವುದು ಸಂವಿಧಾನ ವಿರೋಧಿ. ನಾವೇನು ಜಮೀರ್ ಬಳಿ ಜಕಾತ್ ಹಣವನ್ನು ಕೇಳಿಲ್ಲ. ವಕ್ಫ್ ಬೋರ್ಡ್ ಕೂಡ ಸರ್ಕಾರದ ಹಣದಲ್ಲೇ ನಡೆಯುವುದು.ಕರೋನಾ ವಿರುದ್ಧದ ಹೋರಾಟಕ್ಕೆ ಸರ್ಕಾರಕ್ಕೆ ದೇಣಿಗೆ ನೀಡಬಾರದು ಎಂದು ಹೇಳಿರುವುದು ಖಂಡನೀಯ ಎಂದು ಟೀಕಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸಹ ಜಮೀರ್ ಹೇಳಿಕೆಯನ್ನು ಪರೋಕ್ಷವಾಗಿ ಖಂಡಿಸಿದ್ದು, ಕರೋನಾ ಯಾವುದೇ ಧರ್ಮ, ಜಾತಿ ನೋಡಿಕೊಂಡು ಬರುವುದಿಲ್ಲ. ಫಂಡ್ ನೀಡುವುದಕ್ಕೆ ವಿರೋಧ ಮಾಡುವುದು ಬಾಲಿಷ ಎಂದು ಟೀಕಿಸಿದ್ದಾರೆ. ಜೊತೆಗೆ ಯಾವುದೇ ಜನಪ್ರತಿನಿಧಿ ಫಂಡ್ ನೀಡುವುದಕ್ಕೆ ವಿರೋಧ ಮಾಡವುದು ಸರಿಯಲ್ಲ ಎಂದು ಮಾಜಿ ಸ್ನೇಹಿತ ಜಮೀರ್ ಅಹ್ಮದ್ ಖಾನ್‌ಗೆ ಟಾಂಗ್ ಕೊಟ್ಟಿದ್ದಾರೆ.
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಸಚಿವರಾಗಿದ್ದಾಗ ಅಥವಾ ಸಾಮಾನ್ಯ ಶಾಸಕನಾಗಿದ್ದಾಗಲೂ ಸಾಕಷ್ಟು ಖ್ಯಾತಿ ಗಳಿಸಿದ್ದು ಕಂತೆ ಕಂತೆ ನೋಟುಗಳನ್ನು ನೊಂದವರಿಗೆ ಕೊಡುವ ಮೂಲಕ. ನೆನಪಿರಬಹುದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಹರೀಶ್ ಎಂಬ ಯುವಕ ತನ್ನ ಅಂಗಾಂಗ ಧಾನ ಮಾಡುವಂತೆ ಕೇಳಿಕೊಂಡು ಸಾವನ್ನಪ್ಪಿದ ಬಳಿಕ ಇದೇ ಜಮೀರ್ ಅಹ್ಮದ್ ಖಾನ್ ಅವರ ಕುಟುಂಬಸ್ಥರಿಗೆ ಸಹಾಯ ಮಾಡಿದ್ದರು. ಅದೂ ಅಲ್ಲದೆ ಮುಸ್ಲಿಂ ಸಮುದಾಯದಲ್ಲಿ ಹೇಳಿರುವಂತೆ ಪಂಚಕರ್ಮ ಆಚರಣೆ ಇದೆ. ಶಹಾದತ್ ಅಂದರೆ ಅಲ್ಹಾ ಒಬ್ಬನೇ ದೇವರು, ದಿನಕ್ಕೆ 5 ಬಾರಿ ನಮಾಜ್ ಮಾಡಲೇ ಬೇಕು. ರಂಜಾನ್ ಮಾಸದಲ್ಲಿ ಉಪವಾಸ ಕಡ್ಡಾಯ. ಇನ್ನೂ ನಾಲ್ಕನೆಯದು ಜಕಾತ್ – ನೀನು ಸಂಪಾದನೆ ಮಾಡಿದ ಹಣ ಐಶ್ವರ್ಯದಲ್ಲಿ ಶೇಕಡ ಎರಡೂವರೆಯಷ್ಟು ಹಣವನ್ನು ಅರ್ಹರಿಗೆ ದಾನ ಮಾಡು. ಅಂತಿಮವಾಗಿ ಹಜ್ ಯಾತ್ರೆ ಕೈಗೊಳ್ಳುವ ಮೂಲಕ ಜೀವನವನ್ನು ಸಮರ್ಪಣೆ ಮಾಡಿಕೋ ಎಂದು. ಜಮೀರ್ ಅಹ್ಮದ್ ಖಾನ್ ಕೂಡ ಇವುಗಳನ್ನು ಪಾಲಿಸುವ ಮುಸ್ಲಿಂ ಎಂದು ಭಾವಿಸುವುದಾದರೆ..!? ಪಿಎಂ ಕೇರ್ಸ್‌ಗೆ ಹಣ ಕೊಡುವುದನ್ನು ತಡೆದಿದ್ದು ಸರೀನಾ..? ಮುಸ್ಲಿಮರ ಹಣ ಮುಸ್ಲಿಂ ಸಮುದಾಯಕ್ಕೆ ಮಾತ್ರ ಸೇರಬೇಕು ಎಂದಿದ್ದು ಸರೀನಾ..? ಹಾಗಿದ್ದರೆ ಹಜ್ ಯಾತ್ರೆಗೆ ತೆರಳುವ ಮುಸ್ಲಿಂ ಸಮುದಾಯದ ಜನರಿಗೆ ಸರ್ಕಾರ ಧನ ಸಹಾಯ 650 ಕೋಟಿಯನ್ನು ಮೀಸಲಿಡುತ್ತಿತ್ತು, ಆ ಹಣ ಎಲ್ಲಾ ಮುಸ್ಲಿಂ ಸಮುದಾಯದಿಂದಲೇ ಸಂಗ್ರಹಿಸಿದ ಹಣವೇ..? ಅಂತಿಮವಾಗಿ 2012ರಲ್ಲಿ ಸುಪ್ರೀಂಕೋಟ್ ಹಜ್ ಯಾತ್ರೆಗೆ ಸಬ್ಸಿಡಿ ನಿಲ್ಲಿಸಿ ಎಂದ ಬಳಿಕ ಇದೀಗ ವಿಮಾನಯಾನದ ವೆಚ್ಚದಲ್ಲಿ ಸಹಾಯ ಮಾಡಲಾಗ್ತಿದೆ. ಕೇವಲ 50 ಸಾವಿರ ರೂಪಾಯಿಗೆ ಕರೆದುಕೊಂಡು ಹೋಗಿ ಬರುವ ವ್ಯವಸ್ಥೆ ಮಾಡುತ್ತಿದೆ. ಈ ಹಣ ಕೂಡ ಮುಸ್ಲಿಂ ಸಮುದಾಯದಿಂದಲೇ ಸಂಗ್ರಹಿಸಿದ ಹಣವೇ..? ಎನ್ನುವುದಕ್ಕೆ ಸ್ವತಃ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಉತ್ತರ ಕೊಡಬೇಕಿದೆ.
ಒಂದಂತೂ ಸತ್ಯ, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಇರುವಾಗಲೇ ಪ್ರಧಾನಿ ನರೇಂದ್ರ ಮೋದಿ ಪಿಎಂ ಕೇರ್ಸ್ ಸ್ಥಾಪನೆ ಮಾಡಿದರು ಎನ್ನುವುದು ಇನ್ನೂ ಕೂಡ ಊಹೆಗೆ ನಿಲುಕದ ಪ್ರಶ್ನೆಯಾಗಿದೆ. ಆದರೆ ಹಾಗಂದ ಮಾತ್ರಕ್ಕೆ ಪಿಎಂ ಕೇರ್ಸ್‌ಗೆ ಮುಸ್ಲಿಮರು ಹಣ ಕೊಡುವುದು ಬೇಡ ಎನ್ನುವುದು ಮೂರ್ಖತನದ ಪರಮಾವಧಿ ಎಂದರೆ ತಪ್ಪೇನು ಇಲ್ಲ.