ದೇಶವ್ಯಾಪಿ ಕರೋನಾ ಸೋಂಕು ಮಾಡುತ್ತಿರುವ ಸದ್ದಿಗಿಂತ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮದೇ ಹೆಸರಿನಲ್ಲಿ ಸ್ಥಾಪಿಸಿಕೊಂಡಿರುವ ‘ಪಿಎಂ-ಕೇರ್ಸ್’ ಹೆಚ್ಚು ಸದ್ದು ಮಾಡುತ್ತಿದೆ. ಕರೋನಾ ಸೋಂಕಿನ ಬಗೆಗಿನ ಚರ್ಚೆಯು ಆರೋಗ್ಯ ಮತ್ತು ಸೋಂಕು ತಡೆಯುವಲ್ಲಿ ಮೋದಿ ಸರ್ಕಾರದ ಸಾಫಲ್ಯ- ವೈಫಲ್ಯಗಳತ್ತಲೇ ಗಿರಕಿ ಹೊಡೆಯುತ್ತಿದೆ. ಆದರೆ, ಪಿಎಂ-ಕೇರ್ಸ್ ಬಗೆಗಿನ ಚರ್ಚೆಗಳಿಗೆ ಹಲವು ಆಯಾಮಗಳಿವೆ. ಕೇವಲ ದೇಣಿಗೆಯನ್ನು ಸಂಗ್ರಹಿಸುವುದಕ್ಕೆ ಮಾತ್ರ ಸೀಮಿತವಾಗದೇ, ಕಾನೂನು ಮತ್ತು ನೈತಿಕತೆಯ ವ್ಯಾಪ್ತಿಯನ್ನು ಒಳಗೊಂಡಂತೆ ಚರ್ಚೆಯ ಪರಿಧಿಯು ವಿಸ್ತಾರವಾಗಿದೆ.
ಪಿಎಂ- ಕೇರ್ಸ್ ಸ್ಥಾಪನೆಯ ಕುರಿತಂತೆಯೇ ತಕರಾರು ಎತ್ತಿದ್ದ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್ ಏಪ್ರಿಲ್ ತಿಂಗಳಲ್ಲೇ ವಜಾ ಮಾಡಿದೆ. ಪಿಎಂ-ಕೇರ್ಸ್ ಇದುವರೆಗೆ ಸ್ವೀಕರಿಸಿರುವ ದೇಣಿಗೆಯನ್ನು ಬಹಿರಂಗ ಪಡಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ನ ನಾಗ್ಪುರ ಪೀಠದಲ್ಲಿ ನ್ಯಾಯವಾದಿ ಅರವಿಂದ್ ವಾಗ್ಮೊರೆ ಸಲ್ಲಿಸಿರುವ ಅರ್ಜಿ ವಿಚಾರಣೆಯಲ್ಲಿದೆ. ಈ ಅರ್ಜಿಯನ್ನು ವಜಾ ಮಾಡುವಂತೆ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ನಲ್ಲಿ ಇಂತಹದೇ ಅರ್ಜಿ ವಜಾ ಆಗಿರುವ ಪ್ರಕರಣವನ್ನು ಪ್ರಸ್ತಾಪಿಸಿದೆ. ಆದರೆ, ಬಾಂಬೆ ಹೈಕೋರ್ಟ್ ನಾಗ್ಪುರ ಪೀಠವು, ಸುಪ್ರೀಂಕೋರ್ಟ್ ನಲ್ಲಿ ವಜಾ ಆಗಿರುವ ಅರ್ಜಿ ಬೇಡಿಕೆಯೇ ಬೇರೆ ಮತ್ತು ಪ್ರಸ್ತುತ ವಿಚಾರಣೆಗೆ ಬಂದಿರುವ ಅರ್ಜಿಯ ಬೇಡಿಕೆಯೇ ಬೇರೆ ಆಗಿರುವುದರಿಂದ ಎರಡು ವಾರದೊಳಗೆ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಪತ್ರಿಕೋದ್ಯಮ ಪರಿಭಾಷೆಯಲ್ಲಿ ಹೇಳುವುದಾದರೆ ಇದು ಕೇಂದ್ರ ಸರ್ಕಾರಕ್ಕೆ ಆರಂಭಿಕ ಹಿನ್ನಡೆ.
ಅದೇನೇ ಇರಲಿ, ಇದು ಗೌರವಾನ್ವಿತ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವ ವಿಚಾರವಾದ್ದರಿಂದ ಕಾನೂನಿಗೆ ಸಂಬಂಧಿಸಿದ ಅಂಶಗಳ ಬಗ್ಗೆ ನಾವಿಲ್ಲಿ ಚರ್ಚಿಸುವುದಿಲ್ಲ.
ಆದರೆ, ಪಿಎಂ-ಕೇರ್ಸ್ ದೇಣಿಗೆ ಕುರಿತಂತೆ ದೇಶವ್ಯಾಪಿ ಚರ್ಚೆಯಾಗುತ್ತಿದೆ. ಈ ಚರ್ಚೆಯು ಕಾನೂನು ಚೌಕಟ್ಟು ಮೀರಿದ ನೈತಿಕತೆ ಕುರಿತಾದ ಚರ್ಚೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕರೋನಾ ಸೋಂಕು ತಡೆಗೆ ನೆರವಾಗಲೆಂದು ‘Prime Minister’s Citizen Assistance and Relief in Emergency Situations Fund’ (PM CARES Fund)’ ಸ್ಥಾಪಿಸಿದ್ದಾರೆ. ಈಗಾಗಲೇ ಪ್ರಧಾನಮಂತ್ರಿ ಪ್ರಕೃತಿ ಪ್ರಕೋಪ ನಿಧಿ ಇರುವಾಗ ಹೊಸದೊಂದು ನಿಧಿ ಸ್ಥಾಪಿಸುವ ಅಗತ್ಯ ಇತ್ತೇ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪರಿಹಾರ ಒದಗಿಸುವ ಉದ್ದೇಶವನ್ನು ನಿಧಿಯ ಹೆಸರೇ ಘೋಷಿಸುತ್ತಿರುವುದರಿಂದ ಅದರ ಅಗತ್ಯ ಇದ್ದಿರಲೂಬಹುದು. ಈ ವಿಷಯ ಸಾರ್ಜಜನಿಕ ವಲಯದಲ್ಲಿ ಇನ್ನೂ ಚರ್ಚೆಯಾಗುತ್ತಲೇ ಇದೆ. ಪ್ರಜಾಪ್ರಭುತ್ವದಲ್ಲಿ ಇಂತಹ ಚರ್ಚೆಗಳು ಅತ್ಯಗತ್ಯ ಕೂಡಾ.
ಸೋಂಕು ಪೀಡಿತ ಜನರಿಗೆ ನೆರವು ನೀಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರುವ “ಪ್ರಾಮಾಣಿಕ ಕಾಳಜಿ”ಯನ್ನು ಯಾರೂ ಪ್ರಶ್ನೆ ಮಾಡುತ್ತಿಲ್ಲ. ಅವರ “ಬದ್ಧತೆ ಮತ್ತು ಪ್ರಾಮಾಣಿಕತೆ”ಯನ್ನು ಯಾರೂ ಅನುಮಾನಿಸುತ್ತಿಲ್ಲ. ಆದರೆ, ನರೇಂದ್ರ ಮೋದಿ ಅವರು ಸ್ಥಾಪಿಸಿದ ‘ಪಿಎಂ-ಕೇರ್ಸ್’ ನಿಧಿಗೆ ಯಾರು ಹಣ ಕೊಟ್ಟರು? ಎಷ್ಟು ಹಣ ಕೊಟ್ಟರು? ಇದುವರೆಗೆ ಎಷ್ಟು ದೇಣಿಗೆ ಸ್ವೀಕರಿಸಲಾಗಿದೆ? ಸ್ವೀಕರಿಸಲಾದ ದೇಣಿಗೆಯಲ್ಲಿ ಉದ್ದೇಶಿತ ಸೋಂಕು ತಡೆಗೆ ಬಳಸಿದ್ದೆಷ್ಟು? ಸೋಂಕು ನಿವಾರಣಾ ಔಷಧಿ ಸಂಶೋಧನೆ ವಿನಿಯೋಗಿಸಿದ್ದೆಷ್ಟು?, ಸೋಂಕು ಪೀಡಿತರ ಸಂಕಷ್ಟ ನಿವಾರಣೆಗೆ ಎಷ್ಟು ವೆಚ್ಚ ಮಾಡಲಾಗಿದೆ? ಈ ಮಾಹಿತಿಯನ್ನಷ್ಟೇ ಜನರು ಕೇಳುತ್ತಿದ್ದಾರೆ.
ಈ ಮಾಹಿತಿಯನ್ನು ಗೌಪ್ಯವಾಗಿ ಇಡುವ ಮೂಲಕ “ಪ್ರಾಮಾಣಿಕತೆ”ಗೆ ಮತ್ತೊಂದು ಹೆಸರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಲ್ಲಿ ಗೊಂದಲ ಮೂಡಿಸಿದ್ದಾರೆ. ಅಷ್ಟೇ ಅಲ್ಲಾ, ಗೊಂದಲ ಜತೆಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದಾರೆ.
ಅನುಮಾನಗಳು ಹುಟ್ಟಿಕೊಳ್ಳಲು ಪ್ರಮುಖ ಕಾರಣವೆಂದರೆ- “ಪ್ರಧಾನಿ” ಹೆಸರಲ್ಲಿ ಸಂಗ್ರಹಿಸಿರುವ ದೇಣಿಗೆಯು “ನರೇಂದ್ರ ಮೋದಿ”ಯವರ ಖಾಸಗಿ ದೇಣಿಗೆ ಆಗುವುದಿಲ್ಲ. ಅದು ಸಾರ್ವಜನಿಕ ದೇಣಿಗೆಯಾಗುತ್ತದೆ. ಉತ್ಯುನ್ನತ ಸಂವಿಧಾನಿಕ ಹುದ್ದೆಯಲ್ಲಿದ್ದವರು ಸಾರ್ವಜನಿಕ ದೇಣಿಗೆಯನ್ನು ಬಹಿರಂಗ ಪಡಿಸಬೇಕು, ವಿವರಗಳನ್ನು ಸಲ್ಲಿಸಬೇಕು ಎಂಬುದು ಸಂವಿಧಾನಿಕ ಶಿಷ್ಟಾಚಾರದ ನಡವಳಿಕೆ. ಮೋದಿ ಅವರು ದೇಣಿಗೆ ಸಂಗ್ರಹವಾಗಿರುವುದನ್ನು ಬಹಿರಂಗ ಪಡಿಸದೇ ಸಂವಿಧಾನಿಕ ಶಿಷ್ಚಾಚಾರವನ್ನು ಉಲ್ಲಂಘಿಸುತ್ತಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ.
ಕರೋನಾ ಸೋಂಕಿನ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ, ದೇಣಿಗೆ ಸಂಗ್ರಹಿಸಿದ ನಂತರ ಅದನ್ನು ಬಹಿರಂಗ ಪಡಿಸಿ ಇಂತಿಷ್ಟು ಸ್ವೀಕರಿಸಿದ್ದೇವೆ. ಇಂತಿಷ್ಟು ವೆಚ್ಚ ಮಾಡಿದ್ದೇವೆ ಎಂದು ದೇಣಿಗೆ ನೀಡಿದವರಿಗೆ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡುವುದು ದೇಣಿಗೆ ಸ್ವೀಕರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೈತಿಕ ಜವಾಬ್ದಾರಿ ಕೂಡಾ. ಆ ಜವಾಬ್ದಾರಿಯನ್ನು ನರೇಂದ್ರ ಮೋದಿ ಅವರು ಪ್ರಾಮಾಣಿಕವಾಗಿ ನಿರ್ವಹಿಸಿದ್ದರೆ, ಅವರ ಬಗ್ಗೆ ಅನುಮಾನ ಪಡುವ ಅಗತ್ಯವೇ ಇರಲಿಲ್ಲ.
ಪ್ರಧಾನಿ ನರೇಂದ್ರ ಮೋದಿ ದೇಣಿಗೆಯ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳುತ್ತಿರುವುದು, ಗೌಪ್ಯತೆ ಕಾಪಾಡುವ ವಿಷಯವು ನ್ಯಾಯಾಲಯದ ಕಟ್ಟೆ ಹತ್ತಿರುವ ಬೆಳವಣಿಗೆಯು ಸಹಜವಾಗಿಯೇ ಸಾರ್ವಜನಿಕರಲ್ಲಿ ಅನುಮಾನ ಮೂಡಿಸುತ್ತವೆ. ದೇಣಿಗೆಯನ್ನು ಸಾರ್ವಜನಿಕವಾಗಿ ಸಂಗ್ರಹಿಸುತ್ತಿದ್ದೀರಿ, ಅದಕ್ಕಾಗಿ ಸಾರ್ಜಜನಿಕವಾಗಿ ಪ್ರಚಾರ ಮಾಡುತ್ತಿರಿ. ಆದರೆ, ಸಂಗ್ರಹಿಸಿದ ದೇಣಿಗೆ ಬಗ್ಗೆ ಸಾರ್ಜಜನಿಕವಾಗಿ ಮಾಹಿತಿ ನೀಡುವುದಿಲ್ಲ ಎಂದಾದರೆ- ಅದು ಮುಂದೆ ನ್ಯಾಯಾಲಯಗಳು ನೀಡುವ ತೀರ್ಪು ಆಧರಿಸಿ, ಕಾನೂನು ಪ್ರಕಾರ ಸರಿಯೇ ಇರಬಹುದು. ಆದರೆ, ನೈತಿಕವಾಗಿ ಸರಿಯಲ್ಲ!
ಅಷ್ಟಕ್ಕೂ ಕರೋನಾ ಸೋಂಕು ತಡೆಯಲು ನಿಧಿ ಸಂಗ್ರಹಿಸುವುದು ಮತ್ತು ಆ ನಿಧಿಯನ್ನು ಸಮರ್ಥವಾಗಿ, ವ್ಯವಸ್ಥಿತವಾಗಿ ಸೋಂಕು ತಡೆಗೆ, ಸೋಂಕು ನಿವಾರಣೆ ಔಷಧಿ ಸಂಶೋಧನೆಗೆ ಬಳಸುವುದು ಮುಖ್ಯವಾಗಬೇಕು. ಅದರ ಹೊರತು, ನಿಧಿಯನ್ನೇ ಗೌಪ್ಯವಾಗಿಟ್ಟುಕೊಳ್ಳುವುದು, ಗೌಪ್ಯವಾಗಿಟ್ಟುಕೊಳ್ಳುವುದನ್ನೇ ಪ್ರತಿಷ್ಠೆಯನ್ನಾಗಿ ಮಾಡಿಕೊಳ್ಳುವುದು, ವಿಷಯವು ನ್ಯಾಯಾಲಯದ ಮೆಟ್ಟಿಲು ಹತ್ತುವಂತಾಗುವುದು, ಈ ಬೆಳವಣಿಗೆಗಳು- ನಿಧಿಯ, ಸಂಗ್ರಹಣೆಯಲ್ಲಿ ನಿರ್ವಹಣೆಯಲ್ಲಿ ಏನೋ ಲೋಪ ಇರಬಹುದು ಎಂಬ ಅನುಮಾನಕ್ಕೆ ದಾರಿ ಮಾಡಿಕೊಡುತ್ತವೆ.
ಆಡಳಿತ ನಡೆಸುವವರು ನೈತಿಕವಾಗಿ ಪರಿಶುದ್ಧರಿರಬೇಕು. ಕಾನೂನಿನ ಚೌಕಟ್ಟಿನಲ್ಲಿ, ಆಡಳಿತಾತ್ಮಕ ನಿಯಮ ಪಾಲನೆಗಳಲ್ಲಿ ಸರಿಯಿದ್ದು ನೈತಿಕವಾಗಿ ಪರಿಶುದ್ಧವಾಗಿಲ್ಲ ಎಂದಾದರೆ- ಅಂತಹ ಬೆಳವಣಿಗೆಯನ್ನು ಜನರು ಅನುಮಾನದ ದೃಷ್ಟಿಯಲ್ಲಿ ನೋಡುವುದು ಸಹಜ. ಜನರು ಹಾಗೆ ಅನುಮಾನ ಪಡುವುದರಲ್ಲಿ ತಪ್ಪೇನೂ ಇಲ್ಲ!
ನಿಜವಾಗಿ ತಪ್ಪಾಗಿರುವುದು ಪ್ರಧಾನಿ ಮೋದಿ ಅವರು ಪಿಎಂ-ಕೇರ್ಸ್ ನಿಧಿಯ ಬಗ್ಗೆ ಮಾಹಿತಿ ನೀಡದ ವಿಷಯವನ್ನು ಪ್ರತಿಷ್ಠೆಯನ್ನಾಗಿ ಮಾಡಿಕೊಂಡಿರುವುದರಲ್ಲಿ. ವಾಸ್ತವವಾಗಿ ಅಧಿಕಾರದ ಗದ್ದುಗೆ ಏರಿದವರು ಎಷ್ಟು ಪಾರದರ್ಶಕವಾಗಿರುತ್ತಾರೋ ಅಷ್ಟೂ ಪ್ರಾಮಾಣಿಕರಾಗಿ ಇರುತ್ತಾರೆ. ಪ್ರಾಮಾಣಿಕರಾಗಿಲ್ಲ ಎಂದಾದಾಗ ಮಾತ್ರ ಅಪಾರದರ್ಶಕ ನಡವಳಿಕೆ ಪ್ರದರ್ಶಿಸುತ್ತಾರೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ- ಕೇರ್ಸ್ ವಿಚಾರದಲ್ಲಿ ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ ಬದಲಾಗಿ ಅಪಾರದರ್ಶಕವಾಗಿ ನಡೆದುಕೊಳ್ಳುತ್ತಿದ್ದಾರೆ. ಹಾಗಂತ ಪ್ರಧಾನಿ ಮೋದಿ ಅವರು ಪ್ರಾಮಾಣಿಕರಾಗಿಲ್ಲ, ಭ್ರಷ್ಚರಾಗಿದ್ದಾರೆ ಎಂದೇನೂ ಅರ್ಥವಲ್ಲ.
ಆದರೆ, ಅಧಿಕಾರದ ಗದ್ದುಗೆ ಏರಿದವರು ಪ್ರಾಮಾಣಿಕರಾಗಿದ್ದರೆ ಅಷ್ಟೇ ಸಾಲದು, ತಾವು ಪ್ರಾಮಾಣಿಕರು ಎಂಬುದನ್ನು ಜಗತ್ತಿಗೆ ಸಾಕ್ಷಿ ಸಮೇತ ಸಾರಬೇಕು. ಪಾರದರ್ಶಕತೆ ಪ್ರದರ್ಶಿಸಬೇಕು. ಪ್ರಾಮಾಣಿಕತೆಯು ಪಾರದರ್ಶಕತೆಯನ್ನು ಬಯಸುತ್ತದೆ. ಪಾರದರ್ಶಕತೆಯು ನೈತಿಕತೆಯನ್ನು ಪ್ರತಿಬಿಂಬಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ- ಕೇರ್ಸ್ ಮೂಲಕ ದೇಣಿಗೆ ಸಂಗ್ರಹಿಸಿ ಅದನ್ನು ಮುಂಬರುವ ಚುನಾವಣಾ ನಿಧಿಗೆ ಬಳಸುತ್ತಾರೆ ಎಂದೇನೂ ನಾವು ಆರೋಪಿಸುತ್ತಿಲ್ಲ. ಆದರೆ, ಪ್ರಾಮಾಣಿಕತೆಯನ್ನು ಪ್ರದರ್ಶಿಸುವ ಪಾರದರ್ಶಕ ನಿಲವು ತಳೆಯುವಲ್ಲಿ ಪ್ರಧಾನಿ ನರೇಂದ್ರಮೋದಿ ವಿಫಲರಾಗಿದ್ದಾರೆ. ಆ ಮೂಲಕ ಅವರು ನೈತಿಕವಾಗಿ ಸೋತಿದ್ದಾರೆ.
ನೈತಿಕ ಸೋಲು ಎಷ್ಟು ಕಠಿಣವಾದದ್ದು ಎಂದರೆ- ಈ ಸೋಲನ್ನು ಯಾವ ಚುನಾವಣಾ ಗೆಲವುಗಳಿಂದಲೂ ಕೂಡಾ ಸರಿಪಡಿಲು ಸಾಧ್ಯವಾಗುವುದಿಲ್ಲ!!