ಪಾಸ್‌ಪೋರ್ಟ್ ನವೀಕರಣದ ಕುರಿತಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಬಾಕಿ ಇರುವ ಕ್ರಿಮಿನಲ್ ಪ್ರಕರಣದ ನೆಪದಲ್ಲಿ ಪಾಸ್‌ಪೋರ್ಟ್ ನವೀಕರಿಸಲು ನಿರಾಕರಿಸುವ ಮೂಲಕ ಪ್ರಯಾಣದ ಹಕ್ಕನ್ನು ಮೊಟಕುಗೊಳಿಸಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಪಾಸ್‌ಪೋರ್ಟ್ ಕಾಯ್ದೆಯ ಸೆಕ್ಷನ್ 6(2)(f) ಅನ್ನು ವಿವರಿಸಿದ ಜಸ್ಟೀಸ್ ಹೇಮಂತ್ ಚಂದನ್‌ಗೌಡರ್ ಅವರು, ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದವರ ವಿರುದ್ದ ಯಾವುದಾದರೂ ಕ್ರಮಿನಲ್ ಪ್ರಕರಣ ನಡೆಯುತ್ತಿದ್ದಲ್ಲಿ, ಅವರು ಭಾರತದಿಂದ ವಿದೇಶಕ್ಕೆ ತೆರಳಲು ಪಾಸ್‌ಪೋರ್ಟ್ ಅಥವಾ ಪ್ರವಾಸ ದಾಖಲೆಗಳನ್ನು ನಿರಾಕರಿಸಲು ಪಾಸ್‌ಪೋರ್ಟ್ ಪ್ರಾಧಿಕಾರಕ್ಕೆ ಅವಕಾಶವಿದೆ. ಆದರೆ, ಭಾರತಕ್ಕೆ ಮರಳಲು ಬಯಸುವ ವ್ಯಕ್ತಿಗೆ ಪಾಸ್‌ಪೋರ್ಟ್ ನಿರಾಕರಿಸಲು ಈ ಕಾಯ್ದೆ ಅವಕಾಶ ನೀಡುವುದಿಲ್ಲ, ಎಂದಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಈ ಕಾಯ್ದೆಯು ಹೊಸ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದವರಿಗಾಗಿ ಮಾತ್ರ ನಿಯಮ ಅನ್ವಯವಾಗುತ್ತದೆಯೇ ಹೊರತು, ಪಾಸ್‌ಪೋರ್ಟ್‌ನವೀಕರಿಸುವವರಿಗೆ ಅಲ್ಲ,” ಎಂದು ಜಸ್ಟೀಸ್ ಹೇಮಂತ್ ಸ್ಪಷ್ಟಪಡಿಸಿದ್ದಾರೆ.
ಏನಿದು ಪ್ರಕರಣ?
ಈ ಪ್ರಕರಣದ ಅರ್ಜಿದಾರರು 2006ರಿಂದ ಅಮೇರಿಕಾದಲ್ಲಿ H1B ವಿಸಾದಡಿಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದು, 2020ರ ಜನವರಿ 1ರಂದು ತಮ್ಮ ಪಾಸ್‌ಪೋರ್ಟ್ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದರು. ತಮ್ಮ ಟ್ರಾವೆಲ್ಸ್ ಏಜೆಂಟರ ಮೂಲಕ ಸಲ್ಲಿಸಿದ್ದ ಪಾಸ್‌ಪೋರ್ಟ್ ನವೀಕರಣ ಅರ್ಜಿಗೆ ಉತ್ತರ ಬಾರದಿದ್ದಾಗ, ಈ-ಮೈಲ್ ಮುಖಾಂತರವೂ ಮನವಿ ಮಾಡಿಕೊಂಡಿದ್ದರು.
ಜುಲೈ 17ರಂದು ಅರ್ಜಿದಾರರ ವಿರುದ್ದ ಸಿಬಿಐನಲ್ಲಿ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂಬ ಮಾಹಿತಿ ಸ್ಥಳಿಯ ಪಾಸ್‌ಪೋರ್ಟ್ ಕಚೇರಿಯಿಂದ ಬಂದಿತ್ತು.
ಇದಕ್ಕೆ ಉತ್ತರ ನೀಡಿದ್ದ ಅರ್ಜಿದಾರರು, ತಾನು 2002ರಿಂದ ಅಮೇರಿಕಾದಲ್ಲಿ ಕೆಲಸ ಮಾಡುತ್ತಿದ್ದು, ಸಿಬಿಐ ಪ್ರಕರಣದ ಕುರಿತಾಗಿ ತನಗೆ ಯಾವುದೇ ಮಾಹಿತಿಯಿಲ್ಲ. ಈ ಪ್ರಕರಣದ ಮಾಹಿತಿಯನ್ನು ಪಡೆಯಲು ಭಾರತಕ್ಕೆ ಮರಳುವ ಸಲುವಾಗಿ ತಾತ್ಕಾಲಿಕ ಪಾಸ್‌ಪೋರ್ಟ್ ನೀಡುವಂತೆ ಕೇಳಿಕೊಂಡಿದ್ದರು. ಇವರ ಮನವಿಗೆ ಯಾವುದೇ ಸ್ಪಂದನೆ ದೊರಕದ ಕಾರಣ ಕರ್ಕಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಹಿಂದೆಯೂ ಇಂತಹುದೇ ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿದ್ದವು.
2004ರ ರಂಜಿತ್ ಬಜಾಜ್ vs ರೀಜನಲ್ ಪಾಸ್‌ಪೋರ್ಟ್ ಅಥಾರಿಟಿ ಪ್ರಕರಣದಲ್ಲಿ ಆದೇಶ ನೀಡಿದ್ದ ಸುಪ್ರಿಂಕೋರ್ಟ್‌ನ ಜಸ್ಟೀಸ್ ಸ್ವತಂತರ್ ಕುಮಾರ್ ಜೆ ನೇತೃತ್ವದ ಪೀಠವು, “ಅರ್ಜಿದಾರರ ಪ್ರಯಾಣದ ಹಕ್ಕು ಹಾಗೂ ಅವರು ಮಾಡಿದ್ದಾರೆ ಎನ್ನಲಾದ ಅಪರಾಧವು ಎಷ್ಟು ಗುರುತರವಾದದ್ದು ಎಂಬುದನ್ನು ಗಮನಿಸಿ, ಸಮತೋಲನವನ್ನು ಕಾಪಾಡಿಕೊಳ್ಳುವುದು ಪಾಸ್‌ಪೋರ್ಟ್ ಪ್ರಾಧಿಕಾರದ ಕರ್ತವ್ಯ,” ಎಂದು ಹೇಳಿದೆ.
2020ರ ರೋಷನ್ ಮಿನೇಜಸ್ vs ಪಾಸ್‌ಪೋರ್ಟ್ ಅಥಾರಿಟಿ ನಡುವಿನ್ ಪ್ರಕರಣದಲ್ಲಿ ಮುಂಬೈ ಹೈಕೋರ್ಟ್ ನೀಡಿದ ಆದೇಶದಲ್ಲಿ, ಕ್ರಿಮಿನಲ್ ಮೊಕದ್ದಮೆ ನಡೆಯುತ್ತಿರುವ ಕಾರಣಕ್ಕೆ ಪಾಸ್‌ಪೋರ್ಟ್‌ಅವಧಿಯನ್ನು ಮೊಟಕುಗೊಳಿಸುವಂತಿಲ್ಲ, ಎಂದು ಹೈಕೋರ್ಟ್ ಆದೇಶ ನೀಡಿತ್ತು.
ಈಗಿನ ಪ್ರಕರಣದ ಆದೇಶದಲ್ಲಿಯೂ, ಸುಪ್ರಿಂಕೋರ್ಟ್‌ನಲ್ಲಿ ನಡೆದ ಸತ್ವಂತ್ ಸಿಂಗ್ ಸಾವ್ನೆ ಸುಪ್ರ ಪ್ರಕರಣವನ್ನು ಉಲ್ಲೇಖಿಸಿರುವ ಕರ್ನಾಟಕ ಹೈಕೋರ್ಟ್, “ಸಂವಿಧಾನದ 21ನೇ ವಿಧಿಯ ಪ್ರಕಾರ, ರೂಪಿತವಾದ ಕಾನೂನಿನನ್ವಯ ಪ್ರಯಾಣಿಸುವ ಹಕ್ಕು ಎಲ್ಲರಿಗೂ ಇದೆ. ಹಾಗಾಗಿ, ಬಾಕಿ ಇರುವ ಕ್ರಿಮಿನಲ್ ಪ್ರಕರಣದ ನೆಪದಲ್ಲಿ ಪಾಸ್‌ಪೋರ್ಟ್ ನವೀಕರಿಸಲು ನಿರಾಕರಿಸುವ ಮೂಲಕ ಪ್ರಯಾಣದ ಹಕ್ಕನ್ನು ಮೊಟಕುಗೊಳಿಸಲಾಗುವುದಿಲ್ಲ, ಎಂದು ಹೇಳಿದೆ.