ವಿಧಾನಸಭಾ ಚುನಾವಣೆಗೆ ಸಮಯ ಸಮೀಪಿಸುತ್ತಿರುವ ಸಮಯದಲ್ಲೆ ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ಉತ್ತಮ ಪ್ರಭಾವಿ ನಾಯಕನಿಗಾಗಿ ಅನ್ವೇಷಣೆ ನಡೆಸಿದೆ. ಈಗಾಗಲೇ ಭಾರತದ ಮಾಜಿ ಕ್ರಿಕೆಟ್ ತಂಡದ ನಾಯಕ ಸೌರವ್ ಗಂಗೂಲಿ ಅವರೂ ಬಿಜೆಪಿಯಲ್ಲೆ ಇದ್ದಾರೆ. ಆದರೆ ಪ್ರಶ್ನೆ ಏನೆಂದರೆ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿಯ ಪ್ರಮುಖ ಅಸ್ತ್ರವಾಗಿರುವುದರಿಂದ, ಬಿಜೆಪಿಗೆ ಇನ್ನೊಂದು ಮುಖವೂ ಬೇಕೇ? ಆದಾಗ್ಯೂ, ಮೋದಿ ಮತ್ತು ದೀದಿ ನಡುವಿನ ಹೆಚ್ಚಿನ ವಾಕ್ಸಮರ ವನ್ನು ಗಮನಿಸಿದರೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಯು ಪ್ರಧಾನ ಮಂತ್ರಿಯನ್ನು ಎದುರಾಳಿ ಎಂದು ಪರಿಗಣಿಸುತ್ತಿಲ್ಲ. ಏಕೆಂದರೆ ಒಂದು ವೇಳೆ ಬಿಜೆಪಿಯ ಪ್ರದರ್ಶನ ಹೀನಾಯವಾಗಿದ್ದರೆ ಸೋತ ಅವಮಾನವಾಗಲಿದೆ
2014 ರ ಲೋಕಸಭಾ ವಿಜಯದ ನಂತರ, ಬಿಜೆಪಿಯ ಟ್ರಂಪ್ ಕಾರ್ಡ್ ಆಗಿ ಮೋದಿಯವರು ಪಕ್ಷಕ್ಕೆ ಪ್ರಾಥಮಿಕ ನಾಯಕರಿಲ್ಲದ ರಾಜ್ಯಗಳಲ್ಲಿಯೂ ಪ್ರಭಾವಿಯಾಗಿ ಕೆಲಸ ಮಾಡಿದ್ದಾರೆ. 2015 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಎದುರಾಳಿಯನ್ನು ಎದುರಿಸಲು ಬಿಜೆಪಿಯು ‘ಸೆಲೆಬ್ರಿಟಿ’ ಆಗಿದ್ದ ಕಿರಣ್ ಬೇಡಿ ಅವರನ್ನು ನಿಲ್ಲಿಸಿತ್ತು. ಆದರೆ ತುಂಬಾ ಅವಮಾನಕರವಾಗಿ ಸೋಲನ್ನು ಅನುಭವಿಸಿತು. ಆದರೆ ಮತ್ತೊಮ್ಮೆ, ಬಿಜೆಪಿ ಅದೇ ಸಂದಿಗ್ಧತೆಗೆ ಸಿಲುಕಿದೆ ಎಂದು ಕಂಡು ಬರುತ್ತಿದೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಅಥವಾ ಮೋದಿಯವರ ಹೆಸರಿನಲ್ಲಿ ಚುನಾವಣೆಯನ್ನು ಎದುರಿಸುವುದು. ಈ ಹಿಂದೆ ಉತ್ತರಪ್ರದೇಶದಲ್ಲಿ 2017 ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯು
ಪ್ರಮುಖವಾಗಿ ಮೋದಿಯವರನ್ನೆ ಪ್ರತಿಬಿಂಬಿಸಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಿಜೆಪಿಯು ಈ ಹಿಂದೆ ಕೆಲ ರಾಜ್ಯಗಳ ಚುನಾವಣೆಗಳಲ್ಲಿ ಮುಖ್ಯ ಮಂತ್ರಿ ಅಭ್ಯರ್ಥಿಯನ್ನು ಘೋಷಿಸದಿರುವುದು ಕೂಡ ಚುನಾವಣಾ ದೃಷ್ಟಿಯಿಂದ ಉತ್ತಮವಾಗಿ ಕಾರ್ಯನಿರ್ವಹಿಸಿದೆ. 2017 ರ ಉತ್ತರ ಪ್ರದೇಶ ಚುನಾವಣೆಯಲ್ಲಿ, ಬಿಜೆಪಿ ಸಂಪೂರ್ಣವಾಗಿ ಮೋದಿಯವರ ಹೆಸರಿನಲ್ಲಿ ಹೋರಾಡಿತು ಮತ್ತು ಅವರ ಅಲೆಯು ಉತ್ತರ ಪ್ರದೇಶದಲ್ಲಿ ಉತ್ತಮವಾಗಿಯೇ ಕೆಲಸ ಮಾಡಿತು. ಎಷ್ಟೋ ಗ್ರಾಮೀಣ ಪ್ರದೇಶಗಳಲ್ಲಿ ಮತದಾರರಿಗೆ ತಮ್ಮ ಕ್ಷೇತ್ರದ ಅಭ್ಯರ್ಥಿಯ ಹೆಸರು ತಿಳಿದಿರಲಿಲ್ಲವಾದರೂ ಮೋದಿ ಅವರ ಹೆಸರು ಗೊತ್ತಿತ್ತು. ಡಿಮಾನೆಟೈಸೇಷನ್ ನ ವಿಫಲತೆಯ ನಡುವೆಯೂ ಬಿಜೆಪಿ ಉತ್ತರ ಮತಗಳಿಕೆ ಮಾಡಿದೆ. ಇದಕ್ಕೂ ಮುನ್ನ, ಅಸ್ಸಾಂನಲ್ಲಿ ನಡೆದ 2016 ರ ಚುನಾವಣೆಯಲ್ಲಿಯೂ ಕೂಡ ಮೋದಿಯವರ ಹೆಸರು ಹಿಮಾಂತ ಬಿಸ್ವಾ ಶರ್ಮಾ ಅವರಿಗಿಂತಲೂ ಹೆಚ್ಚು ಚಾಲ್ತಿಯಲ್ಲಿತ್ತು. ಮೋದಿ ಅವರ ಹೆಸರಿನ ಮೂಲಕ 2017 ರಲ್ಲಿ ತ್ರಿಪುರದಲ್ಲಿ ಎಡಪಂಥೀಯ ಸರ್ಕಾರವನ್ನು ಸೋಲಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತು.
ಆದರೆ ಬಿಜೆಪಿಯು ದೊಡ್ಡ ಸೋಲು ಕಂಡ ದೊಡ್ಡ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಘಡ, ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿಯು ಹಾಲಿ ಮುಖ್ಯಮಂತ್ರಿಗಳೇ ಕಣದಲ್ಲಿದ್ದರೂ ಪಕ್ಷವೂ ಸೋಲು ಅನುಭವಿಸಿತು. ಒಟ್ಟಾರೆಯಾಗಿ, ನರೇಂದ್ರ ಮೋದಿಯವರನ್ನು ಚುನಾವಣೆಯಾದ್ಯಂತ ಮುಖವಾಡವಾಗಿ ಬಳಸುವ ಬಿಜೆಪಿಯ ತಂತ್ರ ಯಶಸ್ವಿಯೇ ಆಗಿದೆ. ಹಾಗಾದರೆ ಪಶ್ಚಿಮ ಬಂಗಾಳದಲ್ಲಿ ಮಾತ್ರ ಬಿಜೆಪಿಯು ಏಕೆ ಮುಖ್ಯ ಮಂತ್ರಿ ಅಭ್ಯರ್ಥಿಯನ್ನು ಘೋಷಿಸಬೇಕು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಪ್ರಧಾನಿ ಮೋದಿ ಅವರ ಜನಪ್ರಿಯತೆ ಬಂಗಾಳದಲ್ಲಿ ಕಳೆದ ಲೋಕ ಸಭಾ ಚುನಾವಣೆಯಲ್ಲೆ ಎದ್ದು ಕಾಣುತಿತ್ತು. ಅದು ಈಗ ಮತ್ತಷ್ಟು ಹೆಚ್ಚಾಗಿದೆ ಎಂದು ಮೂಲಗಳು ಹೇಳುತ್ತವೆ.

ಪಶ್ಚಿಮ ಬಂಗಾಳವು ಅಸ್ಸಾಂ, ತ್ರಿಪುರ ಮತ್ತು ಉತ್ತರ ಪ್ರದೇಶಗಳಂತೆಯೇ ಕಳೆದ ಚುನಾವಣೆಯಲ್ಲಿದ್ದಂತೆ ಮಾಗಿದೆ ಮತ್ತು ಮತದಾರನು ಬದಲಾವಣೆ ಬಯಸುತಿದ್ದಾನೆ ಎಂದು ಪಕ್ಷ ಭಾವಿಸುತ್ತಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ಹೇಳಿವೆ. ಈಗ ಮಮತಾ ಬ್ಯಾನರ್ಜಿ ಕಠಿಣ ಚುನಾವಣೆಯನ್ನು ಎದುರಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದ್ದು ರಾಜ್ಯದಲ್ಲಿ ಆಳವಾಗಿ ಬೇರೂರಿರುವ ಆಡಳಿತ ವಿರೋಧಿ ಅಲೆ, ಜತೆಗೇ ಪ್ರಮುಖ ನಾಯಕರು ಪಕ್ಷ ತೊರೆಯುತಿದ್ದಾರೆ. ಆದರೂ ಈ ಚುನಾವಣೆಯು ಅಪಾಯಗಳಿಂದ ಮುಕ್ತವಾಗಿಲ್ಲ. ಏಕೆಂದರೆ ಮಮತಾ ಬ್ಯಾನರ್ಜಿ ಯಾವುದೇ ಹೋರಾಟವಿಲ್ಲದೆ ಸುಲಭವಾಗಿ ಬಿಟ್ಟುಕೊಡುವವರಲ್ಲ . ಮುಂದಿನ ಕೆಲವು ತಿಂಗಳುಗಳು ಯಾವ ಪಕ್ಷವು ಯಾವ ಭಾಗದಲ್ಲಿ ಬಲವಾಗಿದೆ ಎಂಬುದನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾಗಿದೆ. ಮೋದಿ ಮತ್ತು ಮಮತಾ ಅವರು ಕೆಲವು ಸಮಯದಿಂದ ಕಹಿಯಾದ ಸಂಬಂದದ ಇತಿಹಾಸವನ್ನು ಹೊಂದಿದ್ದಾರೆ. 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಉಭಯ ನಾಯಕರು ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳನ್ನೂ ಮಾಡಿದ್ದರು. ಪ್ರಧಾನಿ ಮೋದಿ ಅವರು ಇತ್ತೀಚೆಗೆ, ಪಶ್ಚಿಮ ಬಂಗಾಳ ಮುಖ್ಯ ಮಂತ್ರಿ ಮಮತಾ ಅವರು ಇಡೀ ರಾಜ್ಯವನ್ನು ನಾಶಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಈ ರಾಜಕೀಯ ಯುದ್ಧದಲ್ಲಿ ಎರಡು ಕಡೆಯವರು ಹೋರಾಡುತ್ತಿರುವ ತೀವ್ರತೆಯನ್ನು ಗಮನಿಸಿದರೆ ಇಬ್ಬರಿಗೂ ಸೋಲು ರಾಜಕೀಯ ಮುಜುಗರವಾಗುವುದು ಶತಸಿದ್ದ. ಇದು ಮೋದಿ ವರ್ಸಸ್ ದೀದಿ ಹೋರಾಟವನ್ನಾಗಿ ಮಾಡಲು ಬಿಜೆಪಿಯು ಪ್ರಯತ್ನ ನಡೆಸುತ್ತಿದೆ. ಆಧರೆ 2020 ರ ದೆಹಲಿ ಚುನಾವಣೆಯಲ್ಲಿ, ಬಿಜೆಪಿ ಅಂತಿಮವಾಗಿ ಮುಖ್ಯ ಮಂತ್ರಿ ಘೋಷಿಸದೆ ಚುನಾವಣೆಗೆ ಹೋಗಲು ನಿರ್ಧರಿಸಿತು ಮತ್ತು ಮತ್ತೊಮ್ಮೆ ಅರವಿಂದ್ ಕೇಜ್ರಿವಾಲ್ ವಿರುದ್ಧ ಸೋಲನ್ನು ಅನುಭವಿಸಿತು. ಮೋದಿ ಮತ್ತು ಕೇಜ್ರಿವಾಲ್ ಅವರ ರಾಜಕೀಯ ಯುದ್ಧದಲ್ಲಿ, 2015 ರಲ್ಲಿ ಕಿರಣ್ ಬೇಡಿ ಅವರನ್ನು ಮುಂಚೂಣಿ ಪ್ರಚಾರಕ್ಕೆ ಬಳಸಿಕೊಳ್ಳಲಾಗಿತ್ತು. ಅಂತಿಮವಾಗಿ – ದೆಹಲಿಯಲ್ಲಿ ಕೇಜ್ರಿವಾಲ್ ಸ್ಪಷ್ಟ ವಿಜೇತರಾಗಿ ಹೊರ ಹೊಮ್ಮಿದರು. ವಾಸ್ತವವಾಗಿ, ಇದು ಕೇಜ್ರಿವಾಲ್ ಅವರಿಗೆ ಒಂದು ಅಸಾಧಾರಣ ಸಾಧನೆಯಾಗಿದೆ. ಜನಪ್ರಿಯ ಮತ್ತು ಶಕ್ತಿಯುತ ಪ್ರಧಾನ ಮಂತ್ರಿಯ ವಿರುದ್ಧವೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿ ಯಶ ಗಳಿಸುವುದು ಸುಲಭವಲ್ಲ. ಅದರಂತೆಯೇ ಮುಂಬರುವ ಚುನಾವಣೆಯು ಬದಲಾವಣೆಯ ಬಗ್ಗೆರುವುದರಿಂದ ಮುಖ್ಯ ಮಂತ್ರಿ ಘೋಷಣೆ ನಿಜವಾಗಿಯೂ ಅಗತ್ಯವಿಲ್ಲ ಎಂದು ಬಿಜೆಪಿ ನಾಯಕರು ಹೇಳಿದರೆ, ಪಕ್ಷದ ಇತ್ತೀಚಿನ ರಾಜಕೀಯ ವಿಧಾನವು ವ್ಯಕ್ತಿಗಳ ಸುತ್ತ ಹೋರಾಡುತ್ತಿರುವುದು ಕಾಣಿಸುತ್ತಿದೆ. ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮೂರು ದಶಕಗಳಿಂದ ಇದ್ದ ಎಡ ಪಕ್ಷಗಳ ಪಾರುಪತ್ಯವನ್ನು ಹೊಸದಾಗಿ ಅಸ್ತಿತ್ವಕ್ಕೆ ಬಂದ ಪಕ್ಷವೊಂದು ಅಳಿಸಿಹಾಕುವಲ್ಲಿ ಯಶಸ್ವಿ ಆಗಿದೆ. ಇದೀಗ ಆ ಪಕ್ಷದಿಂದ ಅಧಿಕಾರ ಕಸಿದುಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಯಾರು ಗೆಲ್ಲುತ್ತಾರೆ ಎಂಬುದು ಫಲಿತಾಂಶದ ದಿನ ಮಾತ್ರ ತಿಳಿಯಲಿದೆ.