ಮುಂದಿನ ಲೋಕಸಭಾ ಚುನಾವಣೆಯ ಸೆಮಿ ಫೈನಲ್ ಎಂದೇ ಬಿಂಬಿತವಾಗಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ, ಪ್ರತಿಷ್ಟೆಯ ಕಣವಾಗಿ ಮಾರ್ಪಟ್ಟಿದೆ. ಮುಂದಿನ ವರ್ಷ ನಡೆಯಲಿರುವ ಚುನಾವಣೆಗಾಗಿ ಈಗಾಗಲೇ, ತಮ್ಮ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಕೆಲಸ ಬಿಜೆಪಿ, ತೃಣಮೂಲ ಕಾಂಗ್ರೆಸ್ ಕಡೆಯಿಂದ ನಡೆಯುತ್ತಲೇ ಬಂದಿದೆ. ಈಗ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಸಿಎಂ ಅಭ್ಯರ್ಥಿ ಯಾರು ಆಗಬಹುದೆಂಬ ಚರ್ಚೆ ಜೋರಾಗಿಯೇ ನಡೆಯುತ್ತಿದೆ.
ಮಮತಾ ಬ್ಯಾನರ್ಜಿಯನ್ನು ಎದುರಿಸುವ ಶಕ್ತಿ ಇರುವಂತಹ ಮತ್ತು ದೀದಿಯನ್ನು ಮಂಕಾಗಿಸುವ ವರ್ಚಸ್ಸು ಇರುವಂತಹ ಬಿಜೆಪಿ ನಾಯಕರು ಯಾರಿದ್ದಾರೆ ಎನ್ನುವ ಹುಡುಕಾಟ ಆರಂಭವಾಗಿದೆ. ಈ ವಿಚಾರದ ಕುರಿತು ಪಶ್ಚಿಮ ಬಂಗಾಳ ಬಿಜೆಪಿಯಲ್ಲಿ ಆಂತರಿಕ ರಾಜಕೀಯ ನಡೆಯುತ್ತಿದೆಯಾದರೂ, ಪಕ್ಷದ ವರಿಷ್ಠರು ಇನ್ನೂ ಈ ವಿಚಾರದ ಕುರಿತಾಗಿ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಲಿಲ್ಲ.
ಕಳೆದ ಲೋಕಸಭಾ ಚುನಾವಣೆಯಲ್ಲಿ, ಭರ್ಜರಿಯಾಗಿ ವಿಜಯ ಸಾಧಿಸಿದ್ದ ಬಿಜೆಪಿಯ ಪಾಲಿಗೆ ಪಶ್ಚಿಮ ಬಂಗಾಳದಲ್ಲಿ ದೊರೆತಂತಹ ಸೀಟುಗಳ ಮಹತ್ವದ್ದಾಗಿದ್ದವು. ಕಾರಣ, ಈ ವರೆಗೆ ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಅಂಬೆಗಾಲಿಡುತ್ತಿದ್ದ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಇದ್ದಕ್ಕಿದ್ದಂತೆ ಪ್ರೌಢಾವಸ್ಥೆಗೆ ಬೆಳೆದು ನಿಂತಿದ್ದು ಅಲ್ಲಿನ ಬಿಜೆಪಿ ನಾಯಕರಿಗೆ ಹೊಸ ಹುರುಪನ್ನು ತಂದುಕೊಟ್ಟಿದೆ. ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿ ಸೀಟುಗಳನ್ನು ಗೆದ್ದುಕೊಂಡಲ್ಲಿ ದೀದಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಬಹುದು ಎಂಬ ಆಶ್ವಾಸನೆ ಬಿಜೆಪಿ ನಾಯಕರಲ್ಲಿ ಮೂಡಿದೆ.
ಯಾರು ಸಂಭಾವ್ಯ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಗಳು?
1. ದಿಲೀಪ್ ಘೋಷ್
ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ದಿಲೀಪ್ ಘೋಷ್ ಸದ್ಯದ ಪರಿಸ್ಥಿತಿಯಲ್ಲಿ ಮುಂಚೂಣಿಯಲ್ಲಿರುವ ನಾಯಕ. 2015ರಿಂದ ಪ.ಬಂ.ನಲ್ಲಿ ಪಕ್ಷದ ಚುಕ್ಕಾಣಿ ಹಿಡಿದಿರುವ ಇವರು, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಲೋಕಸಭಾ ಸದಸ್ಯರೂ ಆಗಿರುವ ದಿಲೀಪ್ ಘೋಷ್, ಆರ್‌ಎಸ್‌ಎಸ್‌ನ ಸದಸ್ಯರಾಗಿದ್ದು, ಬಿಜೆಪಿಯಲ್ಲಿ ಅಧಿಕಾರ ಪಡೆಯಲು ಬೇಕಾಗಿರುವ ಪ್ರಮುಖ ಅರ್ಹತೆ ಕೂಡಾ ಇದಾಗಿರುವುದರಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ರೇಸ್‌ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಆದರೆ, ಕಳೆದೆರಡು ವರ್ಷಗಳಲ್ಲಿ ಅವರು ನೀಡಿರುವಂತಹ ವಿವಾದಾತ್ಮಕ ಹಾಗೂ ಪ್ರಚೋದನಾಕಾರಿ ಹೇಳಿಕೆಗಳು, ಪ.ಬಂ. ಬಿಜೆಪಿಯಲ್ಲಿಯೇ ಘೋಷ್ ವಿರುದ್ದ ಅಪಸ್ವರ ಏಳುವಂತೆ ಮಾಡಿವೆ. ಘೋಷ್-ವಿರೋಧಿ ಪಡೆಯು ಕೂಡಾ ಅವರ ವಿರುದ್ದ ಕೆಲಸ ಮಾಡುವ ಸಂಭವವಿರುವುದು ಮಾತ್ರ ಘೋಷ್ ಅವರಿಗೆ ನಕಾರಾತ್ಮಕವಾಗಿ ಪರಿಣಮಿಸಬಹುದು.
2. ಮುಕುಲ್ ರಾಯ್
ದಿಲೀಪ್ ಘೋಷ್ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮರು ಆಯ್ಕೆಯಾಗುವಾಗ ಅವರಿಗೆ ಹತ್ತಿರದ ಪ್ರತಿಸ್ಪರ್ಧಿಯಾಗಿದ್ದವರು ಮುಕುಲ್ ರಾಯ್. ಈ ಹಿಂದೆ ತೃಣಮೂಲ ಕಾಂಗ್ರೆಸ್‌ನಲ್ಲಿ ಮಮತಾ ಬ್ಯಾನರ್ಜಿ ಅವರ ಖಾಸಾ ವ್ಯಕ್ತಿಯಾಗಿದ್ದ ಮುಕುಲ್ ರಾಯ್ 2017ರಲ್ಲಿ ಬಿಜೆಪಿ ಸೇರಿಕೊಂಡಿದ್ದರು. ಇವರ ಸಂಘಟನಾ ಚತುರತೆ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಿಚ್ಚಳವಾಗಿ ಕಂಡು ಬಂದಿತ್ತು. ದಿಲೀಪ್ ಘೋಷ್ ಅವರು ಸ್ವಲ್ಪ ಎಡವಿದರೂ ಅವರ ಸ್ಥಾನಕ್ಕೆ ಚಂಗನೆ ನೆಗೆಯಬಲ್ಲ ಶಕ್ತಿ ಮತ್ತು ಯುಕ್ತಿ ಇರುವಂತಹ ರಾಜಕಾರಣಿ ಮುಕುಲ್.
ಮುಕುಲ್ ರಾಯ್‌ಗೆ ಪ.ಬಂ. ರಾಜ್ಯ ಬಿಜೆಪಿಯಲ್ಲಿ ಯಾವುದೇ ಹುದ್ದೆ ನೀಡಲಾಗಿಲ್ಲ. ಅವರ ಇರುವಿಕೆಯನ್ನು ಪಕ್ಷ ಸಮರ್ಥವಾಗಿ ಬಳಸಿಕೊಂಡಿದೆಯಾದರೂ ಅವರಿಗೆ ನೀಡಬೇಕಾದ ಸೂಕ್ತ ಸ್ಥಾನಮಾನವನ್ನು ಇನ್ನೂ ನೀಡಿಲ್ಲ. ದಿಲೀಪ್ ಘೋಷ್ ಅವರ ಪರವಾಗಿರುವ ನಾಯಕರ ತುಳಿತಕ್ಕೆ ಒಳಗಾಗಿ ಬಿಜೆಪಿಯಲ್ಲಿ ಮೂಲೆಗುಂಪಾಗುವ ಭಯ ಅವರನ್ನು ಖಂಡಿತವಾಗಿ ಕಾಡಲಿದೆ. ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತಲ್ಲಿ ಮಾತ್ರ ಅವರು ಸಿಎಂ ಕ್ಯಾಂಡಿಡೇಟ್ ಆಗುವ ಸಾಧ್ಯತೆಗಳಿವೆ.
3. ಬಾಬುಲ್ ಸುಪ್ರಿಯೋ
ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಕೂಡಾ ಪ.ಬಂ. ರಾಜಕಾರಣದಲ್ಲಿ ಮುಂಚೂಣಿಯಲ್ಲಿರುವ ನಾಯಕ. ಕೇವಲ ಮುಖ್ಯಮಂತ್ರಿ ಪದವಿ ಮಾತ್ರವಲ್ಲದೇ, ರಾಜ್ಯ ಬಿಜೆಪಿ ಅಧ್ಯಕ್ಷ ಗಾದಿಯ ಮೇಲೂ ಇವರ ಕಣ್ಣಿದೆ. ಎರಡು ಬಾರಿ ಸಂಸತ್ತು ಪ್ರವೇಶಿಸಿರುವ ಬಾಬುಲ್, ಈ ವಿಚಾರದಲ್ಲಿ ದಿಲೀಪ್ ಘೋಷ್‌ಗಿಂತಲೂ ಸೀನಿಯರ್. ಏಕೆಂದರೆ, ದಿಲೀಪ್ ಘೋಷ್ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದು 2019ರ ಲೋಕಸಭಾ ಚುನಾವಣೆಯಲ್ಲಿ.
ದಿಲೀಪ್ ಘೋಷ್ ಅವರ ಪ್ರಚೋದನಾತ್ಮ ಮತ್ತು ವಿವಾದಾತ್ಮ ಹೇಳಿಕೆಗಳನ್ನು ಬಹಿರಂಗವಾಗಿ ಖಂಡಿಸುವ ಧೈರ್ಯ ತೋರಿದ ವ್ಯಕ್ತಿ ಇವರು. ಸಿಎಎ ವಿರುದ್ದದ ಹೋರಾಟಗಾರರನ್ನು ನಾಯಿಗಳಂತೆ ಹೊಡೆದುರುಳಿಸಬೇಕು ಎಂಬ ಘೋಷ್ ಹೇಳಿಕೆಯನ್ನು ಬಹಿರಂಗವಾಗಿ ಖಂಡಿಸಿ ಘೋಷ್ ಕೆಂಗಣ್ಣಿಗೆ ಪಾತ್ರರಾಗಿದ್ದರು. “ಘೋಷ್ ಅವರ ಹೇಳಿಕೆಗೂ ಬಿಜೆಪಿಗೂ ಸಂಬಂಧವಿಲ್ಲ. ಅವರ ಕಲ್ಪನೆಯ ಮಾತುಗಳನ್ನು ಅವರು ಹೇಳಿದ್ದಾರೆ,” ಎಂದು ಬಾಬುಲ್ ಉತ್ತರ ನೀಡಿದ್ದರು.
ಇವರಿಗೆ ಪ್ರಬಲ ಪ್ರತಿಸ್ಪರ್ಧಿ ಎಂದರೆ ದಿಲೀಪ್ ಘೋಷ್. ಘೋಷ್ ವಿರುದ್ದದ ಆಂತರಿಕ ರಾಜಕಾರಣದಲ್ಲಿ ಬಾಬುಲ್ ಸುಪ್ರಿಯೋ ಎಷ್ಟರ ಮಟ್ಟಿಗೆ ಸಫಲರಾಗುತ್ತಾರೆ ಎಂಬುದನ್ನು ಕಾದು ನೋಡಬೇಕು.
4. ತಥಾಗತ ರಾಯ್
ಮೆಘಾಲಯದ ಗವರ್ನರ್ ಆಗಿ ಈಗಷ್ಟೇ ತಮ್ಮ ಅವಧಿ ಮುಗಿಸಿರುವ ರಾಯ್ ಮತ್ತೆ ಮುಖ್ಯವಾಹಿನಿ ರಾಜಕಾರಣಕ್ಕೆ ಮರಳುವ ಇಚ್ಚೆ ವ್ಯಕ್ತ ಪಡಿಸಿದ್ದಾರೆ. ಪ.ಬಂ.ನಲ್ಲಿ ಬಿಜೆಪಿಯ ಹಿಡಿತ ಹೆಚ್ಚುತ್ತಿರುವ ಕಾರಣಕ್ಕಾಗಿಯೇನೋ, ಮತ್ತೆ ರಾಜಕಾರಣದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸುವ ಹಂಬಲ ವ್ಯಕ್ತಪಡಿಸಿದ್ದಾರೆ.
“ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ನಂತರ ಮತ್ತೆ ರಾಜಕಾರಣಕ್ಕೆ ಮರಳುವ ಇಚ್ಚೆಯಿದೆ. ಪ.ಬಂ.ಗೆ ವಾಪಾಸ್ಸಾದ ಮೇಲೆ ಇದರ ಕುರಿತು ಪಕ್ಷದ ವರಿಷ್ಟರೊಂದಿಗೆ ಚರ್ಚೆಸುತ್ತೇನೆ. ಇದನ್ನು ಒಪ್ಪುವುದೋ ಬಿಡುವುದೋ ಅವರಿಗೆ ಬಿಟ್ಟಿದ್ದು,” ಎಂದು ರಾಯ್ ಹೇಳಿದ್ದಾರೆ.
2002ರಿಂದ 2006ರವರೆಗೆ ಪ.ಬಂ. ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ರಾಯ್, ಹಿರಿಯ ರಾಜಕಾರಣಿ. ಬಿಜೆಪಿಯ ಈಗಿನ ಘಟಾನುಘಟಿಗಳ ನಡುವಿನ ಅಂತರ್ಯುದ್ದವನ್ನು ಶಮನಗೊಳಿಸಲು ಬಿಜೆಪಿ ರಾಚ್ಟ್ರ ನಾಯಕರು ಅನಾಮತ್ತಾಗಿ ಇವರನ್ನೇ ಸಿಎಂ ಅಭ್ಯರ್ಥಿ ಎಂದು ಘೋಷಿಸಿದರೂ ಆಶ್ಚರ್ಯವೇನಿಲ್ಲ. ಆದರೆ, ಎಲ್ಲದಕ್ಕೂ ಬಿಜೆಪಿ ಹೈಕಮಾಂಡ್ ಸೈ ಎಂದರೆ ಮಾತ್ರ ಇದು ಸಾಧ್ಯ.
ಇನ್ನು ಕೊನೇಯ ಸಾಧ್ಯತೆ ನಿಜಕ್ಕೂ ಆಶ್ಚರ್ಯಕರವಾಗಿರುವಂತದ್ದು. ಈವರೆಗೆ ಬಿಜೆಪಿಯೊಂದಿಗೆ ನೇರವಾಗಿ ಗುರುತಿಸಿಕೊಂಡವರೂ ಅಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಇವರಿಗೆ ಸಿಕ್ಕಿರುವ ಮಾನ್ಯತೆ, ಪ.ಬಂ.ದಲ್ಲಿ ಇವರು ಬಿಜೆಪಿ ಪಕ್ಷವನ್ನು ಸೇರುತ್ತಾರೆ ಎಂಬ ಪುಕಾರು ದಟ್ಟವಾಗಿ ಹಬ್ಬುವಂತೆ ಮಾಡಿದೆ. ಒಂದು ವೇಳೆ ಇವರು ಬಿಜೆಪಿಗೆ ಸೇರಿದರೆ ಸಿಎಂ ರೇಸ್‌ನಲ್ಲಿ ಅಚ್ಚರಿಯ ಆಯ್ಕೆಯಾದರೂ ಆಗಬಹುದು.
5. ಸೌರವ್ ಗಂಗೂಲಿ
ಸೌರವ್ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷಗಾದಿಯನ್ನು ಅಲಂಕರಿಸಿದ ದಿನದಿಂದಲೇ ಅವರು ಬಿಜೆಪಿ ಸೇರುತ್ತಾರೆಂಬ ಪುಕಾರು ಹಬ್ಬಿತ್ತು. ಪ.ಬಂ.ನಲ್ಲಿ ಗಂಗೂಲಿಗಿರುವ ವರ್ಚಸ್ಸು ಯಾವುದೇ ಬಿಜೆಪಿ ರಾಜಕಾರಣಿಗಳಿಗಿಂತ ಕಡಿಮೆಯಿಲ್ಲ. ಸೌರವ್ ದಾದ ಬಿಜೆಪಿ ಸೇರಿಕೊಂಡಲ್ಲಿ ಬಿಜೆಪಿ ಆನೆ ಬಲ ಸಿಕ್ಕಂತಾಗುವುದು ನೂರಕ್ಕೆ ನೂರರಷ್ಟು ಸತ್ಯ.
ಆದರೆ, ಇತ್ತೀಚಿನ ವರದಿಗಳ ಪ್ರಕಾರ ಗಂಗೂಲಿಗೆ ರಾಜಕಾರಣಕ್ಕಿಳಿಯುವ ಯಾವುದೇ ಇಚ್ಚೆಯಿಲ್ಲ. ಆದರೆ, ಒಂದು ವೇಳೆ ಇವರು 2021ರ ಚುನಾವಣೆಯ ವೇಳೆಗೆ ಬಿಜೆಪಿ ಸೇರಿದ್ದಲ್ಲಿ, ಮುಖ್ಯಮಂತ್ರಿ ಹುದ್ದೆಯ ಅಚ್ಚರಿಯ ಆಯ್ಕೆಯಾದರೂ ಯಾವುದೇ ಆಶ್ಚರ್ಯವಿಲ್ಲ.
ಈ ಎಲ್ಲಾ ಸಾಧ್ಯತೆಗಳನ್ನು ಹೊರತುಪಡಿಸಿ, ಪ.ಬಂ.ನಲ್ಲಿ ಮಮತಾ ಬ್ಯಾನರ್ಜಿಯ ವರ್ಚಿಸ್ಸಿಗೆ ತಕ್ಕಂತಹ ಬಿಜೆಪಿ ಅಭ್ಯರ್ಥಿ ದೊರೆಯದಿದ್ದಲ್ಲಿ, ಸಿಎಂ ಅಭ್ಯರ್ಥಿಯನ್ನು ಚುನಾವಣೆಗು ಮುನ್ನಾ ಘೋಷಿಸದೇ ನೇರವಾಗಿ ಹಾಗೂ ಸಂಘಟಿತರಾಗಿ ಚುನಾವಣೆಯನ್ನು ಎದುರಿಸಿ, ನಂತರ ಸಿಎಂ ಯಾರೆಂದು ಘೋಷಿಸುವ ಕಾರ್ಯತಂತ್ರವನ್ನೂ ಬಿಜೆಪಿ ಅನುಸರಿಸಬಹುದು.