ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ಆರು ತಿಂಗಳು ಇರುವಂತೆಯೇ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಬಿಜೆಪಿ ಹೆಡೆಮುರಿ ಕಟ್ಟಲು ಕಾಂಗ್ರೆಸ್ ಸೇರಿದಂತೆ ಟಿಎಂಸಿ, ಎಡ ಪಕ್ಷಗಳು ಜೊತೆಗೂಡುತ್ತಿವೆ. ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿಯವರು ಸಾಲು ಸಾಲು ಬೃಹತ್ ಸಮಾವೇಶಗಳನ್ನು ಆಯೋಜಿಸುತ್ತಿದ್ದಾರೆ.
ಇಲ್ಲಿ ವೇದಿಕೆ ಮೇಲೆ ಸೇರುತ್ತಿರುವ ಕಾಂಗ್ರೆಸ್, ಎಡ ಪಕ್ಷಗಳು ಮೈತ್ರಿಯಾಗಿ ಚುನಾವಣೆ ಎದುರಿಸುವುದಾಗಿ ಘೋಷಿಸುವ ಸಾಧ್ಯತೆ ಇದೆ. ಇದರ ನೇತೃತ್ವವನ್ನು ದೀದಿಯೇ ವಹಿಸಿದ್ದು; ಇದೀಗ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಮೋದಿ ವರ್ಸಸ್ ಮಮತಾ ಬ್ಯಾನರ್ಜಿ ಎಂಬ ಕೂಗು ಪ್ರತಿಧ್ವನಿಸುತ್ತಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಾಂಗ್ರೆಸ್, ಟಿಎಂಸಿ ಸೇರಿದಂತೆ ಎಡ ಪಕ್ಷಗಳು ಒಟ್ಟಿಗೆ ಚುನಾವಣೆ ಎದುರಿಸಲು ಮುಂದಾಗುವ ಸಾಧ್ಯತೆ ಇದೆ. ಹೀಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯ ಜಿದ್ದಾಜಿದ್ದಿ ಭಾರೀ ಕುತೂಹಲ ಕೆರಳಿಸಿದೆ. ಖುದ್ದು ಸಿಎಂ ಮಮತಾ ಬ್ಯಾನರ್ಜಿಯವರೇ ಕಾಂಗ್ರೆಸ್ ಮತ್ತು ಎಡ ಪಕ್ಷಗಳ ಜತೆಗೆ ಸೇರಿ ಚುನಾವಣೆಗೆ ಹೋಗುವುದಾಗಿ ಹಿಂದೊಮ್ಮೆ ತಿಳಿಸಿದ್ದರು. ಈ ವಿಚಾರವೀಗ ಮತ್ತೆ ಮುನ್ನಲೆಗೆ ಬಂದಿದ್ದು, ಮೋದಿ ನೇತೃತ್ವ ಎನ್ಡಿಎ ಪಕ್ಷಗಳಲ್ಲಿ ಸಣ್ಣ ಆತಂಕ ಶುರುವಾಗಿದೆ.
ಇತ್ತೀಚೆಗೆ ಕೋಲ್ಕತ್ತಾದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಪಶ್ಚಿಮ ಬಂಗಾಳ ಸಿಎಂ ‘ದೀದಿ’ ಆಯೋಜಿಸಿದ್ದ ಈ ವಿಪಕ್ಷಗಳ ಸಮಾವೇಶದಲ್ಲಿ ಕಾಂಗ್ರೆಸ್ ಸೇರಿದಂತೆ ಎಡ ಪಕ್ಷಗಳು ಭಾಗಿಯಾಗಿದ್ದವು. ಮೋದಿ ಸರ್ಕಾರದಿಂದ ದೇಶವನ್ನು ರಕ್ಷಿಸಬೇಕಿದೆ. ಸಂಯುಕ್ತ ಭಾರತ ಕಟ್ಟಲು ಮೈತ್ರಿಕೂಟ ಅತ್ಯಗತ್ಯ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಸಲುವಾಗಿ; ಮೋದಿ ಸರ್ಕಾರ ಸೋಲಿಸುವ ಕಾರಣಕ್ಕಾಗಿಯೇ ನಾವೆಲ್ಲಾ ಒಗ್ಗೂಡಬೇಕಿದೆ ಎಂದಿದ್ದರು ದೀದಿ.
Also Read: ಆರು ತಿಂಗಳಿಗೂ ಮುನ್ನವೇ ಚುನಾವಣೆಗೆ ಅಣಿಯಾಗುತ್ತಿರುವ ಪಶ್ಚಿಮ ಬಂಗಾಳ
ಸದ್ಯ ಮಮತಾ ಬ್ಯಾನರ್ಜಿಯವರೇ ಒಂದೆಜ್ಜೆ ಮುಂದೆ ಹೋಗಿ ನಾವು ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೇಗಾದರೂ ಸರಿಯೇ ‘ಮೋದಿ ಸರ್ಕಾರ ಹಠಾವೋ’ಎಂಬ ಕೂಗು ಮತ್ತಷ್ಟು ಬಲಗೊಳಿಸಬೇಕು ಎಂದು ದೀದಿ ಬಿಜೆಪಿ ವಿರುದ್ಧ ಸಾಲು ಸಾಲು ಸಮಾವೇಶ ಆಯೋಜಿಸುತ್ತಿದ್ದಾರೆ.
ಈ ಹಿಂದೆಯೂ ಲೋಕಸಭಾ ಚುನಾವಣೆ ಹೊತ್ತಲ್ಲಿಯೇ ಆಡಳಿತರೂಢ ಬಿಜೆಪಿ ಸರ್ಕಾರವನ್ನು ಸೋಲಿಸಲು ಪ್ರಾದೇಶಿಕ ಪಕ್ಷಗಳು ಒಂದಾಗಿದ್ದವು. ಬಿಜೆಪಿಯನ್ನು ಹೇಗಾದರೂ ಮಾಡಿ ಕಟ್ಟಿ ಹಾಕಲೇಬೇಕೆಂದು ವಿಪಕ್ಷಗಳನ್ನು ಒಗ್ಗೂಡಿಸಿದ್ದ ಟಿಎಂಸಿ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಮೆಗಾ ರ‍್ಯಾಲಿ ನಡೆಸಿದ್ದರು.
ಅಂದಿನ ಸಮಾವೇಶದಲ್ಲಿ ಕರ್ನಾಟಕದಿಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಸಿಎಂ ಕುಮಾರಸ್ವಾಮಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಂಡಿದ್ದರು. ಈಗ ಮತ್ತೆ ಪಶ್ಚಿಮ ಬಂಗಾಳದಲ್ಲಿ ಹೀಗೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಮತ್ತು ಎಡ ಪಕ್ಷಗಳೊಂದಿಗೆ ಕೈಜೋಡಿಸುವ ಸಾಧ್ಯತೆ ಇದೆ.