ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಗೆಲ್ಲಲು ನಾನಾ ರೀತಿಯ ರಾಜಕೀಯ ತಂತ್ರಗಾರಿಕೆ , ಕಸರತ್ತಿನಲ್ಲಿ ತೊಡಗಿರುವ ಬಿಜೆಪಿ ಅಲ್ಲಿನ ಹಿಂದೂ ಮತಗಳನ್ನು ಒಗ್ಗೂಡಿಸುವತ್ತ ಯೋಜಿಸುತ್ತಿದೆ. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ ಷಾ ಅವರು ಪ್ರತೀ ತಿಂಗಳು ಅಥವಾ ಅದಕ್ಕೂ ಮುನ್ನ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ ಪಕ್ಷದ ಬಲವರ್ಧನೆಗೆ ಶ್ರಮಿಸುತಿದ್ದಾರೆ. ಬಲವರ್ಧನೆ ಎಂದರೆ ಇಲ್ಲಿ ಹಿಂದೂ ಮತಗಳನ್ನೆ ಮತ ಬ್ಯಾಂಕ್ ಆಗಿ ಸೃಷ್ಟಿಸುವತ್ತ ಬಿಜೆಪಿ ಮುಂದಾಗಿದೆ.
ಒಂದೆಡೆ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಅವರು ಉತ್ತರ ಭಾರತದ ರಾಷ್ಟ್ರೀಯತೆಯನ್ನು ಬಂಗಾಳದಲ್ಲಿ ಹೇರಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಆರೋಪವಕ್ಕೆ ಕೌಂಟರ್ ನೀಡಲು ಬಿಜೆಪಿ ರಾಜ್ಯದ ಪ್ರಮುಖ ಮಠ ಮತ್ತು ಹಿಂದೂ ಸಂಘಟನೆಗಳನ್ನು ಸೆಳೆಯಲು ಯತ್ನಿಸುತ್ತಿದೆ. ಇದಕ್ಕಾಗಿ ಸಂಖ್ಯಾತ್ಮಕವಾಗಿ ಬಲವಾಗಿರುವ ಧಾರ್ಮಿಕ ಮತ್ತು ಸಾಮಾಜಿಕ ಗುಂಪುಗಳಾದ ಇಸ್ಕಾನ್, ರಾಮಕೃಷ್ಣ ಮಿಷನ್ ಮತ್ತು ಮಾಟುವಾ ಸಮುದಾಯದವರ ಬೆಂಬಲ ಪಡೆಯಲು ಪಕ್ಷವು ವಿಶೇಷ ಸಮಿತಿಯನ್ನು ರಚಿಸಿದೆ. ಈ ಸಂಘಟನೆಗಳು ರಾಜ್ಯದ 294 ವಿಧಾನಸಭಾ ಸ್ಥಾನಗಳಲ್ಲಿ 80 ಕ್ಕೂ ಹೆಚ್ಚು ಮತ್ತು ರಾಜ್ಯದ 3 ಕೋಟಿ ಮತದಾರರ ಮೇಲೆ ಪ್ರಭಾವ ಹೊಂದಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಿಜೆಪಿ ರಚಿಸಿರುವ ಎಂಟು ಸದಸ್ಯರ ಸಮಿತಿಯು ಈ ಸಂಘಟನೆಗಳ ಮುಖಂಡರೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತದೆ ಮತ್ತು ಧಾರ್ಮಿಕವಾಗಿ ಮನವಿಯ ಮೂಲಕ ಬೆಂಬಲವನ್ನು ಪಡೆಯಲು ಯೋಜಿಸಿದೆ. ಧಾರ್ಮಿಕ ಪ್ರಚಾರಕ್ಕಾಗಿ ಪಕ್ಷವು ಇಂತಹ ಸಮಿತಿಯನ್ನು ರಚಿಸಿದ ಮೊದಲ ರಾಜ್ಯ ಬಂಗಾಳ ಆಗಿದ್ದು ಈ ಸಮಿತಿಯ ಸಂಚಾಲರಾಗಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಜ್ರಾ ಅವರನ್ನು ನೇಮಿಸಲಾಗಿದ್ದು ಬಂಗಾಳದಲ್ಲಿ ಪಕ್ಷದ ಮುಖಂಡ ರವೀಂದ್ರ
ಬೋಸ್ ಸದಸ್ಯರಾಗಿದ್ದಾರೆ. ಕಳೆದ ವಾರ ಸಮಿತಿಯು ರಾಮಕೃಷ್ಣ ಮಿಷನ್, ಹಿಂದೂ ಮಿಲನ್ ಸಮಾಜ, ಕೀರ್ತಾನಿಯಾ ಸಮಾಜ, ಇಸ್ಕಾನ್ ಮತ್ತು ಭಾರತ್ ಸೇವಾಶ್ರಮ ಸಂಘದ ಮುಖಂಡರನ್ನು ಭೇಟಿ ಮಾಡಿ ಬೆಂಬಲ ನೀಡಲು ಮನವಿ ಮಾಡಿಕೊಂಡಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕಳೆದ ಡಿಸೆಂಬರ್ 9 ಮತ್ತು 10 ರಂದು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಅವರು ದಕ್ಷಿಣ 24 ಪರಗಣಗಳಲ್ಲಿನ ರಾಮಕೃಷ್ಣ ಮಿಷನ್ಗೆ ನೀಡಿದ ಭೇಟಿ ಯನ್ನು ಸಮಿತಿಯೇ ಆಯೋಜಿಸಿತ್ತು. ಈ ಕುರಿತು ಮಾತನಾಡಿದ ಹಜ್ರಾ, ಬಂಗಾಳದಲ್ಲಿ 100 ಕ್ಕೂ ಹೆಚ್ಚು ಹಿಂದೂ ಪಂಗಡಗಳಿವೆ ಆದರೆ ನಾವು ಪ್ರಮುಖರತ್ತ ಗಮನ ಹರಿಸುತ್ತಿದ್ದೇವೆ. ಹಿಂದೂ ಸಮುದಾಯದ ಮೇಲೆ ಪ್ರಭಾವ ಬೀರುವ 20-22 ಧಾರ್ಮಿಕ ಸಂಸ್ಥೆಗಳನ್ನು ನಾವು ಗುರುತಿಸಿದ್ದೇವೆ , ಬಂಗಾಳದಲ್ಲಿ ಬೃಹತ್ ನೆಲೆಯನ್ನು ಹೊಂದಿರುವ ಇಸ್ಕಾನ್ ಮತ್ತು ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ರಾಮಕೃಷ್ಣ ಮಿಷನ್ , ದಕ್ಷಿಣ ಬಂಗಾಳದ ಅನೇಕ ಜಿಲ್ಲೆಗಳಲ್ಲಿ ಪ್ರಭಾವಿ ಆಗಿರುವ ವೈಷ್ಣವ ಮುಖಂಡರನ್ನೂ ಭೇಟಿ ಮಾಡಿದ್ದೇವೆ ಎಂದರು.
ಕಳೆದ ಎರಡು ತಿಂಗಳಲ್ಲಿ, ಬಿಜೆಪಿಯ ಹಿರಿಯ ನಾಯಕರು ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ 12 ಬಾರಿ ಭೇಟಿ ನೀಡಿದ್ದಾರೆ – ಅಮಿತ್ ಷಾ ಅವರಿಂದ ಕೈಲಾಶ್ ವಿಜಯವರ್ಗಿಯವರೆಗೆ, ಪ್ರಚಾರಕ್ಕಾಗಿ ಬಂಗಾಳಕ್ಕೆ ಭೇಟಿ ನೀಡುವ ಯಾವುದೇ ಕೇಂದ್ರ ನಾಯಕರು ಮೊದಲು ಈ ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ 2017 ರಲ್ಲಿ ಆರ್ಎಸ್ಎಸ್ ಮತ್ತು ವಿಎಚ್ಪಿ ಯು ಬಂಗಾಳದಲ್ಲಿ ಮತ ಕ್ರೋಢಿಕರಣ ಮಾಡಲು ಬೃಹತ್ ರಾಮ ನವಮಿ ಆಚರಣೆಯನ್ನು ಆಯೋಜಿಸಿದಾಗ ಉತ್ತರ ಭಾರತದ ರಾಷ್ಟ್ರೀಯತೆಯನ್ನು ಬಂಗಾಳಕ್ಕೆ ತಂದಿರುವ ವಿಷಯವನ್ನು ಮಮತಾ ಟೀಕಿಸಿದ್ದರು. ಏಕೆಂದರೆ ಉತ್ತರ ಭಾರತದಂತೆ ಬಂಗಾಳದಲ್ಲಿ ಶ್ರೀರಾಮನನ್ನು ಪೂಜಿಸುವ ಹಿಂದೂ ಸಮುದಾಯ ಕಡಿಮೆ ಇದೆ. ಇದಕ್ಕೆ ಪ್ರತಿತಂತ್ರ ಹೆಣೆದ ಬಿಜೆಪಿ ನಂತರ ಪ್ರತೀ ಬೂತ್ ಮಟ್ಟದಲ್ಲೂ ದುರ್ಗಾ ಪೂಜೆಯನ್ನು ಆಯೋಜಿಸಲು ತೊಡಗಿತು. ಮೊದಲು ಬಿಜೆಪಿ ಕಾರ್ಯಕರ್ತರು ದೇಶದ ಎಲ್ಲ ಭಾಗಗಳಲ್ಲೂ ಕೂಗುವ ಜೈ ಶ್ರೀರಾಮ್ ಘೋಷಣೆಗೆ ಪ್ರತಿಯಾಗಿ ಮಮತಾ ಅವರು ಸಭೆಗಳಲ್ಲಿ ಜೈ ಕಾಳಿ ಮಾ ಎಂಬ ಘೋಷಣೆ ಹೇಳುತಿದ್ದರು. ನಂತರ ಬಿಜೆಪಿ ಕಾರ್ಯತಂತ್ರ ಬದಲಾಗಿದ್ದು ಅವರೂ ಜೈ ಕಾಳಿ ಮಾ ಘೋಷಣೆ ಹೇಳತೊಡಗಿದರು.

ಪ್ರತಿ ಜಿಲ್ಲೆಯಲ್ಲಿ ಭಾರತ್ ಸೇವಾಶ್ರಮ, ಅನುಕುಲ್ ಠಾಕೂರ್ ಆಶ್ರಮ, ರಾಮಕೃಷ್ಣ ಮಿಷನ್ ಮತ್ತು ಇತರ ಸಂಸ್ಥೆಗಳ ಶಾಖೆಗಳ ಜತೆ ಬಿಜೆಪಿ ಸ್ಥಳೀಯ ನಾಯಕರು ಸಂಪರ್ಕ ಹೊಂದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಬೋಸ್ ಅವರು ನಾವು ಮಠ ಮತ್ತು ದೇವಾಲಯಗಳ ಮುಖ್ಯಸ್ಥರನ್ನು ಭೇಟಿಯಾಗುತ್ತಿದ್ದೇವೆ ಮತ್ತು ಬಂಗಾಳಿ ಹಿಂದೂಗಳನ್ನು ಒಂದುಗೂಡಿಸುವಲ್ಲಿ ಅವರ ಬೆಂಬಲವನ್ನು ಕೋರುತ್ತಿದ್ದೇವೆ. ಅವರು ಆ ಸಂದೇಶವನ್ನು ಹೇಗೆ ಜನರಿಗೆ ತಲುಪಿಸಬಹುದು ಎಂಬುದು ಅವರಿಗೆ ಬಿಟ್ಟದ್ದು. ಮತದಾರರಲ್ಲಿ ಬಿಜೆಪಿಯು ಬಂಗಾಳಿ ಹಿಂದೂಗಳು ನಂಬಬಹುದಾದ ಪಕ್ಷ ಎಂಬ ಸಂದೇಶವನ್ನು ರವಾನಿಸುತ್ತದೆ ಎಂದು ಅವರು ಹೇಳಿದರು. ಅವರ
ಪ್ರಕಾರ ರಾಜ್ಯದಲ್ಲಿರುವ 5,000 ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳು ಬಂಗಾಳಿ ಸಮಾಜದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತವೆ. 2011 ರಲ್ಲಿ ಇಸ್ಕಾನ್ ಮಮತಾ ಬ್ಯಾನರ್ಜಿ ಪರ ಮತ ಚಲಾಯಿಸುವಂತೆ ತನ್ನ ಭಕ್ತರಿಗೆ ಮನವಿ ಮಾಡಿಕೊಂಡಿತ್ತು. ರಾಜ್ಯದ ಸಂಸ್ಕೃತಿ ಇಲಾಖೆಯು ಜನವರಿಯಲ್ಲಿ ಬಂಗಾಳದಲ್ಲಿ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125 ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿದೆ. ನಾವು ಬಂಗಾಳಿ ಸಂಸ್ಕೃತಿಯ ಭಾಗವಾಗಿರುವ ಒಂದು ಪಕ್ಷ ಎಂಬ ಸಂದೇಶವನ್ನು ಬಂಗಾಳಿ ಜನತೆಗೆ ನೀಡಲು ಅಮಿತ್ ಶಾ ಅವರು ಜನವರಿಯಲ್ಲೆ ರವೀಂದ್ರನಾಥ ಟ್ಯಾಗೋರ್ ಅವರ ವಾಸಸ್ಥಾನವಾದ ಶಾಂತಿನಿಕೇತನಕ್ಕೆ
ಭೇಟಿ ನೀಡುತ್ತಿದ್ದಾರೆ.
ಇದಲ್ಲದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಉಜ್ಬೇಕಿಸ್ಥಾನದ ಜತೆಗಿನ ವೀಡಿಯೋ ಮೀಟಿಂಗ್ ನಲ್ಲಿ ಕೊಲ್ಕತ್ತಾದ ಪ್ರಸಿದ್ಧ ದಕ್ಷಿಣೇಶ್ವರ ಕಾಳಿ ದೇವಸ್ಥಾನವನ್ನು ಉಲ್ಲೇಖಿಸಿದ್ದು ಮತ್ತು ಗುರುವಾರ ಬಾಂಗ್ಲಾ ದೇಶದ ಪ್ರಧಾನಿಯವರೊಂದಿಗಿನ ಮಾತುಕತೆಯಲ್ಲಿ 18 ನೇ ಶತಮಾನದ ಕೂಚ್ ಬೆಹಾರ್ ಅರಮನೆಯನ್ನು ಉಲ್ಲೇಖಿಸಿದ್ದು ಕಾಕತಾಳೀಯವಲ್ಲ. ಈ ಉಲ್ಲೇಖ ಮಾಡುವ ಮೂಲಕ, ಬಿಜೆಪಿ ಹೊರಗಿನ ಪಕ್ಷ ಎಂಬ ಮಮತಾ ಬ್ಯಾನರ್ಜಿ ಅವರ ಆರೋಪವನ್ನು ಎದುರಿಸಲು ಮೋದಿ ಪ್ರಯತ್ನಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಸಾಂಕೇತಿಕತೆಯ ಮೂಲಕ, ಶೇಕಡಾ 59 ರಷ್ಟು ಬಂಗಾಳಿ ಹಿಂದೂ ಮತದಾರರಿಗೆ ಪ್ರಧಾನಿ ಸಂದೇಶ ಕಳುಹಿಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಜ್ಯದ ಪ್ರಮುಖ ದೇವಾಲಯಗಳು , ಮಠಗಳು ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಪದೇ ಪದೇ ಭೇಟಿ ನೀಡುವ ಮೂಲಕ ಬಿಜೆಪಿ ಈ ಬಾರಿ ಬಂಗಾಳ ಗೆಲ್ಲಲು ತಂತ್ರಗಾರಿಕೆ ಹೆಣೆದಿದೆ. ಇದು ಯಶಸ್ವಿ ಆಗುವುದೇ ಎಂದು ಕಾದು ನೋಡಬೇಕಷ್ಟೆ.






