ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದ ಬಳಿಕ ದೇಶ ಹೊತ್ತಿ ಉರಿಯುತ್ತಿದೆ. ದೆಹಲಿಯಲ್ಲಿ ಇಲ್ಲೀವರೆಗೂ 43ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 300ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಸದ್ಯ ದೆಹಲಿ ಬೂದಿ ಮುಚ್ಚಿದ ಕೆಂಡದಂತಿದ್ದು, ಮತ್ತೆ ಯಾವುದೇ ಕ್ಷಣದಲ್ಲಿ ಗಲಭೆ ನಡೆದರೂ ನಡೆಯಬಹುದು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಭದ್ರತೆ ಹೆಚ್ಚಳ ಮಾಡಿದೆ. ದೆಹಲಿಯಲ್ಲಿ ಅಕ್ಕಪಕ್ಕದ ರಾಜ್ಯಗಳ ಜನರು ತಾತ್ಕಾಲಿಕವಾಗಿ ದೆಹಲಿ ತೊರೆದು ಸ್ವಂತ ರಾಜ್ಯಗಳಿಗೆ ತೆರಳುತ್ತಿದ್ದಾರೆ. ಈ ನಡುವೆ ಒಂದೊಂದು ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದು, ದೆಹಲಿಯ ಶಿವ್ ವಿಹಾರ ನಗರದ ಮನೆಯೊಂದರಲ್ಲಿ ಪೆಟ್ರೋಲ್ ಬಾಂಬ್ಗಳು ಪತ್ತೆಯಾಗಿವೆ. ಮನೆ ಒಳಗೆ ಜನರು ಇಟ್ಟಿಗೆ ಕಲ್ಲು, ದೊಣ್ಣೆ ಸಂಗ್ರಹ ಮಾಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ದೆಹಲಿಯಲ್ಲಿ ಹಿಂಸೆಗೆ ತುತ್ತಾದ ಪ್ರದೇಶಗಳಿಗೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ನ ರವಿಶಂಕರ್ ಗುರೂಜಿ ಭೇಟಿ ನೀಡಿದ್ದಾರೆ. ಶಾಂತಿ ಕಾಪಾಡುವಂತೆ ಮುಸ್ಲಿಂ ಸಮುದಾಯದ ಯುವಕರಿಗೆ ಕರೆ ನೀಡಿದ್ದಾರೆ. ಇನ್ನು ಹಿಂದೂ ಸಂಘಟನೆಗಳು ದೆಹಲಿಯ ಶಾಹೀನ್ ಬಾಗ್ನಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದರಿಂದು, 144 ಸೆಕ್ಷನ್ ಜಾರಿ ಮಾಡಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ಜನರಿಗೆ ಗೋಲಿ ಮಾರೋ ಎಂದಿದ್ದರು ಕೇಂದ್ರ ಹಣಕಾಸು ಸಚಿವ ಅನುರಾಗ್ ಠಾಕೂರ್. ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಈ ಮಾತು ಹೇಳಿದ ಬಳಿಕ ಕೆಲವೇ ದಿನಗಳಲ್ಲಿ ಶೂಟೌಟ್ ನಡೀತು. ಆ ನಂತರ ಇಡೀ ದೆಹಲಿಯೇ ಹೊತ್ತಿ ಉರಿದಿತ್ತು. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಷಾ ಪಶ್ಚಿಮ ಬಂಗಾಳ ಪ್ರವಾಸದಲ್ಲಿದ್ದು, ಕೋಲ್ಕತ್ತಾದಲ್ಲಿ ಬೃಹತ್ ಱಲಿ ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ಮಾಡಿರುವ ಅಮಿತ್ ಷಾ, ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಚಿನ್ನದ ಬಂಗಾಳ ಮಾಡಲು ಸಾಧ್ಯವೇ ಇಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡದೆ ಇರಲಿಕ್ಕೂ ಆಗಲ್ಲ ಎಂದು ಸವಾಲು ಎಸೆದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಕೋಲ್ಕತ್ತಾ ಭೇಟಿಗೆ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು, ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿವೆ. ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಗೋ ಬ್ಯಾಕ್ ಅಮಿತ್ ಷಾ ಪ್ಲಕಾರ್ಡ್ ತೋರಿಸುವ ಮೂಲಕ ಅಮಿತ್ ಷಾ ಭೇಟಿಯನ್ನು ವಿರೋಧಿಸಿದ್ದಾರೆ. ಇನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಏರ್ಪೋರ್ಟ್ನಲ್ಲೇ ಅಮಿತ್ ಷಾ ಭೇಟಿಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಅಮಿತ್ ಆಗಮಿಸುತ್ತಿದ್ದಂತೆ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ ಕಾರ್ಯಕರ್ತರು, ಅಮಿತ್ ಷಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಪ್ಪು ಬಾವುಟ ಹಾರಿಸಿದ್ದಾರೆ. ಜೊತೆಗೆ ಕಪ್ಪು ಬಣ್ಣದ ಬಲೂನ್ಗಳನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕಿಡಿಕಾರಿದ್ದಾರೆ. ಗೋ ಬ್ಯಾಕ್ ಅಮಿತ್ ಷಾ ಎಂದು ಘೋಷಣೆ ಕೂಗಿದ್ದಾರೆ.
ದೆಹಲಿಯ ಬಳಿಕ ಅಗ್ನಿಕುಂಡವಾಗಿರುವ ಮೇಘಾಲಯದಲ್ಲಿ ಪೌರತ್ವ ತಿದ್ದುಪಡಿ ವಿರೋಧಿಸಿ ಹೋರಾಟ ನಡೆಯುತ್ತಿದೆ. ಈಗಾಗಲೇ ಮೂವರು ಸಾವನ್ನಪ್ಪಿದ್ದಾರೆ. 10ಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಪೂರ್ವ ಕಾಶಿ ಹಿಲ್ಸ್ ಜಿಲ್ಲೆಯಲ್ಲಿ ಹಿಂಸಾಚಾರ ನಡೆದಿದ್ದು, 37 ವರ್ಷದ ಉಫಾಸ್ ಉದ್ದೀನ್ ಎಂಬ ವ್ಯಕ್ತಿಯನ್ನು ಮೂವರು ಅನಾಮಿಕರು ಹೊಡೆದು ಸಾಯಿಸಿದ್ದಾರೆ. ಇಲ್ಲೀವರೆಗೂ 8 ಜನರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಆದರೂ ಅಲ್ಲಲ್ಲಿ ಹೋರಾಟಗಳು ನಡೆಯುತ್ತಲೇ ಇವೆ. ಒಟ್ಟು 11 ಜಿಲ್ಲೆಗಳ ಪೈಕಿ 6 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ ಮಾಡಲಾಗಿದೆ. ರಾಜ್ದಯಾದ್ಯಂತ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ದೇಹಲಿ, ಮೇಘಾಲಯದ ಬಳಿಕ ಪಶ್ಚಿಮ ಬಂಗಾಳದಲ್ಲಿ ಗಲಭೆ ಶುರುವಾಗುತ್ತಾ..? ಎನ್ನುವ ಅನುಮಾನ ಮೂಡುವಂತಾಗಿದೆ. ಯಾಕಂದರೆ, ಕೋಲ್ಕತ್ತಾದ ಶಾಹಿದ್ ಮಿನಾರ್ ಕ್ರೀಡಾಂಗಣದಲ್ಲಿ ನಡೆದ ಸಮಾವೇಶದ ವೇಳೆ ಅಮಿತ್ ಷಾ ಭಾಷಣ ಮಾಡುತ್ತಿರುವಾಗ, ಬಿಜೆಪಿ ಕಾರ್ಯಕರ್ತರು ಗೋಲಿ ಮಾರೋ ಘೋಷಣೆ ಕೂಗುತ್ತಿದ್ದರು. ಈ ಬಗ್ಗೆ ಪಶ್ಚಿಮ ಬಂಗಾಳ ಪೊಲೀಸರು ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಇದೇ ರೀತಿ ಪ್ರಚೋದನಾ ಹೇಳಿಕೆಯಿಂದಲೇ ದೆಹಲಿಯಲ್ಲಿ ಗಲಭೆ ಶುರುವಾಗಿತ್ತು. ಇದೀಗ ಪಶ್ಚಿಮ ಬಂಗಾಳದಲ್ಲಿ ಕಾರ್ಯಕರ್ತರೇ ಗೋಲಿ ಮಾರೋ ಎಂದು ಘೋಷಣೆ ಕೂಗಿರುವುದು ಮುಂದಿನ ಘಟನೆ ಬಗ್ಗೆ ಅನುಮಾನ ಸೃಷ್ಟಿಸುತ್ತಿದೆ.