ಬದಲಾಗುತ್ತಿರುವ ಹವಾಮಾನ ಮತ್ತು ಅಭಿವೃದ್ಧಿಯ ಹೊಸ ಸ್ವರೂಪವು ಜೀವ ವೈವಿಧ್ಯತೆಗಳ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಹೊಸ ವಿಷಯವೇನೂ ಅಲ್ಲ. ನಾವೆಷ್ಟು ಮುಂದುವರೆದರೂ, ವಾಸಿಸುವ ಪರಿಸರದ ಕುರಿತು ನಮಗೆಷ್ಟು ತಿಳಿದಿದ್ದರೂ ತಿಳಿಯದಿರುವ ಸಂಗತಿಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಮತ್ತು ಇದೀಗ ಪಶ್ಚಿಮ ಘಟ್ಟಗಳ ಸಾಲಲ್ಲಿ ಜೀವ ವೈವಿಧ್ಯದ ಹೊಸ ಪ್ರಬೇಧವೊಂದು ಪತ್ತೆಯಾಗಿದೆ.
ಪಶ್ಚಿಮ ಘಟ್ಟ, ಜೀವ ವೈವಿಧ್ಯಗಳ ತವರು. ಗುಜರಾತಿನಿಂದ ಕನ್ಯಾಕುಮಾರಿವರೆಗೆ ಹಬ್ಬಿರುವ ಪಶ್ಚಿಮ ಘಟ್ಟದ ಒಟ್ಟೂ ಉದ್ದ 1,600 ಕೀಮಿಗಳು. ಅದರಲ್ಲಿ ಕರ್ನಾಟಕದ್ದೇ ಬಹುಪಾಲು. ಇದೀಗ ಪಶ್ಚಿಮ ಘಟ್ಟದ ಅಪೂರ್ವಗಳ ಸಾಲಿಗೆ ಇನ್ನೊಂದು ಗರಿ ಮೂಡಿದೆ. ಇದುವರೆಗೆ ಪೂರ್ವ ಘಟ್ಟದಲ್ಲಿ ಮಾತ್ರ ಕಂಡುಬಂದಿದ್ದ ‘ಕಳಿಂಗ ಕ್ರಿಕೆಟ್ ಕಪ್ಪೆ’ ಧಾರವಾಡ ವಿಶ್ವವಿದ್ಯಾಲಯದ ಪಿ ಎಚ್ ಡಿ ವಿದ್ಯಾರ್ಥಿ ಅಮಿತ್ ಹೆಗಡೆ ಅವರ ಸಂಶೋಧಕನ ಕಣ್ಣಿಗೆ ಪಶ್ಚಿಮ ಘಟ್ಟದಲ್ಲಿ ಪತ್ತೆಯಾಗಿದೆ. ಇದು ಸ್ಥಳೀಯ ಪರಿಸರ ಪ್ರಿಯರ ಆಸಕ್ತಿಗೆ ಇಂಬು ನೀಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಮಿತ್ ಹೆಗಡೆಯವರು ಶಿರಸಿಯ ವರ್ಗಾಸರವೆಂಬ ಚಿಕ್ಕ ಹಳ್ಳಿಯವರು. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ’ಸಂತಾನೋತ್ಪತ್ತಿ ನಡವಳಿಕೆ ಮತ್ತು ಜೀವ ಸಂವಹನ ಪ್ರಯೋಗಾಲಯದ ಪ್ರಾಣಿಶಾಸ್ತ್ರ ವಿಭಾಗ’ದಲ್ಲಿ ಅಂತಿಮ ಹಂತದ ಪಿ.ಎಚ್. ಡಿ ಅಧ್ಯಯನದಲ್ಲಿ ನಿರತರಾಗಿರುವ ಅವರ ಕಣ್ಣುಗಳು ಎಂದಿಗೂ ಜೀವ ವೈವಿಧ್ಯತೆಯ ಹೊಸ ಪ್ರಬೇಧಗಳತ್ತ ಚಾಚಿರುತ್ತದೆ. ಪ್ರೊ. ಗಿರೀಶ ಕಾಡದೇವರು ಅವರ ಮಾರ್ಗದರ್ಶನದಲ್ಲಿ ಹಾಗೂ ಪುಣೆಯ ಝೂಯೊಲಾಜಿಕಲ್ ಸರ್ವೆ ಆಫ್ ಇಂಡಿಯಾದ (ZSI) ವಿಜ್ಞಾನಿ ಕೆ.ಪಿ. ದಿನೇಶ ರವರ ಸಹಯೋಗದಲ್ಲಿ ಈ ಕಪ್ಪೆಯನ್ನು ಅಮಿತ್ ಅವರು ಪತ್ತೆಹಚ್ಚಿದ್ದಾರೆ. ಇದು ಕಪ್ಪೆಗಳನ್ನು ಅರಿಯುವ ಜೊತೆಗೆ ಅವುಗಳ ಸಂರಕ್ಷಣೆಯ ಮೊದಲ ಹೆಜ್ಜೆ. ಜೊತೆಗೆ ಈ ಸಂಶೋಧನೆಯು ಅಂತರರಾಷ್ಟ್ರೀಯ ಖ್ಯಾತಿಯ ಪ್ರತಿಷ್ಠಿತ ’ಝೂಟ್ಯಾಕ್ಸಾ‘ (Zootaxa) ಎಂಬ ಜರ್ನಲ್‍ನಲ್ಲಿ ಪುರಾವೆಯೊಂದಿಗೆ ಪ್ರಕಟಗೊಂಡಿದೆ.

ಪೂರ್ವ ಘಟ್ಟ ಮತ್ತು ಪಶ್ಚಿಮ ಘಟ್ಟದ ಈ ಕಳಿಂಗ ಜಾತಿಯ ಕಪ್ಪೆಗಳು ನೋಡಲು ಬೇರೆ ಬೇರೆಯೇ. ಈ ಸಂಶೋಧನೆಯಲ್ಲಿ ಪೂರ್ವ ಹಾಗೂ ಪಶ್ಚಿಮ ಘಟ್ಟಗಳ್ಳಲ್ಲಿ ಕಂಡು ಬರುವ ಕಳಿಂಗ ಕಪ್ಪೆಗಳು ಅನುವಂಶಿಕವಾಗಿ ಒಂದೇ ಆಗಿದ್ದರೂ ಸಹ ನೋಡಲು ಸಾಕಷ್ಟು ಬದಲಾವಣೆಗಳಿವೆ ಎಂಬುದು ಕುತೂಹಲಕಾರಿ. ಮೌರ್ಯ ಸಾಮ್ರಾಜ್ಯದ ಅಶೋಕ ಚಕ್ರವರ್ತಿ ಕಳಿಂಗದ ಮೇಲೆ ಯುದ್ಧ ಸಾರಿದ ನೆನಪಿಗೆ ಕಳಿಂಗ ಎಂಬ ಹೆಸರು ಈ ಕಪ್ಪೆಯದಾಗಿದೆ.
ಯಾವುದೇ ಒಂದು ಜೀವಿಯು ತಾನು ವಾಸಿಸುವ ಪರಿಸರದ ಸಹಜ ಕ್ರಿಯೆ ಪ್ರತಿಕ್ರಿಯೆಗೆ ಹೊಂದಿಕೊಳ್ಳುವುದು ಅನಿವಾರ್ಯ. ಊಸರವಳ್ಳಿ ಬಣ್ಣ ಬದಲಿಸುವ ಕ್ರಿಯೆಯಿಂದ ಹಿಡಿದು ನಾಯಿಗಳ ಸೂಕ್ಷ್ಮ ಗ್ರಹಣ ಶಕ್ತಿಯೆಲ್ಲವೂ ಇದಕ್ಕೆ ಉದಾಹರಣೆ. ವಾಸಿಸುವ ಪರಿಸರದಲ್ಲಿನ ಸಮಸ್ಯೆಗಳಿಗೆ ತಕ್ಕ ಪ್ರತಿರೋಧವನ್ನು ಪ್ರತಿ ಪ್ರಾಣಿಯೂ ತೋರಿದರೆ ಮಾತ್ರ ಬದುಕು ಜಯಿಸಲು ಸಾಧ್ಯ. ಹೀಗಾಗಿ ಪೂರ್ವ ಮತ್ತು ಪಶ್ಚಿಮ ಘಟ್ಟದಲ್ಲಿನ ಒಂದೇ ಜಾತಿಯ ಕಪ್ಪೆಗಳಲ್ಲಿ ಸೂಕ್ಷ್ಮ ರೂಪದ ಬದಲಾವಣೆ ಘಟಿಸುವ ಸಾಧ್ಯತೆಯಿದೆ. ಅಲ್ಲದೇ ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಫೆಜೆವರಾಯ್/ಮಿನರ್ವರಿಯಾ ಪ್ರಭೇದಗಳಿಗಿಂತ ಕಳಿಂಗ ಪಕ್ಕೆಯು ಸಂಪೂರ್ಣವಾಗಿ ಭಿನ್ನವಾಗಿದೆ ಎನ್ನುತ್ತಾರೆ ಯುವ ಸಂಶೋಧಕ ಅಮಿತ್ ಹೆಗಡೆ. ಕಪ್ಪೆಗಳನ್ನು ಅರಿಯುವ ಜೊತೆಗೆ ಅವುಗಳ ಸಂರಕ್ಷಣೆಯಲ್ಲಿ ಇನ್ನೊಂದು ಹೆಜ್ಜೆಯಿಟ್ಟಂತಾಗಿದೆ. ಅಲ್ಲದೇ ಪೂರ್ವ ಮತ್ತು ಪಶ್ಚಿಮ ಘಟ್ಟಗಳ ನಡುವಿನ ಕೊಂಡಿಯೊಂದು ಇನ್ನಷ್ಟು ಕುತೂಹಲಗಳನ್ನು ತೆರೆದಿಡುವ ಎಲ್ಲ ಸಾಧ್ಯತೆಗಳನ್ನೂ ತೆರೆದಿಟ್ಟಿದೆ.
ಪೂರ್ವ ಘಟ್ಟಗಳು ಪಶ್ಚಿಮ ಘಟ್ಟ ಮತ್ತು ಈಶಾನ್ಯ ಪ್ರದೇಶಗಳ ಕೂಡುತಾಣ. ಎರಡೂ ಕಡೆ ಕಂಡುಬಂದ ಕಳಿಂಗ ಕ್ರಿಕೆಟ್ ನ ಮೂಲನಿವಾಸದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸುವ ಬಗ್ಗೆ ಅಮಿತ್ ಅವರು ಒಲವು ವ್ಯಕ್ತಪಡಿಸಿದ್ದಾರೆ.
