ಮೊದಲೆಲ್ಲಾ ಚುನಾವಣೆಗಳೆಂದರೆ ಆಡಳಿತ ಮತ್ತು ಪ್ರತಿಪಕ್ಷಗಳ ಪಾಲಿಗೆ ಅಗ್ನಿಪರೀಕ್ಷೆಯಾಗಿದ್ದವು. ಅಂದರೆ; ಪ್ರತಿ ಚುನಾವಣೆಯೂ ರಾಜಕೀಯ ಪಕ್ಷಗಳ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಹ ನಿರ್ಣಾಯಕ ಹೋರಾಟವಾಗಿದ್ದವು. ಆದರೆ, ಇತ್ತೀಚಿನ ವರ್ಷಗಳಲ್ಲಿ ಪ್ರತಿ ಚುನಾವಣೆಯೂ ಸ್ವತಃ ಚುನಾವಣೆಗಳನ್ನು ನಡೆಸುವ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಅಗ್ನಿಪರೀಕ್ಷೆಗಳಾಗಿಬಿಟ್ಟಿವೆ.
ಭಾರತದ ರಾಜಕೀಯ ಪಕ್ಷಗಳ ಪೈಕಿ ಯಾವುದು ಗೆಲ್ಲುವು ಕುದುರೆ, ಯಾವುದು ನಿರಂತರ ಸೋಲಿನ ಸುಳಿಗೆ ಸಿಲುಕಿದ ಕುಂಟುಕುದುರೆ ಎಂಬುದು ಬಹುತೇಕ ನಿರ್ಧಾರವಾಗಿ ಹೋಗಿದೆ. ಆದರೆ, ಚುನಾವಣಾ ದಿನಾಂಕ ನಿಗದಿ, ಮತದಾನದ ವಿಧಾನ, ನೀತಿ ಸಂಹಿತೆ ಪಾಲನೆ, ಮತಯಂತ್ರಗಳ ಸಾಚಾತನ ಸೇರಿದಂತೆ ಪ್ರತಿ ಹಂತದಲ್ಲಿಯೂ ಪ್ರಶ್ನೆ, ಅನುಮಾನ ಮತ್ತು ಅಪನಂಬಿಕೆಯ ಪ್ರಶ್ನೆಗಳು ಸುತ್ತುವರಿದು, ಚುನಾವಣಾ ಆಯೋಗವೇ ಪ್ರತಿ ಚುನಾವಣೆಯಲ್ಲೂ ತನ್ನ ವಿಶ್ವಾಸಾರ್ಹತೆಯನ್ನು ಸಾಬೀತು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಅದರಲ್ಲೂ ಮುಖ್ಯವಾಗಿ ಆಡಳಿತ ಪಕ್ಷ ಇದೇ ಮೊದಲ ಬಾರಿಗೆ ತನ್ನ ರಾಜಕೀಯ ಪ್ರಾಬಲ್ಯ ಸಾಧಿಸಬೇಕಾಗಿರುವ ರಾಜ್ಯಗಳ ಚುನಾವಣೆಯ ವಿಷಯದಲ್ಲಂತೂ ಅಂತಹ ಸವಾಲುಗಳ ಸರಣಿಯೇ ಆಯೋಗದ ಮುಂದೆ ಸಾಲುಗಟ್ಟುತ್ತದೆ. ಆಡಳಿತಾರೂಢ ಬಿಜೆಪಿಯ ಪ್ರಾಬಲ್ಯದ ಉತ್ತರ ಭಾರತದ ರಾಜ್ಯಗಳ ವಿಷಯದಲ್ಲಿ ಕೂಡ ಕೆಲವೊಮ್ಮೆ ಚುನಾವಣಾ ದಿನಾಂಕ, ನೀತಿ ಸಂಹಿತೆ ಪಾಲನೆ, ಮತಯಂತ್ರಗಳ ದೋಷಗಳ ವಿಷಯದಲ್ಲಿ ಆಯೋಗ ಸಾರ್ವಜನಿಕ ಶಂಕೆಗಳಿಗೆ ಗುರಿಯಾದ ಉದಾಹರಣೆಗಳು ಸಾಕಷ್ಟಿವೆ.
ಅದು ಗುಜರಾತ್ ಇರಬಹುದು, ಮಹಾರಾಷ್ಟ್ರ ಇರಬಹುದು, ಕರ್ನಾಟಕವಿರಬಹುದು,.. ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಆಯೋಗದ ನಡೆ ಎಷ್ಟು ನಿಷ್ಪಕ್ಷಪಾತದ್ದು, ಎಷ್ಟು ಪಾರದರ್ಶಕ ಮತ್ತು ಎಷ್ಟರಮಟ್ಟಿಗೆ ಅದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಾತರಿಪಡಿಸಿದೆ ಎಂಬ ಪ್ರಶ್ನೆಗಳು ಎದ್ದಿದ್ದವು. ಇತ್ತೀಚಿನ ಬಿಹಾರ ಚುನಾವಣೆ ವಿಷಯದ,ಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ ಕರೋನಾ ಸಂಕಷ್ಟದ ನಡುವೆಯೂ ಆಯೋಗ ನಡೆಸಿದ ಚುನಾವಣೆಯ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬಂದಿದ್ದವು. ಅದೇ ಹೊತ್ತಿಗೆ ಚುನಾವಣಾ ವೇಳಾಪಟ್ಟಿಯ ವಿಷಯದಲ್ಲಿ ಮಾತ್ರ ಎಂದಿನಂತೆ ಆಕ್ಷೇಪ, ಆರೋಪಗಳು ಸದ್ದು ಮಾಡಿದ್ದವು.
ಇದೀಗ ಬಿಜೆಪಿಯ ಶತಾಯಗತಾಯ ಮೊದಲ ಬಾರಿಗೆ ಅಧಿಕಾರ ಹಿಡಿಯಲೇಬೇಕು ಎಂದು ಜಿದ್ದಿಗೆ ಬಿದ್ದಿರುವ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ವೇಳಾಪಟ್ಟಿಯ ವಿಷಯದಲ್ಲಿ ಕೂಡ ಮತ್ತದೇ ಅನುಮಾನಗಳು ಎದ್ದಿವೆ. 294 ಕ್ಷೇತ್ರಗಳ ವಿಧಾನಸಭಾ ಚುನಾವಣೆಗೆ ಬರೋಬ್ಬರಿ ಎಂಟು ಹಂತಗಳಲ್ಲಿ ಚುನಾವಣೆ ನಡೆಸಲು ವೇಳಾಪಟ್ಟಿ ಘೋಷಣೆಯಾಗಿದೆ. 234 ವಿಧಾನಸಭಾ ಕ್ಷೇತ್ರಗಳಿರುವ ತಮಿಳುನಾಡಿನಲ್ಲಿ ಒಂದೇ ಹಂತದ ಮತದಾನ ನಡೆಸುವುದಾಗಿ ಆಯೋಗ ಘೋಷಿಸಿದೆ. ಅಷ್ಟು ದೊಡ್ಡ ಸಂಖ್ಯೆಯ ಕ್ಷೇತ್ರಗಳ ಹೊರತಾಗಿಯೂ ಅಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಸುವುದು ಸಾಧ್ಯವಿದ್ದರೆ, ಅಲ್ಲಿಗಿಂತ ಕೇವಲ 60 ಸ್ಥಾನ ಹೆಚ್ಚಿರುವ ಪಶ್ಚಿಮಬಂಗಾಳದಲ್ಲಿ ಮಾತ್ರ ಯಾಕೆ ಬರೋಬ್ಬರಿ ಎಂಟು ಹಂತಗಳಲ್ಲಿ ಮತದಾನಕ್ಕೆ ದಿನಾಂಕ ನಿಗದಿ ಮಾಡಲಾಗಿದೆ ಎಂಬುದು ಪಶ್ಚಿಮಬಂಗಾಳದ ಆಡಳಿತ ಮತ್ತು ಪ್ರತಿಪಕ್ಷಗಳೆರಡರ ಪ್ರಶ್ನೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಂತೂ, ಆಯೋಗ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತಯಾರಿಸಿಕೊಟ್ಟ ವೇಳಾಪಟ್ಟಿಯನ್ನೇ ಅಂತಿಮಗೊಳಿಸಿದೆಯೇ? ಬಿಜೆಪಿಯ ಅನುಕೂಲಕ್ಕೆ ತಕ್ಕಂತೆ ದಿನಾಂಕ ನಿಗದಿ ಮಾಡಲಾಗಿದೆಯೇ? ಎಂದು ನೇರವಾಗಿ ಆಯೋಗವನ್ನು ಪ್ರಶ್ನಿಸಿದ್ದಾರೆ. “ಒಂದೇ ಜಿಲ್ಲೆಯಲ್ಲಿ ಎರಡೆರಡು ಹಂತದಲ್ಲಿ ಮತದಾನ ನಡೆಸಲು ತೀರ್ಮಾನಿಸಿರುವ ನಿಮ್ಮ ನಿರ್ಧಾರದ ಹಿಂದೆ ಯಾವ ತರ್ಕ ಇದೆ ಎಂಬುದನ್ನು ಹೇಳಿ. ನಿಮ್ಮ ನಿರ್ಧಾರವನ್ನು ಗೌರವಿಸುತ್ತೇವೆ. ತಮಿಳುನಾಡು, ಕೇರಳದಲ್ಲಿ ಒಂದೇ ಹಂತದಲ್ಲಿ ಇಡೀ ರಾಜ್ಯದ ಮತದಾನ ಮುಗಿಸುವುದು ಸಾಧ್ಯವಾದರೆ, ಅದು ಪಶ್ಚಿಮಬಂಗಾಳದಲ್ಲಿ ಯಾಕೆ ಸಾಧ್ಯವಿಲ್ಲ? ಇಲ್ಲೇಕೆ ಎಂಟು ಹಂತಗಳಲ್ಲಿ ಬರೋಬ್ಬರಿ 23 ದಿನಗಳ ಆಟ ನಿಗದಿ ಮಾಡಿದ್ದೀರಿ?” ಎಂದು ಆಯೋಗಕ್ಕೆ ನೇರ ಸವಾಲು ಹಾಕಿದ್ದಾರೆ.

ಅಲ್ಲಿನ ಪ್ರಮುಖ ಪ್ರತಿಪಕ್ಷ ಸಿಪಿಎಂ ಕೂಡ ಇದೇ ಪ್ರಶ್ನೆಯನ್ನು ಮುಂದಿಟ್ಟಿದ್ದು, ರಾಜ್ಯದಲ್ಲಿ ಒಂದಲ್ಲಾ ಎರಡಲ್ಲಾ ಎಂಟು ಹಂತಗಳಲ್ಲಿ, ಅದೂ ಒಂದೊಂದು ಜಿಲ್ಲೆಯಲ್ಲೇ ವಿಗಂಡಣೆ ಮಾಡಿ ಎರಡೆರಡು ಹಂತದಲ್ಲಿ ಮತದಾನ ಮಾಡುತ್ತಿರುವ ಉದ್ದೇಶವೇನು? ಯಾರ ಅನುಕೂಲಕ್ಕಾಗಿ ಆಯೋಗ ಈ ವೇಳಾಪಟ್ಟಿ ನಿಗದಿ ಮಾಡಿದೆ ಎಂದು ಸಿಪಿಐ ನಾಯಕ ಬಿಮನ್ ಬೋಸ್ ಪ್ರಶ್ನಿಸಿದ್ದಾರೆ.
ಬಂಗಾಳದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅಲ್ಲಿ ಒಂದೇ ಜಿಲ್ಲೆಯ ಮತದಾರರು ಎರಡು ಪ್ರತ್ಯೇಕ ದಿನಗಳಲ್ಲಿ ಮತದಾನ ಮಾಡಬೇಕಾಗಿದ್ದು, ಘೋಷಿತ ವೇಳಾಪಟ್ಟಿಯ ಪ್ರಕಾರ ದಕ್ಷಿಣ ಪರಗರಣ 24, ಉತ್ತರ ಪರಗಣ 24, ಪೂರ್ವ ಮಿಡ್ನಾಪುರ್, ಪಶ್ಚಿಮ ಮಿಡ್ನಾಪುರ್ ಮತ್ತಿತರ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಬೇರೆ ಬೇರೆ ಹಂತದಲ್ಲಿ ಮತದಾನ ನಡೆಯಲಿದೆ. ಇದು ಸಹಜವಾಗೇ ಬಿಜೆಪಿ ಹೊರತುಪಡಿಸಿ ಇತರೆ ರಾಜಕೀಯ ಪಕ್ಷಗಳಲ್ಲಿ ಆತಂಕ ಮೂಡಿಸಿದೆ.
ಹೀಗೆ ಬರೋಬ್ಬರಿ ಒಂದು ತಿಂಗಳ ಅವಧಿಯಲ್ಲಿ ವಿವಿಧ ಹಂತಗಳಲ್ಲಿ ಮತದಾನ ನಡೆಯುವುದರಿಂದ ರಾಜ್ಯದಲ್ಲಿ ಹೊಸದಾಗಿ ಅಧಿಪತ್ಯ ಸಾಧಿಸಲು ಯತ್ನಿಸುತ್ತಿರುವ ಕೇಂದ್ರದ ಆಡಳಿತಾರೂಢ ಬಿಜೆಪಿಗೆ ಸಾಕಷ್ಟು ಅನುಕೂಲಕರವಾಗಲಿದೆ. ಅಭ್ಯರ್ಥಿಗಳ ತಯಾರಿ, ಕಾರ್ಯಕರ್ತರನ್ನು ಪರಿಣಾಮಕಾರಿಯಾಗಿ ಪ್ರಚಾರದಲ್ಲಿ ಬಳಸಲು, ಹಣ, ಉಡುಗೊರೆಯಂತಹ ಆಮಿಷಗಳನ್ನು ಸುಸೂತ್ರವಾಗಿ ಆಯೋಗದ ಕಣ್ತಪ್ಪಿಸಿ ಸರಬರಾಜು ಮತ್ತು ದಾಸ್ತಾನು ಮಾಡುವುದು ಸೇರಿದಂತೆ ವಿವಿಧ ವಿಷಯಗಳಲ್ಲಿ ಈ ವೇಳಾಪಟ್ಟಿ ಬಿಜೆಪಿಗೆ ಚುನಾವಣೆಯನ್ನು ಗೆಲ್ಲಲು ಅನುಕೂಲಕರವಾಗಿದೆ. ಆ ಹಿನ್ನೆಲೆಯಲ್ಲಿ ಬಿಜೆಪಿಯ ವರಿಷ್ಠರ ಆಣತಿಯಂತೆ ಈ ವೇಳಾಪಟ್ಟಿ ಸಿದ್ಧಗೊಂಡಿದೆ ಎಂಬುದು ಬಂಗಾಳದ ರಾಜಕೀಯ ಪಕ್ಷಗಳ ಮುಖ್ಯ ಆರೋಪ.
ಆದರೆ, ಚುನಾವಣಾ ಆಯೋಗ ಈ ಸುದೀರ್ಘ ಅವಧಿಯ ವಿವಿಧ ಹಂತದ ವೇಳಾಪಟ್ಟಿ ಘೋಷಣೆಗೆ ಕೊಡುವ ಕಾರಣ ಬೇರೆಯೇ ಇದೆ. ಅದರ ಪ್ರಕಾರ, ರಾಜ್ಯದಲ್ಲಿ ಈಗ ಹಬ್ಬ, ಉತ್ಸವ ಮತ್ತು ಜಾತ್ರೆಗಳ ಹಂಗಾಮ, ಜೊತೆಗೆ ಚುನಾವಣಾ ಅಕ್ರಮಗಳಿಗೆ ಮತ್ತು ಹಿಂಸಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಗತ್ಯ ಭದ್ರತಾ ವ್ಯವಸ್ಥೆ ಮಾಡಿಕೊಳ್ಳುವುದಕ್ಕೂ ಸಮಯಾವಕಾಶದ ಅಗತ್ಯವಿದೆ. ಜೊತೆಗೆ ಕೋವಿಡ್ ಹಿನ್ನೆಲೆಯಲ್ಲಿ ವಾಡಿಕೆಗಿಂಗ ಅಧಿಕ ಮತಗಟ್ಟೆಗಳನ್ನು ಸ್ಥಾಪಿಸಬೇಕಾದ ಅನಿವಾರ್ಯತೆಯೂ ಇದೆ. ಹಾಗಾಗಿ ಇಷ್ಟು ಹಂತಗಳಲ್ಲಿ ಮತದಾನಕ್ಕೆ ವೇಳಾಪಟ್ಟಿ ನಿಗದಿ ಮಾಡುವುದು ಅನಿವಾರ್ಯ.
ಆದರೆ, ವಾಸ್ತವವಾಗಿ ನೋಡಿದರೆ, ಬಂಗಾಳದಲ್ಲಿ ಹಬ್ಬ-ಜಾತ್ರೆಗಳ ಹಂಗಾಮ ಇರುವುದು ಸಾಮಾನ್ಯವಾಗಿ ದಸರಾ ವೇಳೆ. ಬೇಸಿಗೆಯಲ್ಲಿ ಅಲ್ಲಿ ಹೆಚ್ಚೇನೂ ಉತ್ಸವಗಳು ನಡೆಯುವುದಿಲ್ಲ. ಮತ್ತೊಂದು ಕಡೆ ತಮಿಳುನಾಡು ಮತ್ತು ಕೇರಳದಲ್ಲಿ ಈ ಬೇಸಿಗೆ ಹಂಗಾಮಿನಲ್ಲಿ ಜಾತ್ರೆ, ಉತ್ಸವಗಳ ಭರಾಟೆ ಹೆಚ್ಚು. ಹಾಗಾಗಿ ಆಯೋಗದ ಆ ಸಮಜಾಯಿಷಿ ಸಮಂಜಸವೇ ಎಂಬ ಪ್ರಶ್ನೆ ಇದೆ. ಜೊತೆಗೆ ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಬೇಕಿದೆ ಎಂಬುದು ಕೂಡ ಸಮರ್ಥನೀಯ ಸಮಜಾಯಿಷಿ ಎನಿಸದು. ಏಕೆಂದರೆ; ಕೋವಿಡ್ ಪ್ರಕರಣಗಳ ವಿಷಯದಲ್ಲಿ ಇಡೀ ದೇಶದಲ್ಲೇ ಆತಂಕಕಾರಿ ಪರಿಸ್ಥಿತಿ ಇರುವುದು ಕೇರಳ ಮತ್ತು ತಮಿಳುನಾಡಿನಲ್ಲಿಯೇ ವಿನಃ ಪಶ್ಚಿಮಬಂಗಾಳದಲ್ಲಿ ಅಲ್ಲ. ಹಾಗಾಗಿ ಚುನಾವಣಾ ಹಿಂಸಾಚಾರ ಮತ್ತು ಅದನ್ನು ತಡೆಯಲು ಬೇಕಾದ ಭದ್ರತಾ ವ್ಯವಸ್ಥೆಯ ಕುರಿತ ಸಮಜಾಯಿಷಿ ಹೊರತುಪಡಿಸಿ ಉಳಿದ ಕಾರಣಗಳು ಮೇಲ್ನೋಟಕ್ಕೇ ತೀರಾ ಹುಸಿ ಸಮರ್ಥನೆಗಳಾಗಿ ಕಾಣಿಸುತ್ತಿವೆ.
ಹಾಗಾಗಿ, ಮತ ಯಂತ್ರಗಳ ಕುರಿತು ದೇಶದ ಪ್ರತಿ ಚುನಾವಣೆಯಲ್ಲೂ ಏಳುವ ಗಂಭೀರ ಆರೋಪಗಳು, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ಆಯೋಗದ ಪಕ್ಷಪಾತಿ ಧೋರಣೆಯ ಕುರಿತ ಆರೋಪಗಳ ಜೊತೆಗೆ ಈಗ ದೇಶದ ಗಮನ ಸೆಳೆದಿರುವ ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣಾ ವೇಳಾಪಟ್ಟಿಯ ವಿಷಯದಲ್ಲಿಯೂ ಆಯೋಗದ ಕ್ರಮಗಳು ಸಾರ್ವಜನಿಕರ ಕಣ್ಣಲ್ಲಿ ಅದರ ವಿಶ್ವಾಸಾರ್ಹತೆಗೆ ಚ್ಯುತಿ ತರುತ್ತಿವೆ ಎಂಬ ಮಾತುಗಳು ಕೇಳಿಬಂದಿವೆ.
ಆ ಅರ್ಥದಲ್ಲಿ ಈ ಬಾರಿಯ ಪಶ್ಚಿಮಬಂಗಾಳದ ಚುನಾವಣೆ ಬಿಜೆಪಿಯ ಪಾಲಿಗೆ ಈಶಾನ್ಯ ಭಾರತದ ಪ್ರಮುಖ ರಾಜ್ಯದಲ್ಲಿ ಮೊದಲ ಬಾರಿಗೆ ದಿಗ್ವಿಜಯ ಸಾಧಿಸುವ ‘ಮಾಡು ಇಲ್ಲವೇ ಮಡಿ’ ಕದನವಷ್ಟೇ ಅಲ್ಲದೆ, ಆಯೋಗದ ಪಾಲಿಗೂ ತನ್ನ ವಿಶ್ವಾಸಾರ್ಹತೆ ಸಾಬೀತು ಮಾಡುವ ಅಗ್ನಿದಿವ್ಯದ ಅಖಾಡ ಕೂಡ.