ಕರೋನಾ ಸೋಂಕನ್ನು ತಡೆಗಟ್ಟುವ ಮದ್ದು ತಯಾರಿಸಿದ್ದೇವೆ ಎಂದು ಜನರ ಹಾದಿ ತಪ್ಪಿಸುವ ಮಾಹಿತಿಯನ್ನು ಪ್ರಸಾರ ಮಾಡಿದ ಕಾರಣಕ್ಕೆ ಪತಂಜಲಿಯ ಬಾಬಾ ರಾಮ್‌ದೇವ್ ಮತ್ತು ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆಚಾರ್ಯ ಬಾಲಕೃಷ್ಣ ಅವರ ವಿರುದ್ದ ಜೈಪುರದ ಜ್ಯೋತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬಾಬಾ ರಾಮ್‌ದೇವ್, ಆಚಾರ್ಯ ಬಾಲಕೃಷ್ಣ, ಡಾ. ಬಲ್ಬೀರ್ ಸಿಂಗ್ ತೋಮರ್, ಡಾ. ಅಅನುರಾಗ್ ತೋಮರ್ ಮತ್ತು ಅನುರಾಗ್ ವಾರ್ಷ್ಣೆ ವಿರುದ್ದ IPC Section 420, Drugs and Magic Remedies (Objectionable Advertisements) Act, 1954ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ವಕೀಲರಾಗಿರುವ ಬಲ್ಬೀರ್ ಜಾಖರ್ ಅವರು ಮೊಕದ್ದಮೆ ದಾಖಲಿಸಿದ್ದಾರೆ. “ಆರೋಪಿಗಳು ಸಾಮಾನ್ಯ ಜನರ ಜೀವವನ್ನು ಅಪಾಯಕ್ಕೆ ತಳ್ಳುವ ಕೆಲಸ ಮಾಡಿದ್ದಾರೆ. ರಾಜಾಸ್ಥಾನ ಸರ್ಕಾರಕ್ಕಾಗಲಿ ಅಥವಾ ಕೇಂದ್ರ ಸರ್ಕಾರಕ್ಕಾಗಲಿ ಕೊರೊನಿಲ್‌ನ ಕ್ಲಿನಿಕಲ್ ಪರೀಕ್ಷೆಗಳ ಕುರಿತು ಮಾಹಿತಿ ನೀಡಲಿಲ್ಲ,” ಎಂದು ಜಾಖಾರ್ ಹೇಳಿದ್ದಾರೆ.

ಪತಂಜಲಿ ಸಂಸ್ಥೆಯು ಆಯುರ್ವೇದ ಗಿಡಮೂಲಿಕೆಯಿಂದ ಕರೋನಾ ಸೋಂಕನ್ನು 100% ಗುಣಪಡಿಸಬಹುದೆಂದು ಘೋಷಿಸಿತ್ತು. ಈ ಕುರಿತಾಗಿ ವೈದ್ಯಕೀಯ ಪರೀಕ್ಷೆಗಳನ್ನೂ ಮಾಡಿರುವ ಬಗ್ಗೆ ಹೇಳಿಕೊಂಡಿತ್ತು.
ಪತಂಜಲಿಯ ಈ ಹೇಳಿಕೆಯ ಕುರಿತು ತನಗೇನೂ ಗೊತ್ತಿಲ್ಲ ಎಂದು ಕೇಂದ್ರ ಆಯುಷ್ ಮಂತ್ರಿ ಶ್ರೀಪದ್ ನಾಯ್ಕ್ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೇ, ಪತಂಜಲಿ ಮಾಡಿರುವ ವೈದ್ಯಕೀಯ ಪರೀಕ್ಷೆ, ಬಳಸಲಾಗಿರುವ ವಸ್ತುಗಳು ಮತ್ತು ಇತರ ಮಾಹಿತಿಯನ್ನು ಕೇಳಿದೆ. ಸಚಿವಾಲಯವು ಅಧಿಕೃತವಾಗಿ ಹೇಳುವವರೆಗೂ ಕೊರೊನಿಲ್ ಕುರಿತಾದ ಯಾವುದೇ ಜಾಹಿರಾತು ಅಥವಾ ಅದರ ಪ್ರಚಾರವನ್ನು ಮಾಡಕೂಡದೆಂದು ಆದೇಶಿಸಿದೆ.