ಪಟಾಕಿ ಮಾರಾಟ ಹಾಗೂ ಸಿಡಿಸುವುದನ್ನು ನಿಷೇಧಿಸುವುದಾಗಿ ಘೋಷಿಸಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಸಾರ್ವಜನಿಕರ ಒತ್ತಡಕ್ಕೆ ಮಣಿದ ಯಡಿಯೂರಪ್ಪ “ಹಸಿರು ಪಟಾಕಿ”ಮಾರಾಟ ಮತ್ತು ಸಿಡಿಸಲು ಅವಕಾಶ ನೀಡಿದ್ದಾರೆ.
ಕೋವಿಡ್ -19 ಮತ್ತು ಉಸಿರಾಟದ ಸೋಂಕಿಗೆ ಒಳಗಾಗುವವರ ಸುರಕ್ಷತೆಯ ದೃಷ್ಟಿಯಿಂದ, ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಮತ್ತು ಸಿಡಿಸಲು ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಶುಕ್ರವಾರ ಸಂಜೆ ಆದೇಶ ಹೊರಡಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಈ ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿದ ನಂತರ ನಾವು ಅನೇಕ ಸಲಹೆಗಳನ್ನು ಸ್ವೀಕರಿಸಿದ್ದೇವೆ. ಜನರು ತಮ್ಮ ಮಕ್ಕಳ ಮತ್ತು ತಮ್ಮ ಸುರಕ್ಷತೆಯನ್ನು ಪರಿಗಣಿಸಿ ಸರಳ ರೀತಿಯಲ್ಲಿ ಆಚರಿಸಬೇಕು. ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಿ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಬೇಕೆಂದು ನಾನು ವಿನಂತಿಸುತ್ತೇನೆ ”ಎಂದು ಯಡಿಯೂರಪ್ಪ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಪಟಾಕಿ ನಿಷೇಧಿಸುವುದಾಗಿ ಯಡಿಯೂರಪ್ಪ ಹೇಳಿದ ಬೆನ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪರಿಸರವಾದಿಗಳು ಪಟಾಕಿ ನಿಷೇಧದ ನಿರ್ಧಾರವನ್ನು ಸ್ವಾಗತಿಸಿದರೆ, ಇನ್ನೂ ಕೆಲವರು ಸರ್ಕಾರದ ನಿರ್ಧಾರವನ್ನು ಹಿಂದೂ ವಿರೋಧಿಯೆಂದು ಕರೆದಿದ್ದಾರೆ. ಹಿಂದೂ ವಿರೋಧಿ ಪಟ್ಟ ಹೊರಲು ಬಯಸದ ಯಡಿಯೂರಪ್ಪ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ, ಹಸಿರು ಪಟಾಕಿಗೆ ಅವಕಾಶ ಕೊಡುವುದಾಗಿ ಹೇಳಿದ್ದಾರೆ.
Also Read: ಈ ಬಾರಿ ದೀಪಾವಳಿಯಲ್ಲಿ ಪಟಾಕಿ ನಿಷೇಧ – ಬಿ ಎಸ್ ಯಡಿಯೂರಪ್ಪ
ಏನಿದು ಹಸಿರು ಪಟಾಕಿ?
ಹಸಿರು ಪಟಾಕಿಗಳನ್ನು ಕೌನ್ಸಿಲ್ ಫಾರ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಮತ್ತು ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (NEERI) ಅಭಿವೃದ್ಧಿಪಡಿಸಿದೆ. ಇವುಗಳಲ್ಲಿ ಲಿಥಿಯಂ, ಆರ್ಸೆನಿಕ್, ಸೀಸ ಮತ್ತು ಬೇರಿಯಂ ಇರುವುದಿಲ್ಲ.
ಆದಾಗ್ಯೂ, ಇವುಗಳು ಕಣಗಳನ್ನು ಕೇವಲ 40% ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿರುವುದಿಲ್ಲ. ಹಸಿರು ಪಟಾಕಿಗಳ ಬಳಕೆಯು ನವದೆಹಲಿಯಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುವುದಿಲ್ಲ ಮತ್ತು ಅದು “ಗ್ಯಾಸ್ ಚೇಂಬರ್ ತರಹದ” ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಗುರುವಾರ ಹೇಳಿದೆ. ಈ ದೃಷ್ಟಿಯಲ್ಲಿ, ಹಸಿರು ಕ್ರ್ಯಾಕರ್ಗಳನ್ನು ಕೂಡಾ ನಿಷೇಧಿಸುವಂತೆ ನ್ಯಾಯಮಂಡಳಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸೂಚಿಸಿತ್ತು.