ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಜೆಡಿಎಸ್ ಪಕ್ಷ ಸಂಘಟನೆಗೆ ವರಿಷ್ಠರು ಮುಂದಾಗಿದ್ದಾರೆ. ಮುಂದಿನ ತಿಂಗಳು ಜನವರಿಯಿಂದ ರಾಜ್ಯಾದ್ಯಂತ ಮೊದಲ ಹಂತದ ಪಾದಯಾತ್ರೆ ಮಾಡಲು ನಿರ್ಧರಿಸಿದ್ದಾರೆ. ಮಾಜಿ ಶಾಸಕ ವೈ.ಎಸ್ ವಿ ದತ್ತಾ ಜೊತೆಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರು ರಾಜ್ಯಾದ್ಯಂತ ಪಾದಯಾತ್ರೆ ನಡೆಸಲಿದ್ದಾರೆ. ಈ ಮೂಲಕ ಪಕ್ಷ ಬಲವರ್ಧನೆ ಮಾಡಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ರಾಜ್ಯಾದ್ಯಂತ ತಳಮಟ್ಟದಿಂದ ಜೆಡಿಎಸ್ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಿದೆ. ಈ ಉದ್ದೇಶದೊಂದಿಗೆ ಪಾದಯಾತ್ರೆ ಮಾಡುತ್ತಿದ್ದೇವೆ. ಇದು ಪಕ್ಷ ಬಲಪಡಿಸುವ ಏಕೈಕ ಉದ್ದೇಶ. ನಾವು ಅಧಿಕಾರದಲ್ಲಿ ಇಲ್ಲದೇ ಹೋದರೂ ಪಕ್ಷಕ್ಕೆ ಧಕ್ಕೆ ತರಲು ಕಾಂಗ್ರೆಸ್-ಬಿಜೆಪಿ ಯತ್ನಿಸುತ್ತಿದೆ. ಇವರಿಗೆ ರಾಜ್ಯಾದ್ಯಂತ ಸಂಘಟನೆ ಮಾಡುವ ಮೂಲಕ ಉತ್ತರ ನೀಡಲಿದ್ದೇವೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ವಿಭಿನ್ನ ಹೆಸರಿನಲ್ಲಿ ಪಾದಯಾತ್ರೆ ಮಾಡಲಾಗುತ್ತಿದೆ. ‘ವಿಚಾರ, ವಿಕಾಸ ಮತ್ತು ವಿಶ್ವಾಸ’ ಎಂಬ ಮೂರು ಪರಿಕಲ್ಪನೆಗಳ ಜೊತೆಗೆ ನಡೆಸುವ ಪಾದಯಾತ್ರೆ ಇದಾಗಿದೆ. ಪ್ರಾದೇಶಿಕ ಹಿತಾಸಕ್ತಿಗಾಗಿ ಬಲಿಷ್ಠ ಪ್ರಾದೇಶಿಕ ಪಕ್ಷ ಕಟ್ಟಬೇಕಿದೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತದೆ ಎಂದು ಈ ಹಿಂದೆಯೇ ವೈ.ಎಸ್.ವಿ.ದತ್ತಾ ಹೇಳಿದ್ದರು.
ಜನವರಿಯಿಂದ ಮೊದಲ ಹಂತದ ಪಾದಯಾತ್ರೆ ಆರಂಭವಾಗಲಿದೆ. ಮೊದಲ ಹಂತದ ಪಾದಾಯಾತ್ರೆ ಕಾವೇರಿಯಿಂದ ತುಂಗಭದ್ರಾವರೆಗೂ ನಡೆಯಲಿದೆ. ಎರಡನೇ ಹಂತದಲ್ಲಿ ತುಂಗಭದ್ರಾದಿಂದ ಮಲಪ್ರಭಾದವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದಿದ್ದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಕೇವಲ 1 ಸ್ಥಾನ ಮಾತ್ರ ಗೆದ್ದಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 579 ಸದಸ್ಯರು ಗೆದ್ದು ಶಕ್ತಿ ತುಂಬಿದ್ದರಾದರೂ, ಪಕ್ಷ ಸಂಘಟನೆ ಕಡೆಗೆ ಗಮನ ಹರಿಸಿರಲಿಲ್ಲ. ಸದ್ಯ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.
ನಮ್ಮ ಪಕ್ಷದ ಕಾರ್ಯಕರ್ತರ ಆತ್ಮವಿಶ್ವಾಸ ಕುಗ್ಗಿದೆ. ಇನ್ನೂ ಸಂಘಟನೆ ಚುರುಕಾಗಬೇಕಿದೆ ಎಂಬ ಮಾತು ಕೇಳಿಬರುತ್ತಿದೆ. ಹಾಗಾಗಿ ಜೆಡಿಎಸ್ ಸಜ್ಜುಗೊಳಿಸಲು ಪಕ್ಷ ಸಂಘಟನೆ ಅನಿವಾರ್ಯವಾಗಿದೆ ಎನ್ನುತ್ತಿದ್ದಾರೆ ವರಿಷ್ಠರು.