ಮೊನ್ನೆ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಬೆಂಗಳೂರು ನಗರದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬೆಂಗಳೂರು ಚಲೋ ಪ್ರತಿಭಟನೆ ಮಾಡಿದ್ದೆವು. ಅದೇ ರೀತಿ ಪ್ರತಿ ಬ್ಲಾಕ್ ನಲ್ಲೂ ಜನರ ಸಮಸ್ಯೆ, ಕರೋನಾ ಸಂದರ್ಭದಲ್ಲಿ ಸರ್ಕಾರದ ವೈಫಲ್ಯ, ಜನರಿಗೆ ಸಹಾಯ ಮಾಡದೆ ಅವರ ಮೇಲೆಯೇ ತೆರಿಗೆ ಹೊರೆ ಹಾಕಿ ಹಿಂಸೆ ನೀಡುತ್ತಿದೆ. ಜನರಿಗೆ ವ್ಯಾಪಾರ ವಹಿವಾಟು ಇಲ್ಲದೆ ಆದಾಯವಿಲ್ಲ. ಎಲ್ಲ ಲಾಕ್ ಡೌನ್, ಸೀಲ್ ಡೌನ್ ಮಾಡಿ ಅಂದರು. ಜನ ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜ್ ಯಾರಿಗೂ ತಲುಪಿಲ್ಲ. ರಾಜ್ಯ ಸರ್ಕಾರದ ಪ್ಯಾಕೇಜ್ ಕೂಡ ವೃತ್ತಿಪರ ಕಾರ್ಮಿಕರಿಗೆ ತಲುಪಿಲ್ಲ. ವಯಸ್ಸಾದವರಿಗೆ ಪಿಂಚಣಿ ಇಲ್ಲ. ಗುತ್ತಿಗೆದಾರರಿಗೆ ಬಿಲ್ ಹಣ ನೀಡುತ್ತಿಲ್ಲ. ಇದೆಲ್ಲದರ ಮಧ್ಯೆ ಎಲ್ಲ ಶುಲ್ಕಗಳನ್ನು ಹೆಚ್ಚಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಕರೋನಾ ಹೆಸರಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದು ಬಿಟ್ಟರೆ, ಈ ಸರ್ಕಾರ ಬೇರೆ ಏನೂ ಮಾಡಿಲ್ಲ. ಇದನ್ನು ನಾವು ಜನರ ಗಮನಕ್ಕೆ ತರುತ್ತೇವೆ. ಪ್ರತಿ ಕ್ಷೇತ್ರದಲ್ಲೂ ಕೂಡ, ಪಕ್ಷದ ಸಂಘಟನೆ ಜತೆ, ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸರ್ಕಾರ ಚಾಲಕರು, ದರ್ಜಿಗಳಿಗೆ, ಸವಿತಾ ಸಮಾಜದವರಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನೂ ನೀಡಿಲ್ಲ. ಇಂತಹ ಜ್ವಲಂತ ಸಮಸ್ಯೆಗಳಿಗೆ ಜನರ ಬೆಂಬಲಕ್ಕೆ ನಿಂತು ಹೋರಾಟ ಮಾಡಲು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಅನೇಕ ಪೊಲೀಸ್ ಠಾಣೆ ಹಾಗೂ ಸರ್ಕಾರಿ ಕಚೇರಿಗಳನ್ನು ಬಿಜೆಪಿ ಕಛೇರಿಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳಲಾಗಿದೆ. ಪೊಲೀಸ್ ಅಧಿಕಾರಿಗಳು ನಮ್ಮ ಕಾರ್ಯಕರ್ತರನ್ನು ಕರೆದು ಬಿಜೆಪಿಗೆ ಹೋಗುವಂತೆ ಬೆದರಿಸುತ್ತಿದ್ದಾರೆ ಎಂದು ನಮಗೆ ಮಾಹಿತಿ ಬಂದಿದೆ ಎಂದು ಅವರು ಹೇಳಿದ್ದಾರೆ.
ಬೂತ್ ಮಟ್ಟದ ಏಜೆಂಟ್ ನೇಮಕ ಮಾಡಬೇಕಿದೆ. ಜತೆಗೆ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದ ಸಮಿತಿಗಳನ್ನು ತಿಂಗಳೊಳಗೆ ರಚಿಸಲಾಗುವುದು. ಹೀಗಾಗಿ ಅದನ್ನು ಪಟ್ಟಿ ಮಾಡಿಕೊಡಲು ಒಂದು ಮಾದರಿ ಕಳುಹಿಸಲಾಗುತ್ತಿದೆ. ಪ್ರತಿ ಬೂತ್ ಮಟ್ಟದಲ್ಲಿ ಡಿಜಿಟಲ್ ಯೂತ್, ಪಂಚಾಯಿತಿ ಮಟ್ಟದಿಂದ ಮಹಿಳೆಯರನ್ನು ಸಂಘಟನೆ ಮಾಡಬೇಕಿದೆ. ಎಲ್ಲ ಜಾತಿಯ ಯುವಕರು, ಮಹಿಳೆಯರು ಇರಬೇಕು ಎಂದು ಪಕ್ಷವನ್ನು ಮಾಸ್ ಬೇಸ್ ನಿಂದ ಕೇಡರ್ ಬೇಸ್ ಮಾಡಲು ಸಂಬಂಧಪಟ್ಟ ಮುಖಂಡರಿಗೆ ಮಾರ್ಗದರ್ಶನ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಹಿಂದೆ ನಮ್ಮ ಸರ್ಕಾರ ಜಾರಿಗೆ ತಂದ ಕಾರ್ಯಕ್ರಮಗಳನ್ನು ಈ ಸರ್ಕಾರ ತಡೆ ಹಿಡಿದಿದೆ. ಅವುಗಳನ್ನು ಮತ್ತೆ ಆರಂಭಿಸಲು ನಾವು ಸ್ಥಳೀಯವಾಗಿ ಹೋರಾಟ ಮಾಡುತ್ತೇವೆ. ಈ ವರ್ಷ ಕನಿಷ್ಠ 100 ರಿಂದ 150 ಕ್ಷೇತ್ರದಲ್ಲಿ ನಾನು, ನಮ್ಮ ವಿರೋಧ ಪಕ್ಷದ ನಾಯಕರು, ಇತರ ನಾಯಕರು ಹೋಗಿ ಜನರ ಧ್ವನಿಯಾಗಿ ಕೆಲಸ ಮಾಡುತ್ತೇವೆ.ನಮ್ಮ ಹೋರಾಟ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಮಾತ್ರ ಸೀಮಿತವಲ್ಲ. ನಮ್ಮ ಸವಾಲು, ಪ್ರತಿಜ್ಞೆ, ಸಂಕಲ್ಪ ಇವೆಲ್ಲವೂ ಬಿಜೆಪಿ ಸರ್ಕಾರವನ್ನು ರಾಜ್ಯ ಹಾಗೂ ದೇಶದಿಂದ ಕಿತ್ತೊಗೆಯುವುದಾಗಿದೆ. ನಮ್ಮ ಹೋರಾಟ ಏನಿದ್ದರೂ ಬೀದಿಗಿಳಿದು ಜನರ ಮಧ್ಯೆಯೇ ಹೊರತು ಕೊಠಡಿಯಲ್ಲಿ ಕೂತು ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಯಾವ ಬಣವೂ ಇಲ್ಲ. ಪಕ್ಷದ ಅಧ್ಯಕ್ಷನಾಗಿ ನಾನು ತಟಸ್ಥನಾಗಿದ್ದೇನೆ. ಯಾರಿಗೂ ನನ್ನ ಬೆಂಬಲವಿಲ್ಲ, ವಿರೋಧವೂ ಇಲ್ಲ. ಚುನಾವಣೆಯಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಚುನಾವಣೆ ಆಗಬೇಕು, ತಳಮಟ್ಟದಿಂದ ನಾಯಕರು ಬೆಳೆಯಬೇಕು ಎಂದು ರಾಹುಲ್ ಗಾಂಧಿ ಅವರು ತೀರ್ಮಾನಿಸಿದ್ದಾರೆ. ಹೀಗಾಗಿ ಚುನಾವಣೆ ನಡೆಯುತ್ತಿದ್ದು, ನಾವದಕ್ಕೆ ಪ್ರೋತ್ಸಾಹ ನೀಡುತ್ತೇವೆ ಎಂದಿದ್ದಾರೆ.
ಸಿಎಂ ಯಡಿಯೂರಪ್ಪನವರ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ನಾವೇ ಮಾತನಾಡಿದ್ದೇವೆ. ಇದು ಎಮ್ಮೆ ಚರ್ಮದ ಸರ್ಕಾರ ಎಂದು ಟೀಕಿಸಿದ್ದೇವೆ. ಈ ಪ್ರಕರಣದಲ್ಲಿ ಯಡಿಯೂರಪ್ಪನವರು ನೈತಿಕ ಹೊಣೆ ಹೊರಬೇಕಿದೆ. ಆ ಪಕ್ಷದ ದೆಹಲಿ ನಾಯಕರು, ಪ್ರತಿ ಸಂದರ್ಭದಲ್ಲಿ ಇದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಚೆಕ್ ನಿಂದ ಹಿಡಿದು, ಆರ್ ಟಿಜಿಎಸ್ ಮೂಲಕ ಲಂಚ ಪಡೆದಿರುವುದರವರೆಗೂ ಎಲ್ಲ ಭ್ರಷ್ಟಾಚಾರ ವಿಚಾರಗಳನ್ನು ಮುಂದಿಟ್ಟುಕೊಂಡು, ಅದರ ಜತೆಗೆ ಸರಕಾರದ ಜನವಿರೋಧಿ ನೀತಿ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.