ಅಧಿಕಾರ ಇಲ್ಲದಿದ್ದಾಗ ಅಧಿಕಾರಕ್ಕಾಗಿ ಹಾತೊರೆಯುವ ಶಾಸಕರು ಒಗ್ಗಟ್ಟು ಪ್ರದರ್ಶನ ಮಾಡ್ತಾರೆ. ಒಮ್ಮೆ ಅಧಿಕಾರ ಸಿಗುತ್ತಿದ್ದ ಹಾಗೆ ಗುಂಪುಗಾರಿಕೆ ಶುರುವಾಗುತ್ತದೆ. ಇದೆಲ್ಲಾ ಅಭಿವೃದ್ಧಿಗಾಗಿ ನಡೆಯುವ ಗುಂಪುಗಾರಿಕೆ ಎನ್ನುವುದು ಅಧಿಕಾರದಲ್ಲಿರುವ ನಾಯಕರ ಮಾತು. ಆದರೆ ಇದು ನಡೆಯುವುದು ಸ್ವಾರ್ಥ ಸಾಧನೆಗೆ ಸಹಕಾರಿ ಆಗದಿದ್ದರೆ ಈ ರೀತಿಯ ಭಿನ್ನಮತ ಶತಸಿದ್ಧ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟ ಸರ್ಕಾರವನ್ನು ಉರುಳಿಸುವಾಗ ಆಪರೇಷನ್ ಕಮಲಕ್ಕಾಗಿ ಬಿಜೆಪಿಯಲ್ಲಿದ್ದ ಒಗ್ಗಟ್ಟು ಮುರಿದುಬಿದ್ದಿದೆ. ಇದೀಗ ಗುಂಪುಗಾರಿಕೆ ಶುರುವಾಗಿದೆ. ಸಣ್ಣ ಪುಟ್ಟ ಭಿನ್ನಮತ ಆಗಿದ್ದರೆ ಮುಖ್ಯಮಂತ್ರಿ ಕರೆದು ಮಾತನಾಡಿ ಸರಿ ಮಾಡಬಹುದಿತ್ತು. ಆದರೆ ಇದೀಗ ಬಿಜೆಪಿಯಲ್ಲಿ ಎರಡು ಬಣಗಳಾಗಿವೆ. ನಿರ್ದಿಷ್ಟವಾಗಿ ಎರಡು ಶಕ್ತಿ ಕೇಂದ್ರಗಳಾಗಿ ಇಬ್ಭಾಗ ಆಗಿರೋದು ಕಾಣಿಸುತ್ತಿದೆ.
ಮುಖ್ಯಮಂತ್ರಿ ಬಿಎಸ್ ವೈ ಬದಲಾಗೋದು ಸತ್ಯನಾ..?
ಮುಖ್ಯಮಂತ್ರಿ ಸಿಎಂ ಬಿ.ಎಸ್ ಯಡಿಯೂರಪ್ಪ ಬದಲಾಗ್ತಾರೆ ಎನ್ನುವ ಮಾತು ಅಧಿಕಾರ ಹಿಡಿದು ಒಂದು ವರ್ಷ ಆಗ್ತಿದ್ದ ಹಾಗೆ ಶುರುವಾಗಿತ್ತು. ಅಂದಿನಿಂದಲೂ ಬಿ.ಎಸ್ ಯಡಿಯೂರಪ್ಪ ಆಗ ಬದಲಾಗ್ತಾರೆ, ಈಗ ಬದಲಾಗ್ತಾರೆ ಅನ್ನೋ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿದೆ. ಈ ಮಾತಿಗೆ ಪೂರಕ ಎನ್ನುವಂತೆ ಸಿಎಂ ಬಿ.ಎಸ್ ಯಡಿಯೂರಪ್ಪ ಯಾವುದೇ ನಿರ್ಧಾರ ತೆಗೆದುಕೊಂಡರೂ ಕೇಂದ್ರ ನಾಯಕರು ಅಡ್ಡ ನಿಲ್ಲುವ ಪ್ರವೃತ್ತಿ ಹೆಚ್ಚಾಗುತ್ತಲೇ ಇದೆ. ಇದೀಗ ಸ್ವತಃ ಹೈಕಮಾಂಡ್ ನಾಯಕರ ಮಟ್ಟದಲ್ಲಿಯೇ ಎರಡು ಬಣಗಳಾಗಿದ್ದು, ಇಂದು ಸ್ಪಷ್ಟವಾಗಿ ಹೊರ ಜಗತ್ತಿಗೆ ತಲುಪುವಂತಾಗಿದೆ. ರಾಜ್ಯ ಸರ್ಕಾರದ ಮೇಲೆ ಬೇರೊಂದು ಶಕ್ತಿ ನಿಯಂತ್ರಣಕ್ಕೆ ಮುಂದಾಗಿರುವುದು ಗೋಚರಿಸುತ್ತಿದೆ. ಸಿಎಂ ಬಿ.ಎಸ್ ಯಡಿಯೂರಪ್ಪ ಇತ್ತೀಚಿಗೆ ಸರಣಿ ನೇಮಕ ಮಾಡುತ್ತಿರುವುದು ನೋಡಿದರೆ ಬಿಜೆಪಿಯಲ್ಲಿ ಏನೋ ಬದಲಾವಣೆ ಪರ್ವ ನಡೆಯುತ್ತಿದೆಯೇನೋ ಎನಿಸುತ್ತಿದೆ.
ಕ್ಯಾಬಿನೆಟ್ ಗೂ ಬರಲಿಲ್ಲ, ಸಂಸದರ ಸಭೆಯೂ ಡಮ್ಮಿ..!
ಸಚಿವ ಸಂಪುಟ ವಿಸ್ತರಣೆ ಮಾಡುವ ಉದ್ದೇಶದಿಂದ ದೆಹಲಿ ಯಾತ್ರೆ ಮಾಡಿದ್ದ ಸಿಎಂ ಬಿ.ಎಸ್ ಯಡಿಯೂರಪ್ಪ ಅರ್ಧ ದಿನದಲ್ಲಿ ಬೆಂಗಳೂರಿಗೆ ವಾಪಸ್ ಆಗಿದ್ದರು. ಆ ಬಳಿಕ ನಿಗಮ ಮಂಡಳಿ ಸೇರಿದಂತೆ ಸಾಕಷ್ಟು ಕಡೆ ಬೆಂಬಲಿಗರ ನೇಮಕ ಮಾಡಲು ಮುಂದಾಗಿರುವ, ಕಡೇಗಾಲದಲ್ಲಿ ಸಮುದಾಯವನ್ನು ಓಲೈಸುವ ಉದ್ದೇಶದಿಂದ ವೀರಶೈವ ಲಿಂಗಾಯತ ನಿಗಮವನ್ನೂ ಸ್ಥಾಪಿಸಿ, 500 ಕೋಟಿ ಅನುದಾನವನ್ನೂ ಕೊಟ್ಟಿದ್ದಾರೆ. ಸಿಎಂ ಬಿ.ಎಸ್ ಯಡಿಯೂರಪ್ಪ ಮಾತ್ರ ಎರಡ್ಮೂರು ದಿನದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಅಂತಿಮ ಪಟ್ಟಿ ಬರಲಿದೆ ಎಂದು ಮಾಧ್ಯಮಗಳ ಎದುರು ಹುಳುಕು ಮುಚ್ಚುವ ಕೆಲಸ ಮಾಡ್ತಿದ್ದಾರೆ. ಆದರೆ ಇಂದಿನ ಕ್ಯಾಬಿನೆಟ್ ಸಭೆಗೆ ಹಲವು ಸಚಿವರು ಗೈರಾಗುವ ಮೂಲಕ ಸಿಎಂ ನಿಷ್ಠೆ ಬಿಟ್ಟು ಪಕ್ಷ ನಿಷ್ಠೆ ತೋರಿಸಲು ಮುಂದಾಗಿದ್ದಾರೆ. ಸಂಸದರ ಸಭೆ ಕರೆದು ನಾನು ಪ್ರಶ್ನಾತೀತ ನಾಯಕ ಎಂದು ತೋರಿಸಲು ಯತ್ನಿಸಿದ ಸಿಎಂ ಬಿ.ಎಸ್ ಯಡಿಯೂರಪ್ಪಗೆ ಮುಖಭಂಗವಾಗಿದೆ.
25 ಶಾಸಕರಲ್ಲಿ ಬಂದಿದ್ದು 11 ಸಂಸದರು ಮಾತ್ರ!
ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರ ರಚನೆಗೆ ಬಿ.ಎಸ್ ಯಡಿಯೂರಪ್ಪ ಪಾತ್ರ ಕಡಿಮೆ ಏನಿಲ್ಲ. ಪಾಕಿಸ್ತಾನದ ವಿರುದ್ಧ ನಡೆದ ಬಾಲಾಕೋಟ್ ದಾಳಿಯಿಂದ ಪ್ರೇರಿತರಾಗಿ ಮತ ಹಾಕಿದ್ರೋ ಗೊತ್ತಿಲ್ಲ. ಆದ್ರೆ, ಚುನಾವಣೆಗೂ ಮುನ್ನವೇ ಬಿ.ಎಸ್ ಯಡಿಯೂರಪ್ಪ 25 ಸ್ಥಾನಗಳನ್ನು ಗೆಲ್ತೇವೆ ಎಂದಿದ್ದರು. ಅವರ ಲೆಕ್ಕಾಚಾರದಲ್ಲಿ ಎಳ್ಳಷ್ಟೂ ಮಿಸ್ ಆಗಲಿಲ್ಲ. 25 ಸ್ಥಾನಗಳಲ್ಲೇ ಗೆದ್ದು ಬೀಗಿದ ಬಿ.ಎಸ್ ಯಡಿಯೂರಪ್ಪ, ನನ್ನನ್ನು ನಿರ್ಲಕ್ಷ್ಯ ಮಾಡಬೇಡಿ ಎನ್ನುವ ಸಂದೇಶ ರವಾನಿಸಿದರು. ಎಲ್ಲಾ ಕ್ಷೇತ್ರಗಳಲ್ಲೂ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಓಡಾಡಿ ಮತಯಾಚನೆ ಮಾಡಿ ಗೆಲ್ಲಿಸಿಕೊಂಡು ಬಂದರು. ಆದರೆ ಇಂದು ಕೇಂದ್ರದ ಯೋಜನೆಗಳು, ಅನುದಾನ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಗೆ ಹಾಜರಾಗಿದ್ದು ಮಾತ್ರ ಕೇವಲ 11 ಜನರು. ಇನ್ನುಳಿದ ಸಂಸದರು ದೆಹಲಿ ನಾಯಕರ ಕ್ಯಾಂಪ್ನಲ್ಲಿದ್ದಾರೆ ಎನ್ನುವ ಸ್ಪಷ್ಟ ಸಂದೇಶ ರವಾನೆಯಾಯ್ತು.
ದೆಹಲಿಯಲ್ಲಿ ಕುಳಿತು ಆಟ ಆಡ್ತಿರೋದು ಯಾರು?
ಈ ಪ್ರಶ್ನೆಗೆ ಸರಳವಾಗಿ ಸಿಗುವ ಉತ್ತರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್ಎಸ್ಎಸ್ ನಾಯಕ ಸಂತೋಷ್. ಇದೇ ಕಾರಣಕ್ಕಾಗಿ ಸಚಿವ ಸಂಪುಟ ವಿಸ್ತರಣೆಯೋ..? ಪುನಾರಚನೆಯೋ..? ಅಥವಾ ಮುಖ್ಯಮಂತ್ರಿ ಬದಲಾವಣೆಯೇ ಆಗಲಿ ದೆಹಲಿ ಮಟ್ಟದಲ್ಲಿ ಹೈಕಮಾಂಡ್ ಜೊತೆ ಚರ್ಚಿಸಿ ಅಂತಿಮ ಮಾಡುವುದು ಸಂತೋಷ್ ಮಾತ್ರ. ನಾಮಕಾವಸ್ತೆಗಾಗಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿ ಬರಬಹುದು ಅಷ್ಟೆ. ಅಂತಿಮ ನಿರ್ಧಾರದಲ್ಲಿ ಬಿ.ಎಸ್ ಯಡಿಯೂರಪ್ಪ ಪಾತ್ರ ಎಳ್ಳಷ್ಟೂ ಇರುವುದಿಲ್ಲ. ಇದೊಂದೇ ಕಾರಣಕ್ಕಾಗಿ ಶಾಸಕರು, ಸಚಿವರು, ಸಂಸದರು ಬಿ.ಎಸ್ ಯಡಿಯೂರಪ್ಪ ನಿವಾಸದಿಂದ ದೂರ ಆಗ್ತಿದ್ದಾರೆ. ಇನ್ನೂ ಬಿ.ಎಸ್ ಯಡಿಯೂರಪ್ಪ ಜೊತೆ ಗುರುತಿಸಿಕೊಂಡರೆ ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೆ ಸಿಲುಕುವ ಭಯದಿಂದ ಸಂತೋಷ್ ಮನೆಗೆ ಎಡತಾಕುತ್ತಿದ್ದಾರೆ. ಒಟ್ಟಾರೆ ಬಿಜೆಪಿ ಹೈಕಮಾಂಡ್ ಬಲಿಷ್ಠ ನಾಯಕತ್ವವನ್ನು ಹೊಡೆದು ಉರುಳಿಸುವ ಪರಿಪಾಠವನ್ನು ಕರ್ನಾಟಕದಲ್ಲೂ ಜಾರಿ ಮಾಡಿದೆ ಎನಿಸುತ್ತಿದೆ. ಬಿ.ಎಸ್ ಯಡಿಯೂರಪ್ಪ ಅವರು ಸಿಎಂ ಕುರ್ಚಿಗೆ ವಿದಾಯ ಹೇಳುವ ಸಮಯ ಬಂದಾಯ್ತು ಎಂದು ಸಂಸದರ ಸಭೆ ಸಾರಿ ಹೇಳುತ್ತಿದೆ. ಎರಡು ಶಕ್ತಿ ಕೇಂದ್ರಗಳಲ್ಲಿ ಸಂತೋಷ್ ಗುಂಪು ಬಲಾಢ್ಯವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.