ಪಕ್ಷದಿಂದ ಪಕ್ಷಕ್ಕೆ ಹಾರಿ ಅನರ್ಹರಾದ ಕರ್ನಾಟಕದ 17 ಶಾಸಕರ ಪ್ರಕರಣದ ಮೂಲಕ ಪಕ್ಷಾಂತರಿಗಳಿಗೆ ಒಂದು ಸ್ಪಷ್ಟ ಸಂದೇಶವನ್ನು ಸುಪ್ರೀಂ ಕೋರ್ಟ್ ಕೊಡಬಹುದು ಎಂದು ಎಲ್ಲರೂ ಕಾಯುತ್ತಿದ್ದರು.
ಆದರೆ, ಅದರ ತೀರ್ಪು ಹೊರ ಬರುತ್ತಿದ್ದಂತೆಯೇ ವಿವಿಧ ಪಕ್ಷಗಳ ನಿಷ್ಠಾವಂತ ನಾಯಕರು, ಕಾರ್ಯಕರ್ತರು ಮತ್ತು ಅದೆಲ್ಲಕ್ಕಿಂತ ಹೆಚ್ಚಾಗಿ ಅಸಂಖ್ಯಾತ ಮತದಾರರು ನಿರಾಸೆಗೊಂಡಿದ್ದಾರೆ.
ಏಕೆಂದರೆ, ಅಧಿಕಾರದ ಲಾಲಸೆಯಿಂದ ತಮ್ಮನ್ನು ಆಯ್ಕೆ ಮಾಡಿದ ಲಕ್ಷಾಂತರ ಮತದಾರರ ನಿರ್ಧಾರವನ್ನು ಬದಿಗೊತ್ತಿ ಗೆದ್ದ ಪಕ್ಷವನ್ನು ಬಿಟ್ಟು ಮತ್ತೊಂದು ಪಕ್ಷಕ್ಕೆ ಹಾರುವ ರಾಜಕಾರಣಿಗಳ ಬಗ್ಗೆ ಮತದಾರರಲ್ಲಿ ಜರಿಕೆ ಬಂದಿತ್ತು.
ವಿಧಾನಸಭೆಯ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಸಂವಿಧಾನದ 10 ನೇ ಪರಿಚ್ಛೇದದ ಪ್ರಕಾರ ಕಾಂಗ್ರೆಸ್ ಮತ್ತು ಜೆಡಿಎಸ್ ನ 17 ಶಾಸಕರನ್ನು ಅನರ್ಹ ಮಾಡಿದ್ದರು ಮತ್ತು 2023 ರ ವಿಧಾನಸಭೆ ಚುನಾವಣೆವರೆಗೆ ಸ್ಪರ್ಧಿಸುವುದನ್ನು ನಿಷೇಧಿಸಿದ್ದರು.
ಆದರೆ, ಈ ಎಲ್ಲಾ ಶಾಸಕರು ಸುಪ್ರೀಂಕೋರ್ಟಿನ ಬಾಗಿಲು ತಟ್ಟಿ ಎರಡ್ಮೂರು ತಿಂಗಳಿಂದ ತಮಗೆ ನ್ಯಾಯ ಬೇಕು ನ್ಯಾಯ ಬೇಕು ಎಂದು ಎಡತಾಕಿದರು.
ಸುಪ್ರೀಂಕೋರ್ಟ್ ಇವರ ಅರ್ಜಿಗಳನ್ನು ವಿಚಾರಣೆ ನಡೆಸಿ ಯಾರಿಗೂ ತೃಪ್ತಿಯನ್ನು ತಾರದ, ಯಾರಿಗೂ ಅತೃಪ್ತಿಯಾಗದ ರೀತಿಯಲ್ಲಿ ನ್ಯಾಯ ಹೇಳಿದೆ.
ಒಂದು ಕಡೆ ಪಕ್ಷಾಂತರದ ಹೊಸ್ತಿಲಲ್ಲಿದ್ದ ಶಾಸಕರ ಅನರ್ಹತೆ ಮಾಡಿದ್ದ ಸ್ಪೀಕರ್ ಆದೇಶವನ್ನು ಎತ್ತಿಹಿಡಿದಿದೆ. ಆದರೆ, ಅದೇ ಶಾಸಕರು 2023 ರವರೆಗೆ ಚುನಾವಣೆಗೆ ಸ್ಪರ್ಧಿಸುವುದನ್ನು ನಿಷೇಧಿಸಿದ ಸ್ಪೀಕರ್ ಅವರ ಆದೇಶವನ್ನು ಅಸಿಂಧುಗೊಳಿಸಿದೆ. ಶಾಸಕರನ್ನು ಅನರ್ಹಗೊಳಿಸಿದ ನಿರ್ಧಾರದಿಂದ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಸಂತಸಗೊಂಡಿದ್ದರೆ, ಅನರ್ಹರು ಎಂಬ ಹಣೆ ಪಟ್ಟಿ ಕಟ್ಟಿಕೊಂಡರೂ ಪರವಾಗಿಲ್ಲ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಕ್ಕಿತ್ತಲ್ಲಾ ಎಂದು ಕುಣಿದುಕುಪ್ಪಳಿಸಿದರು ಅನರ್ಹ ಶಾಸಕರು.

ಹಾಗಾದರೆ ಇಲ್ಲಿ ಜನಸಾಮಾನ್ಯರಿಗೆ ಮೂಡಿರುವ ಪ್ರಶ್ನೆಯೆಂದರೆ ಇಡೀ ದೇಶಕ್ಕೆ ನ್ಯಾಯ ಹೇಳುವ ಸುಪ್ರೀಂಕೋರ್ಟ್ ಮನಸ್ಸು ಮಾಡಿದ್ದರೆ ಸ್ಪೀಕರ್ ನೀಡಿದ್ದ ಆದೇಶಕ್ಕೆ ಸಮ್ಮತಿ ಸೂಚಿಸಿ ಅನರ್ಹ ಶಾಸಕರನ್ನು ಚುನಾವಣೆಯಿಂದ ನಿಷೇಧಿಸಿದ್ದರೆ ಪಕ್ಷಾಂತರಿಗಳಿಗೆ ಒಂದು ಸ್ಪಷ್ಟ ಸಂದೇಶವನ್ನು ರವಾನಿಸಬಹುದಿತ್ತು. ಒಂದು ವೇಳೆ ಹೀಗೆ ಮಾಡಿದ್ದಿದ್ದರೆ ಯಾರೂ ಕೂಡ ಸುಪ್ರೀಂ ಕೋರ್ಟಿನ ತೀರ್ಪನ್ನು ಪ್ರಶ್ನಿಸುತ್ತಿರಲಿಲ್ಲ. ಆದರೆ, ಸುಪ್ರೀಂ ಕೋರ್ಟ್ ಅಂತಹ ತೀರ್ಪನ್ನು ನೀಡುವಲ್ಲಿ ಹಿಂದೆ ಬಿದ್ದಿದ್ದಾದರೂ ಏಕೆ? ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದೆ.
ಹೌದು ಮನಸ್ಸು ಮಾಡಿದ್ದರೆ ಅಥವಾ ಜನರಿಂದ ಆಯ್ಕೆಯಾಗಿ ತಮ್ಮ ಸ್ವೇಚ್ಛೆಗಾಗಿ ಅವಧಿಗೆ ಮುನ್ನವೇ ಅಧಿಕಾರದ ಆಸೆಗೋಸ್ಕರ ಜನರ ಅಭಿಪ್ರಾಯವನ್ನೂ ಕೇಳದೇ ರಾಜೀನಾಮೆ ಕೊಟ್ಟು ಮತ್ತೊಂದು ಪಕ್ಷಕ್ಕೆ ಹಾರುವ ಇಂತಹ ಪ್ರತಿನಿಧಿಗಳಿಗೆ ತಕ್ಕ ಶಾಸ್ತಿಯನ್ನೇ ಮಾಡಿ ಯಾವ ಕಾರಣಕ್ಕಾಗಿ ನಾವು ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿದ್ದೇವೆ ಎಂಬುದರ ಬಗ್ಗೆ ವಿವರಣೆಯನ್ನೂ ಕೊಡಬಹುದಿತ್ತು.
ಈ ಮೂಲಕ ಸುಪ್ರೀಂ ಕೋರ್ಟ್ ಒಂದು ಐತಿಹಾಸಿಕ ತೀರ್ಪನ್ನು ತನ್ನ ಹೆಸರಿನಲ್ಲಿ ಬರೆದು ಭವಿಷ್ಯದ ಜನಪ್ರತಿನಿಧಿಗಳಿಗೆ ಒಂದು ಉತ್ತಮ ಹಾದಿಯನ್ನು ತೋರಬಹುದಿತ್ತು.
ಆದರೆ, ಇವುಗಳಾವುದಕ್ಕೂ ಸರ್ವೋಚ್ಛ ನ್ಯಾಯಾಲಯ ಮನಸ್ಸು ಮಾಡಿದಂತೆ ಕಾಣಲಿಲ್ಲ. ಏಕೆಂದರೆ, ಪ್ರಕರಣ ಹೇಗೆಯೇ ಇರಲಿ. ಅದು ಹಿತವೋ ಅಲ್ಲವೋ, ಸುಪ್ರೀಂಕೋರ್ಟ್ ಆಗಿರಲಿ ಅಥವಾ ಇನ್ನಾವುದೇ ನ್ಯಾಯಾಲಯವಾಗಿರಲಿ. ಅವುಗಳಿಗೆ ಸಂವಿಧಾನವೆಂಬುದು ಒಂದು ಭಗವದ್ಗೀತೆ ಇದ್ದಂತೆ. ಅದರಲ್ಲಿನ ಅಂಶಗಳ ಹೊರತಾಗಿ ನ್ಯಾಯಾಧೀಶರು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ.
ಇಲ್ಲಿ ಸುಪ್ರೀಂ ಕೋರ್ಟ್ ಪಕ್ಷಾಂತರಿಗಳಿಗೆ ತಕ್ಕ ಶಾಸ್ತಿಯನ್ನು ನೀಡಬಹುದಿತ್ತು ಎಂಬ ತರ್ಕ ಎದ್ದು ಕಂಡರೂ, ನ್ಯಾಯಾಲಯ ಪಾಲಿಸುವ ಸಂವಿಧಾನದಲ್ಲಿಯೇ ಲೋಪ ಇರುವಾಗ ನ್ಯಾಯಾಲಯ ತಾನೇ ಏನು ಮಾಡಲು ಸಾಧ್ಯ ಎಂಬ ಮತ್ತೊಂದು ತರ್ಕ ಎದುರಾಗುತ್ತದೆ.
ಹೀಗಾಗಿ ಸಂವಿಧಾನದ 10 ನೇ ಪರಿಚ್ಛೇದದ ಪ್ರಕಾರ ಶಾಸಕರನ್ನು ಅನರ್ಹಗೊಳಿಸಿದ್ದ ಸ್ಪೀಕರ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಆದರೆ, ಅವರಿಗೆ ಶಿಕ್ಷೆ ವಿಧಿಸದಿರುವ ನ್ಯಾಯಾಲಯ ತನ್ನ ನಿರ್ಧಾರಕ್ಕೆ 10 ನೇ ಪರಿಚ್ಛೇದದ ವಿಧಿ 191(1) ಮತ್ತು 191(2) ರ ಉಲ್ಲೇಖದ ನೆರವು ಪಡೆದಿದೆ. ಇದರ ಪ್ರಕಾರ ಇಂತಹ ವ್ಯಕ್ತಿಗಳನ್ನು ಚುನಾವಣೆಯಿಂದ ನಿಷೇಧಿಸುವಂತಿಲ್ಲ ಎಂದು ಹೇಳಿದೆ. ಇದಕ್ಕೆ ಪೂರಕವಾಗಿ ಚುನಾವಣೆ ಆಯೋಗವೂ ಸಹ ಧ್ವನಿಗೂಡಿಸಿದ್ದು, ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿದೆ ಎಂದು ಹೇಳಿದೆ.
ಜನಪ್ರತಿನಿಧಿಗಳ ಕಾಯ್ದೆ 164(1ಬಿ) ಮತ್ತು 361 ಬಿ ಪ್ರಕಾರ ಅನರ್ಹತೆಯು ಒಬ್ಬ ವ್ಯಕ್ತಿಯನ್ನು ಚುನಾವಣೆ ಸ್ಪರ್ಧೆಯಿಂದ ದೂರ ಇಡಲು ಸಾಧ್ಯವಿಲ್ಲ ಎಂದು ಹೇಳುತ್ತವೆ. ಈ ವಿಧಿಗಳನ್ನೇ ಉಲ್ಲೇಖ ಮಾಡಿ ಚುನಾವಣೆ ಆಯೋಗ ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡುವುದಾಗಿ ಹೇಳಿದ್ದು.
ಇನ್ನು ರಾಜೀನಾಮೆ ಕೊಟ್ಟಿದ್ದ ಶಾಸಕರ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಅವಸರಪಟ್ಟರು ಎನ್ನಬಹುದು. ಈ ಅವಸರದಿಂದಲೇ ಸ್ಪೀಕರ್ ಮೇಲೆ ಒತ್ತಡ ಹೇರಿ ತರಾತುರಿಯಲ್ಲಿ ಅನರ್ಹಗೊಳಿಸುವ ಮತ್ತು ಚುನಾವಣೆಯಿಂದ ಸ್ಪರ್ಧಿಸುವುದನ್ನು ನಿಷೇಧಿಸುವಂತೆ ನೋಡಿಕೊಂಡರು ಎಂಬ ಮಾತುಗಳು ಕೇಳಿಬಂದಿದ್ದವು.
ಹೌದು ಶಾಸಕರನ್ನು ಅನರ್ಹಗೊಳಿಸಿ ದಿನದೂಡಬಹುದಿತ್ತು. ನಂತರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಬಹುದಿತ್ತು.
ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಸಂವಿಧಾನದ 10 ನೇ ಪರಿಚ್ಛೇದದಲ್ಲಿರುವ ಲೋಪವನ್ನು ಸರಿಪಡಿಸುವ ಕೆಲಸ ಸಂಸತ್ತಿನಿಂದ ಜರೂರಾಗಿ ಆಗಬೇಕಿದೆ.
ಕೃಪೆ: ದಿ ವೈರ್