• Home
  • About Us
  • ಕರ್ನಾಟಕ
Thursday, July 10, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಪಂಜಾಬಿ ದಲಿತ- ಬಂತ್ ಎಂಬ ಅನಂತ!

by
July 6, 2020
in ದೇಶ
0
ಪಂಜಾಬಿ ದಲಿತ- ಬಂತ್ ಎಂಬ ಅನಂತ!
Share on WhatsAppShare on FacebookShare on Telegram

ದೇಶದಲ್ಲಿ ಅತಿ ಹೆಚ್ಚು ಶೇಕಡವಾರು ದಲಿತರನ್ನು ಹೊಂದಿರುವ ರಾಜ್ಯ ಪಂಜಾಬ್ ಎಂಬ ಸಂಗತಿ ಬಹಳ ಮಂದಿಗೆ ತಿಳಿದಿರಲಾರದು. ಹೇಳಿ ಕೇಳಿ 2011ನೆಯ ಜನಗಣತಿ ಪ್ರಕಾರ ಈ ರಾಜ್ಯದ ಜನರ ಪೈಕಿ ದಲಿತರ ಪ್ರಮಾಣ ಶೇ.31.94ರಷ್ಟು. ಕಳೆದ ಒಂಬತ್ತು ವರ್ಷಗಳಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಿದ್ದೀತೇ ವಿನಾ ಕಮ್ಮಿಯಾಗಿರುವುದಿಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿದ್ದರೂ ರಾಜ್ಯಾಧಿಕಾರ ಇವರಿಗೆ ದಕ್ಕಿಲ್ಲ. ನಾನಾ ಜಾತಿಗಳು ಒಳಪಂಗಡಗಳಲ್ಲಿ ಹಂಚಿ ಹೋಗಿರುವ ದಲಿತರಿಗೆ ಅಧಿಕಾರ ಹಗಲುಗನಸು. ಮುಖ್ಯಮಂತ್ರಿ ಹುದ್ದೆ ಎಂದಿದ್ದರೂ ಶೇ.20ರಷ್ಟಿರುವ ಜಾಟ್ ಸಿಖ್ಖರ ಪಾಲು.

ADVERTISEMENT

ಮುಕ್ಕಾಲು ಪಾಲು ದಲಿತರು ಗ್ರಾಮೀಣವಾಸಿಗಳು. ಜಾಟ ಸಿಖ್ಖರ ಹೊಲಗದ್ದೆಗಳಲ್ಲಿ ಕೂಲಿ ಮಾಡಿ ಅನ್ನ ಸಂಪಾದಿಸುವವರು. ಕೃಷಿಗೆ ಯಂತ್ರಗಳು ಕಾಲಿಟ್ಟ ನಂತರ ಈ ಕೂಲಿ ಕೆಲಸವೂ ಕೈ ತಪ್ಪಿದೆ. ಜಮೀನಿನ ಒಡೆತನ ಇವರ ಪಾಲಿಗೆ ಗಗನ ಕುಸುಮ. ಮಲ ಬಳಿವ ದಲಿತರ ಸಂಖ್ಯೆಯಲ್ಲಿ ದೇಶದಲ್ಲೇ ಐದನೆಯ ಸ್ಥಾನ ಪಂಜಾಬಿನದು. ದಲಿತರ ಮೇಲೆ ದಮನ ದೌರ್ಜನ್ಯಗಳು ನಿರಂತರ.

ಪಂಜಾಬಿನಲ್ಲಿ ಕೂಡ ದಲಿತರ ಕೇರಿಗಳು ಊರಿನ ಅಂಚಿಗಿರುತ್ತವೆ. ಪಶ್ಚಿಮ ದಿಕ್ಕಿಗಿರುವುದು ವಾಡಿಕೆ. ಮುಂಜಾನೆಯ ಸೂರ್ಯನ ಕಿರಣಗಳು ಮೇಲ್ಜಾತಿಗಳ ಕೇರಿಗಳ ಮೇಲೆ ಬೀಳುವ ಮುನ್ನ ಅಸ್ಪೃಶ್ಯರ ಹಟ್ಟಿಗಳನ್ನು ತಾಕಿ ಮೈಲಿಗೆ ಆಗದಂತೆ ವಹಿಸಿರುವ ಎಚ್ಚರಿಕೆ. ಚರಂಡಿಯ ರೊಜ್ಜು ಕೂಡ ಪೂರ್ವದ ಎತ್ತರದಿಂದ ಪಶ್ಚಿಮದ ತಗ್ಗಿನುದ್ದಕ್ಕೆ ಚಾಚಿ ಹರಿಯಬೇಕು.

ಮಾನ್ಸಾ ಜಿಲ್ಲೆಯಲ್ಲಿ ಇಂತಹುದೊಂದು ಹಳ್ಳಿ ಬುರ್ಜ್ ಝಬ್ಬರ್. ಉಚ್ಚಕುಲದ ಜಮೀನ್ದಾರಿ ಜಾಟರು ನೂರಕ್ಕೆ ಐವತ್ತೈದು ಮಂದಿ. ದಲಿತರು ನೂರಕ್ಕೆ ನಲವತ್ತೈದು ಮಂದಿ. ಒಟ್ಟು ಜನಸಂಖ್ಯೆ 1,500. ಎಲ್ಲ ದಲಿತ ಕುಟುಂಬಗಳ ಒಬ್ಬಿಬ್ಬರು ಯುವಕರಿಗೆ ಜಾಟರ ವಾಡೆಗಳಲ್ಲಿ ಕೂಲಿ ಚಾಕರಿ. ಕೈಗೆ ಬೀಳುವ ಕಾಸು ತಿಂಗಳಿಗೆ ಎರಡು ಸಾವಿರಕ್ಕೂ ಕಡಿಮೆ. ಅಮಲಿನ ವ್ಯಸನಕ್ಕೆ ಬಿದ್ದ ನತದೃಷ್ಟರಿಗೆ ಅಫೀಮಿನ ಕೂಲಿ. ಹಗಲಿರುಳು ದಣಿಯದ ದುಡಿತ.

ಆತನ ಹೆಸರು ಬಂತ್ ಸಿಂಗ್. ಹುಟ್ಟಿನಿಂದ ಮಲ ಬಳಿಯುವ ಭಂಗಿ ಜಾತಿಗೆ ಸೇರಿದ ಈತ ಸಿಖ್ ಧರ್ಮದ ಅನುಯಾಯಿ. ಮೇಲ್ಜಾತಿಗಳ ಅಡಿಯಾಳಾಗಿ ಅವರ ಹೊಲಗದ್ದೆಗಳಲ್ಲಿ ದುಡಿಯಲು ಒಲ್ಲೆನೆಂದ ಸ್ವಾಭಿಮಾನಿ. ಶುರುವಿನಲ್ಲಿ ಹೆಣ್ಣುಮಕ್ಕಳ ಸಿಂಗಾರ ಸಾಧನಗಳನ್ನು ಮಾರಿ ಸಂಪಾದಿಸಿದ. ನಂತರ ಹಂದಿಗಳನ್ನು ಸಾಕಿ ತನ್ನ ಕಾಲ ಮೇಲೆ ನಿಂತ.

ಎಲ್ಲರೂ ಹೊಟ್ಟೆ ತುಂಬ ಉಂಡು ಉಟ್ಟು ಘನತೆಯಿಂದ ತಲೆಯೆತ್ತಿ ಬದುಕುವ ಶೋಷಣೆ ಮುಕ್ತ ಸಮಾಜದ ಕನಸು ಕಂಡವನು. ‘ಮಜ್ದೂರ್ ಮುಕ್ತಿ ಮೋರ್ಚಾ’ದ ಕಡು ನಿಷ್ಠೆಯ ಕಾಲಾಳು. ”ನಮ್ಮ ಜೀವಕ್ಕಿಂತ ಪ್ರಿಯವಾದದ್ದು ನಮ್ಮ ದೇಶ ಕಣೋ ಗೆಳೆಯಾ, ದೇಶಕ್ಕಿಂತ ಪ್ರೀತಿಪಾತ್ರರು ಜೀವಂತ ಜನರು ಕಣೋ ಗೆಳೆಯಾ, ರಕ್ತಹೀರುವ ಜಿಗಣೆಗಳ ಹೊಸಕಿ ಹಾಕುವೆವೋ ಗೆಳೆಯಾ” ಎಂಬಂಥ ಕ್ರಾಂತಿ ಗೀತೆಗಳಿಗೆ ಪಂಜಾಬಿನ ಜನಸಭೆಗಳಲ್ಲಿ ಮೊಳಗಿದ ದನಿಯಾಗಿ ಲಕ್ಷ ಲಕ್ಷ ಎದೆಗಳ ಕದ ತಟ್ಟಿದವನು. ಎಲ್ಲಕ್ಕಿಂತ ಹೆಚ್ಚಾಗಿ ಮೇಲ್ಜಾತಿಗಳ ಹೊಲಗದ್ದೆಗಳ ಚಾಕರಿಯ ಹಂಗು ಹರಿದುಕೊಂಡು ಸ್ವಂತ ಕಾಲ ಮೇಲೆ ಎದೆ ಸೆಟೆಸಿ ನಿಂತವನು. ಅವರಂತೆ ಬಿಳಿ ಬಟ್ಟೆ ಧರಿಸಿ ಅವರ ಕಣ್ಣುಗಳನ್ನು ಕೆಂಪಾಗಿಸಿದವನು. ಮಕ್ಕಳನ್ನು ಶಾಲೆಗೆ ಕಳಿಸಿದವನು. ಬಡವರ ರೇಷನ್ ಕದಿಯುತ್ತಿದ್ದ ನ್ಯಾಯಬೆಲೆ ಅಂಗಡಿಯ ಲೈಸೆನ್ಸ್ ರದ್ದು ಮಾಡಿಸಿದವನು. ಒಟ್ಟಾರೆ ಮೇಲ್ಜಾತಿಯವರ ಸಿಟ್ಟುಗಳನ್ನು ಸೆರಗಿಗೆ ಕಟ್ಟಿಕೊಂಡು ಬದುಕುತ್ತಿದ್ದವನು.

ಇಂತಹ ಬಂತ್ ಸಿಂಗ್ ನ ಹಿರಿಯ ಮಗಳು ಬಲ್ಜಿತ್ ಕೌರ್. ವರ್ಷದೊಪ್ಪತ್ತಿನಲ್ಲಿ ಹಸೆಮಣೆ ಏರಬೇಕಿದ್ದ ಹದಿನೇಳರ ಬಾಲೆ. ಮದುವೆ ನಿಶ್ಚಿತಾರ್ಥ ಮುಗಿದಿತ್ತು. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಜರುಗಿತ್ತು. ”ಹಳ್ಳಿ ಅಂದ್ರೆ ಇಂಥವೆಲ್ಲ ನಡೀತವೆ ತಮ್ಮಾ, ದುಡ್ಡುಗಿಡ್ಡು ಇಸಕೊಂಡು ಮಗಳ ಮದುವೆ ಮಾಡಿಬಿಡು, ಪೊಲೀಸು ಠಾಣೆಯ ಮೆಟ್ಟಿಲು ಹತ್ತಬೇಡ” ಎಂದು ಬುದ್ಧಿ ಹೇಳಿದ ಸರಪಂಚ. ಈ ದುಡ್ಡುಗಿಡ್ಡು ಎನ್ನುವುದು ಸಾವಿರದೈನೂರರಿಂದ ಎರಡು ಸಾವಿರ ರುಪಾಯಿಯ ಮೊತ್ತವನ್ನು ಮೀರುತ್ತಿರಲಿಲ್ಲ. ಬಂತ್ ಸಿಂಗನೊಳಗಿನ ಬಂಡುಕೋರ ಸಿಡಿದು ನಿಂತಿದ್ದ. ಅನ್ಯಾಯ ಸಹಿಸಲು ಸಿದ್ಧನಿರಲಿಲ್ಲ.

ಠಾಣೆಗೆ ಹೋದರೆ ಅಲ್ಲಿಯೂ ಪೊಲೀಸರಿಂದ ಬುದ್ಧಿವಾದ. ಜಾಟರನ್ನು ಎದುರು ಹಾಕಿಕೊಂಡು ದಲಿತ ಬದುಕಲಾದೀತೇ, ಹೆಸರು ಕೆಟ್ಟ ಮಗಳಿಗೆ ಮದುವೆ ಸಾಧ್ಯವೇ, ಸಿಕ್ಕ ಸಿಕ್ಕವರ ಲಾಲಸೆಗೆ ಬಲಿಯಾದಾಳು ಮಗಳು ಎಂದು ಎಚ್ಚರಿಕೆ. ತಂದೆ ಮಗಳ ಜೋಡಿ ನ್ಯಾಯವೇ ಬೇಕೆಂದು ಜಿದ್ದಿಗೆ ಬಿದ್ದಿತು. ಮದುವೆ ನಿಶ್ಚಿತಾರ್ಥ ಮುರಿದು ಬಿತ್ತು. ”ಲಜ್ಜೆಗೆಟ್ಟ ಕೆಲಸ ಮಾಡಿದವರು ಅವರು, ನನಗ್ಯಾಕೆ ನಾಚಿಕೆಯಾಗಬೇಕು” ಎಂದಳು ದಿಟ್ಟ ಮಗಳು.

ಅಪ್ಪ ಹೇಳಿಕೊಟ್ಟ ಸ್ವಾಭಿಮಾನದ ಗುಂಡಿಗೆಯವಳು.

”……ಆಸೆ ಹಂಬಲಗಳ ಕತ್ತು ಹಿಸುಕಿ ವರದಕ್ಷಿಣೆಯ ಜೊತೆಗೆ ಬಿಕರಿಗಿಡುವ

ಹಳ್ಳಿಗಳಲ್ಲಿ ಹೆಣ್ಣು ಸಂತಾನ ಹುಟ್ಟದಿರಲಿ,

ಹಡೆದಪ್ಪನೇ, ನನ್ನ ವರದಕ್ಷಿಣೆಯಲ್ಲಿ ಪಿಸ್ತೂಲೊಂದನ್ನು ನನಗೆ ಕೊಟ್ಟುಬಿಡು” ಎಂಬ ಕ್ರಾಂತಿಗೀತೆಯನ್ನು ಕೇಳಿ ಬೆಳೆದವಳು.

ಪಂಜಾಬಿನ ಹಳ್ಳಿಗಳಲ್ಲಿ ಅಪ್ರಾಪ್ತ ದಲಿತ ಬಾಲೆಯರ ಮೇಲೆ ಅತ್ಯಾಚಾರ ಸರ್ವೇಸಾಮಾನ್ಯ ಸಂಗತಿ. ಹುಲ್ಲು ಕೊಯ್ಯಲೆಂದೋ, ಬಹಿರ್ದೆಸೆಗೆಂದೋ ಜಮೀನ್ದಾರ ಜಾಟರ ಹೊಲಗಳನ್ನು ಹೊಕ್ಕ ಅಪರಾಧಕ್ಕಾಗಿ ಇಂತಹ ಬೆಲೆ ತೆರಬೇಕಾಗುವುದು. ʼದಲಿತ ಹುಡುಗಿಯೇ ಮೇಲುಜಾತಿ ಹುಡುಗರಿಗೆ ಮರುಳಾಗಿ ಮೈಮೇಲೆ ಬೀಳುವಳು. ಮೇಲೆ ಬಿದ್ದವಳೊಂದಿಗೆ ರಮಿಸುವ ಮೇಲ್ಜಾತಿ ಹುಡುಗರು ಉಪಕಾರ ಮಾಡಿದಂತೆಯೇ ಲೆಕ್ಕ. ನಿಮ್ಮ ಹುಡುಗೀನ ಹದ್ದುಬಸ್ತಿನಲ್ಲಿಡಿʼ ಎಂದು ದಲಿತ ತಂದೆ ತಾಯಿಗಳಿಗೆ ಬೆದರಿಕೆ. ಪ್ರತಿಭಟಿಸಿದರೆ ಪುಡಿಕಾಸನ್ನು ಕೈಲಿಟ್ಟು ಗದುಮಿದರೆ ಮುಗಿಯಿತು.

ಪಂಜಾಬಿನ ಕೆಳಜಾತಿಗಳಿಗೆ ವಿಮೋಚನೆಯ ದಾರಿಯಾಗಿ ಕಂಡಿತ್ತು ಗುರು ನಾನಕರ ಸಿಖ್ ಧರ್ಮ. ಗುರು ಗೋವಿಂದ ಸಿಂಗ್ ಅವರ ‘ಪಂಚ ಪ್ಯಾರೇ’ಗಳ ಪೈಕಿ ಹಿಮ್ಮತ್ ರೈ ನೀರುಗಂಟಿ, ಭಾಯಿ ಸಾಹಿಬ್ ಚಂದ್ ಕ್ಷೌರಿಕ, ಭಾಯಿ ಮೋಹ್ಕಮ್ ಚಂದ್ ಮಡಿವಾಳ ಜಾತಿಗೆ ಸೇರಿದವರು. ಜಾತಿ ವ್ಯವಸ್ಥೆಯನ್ನು ಟೀಕಿಸಿದ ಸಂತರಾದ ಕಬೀರ, ನಾಮದೇವ ಹಾಗೂ ರವಿದಾಸರ ವಚನಗಳು ಸಿಖ್ಖರ ಪವಿತ್ರ ಗ್ರಂಥ ‘ಗುರುಗ್ರಂಥ ಸಾಹಿಬ್’ನಲ್ಲಿ ಸ್ಥಾನ ದೊರೆತಿದೆ. ಮಲಬಳಿಯುವ ಜಾತಿಗೆ ಸೇರಿದ ಭಾಯಿ ಜೈತಾ ಗೆ ‘ಗುರುಪುತ್ರ’ ಸಮ್ಮಾನ ನೀಡಿ ಆಲಂಗಿಸಿಕೊಂಡಿದ್ದರು ಗುರುಗೋವಿಂದ್ ಸಿಂಗ್. ದಲಿತ ಅಸ್ಮಿತೆಯು ಸಿಖ್ ಅಸ್ಮಿತೆಯಲ್ಲಿ ವಿಲೀನ ಆಯಿತು. ಆದರೂ ಸಿಖ್ ಧರ್ಮದಲ್ಲಿ ಅಸಮಾನತೆ ಅಳಿಯಲಿಲ್ಲ. ಕೆಳಜಾತಿಗಳು ಮತ್ತು ಮೇಲ್ಜಾತಿಗಳ ಸಿಖ್ಖರ ನಡುವೆ ವಿವಾಹ ಸಂಬಂಧಗಳು ಏರ್ಪಡಲೇ ಇಲ್ಲ. ಜಾತಿ ವ್ಯವಸ್ಥೆ ಎಂಬ ಉಕ್ಕಿನ ಚೌಕಟ್ಟನ್ನು ಸಿಖ್ ಧರ್ಮವೂ ಮುರಿಯದೆ ಹೋಯಿತು. ಮತಾಂತರ ಹೊಂದಿದ ದಲಿತರು ಅಸ್ಪೃಶ್ಯರಾಗಿಯೇ ಉಳಿದರು. ಮೇಲ್ಜಾತಿಗಳು ಅವರೊಂದಿಗೆ ಕುಳಿತು ಉಣ್ಣಲಿಲ್ಲ. ಅಸ್ಮಿತೆ ವಿಲೀನ ಆದರೂ ದಲಿತರ ಬಾವಿಗಳು, ಸ್ಮಶಾನಗಳ ಪ್ರತ್ಯೇಕ ಅಸ್ತಿತ್ವ ಅಳಿಯಲಿಲ್ಲ. ಕಟ್ಟ ಕಡೆಗೆ ಪ್ರತ್ಯೇಕ ಗುರುದ್ವಾರಗಳೂ ತಲೆಯೆತ್ತಿ ನಿಂತವು. ಅಸ್ಪೃಶ್ಯರಾಗಿಯೇ ಉಳಿದ ಮಜಹಬಿ ಸಿಖ್ಖರಿಗೆ ಆತ್ಮಘನತೆ ಸಿಗಲಿಲ್ಲ. ಜಮೀನುದಾರ ಜಾಟ ಸಿಖ್ಖರಿಗೆ ಅಡಿಯಾಳುಗಳಾಗೇ ಉಳಿದರು. ದಲಿತ ಕೂಲಿಗಳ ಕುಟುಂಬ ಮದುವೆಗೆಂದು ಪಡೆದ ಐದು ಸಾವಿರ ರುಪಾಯಿಗಳ ಸಾಲ ಮುಂದಿನ ಹನ್ನೊಂದು ವರ್ಷಗಳ ತನಕ ಐವತ್ತೈದು ಸಾವಿರ ರುಪಾಯಿ ತೆತ್ತರೂ ತೀರದ ಕ್ರೂರ ಸ್ವರೂಪದ ಶೋಷಣೆಗಳು ಇಂದಿಗೂ ಮುಂದುವರೆದಿವೆ.

ದಲಿತನೊಬ್ಬ ಗ್ರಾಮದ ಸರಪಂಚನ ಮಾತು ಮೀರಿ ನ್ಯಾಯ ಕೋರಿ ಕೋರ್ಟ್ ಮೆಟ್ಟಿಲು ತುಳಿದ ವಿರಳ ಪ್ರಕರಣವಿದು. ಅಪರಾಧಿಗಳಿಗೆ ಜೀವಾವಧಿ ಜೈಲು ಶಿಕ್ಷೆಯಾಯಿತು. ಮೇಲ್ಜಾತಿಗಳಿಗೆ ನಡು ಬಗ್ಗಿಸಲು ನಿರಾಕರಿಸಿದ ”ಅಪರಾಧ”ಕ್ಕಾಗಿ ಬಂತ್ ಸಿಂಗ್ ಮತ್ತು ಆತನ ಕುಟುಂಬ ಭಾರಿ ಬೆಲೆ ತೆರಬೇಕಾಗಿ ಬಂದಿತ್ತು.

ಲೋಹ್ರಿ ಹಬ್ಬದ ಮುನ್ನಾದಿನ. ಜನಸಭೆಗಳ ಕರಪತ್ರಗಳ ಹಂಚಿ ಬುರ್ಜ್ ಝಬ್ಬರ್ ಹಾದಿಯನ್ನು ಸೈಕಲ್ ತುಳಿದು ಕ್ರಮಿಸುತ್ತಿದ್ದಾಗ ಹೊತ್ತು ಕಂತಿ ಕತ್ತಲು ಇಳಿದಿತ್ತು. ಮಕ್ಕಳಿಗೆ ಸಿಹಿ ಉಣಿಸು ಬೇಯಿಸಲು ಬೇಕಾಗಿದ್ದ ಹೈನು ಪದಾರ್ಥ ಖೋಯಾ ಖರೀದಿಸಿ ಕ್ರಾಂತಿ ಗೀತೆಯ ಗುನುಗುತ್ತಿದ್ದ ಬಂತ್ ಸಿಂಗ್. ‘ಮಲಬಳಿಯುವ’ ಕೀಳು ಭಂಗಿ’ಯ ಬಂಡು ದನಿಯನ್ನು ಅನವರತ ಅಡಗಿಸುವ ಹುನ್ನಾರ ಹಾದಿಯಲ್ಲಿ ಹೊಂಚು ಹಾಕಿ ಕಾದಿತ್ತು. ಈ ಹಿಂದೆ ಎರಡು ಸಲ ಹಲ್ಲೆ ನಡೆಸಿದ್ದ ಅದೇ ಏಳು ಮೇಲ್ಜಾತಿ ಪಡ್ಡೆಗಳು ಅಡ್ಡಗಟ್ಟಿದ್ದವು. ಕೈಯಲ್ಲಿ ಕೊಳವೆ ಬಾವಿಗಳ ಹ್ಯಾಂಡ್ ಪಂಪುಗಳ ಮಣಭಾರ ಹಿಡಿಕೆಗಳು. ತಮ್ಮ ‘ಬೇಟೆ’ಯನ್ನು ನೆಲಕ್ಕೆ ಕೆಡವಿ ಒತ್ತಿ ಹಿಡಿದು ಮಂಡಿಯ ಕೆಳಭಾಗದ ಮೂಳೆಗಳನ್ನು ಕಸುವಿನಿಂದ ಬೀಸಿ ಬೀಸಿ ಜಜ್ಜಿದವು. ”ದಲಿತ ಕೇರಿಯತ್ತ ಸುಳಿಯಬೇಡಿ ಅಂತೀಯಾ, ನಾವು ಎಲ್ಲಿ ಬ್ಯಾಡ್ಮಿಂಟನ್ ಆಡಬೇಕೆಂದು ತೀರ್ಮಾನಿಸುವವನು ನೀನ್ಯಾವನು” ಎಂದು ಅರಚಿದವು. ಕಾಲು ಮೂಳೆಗಳು ಪುಡಿ ಮಾಡಿದ ನಂತರ ಕೈಗಳ ಮೇಲೆ ಮತ್ತೆ ಮತ್ತೆ ಎರಗಿತು ಮಣಭಾರದ ಮೊಂಡು ಲೋಹ. ಗದ್ದೆಗೆ ಎಸೆದು ಪರಾರಿಯಾದರು.. (ದಲಿತ ಬಾಲೆಯರನ್ನು ಕೆಣಕಿ ಕಾಡಲು ದಲಿತ ಕೇರಿಗಳಿಗೆ ನುಗ್ಗುತ್ತಿದ್ದ ಮೇಲ್ಜಾತಿ ಹುಡುಗರನ್ನು ಗದರಿ ದೂರ ಇರಿಸಿದ್ದ ಬಂತ್ ಸಿಂಗ್. ನಿತ್ಯ ಮುಂಜಾನೆ ದಲಿತ ಹೆಣ್ಣುಮಕ್ಕಳು ಬಹಿರ್ದೆಸೆಗೆ ಬಳಸುವ ಬಯಲಿನ ತೀರಾ ಸನಿಹದಲ್ಲಿ ಬೇಕೆಂದೇ ಬ್ಯಾಡ್ಮಿಂಟನ್ ಕೋರ್ಟನ್ನು ಕಟ್ಟಿಕೊಂಡಿದ್ದರು ಪಡ್ಡೆಗಳು. ಹೆಣ್ಣುಮಕ್ಕಳು ಬರುವ ಮುನ್ನ ನಸುಕಿನಲ್ಲೇ ಆಟ ಶುರು ಮಾಡಿ, ಬೆಂಡು ಚೆಂಡನ್ನು ದೂರಕ್ಕೆ ಹೊಡೆಯುತ್ತಿದ್ದರು. ಅದನ್ನು ಹುಡುಕುವ ನೆವದಲ್ಲಿ ಬಹಿರ್ದೆಸೆಗೆ ಕುಳಿತ ಹೆಣ್ಣುಮಕ್ಕಳನ್ನು ಸಮೀಪಿಸಿ ಅವಮಾನ ಮಾಡುತ್ತಿದ್ದ ಪಡ್ಡೆಗಳನ್ನು ಬೇರೆಲ್ಲಾದರೂ ಆಡಿಕೊಳ್ಳಿ ಎಂದೂ ಆತ ಗದರಿದ್ದುಂಟು).

ಆನಂತರದ ಹತ್ತಾರು ತಿಂಗಳ ಕಾಲ ಅಮಾನವೀಯ ಆಸ್ಪತ್ರೆಗಳು, ನಿರ್ಲಕ್ಷ್ಯ ತೋರಿದ ಪತ್ರಕರ್ತರು, ಘಟನೆಯನ್ನು ಅದುಮಿ ಹಾಕಲು ನೋಡಿದ ಪೊಲೀಸರ ನಡುವೆ ಸಾವು ಬದುಕಿನ ನಡುವೆ ತೂಗಿದ ಬಂತ್. ಹೇಳಹೊರಟರೆ ಅದೊಂದು ದಃಖ ವಿಷಾದ ದುರಂತಗಳ ಕತೆ. ಎರಡು ಕಾಲುಗಳು ಒಂದು ಕೈಯನ್ನು ಕಳೆದುಕೊಂಡ. ಉಸಿರಾಡುವ ರುಂಡ-ಮುಂಡದಂತೆ ಹೊರಬಿದ್ದ. ಕೈಕಾಲು ಕಿತ್ತುಕೊಂಡರೇನಂತೆ, ಆಡುವ ನಾಲಗೆಯನ್ನು ಹಾಡುವ ಕೊರಳನ್ನು ಕಸಿಯುವುದು ಆಗಲಿಲ್ಲವಲ್ಲ ಎಂದು ಹಾಡಿದ, ಹಾಡಿಯೇ ಹಾಡಿದ. ”ಬಂತ್” ಎಂಬುದು ”ಬೇಅಂತ್” ತತ್ಸಮದ ತದ್ಭವ. ”ಅಂತ್ಯವಿಲ್ಲದವನು” ಅಥವಾ ”ಅನಂತ” ಎಂಬುದು ಈ ನಾಮಪದದ ಅರ್ಥ.

ಸಮ ಸಮಾಜದ ಕನಸು ನನಸಾಗಿಸಲು ಈಗಲೂ ಹಾಡುತ್ತಿದ್ದಾನೆ ಬಂತ್ ಸಿಂಗ್. ಈತನ ಈ ಹಾಡನ್ನು ಅದಮ್ಯ ಮನುಷ್ಯ ಪ್ರೀತಿಯ ಪುಸ್ತಕವಾಗಿ (The Ballad of Bant Singh) ಬರೆದಿದ್ದಾರೆ ನಿರುಪಮಾ ದತ್ ಎಂಬ ಪತ್ರಕರ್ತೆ ಮತ್ತು ಬರೆಹಗಾರ್ತಿ.

Tags: ದಲಿತರ ಮೇಲೆ ದೌರ್ಜನ್ಯಪಂಜಾಬಿನ ದಲಿತರು
Previous Post

ಕಾನ್ಪುರ ಪೊಲೀಸ್ ಹತ್ಯಾಕಾಂಡ; ಅಸಲಿಗೆ ಅಲ್ಲಿ ನಡೆದದ್ದೇನು?

Next Post

ಸುಮಲತಾ ಅಂಬರೀಷ್‌ಗೆ ಕೋವಿಡ್‌-19 ಪಾಸಿಟಿವ್

Related Posts

Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
0

ಭದ್ರಾ ಮೇಲ್ದಂಡೆ ಯೋಜನೆಗೂ ಪರಿಷ್ಕೃತ ಅನುದಾನ ಕೇಳಿದ್ದೇವೆಸರಕಾರದ ಖಾತೆಗೆ ಹಣ ಬಂದಾಗಲೇ ಖಾತರಿ “ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ಒಟ್ಟು ₹11,122.76 ಕೋಟಿ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದೇವೆ....

Read moreDetails

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

CM Siddaramaiah: ರಕ್ಷಣಾ ಸಚಿವ ರಾಜನಾಥಸಿಂಗ್‌ ಅವರನ್ನು ಬೇಟಿ ಮಾಡಿದ ಸಿಎಂ ಸಿದ್ದರಾಮಯ್ಯ..

July 9, 2025

CM, DCM: ಸಿಎಂ, ಡಿಸಿಎಂ ಹೆಸರಲ್ಲಿ ಕೋಟಿ ಕೋಟಿ ಹಣ ವಂಚನೆ: ಜನರಿಗೆ ಯಾಮಾರಿಸಿದ್ದ ಮಹಿಳೆ ಅರೆಸ್ಟ್‌

July 9, 2025

Gujarath: ಗುಜರಾತ್‌ನಲ್ಲಿ ಮತ್ತೊಮ್ಮೆ ನದಿಗೆ ಬಿದ್ದ ವಾಹನಗಳು..

July 9, 2025
Next Post
ಸುಮಲತಾ ಅಂಬರೀಷ್‌ಗೆ ಕೋವಿಡ್‌-19 ಪಾಸಿಟಿವ್

ಸುಮಲತಾ ಅಂಬರೀಷ್‌ಗೆ ಕೋವಿಡ್‌-19 ಪಾಸಿಟಿವ್

Please login to join discussion

Recent News

Top Story

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

by ಪ್ರತಿಧ್ವನಿ
July 10, 2025
Top Story

5ವರ್ಷ ನಾನೇ ಸಿಎಂರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ..!

by ಪ್ರತಿಧ್ವನಿ
July 10, 2025
Top Story

ಗೃಹ ಸಚಿವರು ಏನೇ ಕೇಳಿದ್ರೂ I Dont No ಅಂತಾರೇ..!

by ಪ್ರತಿಧ್ವನಿ
July 10, 2025
5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 
Top Story

5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 

by Chetan
July 10, 2025
ದೆಹಲಿಯಲ್ಲಿ ಸಿಎಂ & ಡಿಸಿಎಂ ರಾಜಕೀಯ ದಾಳ..? – ವರಿಷ್ಠರಿಗೆ ಇಂದೇ ವರದಿ ನೀಡಲಿದ್ದಾರೆ ಸುರ್ಜೇವಾಲಾ! 
Top Story

ದೆಹಲಿಯಲ್ಲಿ ಸಿಎಂ & ಡಿಸಿಎಂ ರಾಜಕೀಯ ದಾಳ..? – ವರಿಷ್ಠರಿಗೆ ಇಂದೇ ವರದಿ ನೀಡಲಿದ್ದಾರೆ ಸುರ್ಜೇವಾಲಾ! 

by Chetan
July 10, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

July 10, 2025

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

July 10, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada