ಬಿಜೆಪಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೇಶದ ರೈತರು ಆಹೋರಾತ್ರಿ ನಿರಂತರ ಹೋರಾಟ ನಡೆಸುತ್ತಾ ತಿಂಗಳಾಯಿತು. ಒಂದು ಕಡೆ ಚಳಿ ಮತ್ತು ಪ್ರತಿಕೂಲ ವಾತಾವರಣದ ಕಾರಣ ದಿನಕ್ಕೊಬ್ಬರು ಪ್ರತಿಭಟನಾನಿರತ ರೈತರು ಜೀವ ಕಳೆದುಕೊಳ್ಳುತ್ತಿದ್ದರೆ, ಮತ್ತೊಂದು ಕಡೆ ರೈತರೇ ತಮಗೆ ಕಾಯ್ದೆ ಬೇಡ ಎಂದು ಪಟ್ಟು ಹಿಡಿದ್ದಿದ್ದರೂ ಪ್ರಧಾನಿ ಮೋದಿಯವರು ಮಾತ್ರ ಕಾಯ್ದೆ ಹಿಂದೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹಠಕ್ಕೆ ಬಿದ್ದಿದ್ದಾರೆ.
ಈ ಕಾಯ್ದೆಗಳು ವಾಸ್ತವವಾಗಿ ದೇಶದ ರೈತರ ಹಿತ ಕಾಯುವ ಉದ್ದೇಶಕ್ಕೆ ಅಲ್ಲ; ಬದಲಾಗಿ ಪ್ರಧಾನಮಂತ್ರಿಗಳ ಪರಮಾಪ್ತ ಉದ್ಯಮಿಗಳಾದ ಅಂಬಾನಿ ಮತ್ತು ಅದಾನಿಯವರ ಕೃಷಿ ಮತ್ತು ಕೃಷಿ ಆಧಾರಿತ ಉದ್ದಿಮೆಗಳ ಅನುಕೂಲಕ್ಕಾಗಿ ಎಂಬ ಸಂಗತಿ ಈಗಾಗಲೇ ಕೇಳಿಬರುತ್ತಿರುವ ಗಂಭೀರ ಆರೋಪ. ಜೊತೆಗೆ ಒಂದು ಕಡೆ ಮೋದಿಯವರು ಈ ಮೂರೂ ಕಾಯ್ದೆ ಸೇರಿದಂತೆ ಕರೋನಾ ಸಂಕಷ್ಟದ ಹೊತ್ತನ್ನೇ ಬಳಸಿಕೊಂಡು ಸಾಲು ಸಾಲು ಕೃಷಿ, ವಿದ್ಯುತ್, ಅಗತ್ಯ ವಸ್ತು ಕಾಯ್ದೆ ಸೇರಿದಂತೆ ಹೊಸ ಕಾನೂನುಗಳನ್ನು ರೂಪಿಸುತ್ತಿರುವ ಹೊತ್ತಿಗೇ ಅಂಬಾನಿ ಅವರ ರಿಲೆಯನ್ಸ್ ಕಂಪನಿ ದೇಶದ ಉದ್ದಗಲಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆ ಸರಣಿ ಮಳಿಗೆ ಮತ್ತು ದಾಸ್ತಾನು ಶಿಥಿಲೀಕರಣ ಘಟಕಗಳನ್ನು ತೆರೆಯಲು ಭರ್ಜರಿ ತಯಾರಿ ಮಾಡಿಕೊಂಡಿದೆ.
ಹಾಗಾಗಿ ಒಂದು ಕಡೆ ಅಂಬಾನಿ ಮತ್ತು ಅದಾನಿ ಕಂಪನಿಗಳು ಕೃಷಿ ವಲಯಕ್ಕೆ ಲಗ್ಗೆ ಇಡುತ್ತಿರುವ ಹೊತ್ತಿಗೇ ಮತ್ತೊಂದು ಕಡೆ ಆ ಇಬ್ಬರು ಕಾರ್ಪೊರೇಟ್ ಕುಳಗಳ ಪರಮಾಪ್ತ ಪ್ರಧಾನಿಗಳು ಅವರ ಸಾವಿರಾರು ಕೋಟಿ ಉದ್ಯಮ ಸಾಹಸಕ್ಕೆ ಪೂರಕ ಕಾನೂನುಗಳನ್ನು ಹೊಸೆದಿರುವುದು ಕೇವಲ ಕಾಕತಾಳೀಯವಲ್ಲ. ಕಳೆದ ಕೆಲವು ತಿಂಗಳಿಂದ ಈಚೆಗೆ, ಕರೋನಾ ಸಂಕಷ್ಟದಿಂದ ಭಾರತವಷ್ಟೇ ಅಲ್ಲದೆ ಇಡೀ ಜಗತ್ತೇ ತತ್ತರಿಸಿಹೋಗಿದ್ದರೂ, ಜಗತ್ತಿನ ಉದ್ಯಮ ಚಟುವಟಿಕೆಯೇ ಗರಬಡಿದ ಸ್ಥಿತಿಯಲ್ಲಿದ್ದರೂ ಅಂಬಾನಿ ಮತ್ತು ಅದಾನಿ ಆದಾಯ ಮಾತ್ರ ಮೂರು ಪಟ್ಟು ಹೆಚ್ಚಳವಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಲ್ಲದೆ, ಕಳೆದ ಎರಡು ಮೂರು ತಿಂಗಳಲ್ಲಿಯೇ ಅಂಬಾನಿಯವರ ರಿಲೆಯನ್ಸ್ ಕೃಷಿ ಮತ್ತು ಆಹಾರ ಸಂಸ್ಕರಣೆ ವಲಯದಲ್ಲಿ ಸುಮಾರು 53ಕ್ಕೂ ಹೆಚ್ಚು ಹೊಸ ಕಂಪನಿಗಳನ್ನು ನೋಂದಾಯಿಸಿದೆ. ಕಾರ್ಪೊರೇಟ್ ಫಾರ್ಮಿಂಗ್, ಕೃಷಿ ಉತ್ಪನ್ನ ವಹಿವಾಟು, ಆಹಾರ ಸಂಸ್ಕರಣೆ ಮತ್ತು ಮಾರಾಟ ವಲಯದಲ್ಲಿ ಈಗಾಗಲೇ ದೊಡ್ಡ ಮಟ್ಟದ ಹಿಡಿತ ಹೊಂದಿರುವ ಅಂಬಾನಿ ಕಂಪನಿಗಳು, ಈ ಹೊಸ ಮೂರು ಕಾಯ್ದೆಗಳ ಬಳಿಕ, ದೇಶದ ಟೆಲಿಕಾಂ, ಮಾಧ್ಯಮ, ಇಂಧನ ಮತ್ತಿತರ ವಲಯದಲ್ಲಿ ಮಾಡಿರುವಂತೆಯೇ ಆ ಕೃಷಿ ಮತ್ತು ಕೃಷಿ ಉತ್ಪನ್ನ ವಲಯದಲ್ಲಿಯೂ ಏಕಸ್ವಾಮ್ಯ ಹೊಂದಲಿವೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಈ ಹಿನ್ನೆಲೆಯಲ್ಲಿಯೇ ಪ್ರತಿಭಟನಾನಿರತ ರೈತರು, ಮೋದಿಯವರ ಈ ಹೊಸ ಕಾಯ್ದೆಗಳು ದೇಶದ ರೈತರನ್ನು ಅಂಬಾನಿ ಮತ್ತು ಅದಾನಿಯವರ ಕಂಪನಿಗಳ ಜೀತದಾಳುಗಳನ್ನಾಗಿ ಮಾಡುತ್ತವೆ. ಎಪಿಎಂಸಿ ಮತ್ತು ಬೆಂಬಲ ಬೆಲೆ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಹಂತಹಂತವಾಗಿ ಅಪ್ರಸ್ತುತಗೊಳಿಸುವುದು ಮತ್ತು ಅಗತ್ಯ ವಸ್ತು ಕಾಯ್ದೆ ತಿದ್ದುಪಡಿಯ ಮೂಲಕ ಸಂಪೂರ್ಣವಾಗಿ ಕೃಷಿ ಉತ್ಪನ್ನ ಬೆಲೆ ಮತ್ತು ಮಾರಾಟ ವ್ಯವಸ್ಥೆಯನ್ನು ದೇಶದ ಇಬ್ಬರು ಬಿಲಿಯನೇರ್ ಗಳ ದಾಳವಾಗಿಸುವುದು ಈ ಕಾಯ್ದೆಗಳ ಅಂತಿಮ ಗುರಿ ಎಂದು ಆರೋಪಿಸಿದ್ಧಾರೆ. ಆ ಹಿನ್ನೆಲೆಯಲ್ಲಿಯೇ ತಿಂಗಳಿಂದ ಜೀವ ಪಣಕ್ಕಿಟ್ಟು ದೆಹಲಿಯನ್ನು ಸುತ್ತುವರಿದು ಹೋರಾಟ ನಡೆಸುತ್ತಿದ್ದಾರೆ.
ಈ ಆರೋಪಗಳಿಗೆ ಪುಷ್ಟಿ ನೀಡುವಂತೆ, ಇದೀಗ ಕೃಷಿ ಕಾಯ್ದೆಗಳ ನಿಜವಾದ ಫಲಾನುಭವಿ ಎನ್ನಲಾಗುತ್ತಿರುವ ಮುಖೇಶ್ ಅಂಬಾನಿ ಮಾಲೀಕತ್ವದ ನ್ಯೂಸ್ 18 ಸುದ್ದಿವಾಹಿನಿ ದೇಶವ್ಯಾಪ್ತಿ ಸಮೀಕ್ಷೆಯೊಂದನ್ನು ನಡೆಸಿರುವುದಾಗಿ ಹೇಳಿದ್ದು, ಆ ಸಮೀಕ್ಷೆಯ ಪ್ರಕಾರ, ದೇಶದ ಶೇ.53ರಷ್ಟು ರೈತರು ಮೋದಿಯವರ ಹೊಸ ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ್ದಾರೆ ಮತ್ತು ಶೇ.56ರಷ್ಟು ರೈತರು ಈ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಹೇಳಿದ್ದಾರೆ! ನ್ಯೂಸ್ 18, ಸಿಎನ್ ಬಿಸಿ ಟಿವಿ18, ಐಬಿಎನ್ ಲೈವ್, ಸಿಎನ್ಎನ್ ಸೇರಿದಂತೆ ಭಾರತದ ಸುಮಾರು 15 ಭಾಷೆಗಳಲ್ಲಿ 20ಕ್ಕೂ ಹೆಚ್ಚು ಸುದ್ದಿವಾಹಿನಿಗಳನ್ನು ಹೊಂದುವ ಮೂಲಕ ಬಹುತೇಕ ಭಾರತೀಯ ದೃಶ್ಯ ಮತ್ತು ಮುದ್ರಣ ಮಾಧ್ಯಮದ ಮೇಲೆ ಸಾಕಷ್ಟು ಪ್ರಭಾವ ಹೊಂದಿರುವ ರಿಲೆಯನ್ಸ್ ಇಂಡಸ್ಟ್ರೀಸ್ ನ ಅಂಗಸಂಸ್ಥೆಯಾದ ನೆಟ್ವರ್ಕ್ 18 ಸಮೂಹ, ಈ ಸಮೀಕ್ಷೆ ನಡೆಸಿರುವುದೇ ಅದರ ಹಿತಾಸಕ್ತಿಗಾಗಿ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹಾಗಾಗಿ ತನಗೆ ಏನು ಬೇಕೋ ಅದನ್ನು ಸಮೀಕ್ಷೆಯ ಮೂಲಕ ಪ್ರತಿಬಿಂಬಿಸಿದೆ.
ಏಕೆಂದರೆ; ಮೂಲಭೂತವಾಗಿ ಆ ಸಮೀಕ್ಷೆ ಕರ್ನಾಟಕದಲ್ಲಿಯೂ ನಡೆದಿದ್ದರೂ ಸಮೀಕ್ಷೆಯ ಮಾದರಿ ಪ್ರಶ್ನೋತ್ತರಗಳು ಇದ್ದದ್ದು ಇಂಗ್ಲೀಷ್ ಭಾಷೆಯಲ್ಲಿ. ಮೊಬೈಲ್ ಮತ್ತು ಕಂಪ್ಯೂಟರ್ ಬಳಸಿ ಸಮೀಕ್ಷೆಯ ಮಾದರಿಯನ್ನು ಡೌನ್ ಲೋಡ್ ಮಾಡಿಕೊಂಡು ಅಲ್ಲಿನ ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು. ಆ ಪ್ರಶ್ನೆ ಮತ್ತು ಉತ್ತರಗಳನ್ನು ಗಮನಿಸಿದರೆ, ಅವು ಮುಕ್ತ ಪ್ರಶ್ನೆಗಳಾಗಿರಲಿಲ್ಲ ಮತ್ತು ನೀಡಲಾಗಿದ್ದ ಆಯ್ಕೆಯ ಉತ್ತರಗಳು ಕೂಡ ಮುಕ್ತವಾಗಿರಲಿಲ್ಲ. ಒಂದು ನಿರ್ದಿಷ್ಟ ಉತ್ತರದ ನಿರೀಕ್ಷೆಯಲ್ಲೇ ಪ್ರಶ್ನೆಗಳನ್ನು ಹೊಸೆಯಲಾಗಿತ್ತು ಮತ್ತು ಅಂತಹ ನಿರ್ದೇಶಿತ ಪ್ರಶ್ನೆಗೆ ಉತ್ತರ ಕೂಡ ನೀಡಲಾದ ಆಯ್ಕೆಯಲ್ಲಿ ಮೊದಲನೆಯದೇ ಆಗಿರುವಂತೆ ವ್ಯವಸ್ಥಿತವಾಗಿ ಜೋಡಿಸಲಾಗಿತ್ತು! ಹಾಗಾಗಿ ಇದೊಂದು ನಿರ್ದೇಶಿತ ಪ್ರಶ್ನೆಗೆ, ನಿರೀಕ್ಷಿತ ಉತ್ತರವನ್ನೇ ಬಯಸಿ ನಡೆಸಿದ ವ್ಯವಸ್ಥಿತ ತಂತ್ರಗಾರಿಕೆಯ ಸಮೀಕ್ಷೆ ಎಂಬುದನ್ನು ಆ ಪ್ರಶ್ನೋತ್ತರಗಳನ್ನು ಗಮನಿಸಿದ ಯಾರಿಗಾದರೂ ಮೇಲ್ನೋಟಕ್ಕೆ ಗೊತ್ತಾಗುವಂತೆ ಇತ್ತು.
ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಟ್ರೆಂಡ್ ಆಗಿರುವ ನೇರವಾಗಿ ರಾಜಕೀಯ ಮತ್ತು ರಾಜಕೀಯ ಸಂಬಂಧಿತ ವಿಷಯಗಳ ಕುರಿತ ಸಮೀಕ್ಷೆಗಳಂತೆಯೇ ಈ ಸಮೀಕ್ಷೆಯ ಬಗೆಗಿನ ಕೂಡ ಸಾಕಷ್ಟು ವಿವರಗಳನ್ನು ಮುಚ್ಚಿಡಲಾಗಿದೆ. ಸಮೀಕ್ಷಾ ಸಂಸ್ಥೆಗಳು ಮತ್ತು ಮಾಧ್ಯಮಗಳು ಅಂತಹ ಯಾವುದೇ ಸಮೀಕ್ಷೆಯಲ್ಲಿರುವಂತೆ ಮಾಡುವಂತೆ, ಈ ಸಮೀಕ್ಷೆಯಲ್ಲಿಯೂ ಸಮೀಕ್ಷೆಯಲ್ಲಿ ಭಾಗಿಯಾದವರು ಯಾರು? ಅವರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಿನ್ನೆಲೆಗಳೇನು? ಭಾಗವಹಿಸಿದವರಲ್ಲಿ ನಗರವಾಸಿಗಳೆಷ್ಟು ಮತ್ತು ಗ್ರಾಮವಾಸಿಗಳೆಷ್ಟು? ಅವರ ಶಿಕ್ಷಣ ಮಟ್ಟ ಯಾವುದು? ಅವರ ಕೃಷಿ ಅನುಭವ ಎಷ್ಟು?(ನಿಜವಾಗಿಯೂ ಎಲ್ಲರೂ ಕೃಷಿಕರೇ ಆಗಿದ್ದರೆ ಎಂಬುದೇ ದೊಡ್ಡ ಅನುಮಾನ!), 130 ಕೋಟಿ ಜನಸಂಖ್ಯೆಯಲ್ಲಿ ಕನಿಷ್ಟ ಶೇ.50ರಷ್ಟು ಮಂದಿ ಕೃಷಿಕರು ಮತ್ತು ಕೃಷಿಯಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ತೊಡಗಿಕೊಂಡಿದ್ದಾರೆ ಎಂದರೂ, ಆ ಪ್ರಮಾಣ 65 ಕೋಟಿಯಷ್ಟು ಬೃಹತ್ ಆಗಲಿದೆ. ಹಾಗಾಗಿ ನ್ಯೂಸ್ 18 ಹೇಳಿರುವಂತೆ 22 ರಾಜ್ಯಗಳ ಕೇವಲ 2400 ಮಂದಿಯ ಅಭಿಪ್ರಾಯವನ್ನು 65 ಕೋಟಿ ಜನರ ಅಭಿಪ್ರಾಯ ಎಂದು ಬಿಂಬಿಸುವುದು ಎಷ್ಟು ಬಾಲಿಶಃ? ಎಂಬೆಲ್ಲಾ ಮೂಲಭೂತ ಪ್ರಶ್ನೆಗಳಿಗೆ ಆ ಸಮೀಕ್ಷೆಯ ವಿವರಗಳಲ್ಲಿ ಉತ್ತರವಿಲ್ಲ!
ಕೆಲವು ಪ್ರಶ್ನೆಗಳನ್ನು ಮತ್ತು ಅವುಗಳಿಗೆ ನೀಡಲಾಗಿದ್ದ ಆಯ್ಕೆಯ ಉತ್ತರಗಳನ್ನು ಗಮನಿಸಿದರೆ; ಆ ಪ್ರಶ್ನೆಗಳು ಮತ್ತು ಉತ್ತರಗಳ ಹಿಂದಿನ ತಂತ್ರಗಾರಿಕೆ ಮತ್ತು ಉದ್ದೇಶಗಳು ಸ್ಪಷ್ಟವಾಗಬಹುದು.
ಉದ್ಯಮಿಯೊಬ್ಬನ ಕೈಯಲ್ಲಿ ಪ್ರಭಾವಿ ಮಾಧ್ಯಮಗಳು ಇದ್ದರೆ ಹೇಗೆ ಕೃತಕ ಜನಾಭಿಪ್ರಾಯವನ್ನು(ಮಾನ್ಯುಫ್ಯಾಕ್ಚರ್ಡ್ ಒಪಿನಿಯನ್) ಸೃಷ್ಟಿಸಬಹುದು. ಹೇಗೆ ತನ್ನ ಪರ ಇರುವ ಸರ್ಕಾರ ನೀತಿ ಮತ್ತು ನಿಲುವುಗಳನ್ನು ಟೀಕಿಸುವವರ ಬಾಯಿ ಮುಚ್ಚಿಸಬಹುದು. ಸಮೀಕ್ಷೆ ಎಂಬ ಅಸ್ತ್ರ ಬಳಸಿ ನಾಲ್ಕು ಜನರನ್ನು ಮಾತನಾಡಿಸಿದಂತೆ ಮಾಡಿ, ಅದೇ ಇಡೀ ದೇಶದ ಒಟ್ಟಾಭಿಪ್ರಾಯ ಎಂದು ಸಾರಬಹುದು ಎಂಬುದಕ್ಕೆ ಈ ನ್ಯೂಸ್ 18 ಸಮೀಕ್ಷೆ ಒಂದು ತಾಜಾ ಉದಾಹರಣೆ.
ಅದರಲ್ಲೂ ಕೃಷಿಯಂತಹ ದೇಶದ ಬಹುಪಾಲು ಜನಸಮುದಾಯದ ಬದುಕಿನ ಪ್ರಶ್ನೆಯಾದ ವಲಯದ ಕುರಿತ ಕಾನೂನು ಮತ್ತು ಕಾಯ್ದೆಗಳನ್ನು ಕುರಿತು ಇಂತಹ ಕುತಂತ್ರದ ಸಮೀಕ್ಷೆಗಳ ಮೂಲಕ ಪ್ರತಿಭಟನಾನಿರತ ಅನ್ನದಾತರ ನೈತಿಕ ಸ್ಥೈರ್ಯವನ್ನೇ ಉಡುಗಿಸುವ ಹೇಯ ಕೆಲಸಕ್ಕೆ ಮಾಧ್ಯಮಗಳು ಇಳಿದಿರುವುದು ದೇಶದ ಮಾಧ್ಯಮ ಎಂಥ ಅಧಃಪತನಕ್ಕೆ ತಲುಪಿದೆ ಎಂಬುದಕ್ಕೂ ಉದಾಹರಣೆ. ಕನಿಷ್ಟ ತನ್ನ ವಿರುದ್ಧವೇ ಇಡೀ ರೈತ ಸಮುದಾಯದ ಗಂಭೀರ ಆರೋಪಗಳನ್ನು ಮಾಡುತ್ತಿದೆ. ಹಾಗಿರುವಾಗ ರೈತರ ಹೋರಾಟಕ್ಕೆ ಮಸಿ ಬಳಿಯುವ, ದಿಕ್ಕುತಪ್ಪಿಸುವ ಇಂತಹ ಸಮೀಕ್ಷೆಗಳನ್ನು ನಡೆಸುವುದು ನೈತಿಕವಾಗಿ ಹೇಯ ಕೃತ್ಯ ಎಂಬ ಸಣ್ಣ ಮುಜುಗರ ಕೂಡ ಆ ಕಾರ್ಪೊರೇಟ್ ಸಂಸ್ಥೆಗೆ ಇಲ್ಲ!
ನಿಜವಾಗಿಯೂ ಈ ಕಾಯ್ದೆಗಳ ಬಗ್ಗೆ ದೇಶದ ಕೃಷಿಕರ ಅಭಿಪ್ರಾಯವನ್ನು ಸಂಗ್ರಹಿಸಿ, ಜನರ ನಾಡಿಮಿಡಿತ ಅರಿಯಬೇಕು? ದೆಹಲಿಯಲ್ಲಿ ತಿಂಗಳಿಂದ ಧರಣಿ ನಡೆಸುತ್ತಿರುವ ಮಂದಿ ನಿಜವಾಗಿಯೂ ರೈತರೇ ಅಥವಾ ಆಡಳಿತ ಪಕ್ಷ ಹೇಳುವಂತೆ ರಾಜಕೀಯ ಪ್ರೇರಿತ ಗುಂಪುಗಳೇ ಎಂಬುದನ್ನು ಅರಿಯಬೇಕಿದ್ದರೆ, ಈ ಸುದ್ದಿವಾಹಿನಿ ಮತ್ತು ಅದರ ಸಹಮಾಧ್ಯಮ ಜಾಲದ ವರದಿಗಾರರು ಹಳ್ಳಿಗಳಿಗೆ ನೇರ ಭೇಟಿ ನೀಡಬೇಕಿತ್ತು. ಅಲ್ಲಿನ ರೈತರಿಗೆ ಈ ಮೂರೂ ಕಾಯ್ದೆಗಳನ್ನು ವಿವರಿಸಿ, ಅದರ ಕುರಿತ ಪರ ವಿರೋಧದ ವಾದಗಳನ್ನೂ ಮಂಡಿಸಿ ಅವರಿಂದ ನೈಜ ಅಭಿಪ್ರಾಯ ಪಡೆಯಬೇಕಿತ್ತು. ಅದೂ ಕೂಡ ಇಂಗ್ಲಿಷ್ ಭಾಷೆಯ ಪ್ರಶ್ನೋತ್ತರವಾಗದೇ, ಆಯಾ ರೈತರ ಭಾಷೆಯಲ್ಲಿಯೇ ಆಗಬೇಕಿತ್ತು. ಆಗ ನಿಜವಾಗಿಯೂ ಅನ್ನದಾತರ ದನಿ ಕೇಳಿಸುತ್ತಿತ್ತು.
ಆದರೆ, ಈ ವಾಹಿನಿಗೆ ಬೇಕಾಗಿರುವುದು ನೈಜ ಅಭಿಪ್ರಾಯವಲ್ಲ; ಬದಲಾಗಿ ರೈತರ ಹೆಸರಿನಲ್ಲಿ ಕಟ್ಟುಕತೆಯ ಒಂದು ಸಮೀಕ್ಷೆ ಮತ್ತು ಆ ಮೂಲಕ ಧರಣಿನಿರತ ರೈತರ ಮನೋಬಲ ಉಡುಗಿಸುವುದು ಮತ್ತು ಅಧಿಕಾರಸ್ಥ ನಾಯಕರ ಮೆಚ್ಚಿಸುವುದು. ಅಂತಿಮವಾಗಿ ಅದರ ಪ್ರಯೋಜನ ತನ್ನದೇ ಉದ್ಯಮ ಸಾಮ್ರಾಜ್ಯದ ಲಾಭದ ಕೊಯ್ಲಿಗೆ ಬಳಕೆಯಾಗುವುದು! ಹಾಗಾಗಿ, ಸಮೀಕ್ಷೆಯ ನೆಪದಲ್ಲಿ ರೈತರನ್ನು ದಿಕ್ಕುತಪ್ಪಿಸುವ, ಗೊಂದಲ ಮೂಡಿಸುವ ಕೇಂದ್ರ ಸರ್ಕಾರ ಮತ್ತು ಅಂಬಾನಿ ಉದ್ಯಮ ಸಮೂಹದ ಬಯಕೆಯಂತೂ ಸದ್ಯಕ್ಕೆ ಈಡೇರಿರುವಂತಿದೆ!