ಸಾಕುಪ್ರಾಣಿಗಳಿಂದ ಕರೋನಾ ವೈರಸ್ ಹರಡುತ್ತೆ ಅನ್ನೋ ಸುಳ್ಳು ವದಂತಿಯ ನಡುವೆಯೇ ಇದೀಗ ಪ್ರಾಣಿ ಸಂಗ್ರಹಾಲಯದಲ್ಲಿದ್ದ ಹುಲಿಯೊಂದು ಕರೋನಾ ಸೋಂಕಿಗೆ ತುತ್ತಾಗಿರುವ ಘಟನೆ ಅಮೆರಿಕಾದ ನ್ಯೂಯಾರ್ಕ್ನ ಬ್ರಾಂಕ್ಸ್ ಪ್ರಾಣಿ ಸಂಗ್ರಹಾಲಯದಲ್ಲಿ ನಡೆದಿದೆ.
ಮಾರ್ಚ್ 16 ರಿಂದಲೇ ಈ ಪ್ರಾಣಿ ಸಂಗ್ರಹಾಲಯವನ್ನು ಸಾರ್ವಜನಿಕ ಪ್ರವೇಶದಿಂದ ಮುಕ್ತಗೊಳಿಸಲಾಗಿದ್ದರೂ, ಕರೋನಾ ಸೋಂಕು ಪೀಡಿತ ವ್ಯಕ್ತಿಯೊಬ್ಬ ಪ್ರಾಣಿಗಳ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದ. ಇದೀಗ ಆತನಿಂದಾಗಿಯೇ ನಾಲ್ಕು ವರುಷದ ಹೆಣ್ಣು ಹುಲಿಗೆ ಸೋಂಕು ತಗುಲಿದ್ದಾಗಿ ಅಂದಾಜಿಸಲಾಗಿದೆ.
ಕರೋನಾ ಸೋಂಕಿನ ಲಕ್ಷಣಗಳು ಹೆಣ್ಣು ಹುಲಿಯಲ್ಲಿ ಕಾಣಿಸಿಕೊಂಡಿದ್ದರೆ, ಇತರೆ ಮೂರು ಆಫ್ರಿಕನ್ ಸಿಂಹಗಳು, ಮೂರು ಹುಲಿಗಳಲ್ಲಿ ಕೆಮ್ಮು ಕಾಣಿಸಿಕೊಂಡಿದೆ. ಕರೋನಾ ಸೋಂಕಿನ ಲಕ್ಷಣಗಳಲ್ಲಿ ಕೆಮ್ಮು ಕೂಡಾ ಒಂದಾಗಿದ್ದು, ಮಾನವನಲ್ಲೂ ಕರೋನಾ ವೈರಸ್ ದಾಳಿಯಾದರೆ ಕೆಮ್ಮು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತವೆ. ಆದರೆ ಬ್ರಾಂಕ್ಸ್ ಝೂ ನಲ್ಲಿ ಕಾಣಿಸಿಕೊಂಡ ಕರೋನಾ ವೈರಸ್ನಿಂದ ಹೆಣ್ಣು ಹುಲಿಯನ್ನ ಪ್ರತ್ಯೇಕವಿರಿಸಿ ಚಿಕಿತ್ಸೆ ಕೊಡಲಾಗುತ್ತಿದ್ದರೆ, ಇತರೆ ಮೂರು ಹುಲಿ ಹಾಗೂ ಮೂರು ಸಿಂಹಗಳಿಗೆ ಕೆಮ್ಮು ಮಾತ್ರವಿದ್ದು ಚಿಕಿತ್ಸೆಯಿಂದ ಸರಿಹೋಗುವ ಭರವಸೆಯನ್ನು ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳು ಹೊಂದಿದ್ದಾರೆ.
ಇದರಿಂದಾಗಿ ಸಹಜವಾಗಿಯೇ ಮನುಷ್ಯನಿಂದ ಮನುಷ್ಯನಿಗೆ ಹರಡುತ್ತಿದ್ದ ಈ ಸೋಂಕು ಈಗ ಪ್ರಾಣಿಗಳಿಗೂ ಹರಡುತ್ತದೆ ಅನ್ನೋದು ಬಹುತೇಕ ಖಚಿತವಾಗಿದೆ. ಆದ್ದರಿಂದ ಸಾಕು ಪ್ರಾಣಿಗಳಿಂದಾನೂ ಕ್ವಾರೆಂಟೈನ್ ಅವಧಿಯಲ್ಲಿರುವವರು ಹಾಗೂ ಸೋಂಕಿನ ಲಕ್ಷಣ ಹೊಂದಿದವರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ.
ಈ ಕುರಿತು ಅಮೆರಿಕನ್ ವೈದ್ಯಾಧಿಕಾರಿಗಳ ತಂಡ ಕರೋನಾ ವೈರಸ್ ಪ್ರಾಣಿಗಳ ಮೇಲೆ ಯಾವ ರೀತಿ ದಾಳಿ ನಡೆಸುತ್ತದೆ ಅನ್ನೋದರ ಬಗ್ಗೆ ಸಂಶೋಧನೆಗೆ ಇಳಿದಿದೆ.