ಸುಪ್ರೀಂಕೋರ್ಟ್ ಪಾಲಿಗೆ 2019 ಮುಖ್ಯ ನ್ಯಾಯಮೂರ್ತಿಯಾಗಿದ್ದ ರಂಜನ್ ಗೊಗೊಯ್ ಅವರ ವರ್ಷವಾಗಿತ್ತು. 2018 ರ ಜನವರಿಯಲ್ಲಿ ಕಿರಿಯ ನ್ಯಾಯಾಧೀಶರಾಗಿದ್ದ ನ್ಯಾಯಮೂರ್ತಿ ಗೊಗಾಯ್ ಅವರು ಇತರೆ ಮೂವರು ನ್ಯಾಯಾಧೀಶರಾಗಿದ್ದ ಜೆ.ಚೆಲಮೇಶ್ವರ್, ಕುರಿಯನ್ ಜೋಸೆಫ್ ಮತ್ತು ಮದನ್ ಬಿ.ಲೋಕೂರ್ ಅವರೊಂದಿಗೆ ಒಂದು ತುರ್ತು ಪತ್ರಿಕಾಗೋಷ್ಠಿ ನಡೆಸಿ ಅಂದಿನ ಮುಖ್ಯನ್ಯಾಯಾಧೀಶರಾಗಿದ್ದ ದೀಪಕ್ ಮಿಶ್ರಾ ಅವರ ವಿರುದ್ಧ ತಿರುಗಿ ಬಿದ್ದಿದ್ದರು. ತಾವು ಪ್ರತಿನಿಧಿಸುವ ಪೀಠಗಳಿಗೆ ಪ್ರಕರಣಗಳನ್ನು ಸರಿಯಾಗಿ ಹಂಚಿಕೆ ಮಾಡುತ್ತಿಲ್ಲ, ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಈ ನಾಲ್ವರು ನ್ಯಾಯಾಧೀಶರು ನ್ಯಾ.ದೀಪಕ್ ಮಿಶ್ರಾ ವಿರುದ್ಧ ಹೊರಿಸಿದ್ದರು.
ಈ ಒಂದು ಪ್ರತಿಭಟನೆಯ ಧ್ವನಿಯ ಹಿನ್ನೆಲೆಯಲ್ಲಿ ಗೊಗಾಯ್ ಅವರು ಮುಖ್ಯನ್ಯಾಯಾಧೀಶರಾಗಿ ನೇಮಕಗೊಂಡ ಸಂದರ್ಭದಲ್ಲಿ ಅವರ ಮೇಲೆ ಬಹಳಷ್ಟು ನಿರೀಕ್ಷೆ ಇತ್ತು. ತಮ್ಮ ಅವಧಿಗೆ ಮುನ್ನ ಮುಖ್ಯನ್ಯಾಯಾಧೀಶರಾಗಿದ್ದ ಕೆ.ಬಾಲಕೃಷ್ಣನ್, ಜೆ.ಎಸ್.ಖೇಹರ್ ಮತ್ತು ಮಿಶ್ರಾ ಅವರುಗಳು ಮಾಡಿದ್ದ ತಪ್ಪುಗಳನ್ನು ಗೊಗೊಯ್ ಸರಿಪಡಿಸುತ್ತಾರೆ ಎಂಬ ನಿರೀಕ್ಷೆಗಳು ಇದ್ದವು. ಆದರೆ, ಅವರ ಕಾರ್ಯವೈಖರಿಗಳನ್ನು ನೋಡಿದಾಗ ಈ ನಿರೀಕ್ಷೆಗಳೆಲ್ಲಾ ಹುಸಿಯಾದವು.
ಲೈಂಗಿಕ ಕಿರುಕುಳ ಆರೋಪವನ್ನು ಎದುರಿಸಿದ ದೇಶದ ಮೊದಲ ಮುಖ್ಯನ್ಯಾಯಾಧೀಶರಾಗಿದ್ದರೂ, ಅವರು ಪೀಠದಲ್ಲಿ ಕುಳಿತು ವಿಚಾರಣೆ ಆರಂಭಿಸಿದಾಗ ವಿವಾದ ತೀವ್ರ ಸ್ವರೂಪವನ್ನು ಪಡೆಯಿತು. ಈ ಪ್ರಕರಣವನ್ನು ಅಲ್ಲಿಗೇ ತಣ್ಣಗೆ ಮಾಡಲಾಯಿತು. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಪ್ರಕರಣವನ್ನು ಮುಂದುವರಿಸದಂತೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಮಹಿಳೆ ಮತ್ತು ಆಕೆಯ ಕುಟುಂಬದ ಮೇಲೆ ಒತ್ತಡ ತಂದಿತು. ಆದರೆ, ಈ ವಿವಾದ ಗೊಗೊಯ್ ಅವರ ಅವಧಿಯಲ್ಲಿ ಒಂದು ರೀತಿಯಲ್ಲಿ ಮೋಡ ಮುಸುಕಿದ ವಾತಾವರಣದಂತೆ ಕಂಡು ಬಂದಿತು.
ತಮ್ಮ ಹಿಂದಿನ ಮುಖ್ಯನ್ಯಾಯಾಧೀಶರಂತೆ ನ್ಯಾಯಮೂರ್ತಿ ಗೊಗೊಯ್ ಅವರು ತಮ್ಮ ಅಧಿಕಾರವನ್ನು ಚಲಾಯಿಸಿ ಪೀಠಗಳನ್ನು ಬಳಸಿಕೊಂಡರು. ಇದಕ್ಕಾಗಿ ಅವರು ನ್ಯಾ.ಅರುಣ್ ಮಿಶ್ರಾ ಅವರ ನೆರವನ್ನು ಪಡೆದುಕೊಂಡರು.
ಒಂದು ಪ್ರಕರಣದಲ್ಲಿ ನ್ಯಾ.ಗೊಗೊಯ್ ಅವರು ಯಾವುದೇ ಸಕಾರಣವಿಲ್ಲದೇ ಮತ್ತು ಪ್ರಚೋದನೆಯಿಲ್ಲದೇ ನಿಮ್ಮ ವಾದವನ್ನು ಕೇಳುವುದಿಲ್ಲ ಎಂದು ಕೆಲವು ಹಿರಿಯ ನ್ಯಾಯವಾದಿಗಳನ್ನು ಒಳಗೊಂಡಿದ್ದ ಸಮೂಹಕ್ಕೆ ಹೇಳಿ ಮುಜುಗರಕ್ಕೀಡು ಮಾಡಿದ್ದರು. ದುಃಖಕರವಾದ ಮತ್ತೊಂದು ಪ್ರಕರಣವೆಂದರೆ, ಸ್ವತಃ ತಾವೇ ಅಧ್ಯಕ್ಷರಾಗಿದ್ದ ಸಮಿತಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ್ದರು. ನ್ಯಾ.ಗೊಗೊಯ್ ಅವರಿದ್ದ ಪೀಠದಲ್ಲಿ ಮತ್ತಿಬ್ಬರು ನ್ಯಾಯಾಧೀಶರಾದ ಖನ್ವಿಲ್ಕರ್ ಮತ್ತು ನಾಗೇಶ್ವರರಾವ್ ಅವರಿದ್ದರು. ಈ ಇಬ್ಬರೂ ಸಹ ಸಮಿತಿಯ ಸದಸ್ಯರಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರಿಬ್ಬರು ಮರುಪರಿಶೀಲನೆಗೆ ಒಳಪಟ್ಟಿದ್ದರು. ಆದರೆ, ಗೊಗೊಯ್ ಅವರು ಸಮಿತಿ ಅಧ್ಯಕ್ಷರಾಗಿದ್ದುಕೊಂಡು ತಮಗೆ ಸಂಬಂಧಿಸಿದ ಪ್ರಕರಣವನ್ನು ತಾವೇ ವಿಚಾರಣೆ ನಡೆಸಿದ್ದು ಮಾತ್ರ ಎಲ್ಲರನ್ನೂ ನಿಬ್ಬೆರಗುಗೊಳಿಸಿತ್ತು.
ತಮ್ಮದೇ ಅಜೆಂಡಾವನ್ನು ಮುಂದಿಟ್ಟುಕೊಂಡು ಅವರು ಅಸ್ಸಾಂನಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ಜಾರಿಗೆ ತರುವಲ್ಲಿ ಯಶಸ್ವಿಯಾದರು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಬೇಕಾಗಿದ್ದು ಎನ್ಆರ್ ಸಿ ಮತ್ತು ಬಾಬ್ರಿ ಮಸೀದಿ ವಿವಾದದ ತೀರ್ಪು. ಅದೇರೀತಿ ಗೊಗೊಯ್ ಅವರೂ ಕೂಡ ಬೇಕಾಗಿತ್ತು! ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊರಬಿದ್ದಿರುವ ಆದೇಶಗಳನ್ನು ಈಗ ಇತಿಹಾಸ ತಜ್ಞರು ಪರಿಶೀಲನೆ ನಡೆಸಬೇಕಿದೆ. ಈ ತೀರ್ಪುಗಳ ಹಿಂದೆ ಸರ್ಕಾರದ ಒತ್ತಡ ಇತ್ತೇ ಇಲ್ಲವೇ ಎಂಬುದನ್ನು ಪತ್ತೆ ಮಾಡಬೇಕಿದೆ. ಇದಲ್ಲದೇ, ನ್ಯಾಯಾಲಯದ ನೇಮಕಾತಿಗಳಲ್ಲಿ ಸ್ವಜನ ಪಕ್ಷಪಾತವಾಗಿರುವ ಬಗ್ಗೆಯೂ ಇತಿಹಾಸ ತಜ್ಞರು ಪತ್ತೆ ಮಾಡಬೇಕಿದೆ.
2019 ರ ನವೆಂಬರ್ 14 ರಂದು ಗೊಗೊಯ್ ಅವರು ನಿವೃತ್ತಿ ಹೊಂದಿದ ದಿನ ತುಂಬಾ ಸೂಕ್ಷ್ಮವಾದ ಶಬರಿಮಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಕನಿಷ್ಠ ಚರ್ಚೆ ಮಾಡಿ ಅಥವಾ ವಿಚಾರಣೆ ಮಾಡಿ ವಿಸ್ತರಿತ ಪೀಠಕ್ಕೆ ವರ್ಗಾವಣೆ ಮಾಡಿದರು. ಇದು ನ್ಯಾಯಮೂರ್ತಿ ನಾರಿಮನ್ ಅವರ ಕೋಪಕ್ಕೆ ಕಾರಣವಾಗಿತ್ತು.
ಇನ್ನು ಸಿಬಿಐ ಪ್ರಕರಣದಲ್ಲಿ ಸರ್ಕಾರ ಮಾಡಿದ ನೇಮಕಾತಿಯನ್ನು ಪಕ್ಕಕ್ಕೆ ಸರಿಸಿದರು. ಆದರೆ, ನಂತರ ಸರ್ಕಾರ ತನಗಿಷ್ಟ ಬಂದ ರೀತಿಯಲ್ಲಿ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟರು. ಈ ಮೂಲಕ ಗೊಗೊಯ್ ಅವರು ನ್ಯಾಯಾಂಗದ ಸ್ವಾತಂತ್ರ್ತದೊಂದಿಗೆ ರಾಜೀ ಮಾಡಿಕೊಂಡು ವಾಗ್ದಂಡನೆಗೆ ಕಾರಣವಾಗಬಲ್ಲ ನಿರ್ಧಾರಗಳನ್ನು ಕೈಗೊಂಡರೇ? ಇಲ್ಲವೇ? ಎಂಬುದನ್ನು ಇತಿಹಾಸ ನಿರ್ಧರಿಸಬೇಕಿದೆ.
2018-19 ನೇ ಸಾಲಿನಲ್ಲಿ ಕೆಲವು ವಿವಾದಾತ್ಮಕ ನೇಮಕಾತಿಗಳ ಜತೆಗೆ ಸುಪ್ರೀಂಕೋರ್ಟ್ ಕೆಲವು ನ್ಯಾಯಾಧೀಶರನ್ನು ಒಳಗೊಂಡಿದೆಯಾದರೂ ಹಲವಾರು ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸುತ್ತಿದೆ.
ಸುಪ್ರೀಂಕೋರ್ಟ್ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಉದಾರೀಕರಣದ ಆರ್ಥಿಕತೆ, ಕಾರ್ಪೊರೇಟ್ ಬದಲಾವಣೆಗಳು, ಮಧ್ಯಸ್ಥಿಕೆ, ದಿವಾಳಿತನ, ಸಾಲ ಮತ್ತು ಬಂಡವಾಳ ಹೂಡಿಕೆಗೆ ಸಂಬಂಧಿಸಿದ ವಿಚಾರಗಳ ವಿಚಾರಣೆಗೆಂದು ಪೂರ್ಣಪ್ರಮಾಣದ ನ್ಯಾಯಾಧೀಶರು ಇಲ್ಲದಿರುವುದು. ಇದಕ್ಕೆ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಹೊರತಾಗಿದ್ದಾರೆ. ಇವರು ಈ ವರ್ಷ ದಿವಾಳಿತನದ ಕಾನೂನು, ಅನಿಲ್ ಅಂಬಾನಿ ಪ್ರಕರಣ ಸೇರಿದಂತೆ ಮತ್ತಿತರೆ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದ ತೀರ್ಪುಗಳನ್ನು ನೀಡಿದ್ದಾರೆ. ಇದರಲ್ಲಿ ಎಸ್ಸಾರ್ ದಿವಾಳಿತನ ಕೇಸಿನಲ್ಲಿ ಐತಿಹಾಸಿಕ ತೀರ್ಪು ನೀಡಿದ್ದಾರೆ.
2019 ಒಂದು ರೀತಿಯಲ್ಲಿ ಆಡಳಿತ ಮತ್ತು ನಾಗರಿಕ ಸ್ವಾತಂತ್ರ್ಯಗಳಿಗೆ ಕೆಟ್ಟ ವರ್ಷವೆಂದೇ ಹೇಳಬಹುದು. ಏಕೆಂದರೆ, ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರದ ಪತನದ ಪ್ರಕರಣದ ನಂತರ ಉಂಟಾದ ಬಿಕ್ಕಟ್ಟಿನ ಬಗ್ಗೆ ಮುಖ್ಯ ನ್ಯಾಯಾಧೀಶರು ತೆಗೆದುಕೊಂಡ ತೀರ್ಮಾನ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿತು. ಈ ಪ್ರಕರಣದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಇನ್ನೂ ಪರಿಪೂರ್ಣ ಮತ್ತು ಪರಿಣಾಮಕಾರಿಯಾಗಿ ಉಲ್ಲೇಖ ಮಾಡಿ ತೀರ್ಪು ನೀಡಬಹುದಿತ್ತು.
ಇನ್ನು ನಾಗರಿಕ ಸ್ವಾತಂತ್ರ್ಯದ ವಿಚಾರಕ್ಕೆ ಬಂದಾಗ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಪ್ರಕರಣದ ಜಾಮೀನು ವಿಚಾರದಲ್ಲಿ ಸುಪ್ರೀಂಕೋರ್ಟ್ ನಡೆದುಕೊಂಡ ರೀತಿ ಒಂದು ಸ್ಪಷ್ಟ ಉದಾಹರಣೆಯಾಗಿದೆ. ಇದರೊಂದಿಗೆ ಕಾಶ್ಮೀರ ಕಣಿವೆ ಒಂದು ರೀತಿಯಲ್ಲಿ ಅಪಮಾನಕ್ಕೆ ಒಳಗಾಗಿತ್ತು. ಅಲ್ಲಿ ನಾಗರಿಕ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯದ ಹರಣವಾಗಿತ್ತು. ಅಲ್ಲಿನ ನಾಯಕರನ್ನು ಒತ್ತಾಯಪೂರ್ವಕವಾಗಿ ಗೃಹಬಂಧನದಲ್ಲಿಡಲಾಗಿತ್ತು. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟ ಮತ್ತು ಕಠಿಣವಾದ ನಿರ್ಧಾರ ಪ್ರಕಟಿಸಬೇಕಿತ್ತು.
ಒಂದು ವೇಳೆ ಬಾಬ್ರಿ ಪ್ರಕರಣದಲ್ಲಿ ಹೊರಬಂದಿರುವ ತೀರ್ಪು ಭಾರತೀಯ ಜಾತ್ಯತೀತತೆ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರೆ ಆ ತೀರ್ಪು ಮಸೀದಿಯನ್ನು ಧ್ವಂಸಗೊಳಿಸಿದಷ್ಟೇ ನಮ್ಮನ್ನು ಕಾಡುತ್ತಿದೆ. ಆದರೆ, ಈ ತೀರ್ಪಿನಿಂದ ವಿಕೃತವಾಗಿ ಸಂತೋಷಪಡಲಾಗುತ್ತಿದೆ. ಕೆಲವು ನ್ಯಾಯಾಧೀಶರು ತಮ್ಮ ಪರಂಪರೆಯ ಮೇಲೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ನಾವು ಅಂತಹವರಿಂದ ಉತ್ತಮ ತೀರ್ಪುಗಳನ್ನು ಎದುರುನೋಡಬಹುದು. ಆದರೆ, ಬಹುತೇಕ ಪ್ರಕರಣಗಳಲ್ಲಿ ಅದು ಈಗ ಸಾಧ್ಯವಾಗುತ್ತಿಲ್ಲ.
ಈಗ ಹೊಸ ವರ್ಷ ಆರಂಭವಾಗಿದೆ. ಅದೇ ಕಾಶ್ಮೀರ ವಿಚಾರ, ರೊಹಿಂಗ್ಯಾ ಮತ್ತು ಎನ್ಆರ್ ಸಿ –ಪೌರತ್ವ (ತಿದ್ದುಪಡಿ) ಕಾಯ್ದೆಯಂತಹ ಸವಾಲುಗಳನ್ನು ತನ್ನ ಸೆರಗಿನಲ್ಲಿಟ್ಟುಕೊಂಡಿದೆ 2020. ಹಲವು ಪ್ರಕರಣಗಳಲ್ಲಿ ಬಂದಿರುವ ಫಲಿತಾಂಶಗಳನ್ನು ಗಮನಿಸಿದರೆ ನೋವು ತರುತ್ತದೆ. ಆದರೆ, ನಾವು ಕೆಲವು ಹೊಸ ನ್ಯಾಯಾಧೀಶರನ್ನು ಹೊಂದಿದ್ದೇವೆ. ಸೂಕ್ಷ್ಮಮತಿಗಳಾಗಿರುವ ಚತುರ ನ್ಯಾಯವಾದಿಗಳನ್ನು ಹೊಂದಿದ್ದೇವೆ. ಇವರೆಲ್ಲರ ಸಹಕಾರದಿಂದ ನೆಲದ ಕಾನೂನು ಉಳಿಯುತ್ತದೆ ಎಂಬ ಅಭಿಲಾಷೆ ಸಮಸ್ತ ಭಾರತೀಯನದ್ದಾಗಿದೆ. ಇಂತಹ ಹತ್ತು ಹಲವಾರು ಸವಾಲುಗಳನ್ನು ಹಾಲಿ ಮುಖ್ಯನ್ಯಾಯಾಧೀಶರಾದ ಬೊಬ್ಡೆ ಮತ್ತು ಇತರೆ ನ್ಯಾಯಾಧೀಶರ ತಂಡ ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಕೃಪೆ: ದಿ ವೈರ್