ನ್ಯಾಯಾಂಗ ನಿಂದನೆ ಆರೋಪದಡಿಯಲ್ಲಿ ಸುಪ್ರಿಂಕೋರ್ಟ್ನಲ್ಲಿ ಸು-ಮೋಟೊ ಪ್ರಕರಣ ಎದುರಿಸುತ್ತಿದ್ದ ಪ್ರಶಾಂತ್ ಭೂಷಣ್ ಅವರು ತಪ್ಪಿತಸ್ಥರು ಎಂದು ಕೋರ್ಟ್ ತೀರ್ಪು ನೀಡಿದ ಬಳಿಕ ತಾನು ಯಾವುದೇ ಕಾರಣಕ್ಕೂ ಕ್ಷಮೆ ಯಾಚಿಸುವುದಿಲ್ಲ ಎಂದು ಪ್ರಶಾಂತ್ ಭೂಷಣ್ ಕೋರ್ಟ್ಗೆ ಹೇಳಿಕೆ ನೀಡಿದ್ದಾರೆ. ತಾನು ತಪ್ಪಿತಸ್ಥ ಎಂಬ ತೀರ್ಪು ನೀಡಿದಕ್ಕಾಗಿ ನನಗೆ ಬೇಸರವಾಗಲಿಲ್ಲ, ಆದರೆ, ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದು ನನಗೆ ಬೇಸರ ಮೂಡಿಸಿದೆ ಎಂದು ಅವರು ಹೇಳಿದ್ದಾರೆ.
“ಪ್ರಜಾತಂತ್ರ ವ್ಯವಸ್ಥೆಯ ಅಡಿಯಲ್ಲಿ ನಾನು ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ ಹೊರತು, ನನ್ನ ಟ್ವೀಟ್ಗಳಿಗೆ ಬೇರಾವ ಅರ್ಥವೂ ಇಲ್ಲ. ಅನ್ಯಮನಸ್ಕನಾಗಿ ನಾನು ಟ್ವೀಟ್ ಮಾಡಿಲ್ಲ. ನನ್ನ ಸ್ವಂತ ನಂಬಿಕೆಗಳ ಆಧಾರದ ಮೇಲೆ ನಾನು ಮಾಡಿರುವ ಟ್ವೀಟ್ಗಳಿಗೆ ನಾನು ಒಂದು ವೇಳೆ ಕ್ಷಮೆ ಕೇಳಿದರೆ, ಅದು ಅಪ್ರಾಮಾಣಿಕವಾಗಿ ಇರುವುದು,” ಎಂದು ಅವರು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ತಮ್ಮ ಹೇಳಿಕೆಯಲ್ಲಿ ಮಹಾತ್ಮಾ ಗಾಂಧಿ ಅವರನ್ನು ಉಲ್ಲೇಖಿಸಿರುವ ಪ್ರಶಾಂತ್ ಭೂಷಣ್ ಅವರು, “ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರು ತಮ್ಮ ವಿಚಾರಣೆಯ ವೇಳೆ ಹೇಳಿದಂತೆ, ನನ್ನ ಮೇಲೆ ದಯೆ ತೋರಬೇಡಿ. ಕೋರ್ಟ್ ತಪ್ಪು ಎಂದು ಪರಿಗಣಿಸುವಂತಹ ಕೃತ್ಯವನ್ನು ನಾನು ಮಾಡಿದ್ದರೆ, ಓರ್ವ ಪ್ರಜೆಯಾಗಿ ಕಾನೂನಾತ್ಮಕವಾಗಿ ಯಾವ ಶಿಕ್ಷೆಯನ್ನೂ ನೀಡಿದರೂ ಅನುಭವಿಸಲು ಸಜ್ಜಾಗಿದ್ದೇನೆ,” ಎಂದಿದ್ದಾರೆ.
ಇನ್ನು ತಮ್ಮ ಟ್ವೀಟ್ಗಳನ್ನು ಸಮರ್ಥಿಸಿಕೊಂಡಿಸಿರುವ ಪ್ರಶಾಂತ್ ಭೂಷಣ್, ನನ್ನ ವೈಯಕ್ತಿಕ ನಂಬಿಕೆಗಳನ್ನು ಮಾತ್ರ ನಾನು ಟ್ವೀಟ್ ಮುಖಾಂತರ ವ್ಯಕ್ತ ಪಡಿಸಿದ್ದೇನೆ. ಇದಕ್ಕೆ ಪ್ರಜಾಪ್ರಭುತ್ವದಲ್ಲಿ ಹಕ್ಕಿದೆ. ನ್ಯಾಯಾಂಗ ವ್ಯವಸ್ಥೆಯನ್ನು ಸಾರ್ವಜನಿಕವಾಗಿ ಚರ್ಚಿಸುವುದು ವ್ಯವಸ್ಥೆಗೆ ಒಳಿತಾದಂತದು. ಯಾವುದೇ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಬಹಿರಂಗವಾಗಿ ವಿಮರ್ಶಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಗತ್ಯವಾಗಿದೆ ಹಾಗೂ ಇದರಿಂದಾಗಿ ಸಂವಿಧಾನವನ್ನು ರಕ್ಷಿಸಬಹುದಾಗಿದೆ,” ಎಂದು ಹೇಳಿಕೆ ನೀಡಿದ್ದಾರೆ.