ನೋಟು ಅಮಾನ್ಯೀಕರಣ ಭಾರತದ ಬಡವರು, ರೈತರು, ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಿಗಳ ಮೇಲಿನ ನೇರ ದಾಳಿ ಎಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ನೋಟು ನಿಷೇಧದಿಂದ ಲಾಭ ಪಡೆದಿರುವುದು ಭಾರತದ ಶ್ರೀಮಂತರು ಮಾತ್ರ ಎಂದಿರುವ ರಾಹುಲ್ ಗಾಂಧಿ, ಭಾರತದ ಶ್ರೀಮಂತರ ಸಾಲಮನ್ನಾ ಮಾಡಲು ಬಡವರ ಜೇಬಿನಿಂದ ಹಣ ಬಳಸಲಾಗಿದೆ ಎಂದಿದ್ದಾರೆ.”
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನರೇಂದ್ರ ಮೋದಿ ಆಡಳಿತದಲ್ಲಿ ಆರ್ಥಿಕ ಕುಸಿತ ಕಾಣುತ್ತಿರುವುದಕ್ಕೆ ನರೇಂದ್ರ ಮೋದಿಯವರ ಅಜ್ಞಾನದ ಆರ್ಥಿಕ ನೀತಿಗಳೇ ಕಾರಣ ಎಂಬ ಆರೋಪದ ನಡುವೆ, ರಾಹುಲ್ ಗಾಂಧಿ ಭಾರತದ ಆರ್ಥಿಕತೆಯ ಕುರಿತು ಮಾತನಾಡುವ ಅಭಿಯಾನವನ್ನು ಸಾಮಾಜಿಕ ಜಾಲತಾಣದ ಮೂಲಕ ಆರಂಭಿಸಿದ್ದಾರೆ.
2016 ನವೆಂಬರ್ 8 ರಂದು ಏಕಾಏಕಿ ಪ್ರಧಾನಿ ಮೋದಿ ನೋಟು ನಿಷೇಧ ಮಾಡಿ ನಿರ್ಣಯ ತೆಗೆದುಕೊಂಡರು. ಇಡೀ ಭಾರತವೇ ತಮ್ಮ ಜೇಬಿನಲ್ಲಿದ್ದ ಹಣವನ್ನು ಬದಲಾಯಿಸಲು ಬ್ಯಾಂಕ್ ಮುಂದೆ ಸರತಿ ಸಾಲಿನಲ್ಲಿ ನಿಂತರು. ಕಪ್ಪು ಹಣದ ವಿರುದ್ಧದ ನೀತಿಯೆಂದು ಬಿಂಬಿಸಿಕೊಂಡ ನೋಟು ರದ್ಧತಿಯಿಂದ ಕಪ್ಪುಹಣ ಬೆಳಕಿಗೆ ಬಂದಿತೆ ಎಂದರೆ ಅದೂ ಇಲ್ಲ. ನೋಟು ರದ್ಧತಿಯಿಂದ ಭಾರತದ ಬಡವರಿಗೆ ಏನಾದರೂ ಪ್ರಯೋಜನ ಸಿಕ್ಕಿತೇ ಎಂದರೆ ಅದೂ ಇಲ್ಲ.
ನೋಟು ರದ್ಧತಿಯಿಂದ ಲಾಭ ಪಡೆದುಕೊಂಡದ್ದು ಭಾರತದ ಶ್ರೀಮಂತ ವರ್ಗ ಮಾತ್ರ. ಬಡವರ ಹಣವನ್ನು ನೋಟು ನಿಷೇಧದ ಮೂಲಕ ಬ್ಯಾಂಕ್ಗೆ ಬರುವಂತೆ ನೋಡಿಕೊಳ್ಳಲಾಯಿತು. ಬಳಿಕ ಆ ಹಣವನ್ನು ಶ್ರೀಮಂತರ ಸಾಲಮನ್ನಾಕ್ಕೆ ಬಳಸಲಾಯಿತು. ನೋಟು ನಿಷೇಧದ ಇನ್ನೊಂದು ಉದ್ದೇಶ ʼನಗದು ರಹಿತ ವ್ಯವಹಾರʼ. ಇದನ್ನು ಸ್ವತಃ ಪ್ರಧಾನಮಂತ್ರಿಯೇ ಹೇಳಿದ್ದಾರೆ.
ನಮ್ಮ ಅಸಂಘಟಿತ ವಲಯದ ವ್ಯವಹಾರ ನಿಂತಿರುವುದು ನಗದು ವ್ಯವಹಾರದ ಆಧಾರದ ಮೇಲೆ. ರೈತರಿರಲಿ, ಸಣ್ಣಪುಟ್ಟ ವ್ಯಾಪಾರಿಗಳಿರಲಿ, ಕಾರ್ಮಿಕರಿರಲಿ ಅವರು ನಗದನ್ನೇ ಅವಲಂಬಿಸಿದ್ದಾರೆ. ಒಂದುವೇಳೆ ನಗದುರಹಿತಗೊಂಡರೆ ನಷ್ಟ ಅನುಭವಿಸುವುದು ರೈತರು, ಕಾರ್ಮಿಕರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು, ಸಣ್ಣ ಮಟ್ಟಗಿನ ವ್ಯಾಪಾರಿಗಳು. ಇವರಿಗೆ ನಗದಿಲ್ಲದೆ ವ್ಯವಹಾರ ನಡೆಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ನೋಟು ನಿಷೇಧ ಅನ್ನುವುದು ಭಾರತದ ಅಸಂಘಟಿತ ವಲಯದ ಮೇಲಿನ ಪರಾಕ್ರಮ, ಅದರ ಮೇಲಿನ ದಾಳಿ. ನಾವು ಈ ದಾಳಿಯ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕು ಎಂದು ರಾಹುಲ್ ಹೇಳಿದ್ದಾರೆ.