ನಾವು ಸಂದಿಗ್ಧವಾದ ಪರಿಸ್ಥಿತಿಯಲ್ಲಿದ್ದೇವೆ. ಪತ್ರಕರ್ತರು, ಬರಹಗಾರರು, ದೇಶದ ಪ್ರಜ್ಞಾವಂತ ಸಮುದಾಯ ಆಡಳಿತಗಾರರ ಕುತಂತ್ರವನ್ನು ಅರ್ಥಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ತುರ್ತು ಪರಿಸ್ಥಿತಿಯ ಕಾಲದಲ್ಲಿ ಪ್ರಭುತ್ವದ ವಿರುದ್ಧ ನ್ಯಾಯಾಂಗ ಮತ್ತು ಮಾಧ್ಯಮ ರಂಗವಿತ್ತು ಅದು ಸೇಲ್ ಆಗಿರಲಿಲ್ಲ, ಶರಣಾಗಿರಲಿಲ್ಲ, ಇಂದಿರಾಗಾಂಧಿ ಹೇರಿದ ತುರ್ತು ಪರಿಸ್ಥಿತಿಯ ವಿರುದ್ದ ಹೋರಾಡಿ, ಅದನ್ನು ಮಣಿಸಿದ್ದು, ಕೇವಲ ರಾಜಕೀಯ ಪಕ್ಷ, ರಾಜಕರಣಿಗಳಲ್ಲ, ಅದರಲ್ಲಿ ಬಹುದೊಡ್ಡ ಪಾತ್ರ ಮಾಧ್ಯಮ ರಂಗ ಮತ್ತು ನ್ಯಾಯಾಂಗದ್ದು ಇತ್ತು. ಇದನ್ನು ಈಗಿನ ಪ್ರಭುತ್ವ ನ್ಯಾಯಾಂಗ, ಮಾಧ್ಯಮ ರಂಗದ ಮೇಲಿನ ತಮ್ಮ ವಿಶ್ವಾಸವನ್ನು ಕಳೆದುಕೊಳ್ಳುವ ರೀತಿ ಮಾಡುತ್ತಿದೆ. ಇದು ಬಹಳ ವ್ಯವಸ್ಥಿತ ರೀತಿಯಲ್ಲಿ ಮಾಡುತ್ತಿದೆ ಎಂದು ರೈತ ಚಳುವಳಿಯನ್ನು ಬೆಂಬಲಿಸುತ್ತಿರುವ ಪತ್ರಕರ್ತರನ್ನು ಬಂಧಿಸಿರುವುದನ್ನು ವಿರೋಧಿಸಿ ಸಮಾನ ಮನಸ್ಕರು ಬೆಂಗಳೂರಿನಲ್ಲಿ ಆಯೋಜಿಸಿದ ಪ್ರತಿಭಟನಾ ಸಭೆಯಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಮಗೆ ಕಷ್ಟಗಳು ಬಂದಾಗ ಚುನಾಯಿತ ಸರ್ಕಾರ ಜನ ವಿರೋಧಿಯಾಗಿ ನಡೆದಾಗ, ನ್ಯಾಯಾಂಗದ ಕಡೆ ಗಮನಹರಿಸುತ್ತೇವೆ. ಮಾಧ್ಯಮರಂಗ ನಮ್ಮ ನೆರವಿಗೆ ಬರುತ್ತದೆ ಎಂದು ನಿರೀಕ್ಷೆ ಮಾಡುತ್ತೇವೆ. ಇವತ್ತಿನ ದಿನ ಆ ಎರಡು ಭರವಸೆಯ ಕೇಂದ್ರಗಳು ಕುಸಿದು ಬೀಳುತ್ತಿವೆ. ಇವುಗಳು ಸುಮ್ಮನೆ ಕುಸಿದು ಬೀಳುತ್ತಿಲ್ಲ, ಇದೊಂದು ವ್ಯವಸ್ಥಿತ ಸಂಚಾಗಿದೆ. ಸುಪ್ರೀಂ ಕೋರ್ಟ್ನ ಐದು ನ್ಯಾಯಾಧೀಶರು ಸುಪ್ರೀಂ ಕೋರ್ಟ್ ಚೀಫ್ ಜಸ್ಟೀಸ್ ವಿರುದ್ದವೇ ಪ್ರೆಸ್ ಕಾನ್ಫರೆನ್ಸ್ ಮಾಡುತ್ತಾರೆ. ಈಗಿನ ಈ ನಡೆಗಳನ್ನು ಗಮನಿಸಿದಾಗ ಸಾಮಾನ್ಯ ಜನರಿಗೂ ನ್ಯಾಯಾಂಗದ ಕಡೆ ನಂಬಿಕೆ ಇಲ್ಲದ ಪರಿಸ್ಥಿತಿ ಎದುರಾಗಿದೆ. ಅಲ್ಲಿಗೆ ಒಂದು ಭರವಸೆಯ ಕೇಂದ್ರವನ್ನು ಆಡಳಿತಗಾರರ ಕುತಂತ್ರದಿಂದ ನಾಶಮಾಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಧಾನಿ ನರೇಂದ್ರ ಮೋದಿಯವರು ಇಲ್ಲಿಯವರೆಗೆ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ಸರಿಯಾಗಿ ಮಾಡಲಿಲ್ಲ, ಒಂದು ಬಾರಿ ಪತ್ರಿಕಾಗೋಷ್ಠಿ ನಡೆಸಿದ ಮೋದಿ ಗೋಣಾಡಿಸಿಕೊಂಡು ಕೂತ್ತಿದ್ದರು. ಆದರೆ ಮಾಧ್ಯಮರಂಗ ಅವರ ಭಜನೆ ಮಾಡುತ್ತಿದೆ. ನಾವೆಲ್ಲ ಬೈಯುತ್ತಿರುವುದು ಮಾಧ್ಯಮ ರಂಗಕ್ಕೆ, ನ್ಯಾಯಾಂಗಕ್ಕೆ, ಪ್ರಭುತ್ವಕ್ಕೆ, ಇಲ್ಲಿ ನಮ್ಮ ನಮ್ಮಲ್ಲಿಯೇ ಬೇಧ ಹುಟ್ಟಿಸಿ, ನಮ್ಮವರನ್ನೆ ನಮ್ಮ ವಿರುದ್ದ ಎತ್ತಿ ಕಟ್ಟುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದಿದ್ದಾರೆ.
ಮೀಸಲಾತಿಯ ವಿರುದ್ದ ದಲಿತರೇ ಧ್ವನಿಯೆತ್ತುವಂತೆ ಮಾಡುವುದು, ಭೂ ಸುಧಾರಣೆಯ ಫಲಾನುಭವಿಗಳೇ ಭೂ ಸುಧಾರಣೆಯ ವಿರುದ್ದ ಮಾತನಾಡುವುದು, ಅಲ್ಪಸಂಖ್ಯಾಂತರನ್ನು ಅವರಲ್ಲಿಯೇ ಗುಂಪು ಕಟ್ಟಿಸಿ, ಅವರ ವಿರುದ್ದವೇ ಮಾತನಾಡುವಂತೆ ಮಾಡುವುದು, ನಾವುಗಳೇ ಕಾದಾಡುತ್ತಿದ್ದೇವೆ ಇವತ್ತಿನ ಪರಿಸ್ಥಿತಿಯಲ್ಲಿ, ಒಂದು ಕಡೆ ಮಾಧ್ಯಮವನ್ನು ಗೋದಿ ಮೀಡಿಯಾ ಎನ್ನುತ್ತಿದ್ದೇವೆ, ಮತ್ತೊಂದೆಡೆ ಪತ್ರಕರ್ತ ಸಿದ್ದಾರ್ಥನ್, ವರದ ರಾಜನ್, ರಾಜೀವ್ ದೇಸಾಯಿ ಅವರ ರಕ್ಷಣೆಗಾಗಿ ಪತ್ರಕರ್ತರು, ಬರಹಗಾರರು ಒಂದುಗೂಡಿದ್ದೇವೆ. ಕೇಂದ್ರ ಸರ್ಕಾರದ ವ್ಯವಸ್ಥಿತ ಸಂಚನ್ನು ಅರ್ಥ ಮಾಡಿಕೊಳ್ಳಬೇಕಾಗುವ ಅಗತ್ಯವಿದೆ. ಇಲ್ಲದಿದ್ದರೆ ನಮಗಿದ್ದ ಭರವಸೆಯ ದಾರಿಗಳನ್ನು ಕಳೆದುಕೊಳ್ಳುತ್ತೇವೆ. ಪ್ಯಾಸಿಸ್ಟ್ ಸರ್ಕಾರವನ್ನು ಬೀದಿ ಹೋರಾಟದ ಮೂಲಕವೇ ನಾಶಮಾಡಬೇಕಾಗುತ್ತದೆ.
2010 ರಿಂದ 2020 ರವರೆಗಿನ ಅಂಕಿಅಂಶಗಳನ್ನು ತೆಗೆದುಕೊಂಡರೆ 2014 ರಿಂದ 2020 ರವರೆಗೆ 154 ಮಂದಿ ಪತ್ರಕರ್ತರನ್ನು ಬಂಧಿಸಿದ್ದಾರೆ. ಅದರಲ್ಲಿ ಶೇಕಡಾ 40 ರಷ್ಟು ಪತ್ರಕರ್ತರು ಕಳೆದ ಒಂದು ವರ್ಷದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಹತ್ರಾಸ್ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ವರದಿ ಮಾಡಲು ಹೋದ ಸಿದ್ದೀಕ್ ಕಪ್ಪನ್ ಜೈಲು ಪಾಲಾಗಿದ್ದಾರೆ. ನಾವುಗಳು ಇವತ್ತು ಇಬ್ಬರು ಮೂವರು ಪತ್ರಕರ್ತರ ಬಗ್ಗೆ ಮಾತನಾಡುತ್ತಿದ್ದೇವೆ, ದೇಶಾದ್ಯಂತ ನಮಗೆ ತಿಳಿಯದಿರುವ ಅದೆಷ್ಟೋ ಅನಾಮಿಕ ಪತ್ರಕರ್ತರು ಇವತ್ತು ಜೈಲಿನಲ್ಲಿದ್ದಾರೆ. ಕರ್ನಾಟಕದಲ್ಲಿರುವ ಕೆಲವೊಂದು ಪತ್ರಿಕಾ ಸಂಸ್ಥೆಗಳಲ್ಲಿ ಸೆಲೆಕ್ಟಿವ್ ಆಗಿ 20 ರಿಂದ 25 ಪತ್ರಕರ್ತರನ್ನು ಕೆಲಸದಿಂದ ತೆಗೆದಿದ್ದಾರೆ. ಒಂದು ಕಾಲದಲ್ಲಿ ಪರ್ತಕರ್ತರನ್ನು ಕೆಲಸಕ್ಕೆ ನೇಮಿಸಿಕೊಳ್ಳುವಾಗ ಸಂದರ್ಶನದಲ್ಲಿ ಅವರ ವಿದ್ಯಾರ್ಹತೆ, ಅನುಭವ, ಬರೆಯುವ ಕಲೆ, ವಿಶ್ಲೇಷಣೆಯ ಸಾಮರ್ಥ್ಯ ನೋಡಲಾಗುತ್ತಿತ್ತು. ಇವತ್ತಿನ ದಿನ ಹಾಗಲ್ಲ, ಸೋಶಿಯಲ್ ಮೀಡಿಯಾ ಚೆಕ್ ಮಾಡಿ ಅವರು ಮೋದಿ ಪರ ಇದ್ದಾರೋ ಇಲ್ಲವೋ ಎಂದು ತಿಳಿದ ನಂತರ ಸಂದರ್ಶನಕ್ಕೆ ಕರೆಯುವ ಪರಿಸ್ಥಿತಿಯಿದೆ. ಈ ಸಮಸ್ಯೆಯ ಬಗ್ಗೆ ಬಾಯಿಬಿಡದಂತಹ ಪರಿಸ್ಥಿತಿ ಪತ್ರಕರ್ತರಿಗೆ ಎದುರಾಗಿದೆ.
ಟಿ.ವಿ ಚಾನಲ್ಗಳಲ್ಲಿ, ಪತ್ರಿಕಾ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರು, ಮಾಲೀಕರ ಮೇಲೆ ಆಕ್ಷೇಪವಿಲ್ಲ, ಇಲ್ಲಿ ಪತ್ರಕರ್ತರ ವರ್ಗ ಓನರ್ ಶಿಪ್ ಮಾಧ್ಯಮದ ಬಿಸಿನೆಸ್ ಮಾಡೆಲ್ ಬಗ್ಗೆ ಅರ್ಥ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ರಾಜ್ದೀಪ್ ಸರ್ದೇಸಾಯಿ ಕೆಲಸ ಮಾಡುವ ಇಂಡಿಯಾ ಟುಡೆ ಸಂಸ್ಥೆಯ ಮಾಲೀಕರು ಬಿರ್ಲಾಗಳು, ಅದೇನಾದರು ರಿಲಯನ್ಸ್ ಒಡೆತನದಲಿದ್ದಿದ್ದರೆ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಮೇಲೆ ಕ್ರಮವಾಗುತ್ತಿರಲಿಲ್ಲ, ಇನ್ನ ಎರಡು ಮೂರು ವರ್ಷದಲ್ಲಿ ಎಲ್ಲಾ ಪತ್ರಕರ್ತರು ರಿಲಯನ್ಸ್ನ ಎಂಪ್ಲಾಯ್ ಆಗಿರುತ್ತಾರೆ. ಅಷ್ಟರ ಮಟ್ಟಿಗೆ ಹಿಡಿತ ಸಾಧಿಸುತ್ತಿದ್ದಾರೆ. ಜಿಯೋ ಬರುತ್ತಿದೆ ಸುದ್ದಿ ಚಾನಲ್ಗಳನ್ನೆಲ್ಲ ಅವರ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. ನೆಲದಡಿ ಹಾಕುವ ಕೇಬಲ್ ಮೂಲಕವೇ ಇಡೀ ದೇಶ ಆಳುವ ಪರಿಸ್ಥಿತಿ ಎದುರಾಗುತ್ತೆ. ಮಾಧ್ಯಮ ಉದ್ಯಮವಾಗುವುದರ ಜೊತೆಗೆ ಅದರೊಂದಿಗೆ ರಾಜಕರಣವು ಸೇರಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಒಂದೋ ಈಗಿನ ವ್ಯವಸ್ಥೆಯ ತೊಡೆಯೇರಿ ಕೂರಬೇಕು, ಅದೇ “ಗೋದಿ ಮೀಡಿಯಾ” ಆಡಳಿತವನ್ನು ವಿಮರ್ಶಿಸಿದ ಪತ್ರಕರ್ತರನ್ನು ಕಾಲಡಿ ಹಾಕಿ ತುಳಿಯುತ್ತಾರೆ. ಇದರಿಂದ ಖ್ಯಾತ ಪತ್ರಕರ್ತ ಬರ್ಕಾದತ್ತ್ ಕೆಲಸವನ್ನೇ ಕಳೆದುಕೊಂಡರು, ಪತ್ರಕರ್ತ ಸಿದ್ದಾರ್ಥ ವರದ ರಾಜನ್ ಮೇಲೆ ಎಫ್ಐಆರ್ ಆಗಿದೆ. ಹಿಂದೂ ಪತ್ರಿಕೆ ಅವರನ್ನು ಸಂಪಾದಕ ಸ್ಥಾನದಿಂದ ತಗೆದಿದೆ. ಇಲ್ಲಿ ಮಾಧ್ಯಮ ಸಂಸ್ಥೆಯ ಮಾಲೀಕರ ತಪ್ಪಲ್ಲ ವ್ಯವಸ್ಥೆಯ ವಿರುದ್ಧ ಬರೆದವರನ್ನು ನಿಯಂತ್ರಿಸುವಂತೆ ಮಾಧ್ಯಮಗಳ ಓನರ್ ಶಿಪ್ಗಳಿಂದ ಆಡಳಿತಗಾರರಿಂದ ಒತ್ತಡ ಬರುತ್ತಿದೆ. ಅವರುಗಳು ಹೇಳಿದಂತೆ ನಡೆಯಬೇಕು ಎಂಬ ಪರಿಸ್ಥಿತಿ ಎದುರಾಗಿದೆ.ಇವತ್ತಿನ ಮಾಧ್ಯಮ ಕ್ಷೇತ್ರದ ಸರಳವಾದ ಸೂತ್ರ ಅಂದರೆ ಸುದ್ದಿಗಿಂತ ಜಾಹಿರಾತು, ಓದುಗನಿಗಿಂತ ಗ್ರಾಹಕ ಮುಖ್ಯವಾಗಿದೆ. ಇದರಿಂದ ಪಾರಾಗಬೇಕೆಂದರೆ ಎರಡೇ ದಾರಿ ಆಳುವ ವರ್ಗದವರ, ಬಂಡವಾಳ ಶಾಹಿಗಳ ತೊಡೆಯೇರಿ ಕೂರಬೇಕು, ಇಲ್ಲದಿದ್ದರೆ ಕಾಲಡಿಗೆ ಬಿದ್ದು ಸಾಯಬೇಕು ಇದು ಇವತ್ತಿನ ಮಾಧ್ಯಮರಂಗದ ಪರಿಸ್ಥಿತಿ ಆಗಿದೆ.
ನರೇಂದ್ರ ಮೋದಿ ಪ್ರಧಾನಿಯಾದ ನಂತರ ಮೊದಲಿಗೆ ಸಾಹಿತಿಗಳ ಮೇಲೆ ದಾಳಿ ಮಾಡಿದರು, ಚಿಂತಕರೆಂದರೆ ಹಂತಕರು, ಬುದ್ದಿ ಜೀವಿಗಳೆಂದರೆ ಲದ್ದಿ ಜೀವಿಗಳೆಂದು ಟೀಕಿಸಿ ಪ್ರಚಾರ ಮಾಡಿದರು, ಇದೀಗ ಪತ್ರಕರ್ತರ ಮೇಲೆ ದಾಳಿ ಮಾಡಲಾಗುತ್ತಿದೆ. ಇದು ಮೊದಲಿನಿಂದಲೂ ನಡೆಯುತ್ತಾ ಬಂದಿದೆ. ಇದಕ್ಕೆಲ್ಲ ಪರಿಹಾರ ಸಿಗಲು, ಬೀದಿ ಹೋರಾಟ ಮಾಡುವುದರಿಂದ ಸಾಧ್ಯವಾಗಬಹುದೇನೋ..? ಹೋರಾಟಗಳನ್ನು ಹತ್ತಿಕ್ಕಲು ಸಾಮ, ದಾನ, ಬೇಧ, ದಂಡ ಮೋದಿ ಪ್ರಭುತ್ವದ ಯೋಜನೆ, ಸಾಮ ದಾನದಲ್ಲಿ ಯೀಲ್ಡ್ ಆದರೆ ಅರ್ನಬ್ ಗೋ ಸ್ವಾಮಿ ಆಗುತ್ತೀರಾ, ಅದನ್ನು ಎದುರಿಸಿದರೆ ಗೌರಿಲಂಕೇಶ್ ಆಗುತ್ತೀರಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದಕ್ಕೆಲ್ಲ ಒಂದೇ ದಾರಿ ಎಂದರೆ ನಾವು ಮೌನವನ್ನು ಬೇಧಿಸಿ ಮಾತನಾಡಬೇಕು. ಈ ಸಮಾಜದಲ್ಲಿ ಸಜ್ಜನರ ಸಂಖ್ಯೆ ಬಹಳ ದೊಡ್ಡ ಮಟ್ಟದಲ್ಲಿದೆ. ಇಲ್ಲದಿದ್ದರೆ ಈ ರೀತಿಯ ಸಭೆ ಮಾಡುವುದಕ್ಕೆ ಆಗುತ್ತಿರಲಿಲ್ಲ, ದುರ್ಜನರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಆದರೆ ಅವರು ಜಾಸ್ತಿ ದೊಬ್ಬೆ ಹಾಕುತ್ತಿದ್ದಾರೆ. ಇಂತಹ ಸಮಸ್ಯೆಗಳು ಬಗೆಹರಿಯಬೇಕೆಂದರೆ ಮುಂದಿನ ದಿನಗಳಲ್ಲಿ ಪತ್ರಕರ್ತರು, ಬರಹಗಾರರು ಒಂದುಗೂಡಿ ಸಮಸ್ಯೆಯ ವಿರುದ್ಧ ಹೋರಾಡುವ ಅಗತ್ಯವಿದೆ ಎಂದು ಕರೆನೀಡಿದ್ದಾರೆ.