“ನನ್ನ ಮಗಳು ಅಂದೇ ತೀರಿಹೋದಳು. ಆದರೆ ಪ್ರಕರಣದ ನ್ಯಾಯಾಂಗ ವಿಚಾರಣೆಯ ವೇಳೆ, ನನ್ನ ಮಗಳ ಕೊಲೆಗಾರರ ಮುಖಗಳನ್ನು ಪ್ರತಿದಿನ ನೋಡುತ್ತಾ ನಾನು ದಿನಾ ಸಾಯುತ್ತಿದ್ದೇನೆ,” ಎಂದು ನಿರ್ಭಯಾ ತಾಯಿ ಹೇಳಿದ ನೋವಿನ ಮಾತುಗಳು ದೇಶದ ಜನತೆಯ ಮನಕಲಕುತ್ತಿದ್ದು, ಇಡೀ ದೇಶವೇ ಈ ಹಂತಕರನ್ನು ನೇಣು ಕುಣಿಕೆಗೆ ಹಾಕುವುದು ಯಾವಾಗ ಎಂದು ಕೇಳುವಂತೆ ಆಗಿದೆ.
ಮರಣ ದಂಡನೆ ಸಂಬಂಧ ಇರುವ ಕಾನೂನಿಗೆ ಪೂಕರವಾಗಿ ಬಿಗುಯಾದ ನಿಯಮಗಳನ್ನು ತರುವ ಮೂಲಕ, ನ್ಯಾಯಾಂಗ ಪ್ರಕ್ರಿಯೆಯ ಅಣುಕು ಮಾಡುವಂಥ ಪ್ರಹಸನಗಳಿಗೆ ಅಂತ್ಯ ತರಲು ಕೇಂದ್ರದ ಪರ ವಕೀಲರೂ ಆದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರಿದ್ದಾರೆ.
ಕೇಂದ್ರದ ಮನವಿಯ ಮುಂದಿನ ಆಲಿಕೆಯನ್ನು ಸುಪ್ರೀಂ ಕೋರ್ಟ್ ಫೆಬ್ರವರಿ 11ಕ್ಕೆ ನಿಗದಿ ಮಾಡಿದೆ. ಆ ವೇಳೆಗೆ ಆರೋಪಿಗಳಿಗೆ ತಮ್ಮ ಪಾಲಿನ ಲೀಗಲ್ ಅವಕಾಶಗಳ ಕಾಲಮಿತಿ ಮುಗಿಯಲಿದೆ.
ನಾಲ್ವರು ಆರೋಪಿಗಳನ್ನು ನೇಣಿಗೇರಿಸುವ ಪ್ರಕ್ರಿಯೆಗೆ ಪಡೆಯಾಜ್ಞೆ ತಂದಿರುವ ಪಟಿಯಾಲಾ ಹೌಸ್ ಕೋರ್ಟ್ ಆದೇಶದ ವಿರುದ್ಧ ತಾನು ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿರುವ ದೆಹಲಿ ಹೈಕೋರ್ಟ್ನ ನಡೆಯನ್ನು ಪ್ರಶ್ನಿಸಿರುವ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಎಲ್ಲ ಆಪಾದಿತರನ್ನು ಒಟ್ಟಿಗೇ ಗಲ್ಲಿಗೇರಿಸಬೇಕೆಂದು ದೆಹಲಿ ಹೈಕೋರ್ಟ್ ಅದಾಗಲೇ ಆದೇಶ ನೀಡಿತ್ತು. ಆದರೆ ಈ ವಿಚಾರವನ್ನೂ ಸಹ ಚಾಲೆಂಜ್ ಮಾಡಿದ್ದ ಕೇಂದ್ರ, ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ನೇಣಿಗೇರಿಸಬೇಕೆಂದು ಕೋರಿತ್ತು. ಆರೋಪಿಗಳನ್ನು ಒಟ್ಟಿಗೇ ಅಥವಾ ಪ್ರತ್ಯೇಕವಾಗಿ ಗಲ್ಲಿಗೇರಿಸಬೇಕೇ ಎಂಬ ಕುರಿತಂತೆ ಕಾನೂನನ್ನು ಸುಪ್ರೀಂ ಕೋರ್ಟ್ ನಿರ್ಧಾರ ಮಾಡಬೇಕೆಂದು ಮೆಹ್ತಾ ತಿಳಿಸಿದ್ದಾರೆ.
“ಅಂತಿಮವಾಗಿ, ನ್ಯಾಯಾಲಯವು ಕಾನೂನನ್ನು ತರಬೇಕು. ದೇಶದ ತಾಳ್ಮೆಯನ್ನು ಅದಾಗಲೇ ಪರೀಕ್ಷೆ ಮಾಡಲಾಗಿದೆ. ಹೈಕೋರ್ಟ್ನಲ್ಲಿ ಈ ವಿಚಾರವಾಗಿ ನಾವು ತಕ್ಕ ಮಟ್ಟಿಗೆ ಯಶಸ್ಸನ್ನೂ ಸಾಧಿಸಿದ್ದೇವೆ. ಕ್ಷಮದಾನದ ಅರ್ಜಿಯು ನ್ಯಾಯಾಂಗದ ಅರ್ಜಿಯಲ್ಲ ಎಂದು ಹೈಕೋರ್ಟ್ ಆದೇಶಿಸಿದ್ದು, ಆರೋಪಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸಲು ನಿರಾಕರಿಸಿದೆ,” ಎಂದು ಮೆಹ್ತಾ ತಿಳಿಸಿದ್ದಾರೆ.
ನಾಲ್ವರು ಆರೋಪಿಗಳ ಪೈಕಿ ಮೂವರ ಬಳಿ ಇದ್ದ ನ್ಯಾಯಾಂಗ ಪರಿಹಾರಗಳ ಆಯ್ಕೆಗಳು ಅದಾಗಲೇ ಅಂತ್ಯಗೊಂಡಿವೆ. ಈ ನಾಲ್ವರನ್ನೂ ಗಲ್ಲಿಗೇರಿಸಬೇಕೆಂದು ಕೇಂದ್ರ ಸರ್ಕಾರ ಕೋರಿಕೊಳ್ಳುತ್ತಿದೆ. ರಾಷ್ಟ್ರಪತಿಗಳ ಬಳಿ ಕೇವಲ ಒಬ್ಬ ಆರೋಪಿ ಮಾತ್ರವೇ ಕ್ಷಮಾದಾನದ ಅರ್ಜಿ ಸಲ್ಲಿಸುವ ಆಯ್ಕೆಯನ್ನು ಉಳಿಸಿಕೊಂಡಿದ್ದಾನೆ.
ಆರೋಪಿಗಳು ಹಾಗೂ ಅವರ ಪರ ವಕೀಲರು ವಿಳಂಬದ ಧೋರಣೆ ಮೂಲಕ ಶಿಕ್ಷೆಯನ್ನು ಆದಷ್ಟು ಮುಂದಕ್ಕೆ ಹಾಕಲು ಮಾಡುತ್ತಿರುವುದು ನ್ಯಾಯಾಂಗ ಪ್ರಕ್ರಿಯೆಗಳ ಅಣಕವೇ ಆಗಿದೆ ಎನ್ನಲಾಗುತ್ತಿದೆ.