ಭಾರತದ ಪ್ರಥಮ ಪ್ರಧಾನಿ ಜವಹರ್ ಲಾಲ್ ನೆಹರೂವನ್ನು ದೇಶದ ಶ್ರೀಮಂತ ಪಕ್ಷ ಬಿಜೆಪಿ ಹಾಗೂ ಭಾರತದ ಇಂದಿನ ಪ್ರಧಾನಿ ನರೇಂದ್ರ ಮೋದಿ ಎಷ್ಟು ಹಿಯಾಳಿಸಿದರೂ, ಅವಮಾನಿಸಿದರೂ ಅವರ ದೂರದರ್ಶಿತ್ವದ ಫಲವನ್ನು ಭಾರತ ಇಂದಿಗೂ ಅನುಭವಿಸುತ್ತಿದೆ.
ಮಹಾತ್ಮ ಗಾಂಧಿಯಿಂದ ಪ್ರಭಾವಿತರಾದ ಜವಹರ್ಲಾಲ್ ನೆಹರೂ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ಎದುರಾಗಿದ್ದ ಸವಾಲುಗಳನ್ನು ಮನೋಜ್ಞವಾಗಿ ನಿಭಾಯಿಸಿದ್ದರು. ದೇಶದ ದಿಗ್ಗಜ ರಾಷ್ಟ್ರಗಳು ಎರಡು ಬಣಗಳಾಗಿ ವಿಶ್ವಯುಧ್ಧದಲ್ಲಿ ಭಾಗಿಯಾಗಿ ಅಸಂಖ್ಯ ಸಾವುನೋವು- ಅಪಾರ ನಷ್ಟಗಳನ್ನು ಎಳೆದು ತರುತ್ತಿರುವಾಗ, ಬ್ರಿಟೀಷರು ಬರಿದು ಮಾಡಿ ಹೋಗಿದ್ದ ಬೊಕ್ಕಸ ಹಿಡಿದುಕೊಂಡು ಭಾರತವನ್ನು ಅಭಿವೃಧ್ಧಿಯ ಕಡೆಗೆ ಚಲಾಯಿಸಿದವರು ನೆಹರೂ.
ಪರಸ್ಪರ ಯುದ್ಧಗಳಲ್ಲಿ ತೊಡಗಿದ್ದ ಎರಡು ಬಣಗಳಿಂದ ದೂರವೇ ನಿಂತ ನೆಹರೂ, ವಿಶ್ವಯುದ್ಧದ ಪರಿಣಾಮ ನೇರವಾಗಿ ಭಾರತಕ್ಕೆ ತಟ್ಟದಂತೆ ಜಾಗರೂಕತೆಯಿಂದ ಹೆಜ್ಜೆಯಿಟ್ಟಿದ್ದರು. ಆಧುನಿಕ ಜಗತ್ತಿನ ದಿಗ್ಗಜ ರಾಷ್ಟ್ರಗಳ ಎದುರು ಶೈಶವಾಸ್ಥೆಯಂತಿದ್ದ ಭಾರತವನ್ನು ಯುಧ್ಧದ ಕರಿಮೋಡಗಳಡಿಯಲ್ಲಿ ನರಳಿಸುವುದು ನೆಹರೂ ನೇತೃತ್ವದ ಭಾರತದ ಸರ್ಕಾರಕ್ಕೆ ಸುತರಾಂ ಇಷ್ಟವಿರಲಿಲ್ಲ. ಹಾಗಾಗಿಯೇ ಅಲಿಪ್ತ ನೀತಿಯ ಮೂಲಕ ಯುದ್ಧಗಳಿಂದ ದೂರವೇ ನಿಂತ ತೃತೀಯ ದೇಶಗಳಿಗೆ ನಾಯಕನಾಗಿ ಭಾರತ ಹೊರಹೊಮ್ಮಿತ್ತು.
ಅದಾಗ್ಯೂ ಸ್ವಾತಂತ್ರ್ಯ ಹೋರಾಟದ ಮೂಲಕ ರಾಜಕೀಯಕ್ಕೆ ಬಂದಿದ್ದ ನೆಹರೂವಿಗೆ ಸ್ವತಂತ್ರದ, ಸಾರ್ವಭೌಮತ್ವದ ಕುರಿತು ಅಪಾರ ಗೌರವವಿತ್ತು. ಹಾಗಾಗಿಯೇ ಯುದ್ಧದಿಂದ ದೂರವೇ ಉಳಿದಿದ್ದರೂ, ಟಿಬೇಟಿನ ಸೌರ್ವಭೌಮತ್ವದ ವಿಚಾರದಲ್ಲಿ ಬಲಾಢ್ಯ ಚೀನಾವನ್ನು ಎದುರು ಹಾಕಿಕೊಳ್ಳಲು ಹೆದರಲಿಲ್ಲ.
ಟಿಬೇಟಿನ ನೆಲವನ್ನು ಆಕ್ರಮಿಸಲು ಹವಣಿಸುತ್ತಿದ್ದ, ಭಾಗಶಃ ಆಕ್ರಮಿಸಿಕೊಳ್ಳುತ್ತಿದ್ದ ಚೀನಾ ಒಂದಲ್ಲೊಂದು ದಿನ ಭಾರತದ ಸಾರ್ವಭೌಮತ್ವಕ್ಕೂ ಕಂಟಕವಾಗಬಹುದೆಂಬ ಊಹೆ ನೆಹರೂಗೆ ಆಗಲೇ ಇದ್ದಿತ್ತು. ಹಾಗಾಗಿ ಚೀನಾದಿಂದ ಪ್ರಾಣಭಯ ಎದುರಾಗಿದ್ದ ಟಿಬೇಟ್ ಬೌಧ್ಧಗುರು ದಲಾಯಿ ಲಾಮಾ ಹಾಗೂ ಸಂಗಡಿಗರಿಗೆ ಭಾರತದಲ್ಲಿ ಅಭಯ ನೀಡುವ ಮಹತ್ತದ ನಿರ್ಧಾರ ತೆಗೆದುಕೊಂಡರು. ಇದು ಚೀನಾದ ಕೆಂಗಣ್ಣಿಗೆ ಗುರಿಯಾದರೂ, ಮಾನವೀಯ ದೃಷ್ಟಿಯಿಂದ ಭಾರತದಲ್ಲಿ ಟಿಬೇಟ್ ಬೌಧ್ಧ ಬಿಕ್ಕುಗಳಿಗೆ ಆಶ್ರಯ ಒದಗಿಸಲಾಯಿತು. ಬುದ್ಧನ ನಾಡಿನಲ್ಲಿ ಬೌದ್ಧ ಬಿಕ್ಕುಗಳಿಗೆ ಅಷ್ಟಾದರೂ ಸಹಾಯ ಒದಗಿಸದಿದ್ದರೆ, ಭವಿಷ್ಯದ ತಲೆಮಾರು ನಮ್ಮನ್ನು ಕ್ಷಮಿಸಲಾರವು ಎಂಬ ದೂರದರ್ಶಿತ್ವ ಇತಿಹಾಸಕಾರ ನೆಹರೂವಿಗೆ ಆಗಲೇ ಇದ್ದಿತ್ತೆಂದು ಕಾಣುತ್ತದೆ.
ನೆಹರೂ ಅವತ್ತು ತೆಗೆದಿರುವ ಮಹತ್ವದ ನಿರ್ಧಾರವನ್ನು ಅಮೇರಿಕಾ ಈಗ ಶ್ಲಾಘಿಸಿದೆ. ಭಾರತದೊಂದಿಗೆ ಗಡಿ ವಿವಾದ ಎತ್ತಿರುವ ಚೀನಾ ವಿಶ್ವ ಮಟ್ಟದಲ್ಲಿ ಅಮೇರಿಕಾದ ʼದೊಡ್ಡಣ್ಣʼನ ಪ್ರಾಬಲ್ಯಕ್ಕೆ ಸವಾಲು ಹಾಕುತ್ತಾ ಬಂದಿದೆ. ವಿಶ್ವದ ಎರಡನೆ ಅತಿದೊಡ್ಡ ಆರ್ಥಿಕತೆ ಇರುವ ಚೀನಾದ ಮೇಲೆ ಅಮೇರಿಕಾಗೆ ಇರುವ ಅಸಹನೆ ಹೆಚ್ಚುತ್ತಲೇ ಇದೆ. ಅಮೇರಿಕಾದ ಅಧ್ಯಕ್ಷ ಕೂಡಾ ಕರೋನಾ ಸೋಂಕಿಗೆ ಚೀನಾವನ್ನು ಹೊಣೆ ಮಾಡಿದ್ದಾರೆ. ಇದರ ಬೆನ್ನಿಗೆ ಅಮೇರಿಕಾದ ಹಲವು ನಾಯಕರು ದಲಾಯಿಲಾಮರ 85ನೇ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಸ್ವಾತಂತ್ರ್ಯ ಬಯಸುವ ಟಿಬೆಟನ್ನಿಯರು ಹಾಗೂ ದಲೈ ಲಾಮ ಅವರಿಗೆ 1959ರಿಂದ ಆಶ್ರಯ ನೀಡುತ್ತಿರುವ ಭಾರತಕ್ಕೆ ನಾವು ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇವೆ’ ಎಂದು ಅಮೆರಿಕದ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ವಿಭಾಗವು ಸೋಮವಾರ ಟ್ವೀಟ್ ಮಾಡಿ ಭಾರತಕ್ಕೆ ಧನ್ಯವಾದ ತಿಳಿಸಿದೆ.