ನೆರೆ ಹಾವಳಿಯ ಸಂತ್ರಸ್ತರಿಗೆ ನೆರವಾಗಲು ಹೋದ ಸಾಮಾಜಿಕಕಾರ್ಯಕರ್ತರೊಬ್ಬರ ಕಣ್ಣಿಗೆ ಕಂಡ ಬಡಜೀವ ನಾಗಮ್ಮ. ಎತ್ತರದ ದಿಬ್ಬದ ಗೂಡಿನ ನಾಗಮ್ಮನನ್ನು ನದಿ ಪ್ರವಾಹದಲ್ಲಿ ಮುಳುಗಿಸಲಿಲ್ಲ, ದಾಖಲೆಗೆ ಗೊತ್ತೇ ಇಲ್ಲದ ಬದುಕನ್ನು ಸರಕಾರದ ಯೋಜನೆಗಳು ಕಣ್ಣೆತ್ತಿ ಕೂಡಾ ನೋಡಲಿಲ್ಲ. ಬಡವೆಯ ಬದುಕನ್ನು ಒಮ್ಮೆ ಓದೋಣ ಬನ್ನಿ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಗಂಗಾವಳಿ ನದಿ ತಟದ ಗ್ರಾಮಗಳು ಮುಳುಗಿದ್ದವು. ಸಾವಿರಾರು ಕುಟುಂಬಗಳು ಮನೆಕಳಕೊಂಡು ದುಃಖದ ಮಡಿಲಲ್ಲಿದ್ದವು. ಬೆಂಗಳೂರಿನ ಇನ್ಪೋಸಿಸ್‍ನ ಶ್ರೀಮತಿ ಸುಧಾಮೂರ್ತಿ ಲಾರಿಗಟ್ಟಲೇ ಪರಿಹಾರ ಸಾಮಗ್ರಿ ಅಲ್ಲಿಗೆ ಕಳಿಸಿದ್ದರು. ನೆರೆ ಸಂತ್ರಸ್ಥರನ್ನು ಗುರುತಿಸಿ ನಿಜವಾಗಿ ತೊಂದರೆಗೆ ಸಿಲುಕಿದವರನ್ನು ಗುರುತಿಸಿ ವಸ್ತು ತಲುಪಿಸುವುದು ಸವಾಲಿನ ಕೆಲಸವೇ! ಹಿರಿಯ ಸಾಮಾಜಿಕ ಕಾರ್ಯಕರ್ತರೊಬ್ಬರು ಶ್ರದ್ಧೆಯಿಂದ ಈ ಕಾರ್ಯ ಮಾಡುತ್ತಿದ್ದರು. ನೋವುಂಡ ನೂರಾರು ಜನರಿಗೆ ಪರಿಹಾರ ಸಾಮಗ್ರಿ ತಲುಪಿಸುತ್ತಿದ್ದ ಹೊತ್ತು ಎತ್ತರದ ದಿಬ್ಬದ ಮೇಲೆ ನಿಂತು ಹಾಲಕ್ಕಿ ವೃದ್ದೆಯೊಬ್ಬರು ಇವನ್ನೆಲ್ಲ ಸುಮ್ಮನೆ ನೋಡುತ್ತ ನಿಂತಿದ್ದರು.
ಹಣ್ಣಾದ ಕೂದಲು, ಕೃಶವಾದ ಶರೀರ, ಅವಳ ಬಟ್ಟೆ ನೋಡಿದ ಕಾರ್ಯಕರ್ತರು ‘ ಅಮ್ಮಾ, ಹೊಳೆಯಿಂದ ನಿಮಗ್ ತೊಂದರೆ ಆಗಿದಾ?’ ಕೇಳಿದರು. ‘ ನಂಗೆ ಎನೂ ತೊಂದರೆ ಆನಿಲ್ಲ, ಏನೂ ಕೂಡೂದು ಬ್ಯಾಡ್ರ ’ ಕೈ ಬೀಸುತ್ತ ಹೇಳಿದಳು. ಕೈಯಲ್ಲಿ ಬಂಗಾರದ ಬಳೆಯಿಟ್ಟವರೂ ನೆರೆ ನೆರವಿಗೆ ಕೈಚಾಚಿದ್ದು ನೋಡಿದವರಿಗೆ ಯಾಕೋ ಇವರ ದೇಹ-ಭಾಷೆ ನೋಡಿ ಅನುಮಾನ ಶುರುವಾಯ್ತು.
ನಿಧಾನಕ್ಕೆ ಒಬ್ಬರೇ ಅವಳ ಮನೆ ಹುಡುಕಿ ಹೊರಟರು. ಅದು ಶಿರೂರು ಗ್ರಾಮ ಗುಡ್ಡದ ಮೇಲೆ ಗೇರುಗಿಡ, ಕಾರೆಕಂಟಿ ದಾಟುತ್ತ ಲ್ಯಾಟ್ರೈಟ್ ಕಲ್ಲು ದಿಬ್ಬಗಳನ್ನು ಏರಿಳಿಯುತ್ತ ಏದುಸಿರು ಬಿಡುತ್ತ ನಡೆಯುವ ಕುರುಹು ಇಲ್ಲದ ಕಾಲು ದಾರಿ. ಅಲ್ಲಿರುವವಳು ಶಿರೂರು ಪುರುಷ ಗೌಡನ ಅಕ್ಕ ನಾಗಮ್ಮ, ಇಲ್ಲೇ ಸನಿಹದ ದೇವು ಗೌಡನಿಗೆ ಲಗ್ನ ಮಾಡಿಕೊಟ್ಟಿದ್ದರು. ಅವ ಇನ್ನೊಂದು ಮದುವೆಯಾಗಿ ಮಕ್ಕಳಿಲ್ಲದ ಇವಳನ್ನು ತ್ಯಜಿಸಿದ್ದರಿಂದ ದಿಕ್ಕಿಲ್ಲದೇ ಅನಾಥಳಾದಳು. ಕೊನೆಗೆ ಅಣ್ಣನ ಮನೆಯ ಹಿಂಭಾಗದ ದಿಬ್ಬದಲ್ಲಿ ಕಲ್ಲು, ತೆಂಗಿನ ಹೆಡೆ, ಪ್ಲಾಸ್ಟಿಕ್ ತುಂಡು ಬಳಸಿ ಗೂಡು ಸಿದ್ಧಪಡಿಸಿ ಬದುಕತೊಡಗಿದಳು.
ನಿತ್ಯ ನಾಲ್ಕೈದು ಕಿಲೋ ಮೀಟರ್ ನಡೆದು ಕಾಡಿನಿಂದ ಕಟ್ಟಿಗೆ ಹೊರೆ ತಂದು ಬದುಕುವ ಶ್ರಮಜೀವಿ ಆಶ್ರಮದ ನಾಗಮ್ಮನ ಪರಿಚಯ ಇಷ್ಟು ಹೇಳಿದರೆ ಪೂರ್ತಿಯಾಗುವುದಿಲ್ಲ. ಕತ್ತಲು ತುಂಬಿದ ಇವಳ ಗೂಡಿಗೆ ಬಾಗಿಲಿಲ್ಲ, ನಾಲ್ಕಾರು ಪಾತ್ರೆ, ಸ್ನಾನಕ್ಕೆ ನೀರು ಕಾಯಿಸಲು ಮಣ್ಣಿನ ಗಡಿಗೆ ಇವಳ ಆಸ್ತಿ. ಮನೆಗೆ ಪಂಚಾಯತ್ ನಂಬರ್ ಇಲ್ಲ, ವಿದ್ಯುತ್ ಸಂಪರ್ಕವಿಲ್ಲವೆಂದು ಬೇರೆ ಹೇಳಬೇಕಾಗಿಲ್ಲ ! ಪುಟ್ಟ ಕಿಟಕಿಯಿಂದ ಸೂರ್ಯ ನೀಡುವ ಚಿಕ್ಕ ಬೆಳಕಿನಲ್ಲಿ ಹಗಲಿನ ಅಡುಗೆ, ಊಟ ಮಾಡುತ್ತಾಳೆ. ರಾತ್ರಿ ಪುಟ್ಟ ಚಿಮಣಿ ದೀಪದ ಬೆಳಕಿನಲ್ಲಿ ಬೇಗ ಊಟ ಮುಗಿಸಿ ಅಲ್ಲೇ ಸಣ್ಣ ತಾಮಿನಲ್ಲಿ ಮಲಗುತ್ತಾಳೆ. ಮುಂಜಾನೆ ಎದ್ದು ಕಟ್ಟಿಗೆಗೆ ತರಲು ಹೋಗುವುದು ಒಂಟೀ ಜೀವದ ಜೀವನಚಕ್ರ. ಬದುಕಿನಲ್ಲಿ ಈವರೆಗೂ ಒಂದು ಓಟು ಹಾಕಿದವಳಲ್ಲ, ಮತದಾರರ ಗುರುತಿನ ಚೀಟಿ ಇಲ್ಲ. ಆಧಾರ ಕಾರ್ಡ್ ಕೇಳಬೇಡಿ. ವೃದ್ದ ದೇಹ ಹಾಗೂ ಅವಳೇ ಕಟ್ಟಿಕೊಂಡ ಗೂಡಷ್ಟೇ ಈ ಭೂಮಿಯಲ್ಲಿ ಇಷ್ಟು ಕಾಲದ ಬದುಕಿನ ಸಾಕ್ಷಿ. ‘ನಾಗಮ್ಮ ನಿನ್ನ ವಯಸ್ಸೆಷ್ಟು? ‘ಐವತ್ತಾಗಿರಬಹುದೆನ್ನುತ್ತಾಳೆ. ಇವರ ಸಹೋದರ ಪುರುಷ ಗೌಡನ ವಯಸ್ಸಿನ ಅಂದಾಜಿನಲ್ಲಿ ಕನಿಷ್ಟ 80-85 ವರ್ಷಗಳೆಂದು ನಾವು ನಿರ್ಧರಿಸಬಹುದು.
ಶಿರೂರಿನ ಕೊಡ್ತನಿ ಶಾಲೆ ಸನಿಹದ ಬಾವಿ ಕಿಲೋ ಮೀಟರ್ ದೂರವಿದೆ. ಮಳೆ ಇರಲಿ, ಬಿಸಿಲಿರಿ ನಿತ್ಯ ಅಲ್ಲಿಂದ ಐದಾರು ಬಿಂದಿಗೆ ನೀರೆತ್ತಿ ಇದೇ ಕಾರೇಕಂಟಿಯ ಕಾಲು ದಾರಿಯಲ್ಲಿ ಘಟ್ಟದ ಗುಡ್ಡಕ್ಕೆ ಹೊತ್ತು ತರುತ್ತಾಳೆ. ಗಂಗಾವಳಿ ಪ್ರವಾಹ ಉಕ್ಕೇರಿ ಅಬ್ಬರಿಸಿದಾಗ ನಾಗಮ್ಮನ ಗೂಡಿನ ಸನಿಹ ಬರಲಿಲ್ಲ, ಏಕೆಂದರೆ ಅಷ್ಟು ಎತ್ತರದ ಗುಡ್ಡವೇರುವುದು ಪ್ರವಾಹಕ್ಕೆ ಸಾಧ್ಯವೂ ಇಲ್ಲ, ಹೀಗಾಗಿ ನೆರೆ ನೋವು ತಾಗಲಿಲ್ಲ. ಪರಿಹಾರಕ್ಕೆ ಹೋದವರು ನಿತ್ಯ ಕಷ್ಟದಲ್ಲಿ ಮುಳುಗುತ್ತಿರುವ ಇವಳಿಗೊಂದು ಸೀರೆ ಕೊಟ್ಟರು. ಅವಳ ಬದುಕಿನ ಪರಿಸರ ನೋಡಿ ಸಂಕಟಪಟ್ಟು ಈಗ ಪ್ರತಿ ವಾರ ಸಮಯ ಸಿಕ್ಕಾಗ ಹೋಗಿ ಅವಳಿಗಾಗಿ ಮೊಟ್ಟೆ, ಒಂದಿಷ್ಟು ತಿಂಡಿ ಪೂರೈಸುತ್ತಿದ್ದಾರೆ.
‘ನಾಗಮ್ಮನಿಗೊಂದು ಪುಟ್ಟ ಮನೆ ನಿರ್ಮಿಸಿಕೊಡಬೇಕು. ಅವಳ ಛಾವಣಿಯಲ್ಲಿ ಸುರಿದ ಮಳೆ ನೀರಲ್ಲಿ ಬದುಕುವಂತೆ ಮಾಡಿದರೆ ಘಟ್ಟದಲ್ಲಿ ವೃದ್ಧೆಗೆ ನೀರು ಹೊರುವ ತೊಂದರೆಯಿಲ್ಲವೆಂದು ಯೋಚಿಸಿ ಅಲ್ಲಿಗೆ ನನ್ನನ್ನು ಕರೆದೊಯ್ದಿದ್ದರು. ಹಾಗಾದರೆ ನೆರೆ ನೋವಿನ ಮಧ್ಯೆ ಕಂಡ ವೃದ್ದೆ ನಾಗಮ್ಮನ ಬದುಕಿನ ದುಃಖ ಆಲಿಸಿದವರು ಯಾರು? ನಾಗಮ್ಮನಿಗೆ ನೆರವು ನೀಡಲು ಮುಂದಾದವರ ಒಂದು ಚಿತ್ರ ತೆಗೆಯಲು ಪ್ರಯತ್ನಿಸಿದೆ. ನನ್ನ ಜೊತೆಗೆ ಅಂಕೋಲಾ ಹಳ್ಳಿ ಸುತ್ತಾಡಲು ಹೊರಟಾಗಿಂದ ಈ ಸಾಮಾಜಿಕ ಕಾರ್ಯಕರ್ತರು ತಮಗೆ ಬಿಸಿಲು ಅಲರ್ಜಿಯೆಂದು ಹೇಳುತ್ತ ಛತ್ರಿ ಹಿಡಿದು ಬಂದಿದ್ದರು. ಇಡೀ ದಿನ ಸುತ್ತಾಡಿ ನಾಗಮ್ಮನ ಮನೆಗೆ ಹೋಗಿ ಮರಳುವಾಗ ಸಂಜೆಯಾಗಿತ್ತು, ಸೂರ್ಯನ ಬಿಸಿಲಿರಲಿಲ್ಲ, ಆದರೆ ಆ ಎಲೆಮರೆಯ ಸಾಮಾಜಿಕ ಕಾರ್ಯಕರ್ತರ ತಲೆಯ ಮೇಲೆ ಛತ್ರಿ ಇತ್ತು, ಅದು ಕೆಮರಾಕ್ಕೆ ಅಡ್ಡ ಬಂದು ಅವರ ಮುಖ ಕಾಣದಂತೆ ಮಾಡುತ್ತಿತ್ತು. ಬಿಸಿಲಿಗಿಂತ ಕೆಮರಾ ಅಲರ್ಜಿಯೆಂದು ಆಗ ತಿಳಿಯಿತು.
ಸರಕಾರ ನೆರೆ ಸಂತ್ರಸ್ತರ ನೆರವಿಗೆ ಬಂದಿಲ್ಲವೆಂದು ವಿಧಾನ ಸಭೆಯಲ್ಲಿ ದೊಡ್ಡ ಗಲಾಟೆ ನಡೆದಿದೆ. ಇದೇ ಹೊತ್ತಿನಲ್ಲಿ ಅಕ್ರಮ ಸಂಪತ್ತಿನ ಖಜಾನೆಯ ಸಾವಿರಾರು ಕೋಟಿ ಹೊಸ ಹೊಸ ಸುದ್ದಿಯೂ ಹೊರಬೀಳುತ್ತಿದೆ. ಉಳ್ಳವರು ಯಾವತ್ತೂ ಅಧಿಕಾರಕ್ಕೆ ಅಂಟಿ, ಆಸ್ತಿ ಕಾಯುವುದಕ್ಕೆ ಆಡಳಿತ ಒಂದು ಗುರಾಣಿಯಾದಂತಾಗಿದೆಯೇ? ಇವೆಲ್ಲದರ ಮಧ್ಯೆ ಪ್ರಚಾರ, ಪ್ರಸಿದ್ಧಿಗೆ ಇಷ್ಟಪಡದ, ಹೆಸರು ಹೇಳದ ಬಡ ಸಾಮಾಜಿಕ ಕಾರ್ಯಕರ್ತರು ಗಳಿಕೆಯ ಒಂದು ಪಾಲನ್ನು ನಾಗಮ್ಮನಂಥವರ ಕಣ್ಣೀರು ಒರೆಸಲು ನೀಡುತ್ತಿದ್ದಾರೆ. ಭೂಮಿಯಲ್ಲಿ ಇಂಥವರು ಇದ್ದಾರೆಂದು ಜಗತ್ತು ನಡೆದಿದೆ, ಮಾನವೀಯತೆ ಬದುಕಿದೆ. ಹಲವು ಅಂಗವಿಕಲರು, ಅನಾಥರನ್ನು ಹುಡುಕಿ ಹೋಗುವ ಈ ಕಾರ್ಯಕರ್ತರು ಯಾರೆಂಬುದಕ್ಕಿಂತ ಹೀಗೂ ಸಮಾಜದ ರಚನಾತ್ಮಕ ಕೆಲಸ ಸಾಧ್ಯವೆಂಬುದಕ್ಕೆ ಒಂದು ಉದಾಹರಣೆಯಿದು.