ಬ್ಯಾಂಕ್ ಖಾತೆ ಪರಿಶೀಲನೆಗಾಗಿ ಒಡಿಸ್ಸಾದ ನೌಪಾರ ಜಿಲ್ಲೆಯ ಮಹಿಳೆ ತನ್ನ ಶತಾಯುಷಿ ತಾಯಿಯನ್ನು ಮಂಚದೊಂದಿಗೆ ದೂಡಿಕೊಂಡು ಬ್ಯಾಂಕ್‌ಗೆ ಸಾಗಿಸಿದ್ದಾರೆ. ತನ್ನ ತಾಯಿಯ ಪಿಂಚಣಿ ಪಡೆಯಲು ಖಾತೆದಾರರ ಭೌತಿಕ ಪರಿಶೀಲನೆ ಮಾಡಬೇಕೆಂದು ಬ್ಯಾಂಕ್ ಮೆನೇಜರ್ ಮಹಿಳೆಯ ಬಳಿ ಹೇಳಿದ್ದಾರೆ.
60 ವರ್ಷದ ಪುಂಜಿಮತಿ ದೇಯಿ ತನ್ನ ತಾಯಿಯನ್ನು ಮಂಚದೊಂದಿಗೆ ಬ್ಯಾಂಕಿಗೆ ತಳ್ಳಿಕೊಂಡು ಹೋಗುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಕಳೆದ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ಕೋವಿಡ್-19 ಆರ್ಥಿಕ ಸಂಕಷ್ಟಕ್ಕೆ ಬಡಜನರಿಗೆ ನೆರವಾಗಲು ಜನಧನ್ ಖಾತೆಗೆ 500 ರುಪಾಯಿ ಹಾಕುವುದಾಗಿ ಯೋಜನೆ ಘೋಷಿಸಿತ್ತು.
ದೇಯಿ ಜೂನ್ 9 ರಂದು ಹಾಸಿಗೆ ಹಿಡಿದಿದ್ದ ತನ್ನ ತಾಯಿಯ ಖಾತೆಯಲ್ಲಿದ್ದ 1500 ರುಪಾಯಿಗಳನ್ನು ವಿಥ್ ಡ್ರಾ ಮಾಡಲು ಬ್ಯಾಂಕಿಗೆ ತೆರಳಿದ್ದರು. ಬ್ಯಾಂಕ್ ಮೆನೇಜರ್ ಅಜಿತ್ ಪ್ರಧಾನ್ ಹಣ ಬಿಡುಗಡೆ ಮಾಡಲು ಖಾತೆದಾರರನ್ನು ಬ್ಯಾಂಕಿಗೆ ಕರೆತರಲು ಸೂಚಿಸಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಮೆನೇಜರ್ ತಾಯಿಯನ್ನು ಕರೆದುಕೊಂಡು ಬರಲು ಹೇಳಿದ್ದರಿಂದ ಹಾಸಿಗೆ ಹಿಡಿದಿದ್ದ ತನ್ನ 100 ವರ್ಷ ದಾಟಿರುವ ತಾಯಿಯನ್ನು ಚಾರ್‌ಪಾಯಿಯೊಂದಿಗೆ ಕರೆದುಕೊಂಡು ಹೋಗದೆ ಬೇರೆ ವಿಧಿ ಇರಲಿಲ್ಲ ಇಬ್ಬರೂ ಹೋದ ಬಳಿಕವಷ್ಟೇ ಹಣವನ್ನು ತೆಗೆಯಲು ಸಾಧ್ಯವಾಯಿತು ಎಂದು ದೇಯಿ ಹೇಳಿದ್ದಾರೆ.
ಘಟನೆಯ ಕುರಿತು ಮಾತನಾಡಿದ ನೌಪುರ ಜಿಲ್ಲಾಧಿಕಾರಿ, ಬ್ಯಾಂಕ್‌ನ ಎಲ್ಲಾ ಕೆಲಸವನ್ನೂ ಮೆನೇಜರ್ ಒಬ್ಬರೇ ನಿರ್ವಹಿಸಬೇಕು, ಆದ್ದರಿಂದ ಆ ಮಹಿಳೆಯ ಮನೆಗೆ ತೆರಳಿ ಪರಿಶೀಲನೆ ನಡೆಸಲು ಸಾಧ್ಯವಾಗಿಲ್ಲ. ಮರುದಿನ ಮಹಿಳೆಯ ಮನೆಗೆ ತೆರಳಿ ಪರಿಶೀಲನೆ ನಡೆಸುವುದಾಗಿ ಹೇಳಿದ್ದರೂ, ಮಹಿಳೆ ಅವಸರ ಪಟ್ಟು ತಾಯಿಯನ್ನು ಕರೆದುಕೊಂಡು ಬ್ಯಾಂಕಿಗೆ ತೆರಳಿದ್ದಾರೆ ಎಂದಿದ್ದಾರೆ.