ದೇಶದ ನಾಗರಿಕರ ಖಾಸಗಿತನದ ಹಕ್ಕನ್ನು ಕಾಪಾಡುವ ಕುರಿತು ಸುಪ್ರೀಂ ಕೋರ್ಟ್ ಇತ್ತೀಚೆಗೆ ಕಾಳಜಿ ಪ್ರಕಟಿಸಿತ್ತು. ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳ ದುರ್ಬಳಕೆ ಕುರಿತ ವಿಚಾರಣೆಯೊಂದರ ಸಂದರ್ಭದಲ್ಲಿ ಈ ಕಾಳಜಿ ವ್ಯಕ್ತವಾಗಿತ್ತು. ದೇಶದ ಸಾರ್ವಭೌಮತೆ ಮತ್ತು ವ್ಯಕ್ತಿಯ ಖಾಸಗಿತನ ಎರಡನ್ನೂ ಕಾಯುವ ಜೊತೆಗೆ ಅಕ್ರಮ ಚಟುವಟಿಕೆಗಳನ್ನು ತಡೆಯುವಂತಹ ನಿಯಮ ನಿಬಂಧನೆಗಳನ್ನು ರೂಪಿಸಬೇಕು ಎಂದು ನ್ಯಾಯಾಲಯ ಆದೇಶ ನೀಡಿತ್ತು. ಜನವರಿಯ ಅಂತ್ಯದ ವೇಳೆಗೆ ಈ ವಿಷಯ ಪುನಃ ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಬರಲಿದೆ.
ಹಾನಿಕಾರಕ ಸಂದೇಶಗಳನ್ನು ಹಬ್ಬಿಸುವ ತಂತ್ರಜ್ಞಾನ ನಿಮ್ಮಲ್ಲಿ ಇದೆಯಾದರೆ, ಅದನ್ನು ತಡೆಯುವ ತಂತ್ರಜ್ಞಾನವೂ ಇರಲೇಬೇಕು ಎಂದು ನ್ಯಾಯಾಲಯ ಫೇಸ್ಬುಕ್, ಟ್ವಿಟರ್ ಹಾಗೂ ವಾಟ್ಸ್ಯಾಪ್ ಕಂಪನಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ಬಳಕೆದಾರರ ವಾಟ್ಸ್ಯಾಪ್ ಸಂದೇಶಗಳನ್ನು ಗೂಢಲಿಪೀಕರಣದಲ್ಲಿ (end-to-end-encryption) ಭದ್ರಗೊಳಿಸಲಾಗಿರುತ್ತದೆ. ಸಂದೇಶಗಳ ವಿವರಗಳನ್ನು ಹಂಚಿಕೊಳ್ಳಬೇಕಿದ್ದರೆ ಗೂಢಲಿಪೀಕರಣವನ್ನು ಮುರಿಯಬೇಕಾಗುತ್ತದೆ. ಮುರಿಯುವುದೆಂದರೆ ಬಳಕೆದಾರರ ಸುರಕ್ಷತೆ ಮತ್ತು ಖಾಸಗಿತನವನ್ನು ಉಲ್ಲಂಘಿಸಿದಂತೆ ಎಂದು ವಾಟ್ಸ್ಯಾಪ್ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿತ್ತು. ಅಪಾಯಕಾರಿ ವೇಗದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನ ಕುರಿತು ಕಳವಳ ವ್ಯಕ್ತಪಡಿಸಿದ್ದ ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರು’ಸ್ಮಾರ್ಟ್’ ಫೋನ್ ಬಿಟ್ಟು ‘ಬೇಸಿಕ್’ ಫೋನ್ ಇಟ್ಟುಕೊಳ್ಳಬೇಕೆನ್ನುವಷ್ಟು ರೇಜಿಗೆಯಾಗಿದೆ ಎಂದು ವಿಚಾರಣೆಯ ಸಂದರ್ಭದಲ್ಲಿ ಮಾಡಿದ್ದ ಟಿಪ್ಪಣಿ ಗಮನಾರ್ಹವಾಗಿತ್ತು.
ಈ ವಿದ್ಯಮಾನದ ಬೆನ್ನಿನಲ್ಲೇ ಇಸ್ರೇಲಿನ ಪೆಗಸಸ್ ಕಂಪನಿಯ ಗೂಢಚರ್ಯೆ ಸಾಫ್ಟ್ ವೇರ್ ಭಾರತದ ನಾಗರಿಕರ ಮೊಬೈಲುಗಳ ಮೇಲೆ ಬಳಕೆಯಾಗಿರುವ ವರದಿಗಳು ಬಂದಿವೆ. ಈ ವರ್ಷದ ಆರಂಭದಲ್ಲಿ ಸೌದಿ ಅರೇಬಿಯಾದ ಭದ್ರತಾ ಏಜೆನ್ಸಿಗಳು ತಮ್ಮ ದೇಶದ ಪತ್ರಕರ್ತ ಜಮಾಲ್ ಖಶೋಗಿಯ ಬೆನ್ನು ಬಿದ್ದಿದ್ದವು. ಕಡೆಗೆ ಆತ ಇಸ್ತಾಂಬುಲ್ ನಲ್ಲಿ ಹತ್ಯೆಗೀಡಾದ. ತನ್ನ ಫೋನಿನ ಮಾಹಿತಿಯನ್ನು ಕದಿಯಲು ಇಸ್ರೇಲಿನ ಎನ್.ಎಸ್.ಒ. ರೂಪಿಸಿದ ಗೂಢಚರ್ಯೆ ಸಾಫ್ಟ್ ವೇರ್ ಸಾಧನ ಪೆಗಸಸ್ ನ ಬಳಕೆಯಾಗಿತ್ತು ಎಂಬುದಾಗಿ ಖಶೋಗಿ ಆಪಾದಿಸಿದ್ದ. ಆ ಬಳಿಕ ಸೌದಿ ಅರೇಬಿಯಾದೊಂದಿಗೆ ತನ್ನ ಒಪ್ಪಂದವನ್ನು ಎನ್.ಎಸ್.ಒ. ರದ್ದುಪಡಿಸಿತು.
ಈ ಗೂಢಚರ್ಯೆಯಲ್ಲಿ ತನ್ನ ಪಾತ್ರವಿಲ್ಲ ಎಂದು ಬಿಜೆಪಿ ಸರ್ಕಾರ ಹೇಳಿದೆ. ಖಾಸಗಿತನದ ಕಾಯಿದೆ ಉಲ್ಲಂಘಿಸಿದವರ ವಿರುದ್ಧ ಬಿಗಿ ಕ್ರಮ ಜರುಗಿಸುವ ಮಾತನ್ನೂ ಆಡಿರುವುದು ಸ್ವಾಗತಾರ್ಹ. ಆದರೆ ಭಯೋತ್ಪಾದನೆ ಮತ್ತು ಗಂಭೀರ ಅಪರಾಧಗಳನ್ನು ನಿಯಂತ್ರಿಸಲು ಗೂಢಚರ್ಯೆ ತಂತ್ರಾಂಶವನ್ನು ಕೇವಲ ಲೈಸೆನ್ಸ್ ಹೊಂದಿದ ಸರ್ಕಾರಿ ಸುರಕ್ಷತಾ ಏಜೆನ್ಸಿಗಳಿಗೆ ಮಾತ್ರವೇ ತಾನು ಮಾರಾಟ ಮಾಡುತ್ತ ಬಂದಿರುವುದಾಗಿ ಎನ್.ಎಸ್.ಒ. ಹೇಳಿದೆ. ಹಾಗಿದ್ದರೆ ಭಾರತದಲ್ಲಿ ಸರ್ಕಾರಿ ಏಜೆನ್ಸಿಗಳು ಈ ತಂತ್ರಾಂಶವನ್ನು ಖರೀದಿಸಿಲ್ಲವಾದರೆ ಖರೀದಿಸಿದವರು ಯಾರು ಎಂಬುದನ್ನು ಪತ್ತೆ ಮಾಡಬೇಕಿದೆ.
ಪೆಗಸಸ್ ಖರೀದಿಸುವುದು ಸರ್ಕಾರಗಳು
2015ರಲ್ಲಿ ಪೆಗಸಸ್ ತಂತ್ರಾಂಶವನ್ನು ಖರೀದಿಸಿದ ಘಾನಾ ಎನ್.ಎಸ್.ಒ. ಗೆ ಪಾವತಿ ಮಾಡಿದ ಶುಲ್ಕ ಎಂಟು ದಶಲಕ್ಷ ಡಾಲರುಗಳು. 2011ರಿಂದ 2017ರವರೆಗೆ ಇಂತಹ ಸೇವೆಗಳನ್ನು ಪಡೆದ ಮೆಕ್ಸಿಕನ್ ಸರ್ಕಾರಿ ಸುರಕ್ಷತಾ ಏಜೆನ್ಸಿಗಳು ಎನ್.ಎಸ್.ಒ.ಗೆ ಪಾವತಿ ಮಾಡಿದ್ದು 80 ದಶಲಕ್ಷ ಡಾಲರುಗಳು. ಆದಿವಾಸಿಗಳು, ದಲಿತರು, ಕೂಲಿಕಾರರು, ರೈತರ ಪರವಾಗಿ ಹೋರಾಡುವ ಹೋರಾಟಗಾರರು, ಸರ್ಕಾರಗಳನ್ನು ಟೀಕಿಸುವ ಪತ್ರಕರ್ತರು ಮತ್ತು ನ್ಯಾಯವಾದಿಗಳು ಹಾಗೂ ರಾಜಕಾರಣಿಗಳ ಫೋನುಗಳಲ್ಲಿನ ಮಾಹಿತಿಯನ್ನು ಸಂಗ್ರಹಿಸಲು ಭಾರತದಲ್ಲಿ ಲಕ್ಷಾಂತರ ಡಾಲರುಗಳನ್ನು ವೆಚ್ಚ ಮಾಡುವ ವ್ಯಕ್ತಿ ಅಥವಾ ಸಂಸ್ಥೆ ಯಾವುದು ಎಂಬುದು ಚಿದಂಬರ ರಹಸ್ಯವೇ ಸರಿ. ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್ ಜೊತೆ ಭಾರತ ನಿಕಟ ಬಾಂಧವ್ಯ ಹೊಂದಿದೆ. ಈ ಬಾಂಧವ್ಯವನ್ನು ಬಳಸಿಕೊಂಡು ಎನ್.ಎಸ್.ಒ. ಸೈಬರ್ ವೇರ್ ಕಂಪನಿಯನ್ನು ಕಟಕಟೆಯಲ್ಲಿ ನಿಲ್ಲಿಸಬೇಕಿದೆ.
ಭಾರತದ ಪತ್ರಕರ್ತರು, ಹೋರಾಟಗಾರರು, ನ್ಯಾಯವಾದಿಗಳು, ರಾಜಕಾರಣಿಗಳು ಮುಂತಾಗಿ ತನಗೆ ಆಗದವರ ಗೂಢಚರ್ಯೆ ನಡೆಸುವ ಸರ್ಕಾರದ ಕ್ರಮ ಹೊಸದೇನೂ ಅಲ್ಲ. ಸರ್ಕಾರಗಳು ಅಕ್ರಮವಾಗಿ ಟೆಲಿಫೋನ್ ಕದ್ದಾಲಿಸುವ ಪ್ರಕರಣಗಳು ನೂರಾರು ನಡೆದಿವೆ. ಆದರೆ ವಾಟ್ಸ್ಯಾಪ್ ಸಂದೇಶಗಳನ್ನು ಕದ್ದು ಓದುವ ಕ್ರಮ ಹೊಸದು. ದೇಶದ 20 ಮಂದಿ ಹೋರಾಟಗಾರರು, ನ್ಯಾಯವಾದಿಗಳು, ಪತ್ರಕರ್ತರು, ರಾಜಕಾರಣಿಗಳ ವಾಟ್ಸ್ಯಾಪ್ ಸಂದೇಶಗಳನ್ನು ಕದ್ದು ಓದಲಾಗಿದೆಯಂತೆ. ಈ ಉದ್ದೇಶಕ್ಕಾಗಿ ಇಸ್ರೇಲಿನ ಎನ್.ಎಸ್.ಓ. ಎಂಬ ಖಾಸಗಿ ಸಂಸ್ಥೆ ತಯಾರಿಸಿದ ಗೂಢಚರ್ಯೆ ಸಾಫ್ಟ್ವೇರ್ ಸಾಧನ ಪೆಗಸಸ್ ನ ಬಳಕೆಯಾಗಿದೆ. ಈ ಸಾಧನ ಕೇವಲ ವಾಟ್ಸ್ಯಾಪ್ ಸಂದೇಶಗಳನ್ನು ಮಾತ್ರವೇ ಅಲ್ಲ, ನಿರ್ದಿಷ್ಟ ಮೊಬೈಲ್ ಫೋನಿನಲ್ಲಿರುವ ಎಲ್ಲ ಮಾಹಿತಿಯನ್ನೂ ಸದ್ದಿಲ್ಲದೆ ಸಂಗ್ರಹಿಸಿ ರವಾನೆ ಮಾಡುತ್ತದೆ. ನಿರ್ದಿಷ್ಟ ಮೊಬೈಲು ಬಳಕೆದಾರ ಸ್ವೀಕರಿಸುವ ಕರೆಗಳು, ಮಾಡುವ ಕರೆಗಳು, ಆತನ ಅಥವಾ ಆಕೆಯ ಈ-ಮೇಲ್, ವಾಟ್ಸ್ಯಾಪ್ ವಾಯ್ಸ್ ಕರೆಗಳ ವಿವರಗಳು, ಬ್ರೌಸ್ ಮಾಡಿದ ವಿವರಗಳು, ಆ ಫೋನಿನಲ್ಲಿರುವ ದೂರವಾಣಿ ಸಂಖ್ಯೆಗಳು, ಫೋಟೋಗಳು ಮುಂತಾದ ಎಲ್ಲ ವಿವರಗಳನ್ನೂ ಪೆಗಸಸ್ ತಂತ್ರಾಂಶವು ಅದನ್ನು ‘ಇನ್ಸ್ಟಾಲ್’ ಮಾಡಿದವರಿಗೆ ತಲುಪಿಸುತ್ತದೆ.
ಕಳ್ಳತನದಿಂದ ಮಾಹಿತಿ ಸಂಗ್ರಹಿಸುವವರು ನಿರ್ದಿಷ್ಟ ಮೊಬೈಲ್ ಫೋನಿಗೆ ವಾಟ್ಸ್ಯಾಪ್ ಕರೆ ಮಾಡಿದರೆ ಸಾಕು. ಮೊಬೈಲ್ ಒಡೆಯ ಆ ಕರೆಯನ್ನು ಸ್ವೀಕರಿಸದೆ ಹೋದರೂ ತಂತ್ರಾಂಶ ತಂತಾನೇ ಫೋನನ್ನು ಪ್ರವೇಶಿಸಿ ಸ್ಥಾಪಿತಗೊಳ್ಳುತ್ತದೆ. ಅಗತ್ಯ ಬಿದ್ದರೆ ತಾನೇ ಆ ನಿರ್ದಿಷ್ಟ ಮೊಬೈಲಿನ ಕ್ಯಾಮೆರಾವನ್ನು ಮತ್ತು ಧ್ವನಿಮುದ್ರಿಕೆಯನ್ನು ಚಲಾಯಿಸುತ್ತದೆ ಕೂಡ. ಅಮಾಯಕ ಬಳಕೆದಾರರ ಸಿಂಹಸ್ವಪ್ನವಿದು!
ಪೆಗಸಸ್ ತಂತ್ರಾಂಶವನ್ನು ಸಾಮಾನ್ಯವಾಗಿ ಸರ್ಕಾರೀ ಏಜೆನ್ಸಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಭಾರತದಲ್ಲಿ ಈ ಗೂಢಚರ್ಯೆಗೆ ಗುರಿಯಾಗಿರುವ ಬಹುತೇಕರು ಸರ್ಕಾರವನ್ನು ಟೀಕೆ ಮಾಡುವವರೇ ಆಗಿದ್ದಾರೆ. ಸರ್ಕಾರದ ಕಾರ್ಯವೈಖರಿ ಮತ್ತು ಕಾರ್ಯನೀತಿಗಳನ್ನು ವಿಮರ್ಶೆ ಮಾಡಿದವರೇ ಆಗಿದ್ದಾರೆ. ತನಗೂ ಈ ಗೂಢಚರ್ಯೆಗೂ ಸಂಬಂಧವಿಲ್ಲವೆಂದು ಸರ್ಕಾರ ಸಾರಿ ಹೇಳಿದೆ. ಅಷ್ಟೇ ಅಲ್ಲ, ತನ್ನ ಪ್ರಜೆಗಳ ಖಾಸಗಿತನದ ಉಲ್ಲಂಘನೆಯಾಗಿರುವ ಕುರಿತು ವಾಟ್ಸ್ಯಾಪ್ ನಿಂದ ಸಮಜಾಯಿಷಿ ಕೇಳಿದೆ. ಈ ಕುರಿತು ಉನ್ನತ ಹಂತದ ಸ್ವತಂತ್ರ ವಿಚಾರಣೆ ನಡೆಯಬೇಕು. ಈ ಗೂಢಚರ್ಯೆಯ ಹಿಂದಿರುವವರು ಯಾರೆಂದು ಪತ್ತೆ ಮಾಡಬೇಕು. ಈ ಕೆಲಸದಲ್ಲಿ ಸರ್ಕಾರ ಸಹಕರಿಸಬೇಕು ಮತ್ತು ಪತ್ತೆ ಕಾರ್ಯಕ್ಕೆ ಬೇಕಾದ ವಿಚಾರಣಾ ಅಧಿಕಾರವನ್ನು ಸರ್ಕಾರ ನೀಡಬೇಕು. ಸಂವಹನ ತಂತ್ರಜ್ಞಾನ ಅತ್ಯಾಧುನಿಕಗೊಳ್ಳುತ್ತಿದ್ದಂತೆ ಖಾಸಗಿತನಕ್ಕೆ ಕುತ್ತು ತರುವ ಅಪಾಯಗಳೂ ಹೆಚ್ಚಾಗತೊಡಗಿವೆ. ನಾಗರಿಕರು ಎಷ್ಟು ಎಚ್ಚರ ವಹಿಸಿದರೂ ಸಾಲದು ಎಂಬ ಸ್ಥಿತಿ ಎದುರಾಗಿದೆ.
ಎನ್.ಎಸ್.ಓ ವಿರುದ್ಧ ಅಮೆರಿಕೆಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದೆ ವಾಟ್ಸ್ಯಾಪ್. ಸರ್ಕಾರಗಳು ಮತ್ತು ಕಂಪನಿಗಳು ಅಸಹಾಯಕ ಬಳಕೆದಾರರ ಖಾಸಗಿತನವನ್ನು ಕಾಪಾಡಲು ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ವಾಟ್ಸ್ಯಾಪ್ ತನ್ನ ದಾವೆಯಲ್ಲಿ ಹೇಳಿದೆ. ಈ ಮೊಕದ್ದಮೆಯನ್ನು ವಾಟ್ಸ್ಯಾಪ್ ಎಷ್ಟು ಗಂಭೀರವಾಗಿ, ಎಷ್ಟು ಪ್ರಾಮಾಣಿಕತೆಯಿಂದ ಮುನ್ನಡೆಸಲಿದೆ ಎಂಬುದನ್ನು ವಿಶ್ವದ ಸೈಬರ್ ಲೋಕ ಕಣ್ಣು ಬಿಟ್ಟುಕೊಂಡು ಕಾದು ನೋಡಲಿದೆ.
ಈ ಗೂಢಚರ್ಯೆ ಅಪ್ಪಟ ಅಕ್ರಮ. ಭಯೋತ್ಪಾದನೆ ಇಲ್ಲವೇ ಅಪರಾಧ ಕೃತ್ಯಗಳಲ್ಲಿ ತೊಡಗುವ ವ್ಯಕ್ತಿ ಅಥವಾ ವ್ಯಕ್ತಿಗಳ ಫೋನುಗಳನ್ನು ಸರ್ಕಾರೀ ತನಿಖಾ ಏಜೆನ್ಸಿಗಳು ಕದ್ದು ಆಲಿಸಲು ಅವಕಾಶವಿದೆ. ಅದಕ್ಕೆ ನಿರ್ದಿಷ್ಟ ನಿಯಮಾವಳಿಗಳಿವೆ. ಆ ನಿಯಮಗಳನ್ನು ಮೀರಿ ಕದ್ದಾಲಿಸುವ ಅಧಿಕಾರ ಸರ್ಕಾರೀ ಏಜೆನ್ಸಿಗಳಿಗೂ ಇಲ್ಲ. ಈ ಮಾತು ಮೊಬೈಲ್ ಫೋನುಗಳನ್ನು ಕದ್ದು ಆಲಿಸುವ ಮತ್ತು ಅವುಗಳಲ್ಲಿನ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸುವ ಕೃತ್ಯಕ್ಕೂ ಅನ್ವಯ ಆಗುತ್ತದೆ. ರಾಷ್ಟ್ರೀಯ ಸುರಕ್ಷತೆಯ ನೆಪದಲ್ಲಿ ಪ್ರಭುತ್ವವೇ ಆಗಲಿ, ಕಂಪನಿಗಳೇ ಇರಲಿ, ಈ ಅಕ್ರಮಕ್ಕೆ ಎಳಸಕೂಡದು. ದೇಶವಿರೋಧಿ ಶಕ್ತಿಗಳ ಹೆಸರಿನಲ್ಲಿ ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದವರನ್ನು ಬೇಟೆಯಾಡುವ ಪ್ರವೃತ್ತಿ ಕಳೆದ ಐದು ವರ್ಷಗಳಲ್ಲಿ ಕಣ್ಣಿಗೆ ರಾಚುವಷ್ಟು ನಿಚ್ಚಳವಾಗಿ ಪ್ರಕಟವಾಗಿದೆ.
ತನ್ನ ನಾಗರಿಕರ ಮಾಹಿತಿಯ (ಡೇಟಾ) ಸಾರ್ವಭೌಮ ಹಕ್ಕು ತನ್ನದು ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಆದರೆ ಈ ಡೇಟಾ ಸಾರ್ವಭೌಮತೆಯಲ್ಲಿ ನಾಗರಿಕರ ಖಾಸಗಿತನದ ಹಕ್ಕೂ ಅಡಗಿದೆ ಎಂಬುದನ್ನು ಸರ್ಕಾರ ಮನಗಾಣಬೇಕು. ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕುಗಳಲ್ಲಿ ಒಂದು ಎಂದು ಸುಪ್ರೀಮ್ ಕೋರ್ಟ್ ಎರಡು ವರ್ಷಗಳ ಹಿಂದೆಯೇ ಸಾರಿರುವುದನ್ನು ಸರ್ಕಾರ ಮರೆಯಕೂಡದು. ವ್ಯಕ್ತಿಗತ ಖಾಸಗಿ ಮಾಹಿತಿಗಳನ್ನು ಕಾಯುವ ಕಾಯಿದೆ ಇನ್ನಾದರೂ ರೂಪುಗೊಳ್ಳಬೇಕಿದೆ.