ಕೋವಿಡ್ 19 ನಿಯಂತ್ರಿಸುವುದರಲ್ಲಿ ಕೇಂದ್ರ ಸರ್ಕಾರದ ಮಹತ್ವದ ನಡೆ ಎಂದು ಹೇಳಿಕೊಳ್ಳಲಾಗುವ ಆರೋಗ್ಯ ಸೇತು ಆ್ಯಪ್ ಕುರಿತು ಸಾಕಷ್ಟು ಗೊಂದಲಗಳು ಮೊದಲಿನಿಂದಲೂ ಇದೆ. ಚೊಚ್ಚಲವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಆ್ಯಪ್ ದೇಶವಾಸಿಗಳ ಗೌಪ್ಯತೆಗೆ ಧಕ್ಕೆ ತರುತ್ತದೆ ಎಂಬ ವಿಚಾರವನ್ನು ಹೇಳಿದರು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಹೇಳಿಕೆಗೆ ಪುಷ್ಠಿ ನೀಡುವಂತೆ ಹ್ಯಾಕರ್ ಎಲಿಯಟ್ ಅಲ್ಡರ್ಸನ್ ಸೇತು ಆ್ಯಪನ್ನು ಹ್ಯಾಕ್ ಮಾಡಿ ಮಾಹಿತಿ ಸೋರಿಕೆಯಾಗುತ್ತದೆ ಎಂಬುವುದನ್ನು ಪುರಾವೆ ಸಹಿತ ಬಯಲುಗೊಳಿಸಿದರು.
ಈ ಎಲಿಯಟ್ ಅಲ್ಡರ್ಸನ್ ಎಂಬವರು 2018ರಲ್ಲಿ ಆಧಾರ್ ಕಾರ್ಡ್ ಮಾಹಿತಿಯೂ ಸೋರಿಯಾಗುತ್ತದೆ ಎಂಬುವುದನ್ನೂ ಬಯಲಿಗೆ ಎಳೆದಿದ್ದರು. ಇತ್ತೀಚೆಗೆ ಈ ಆರೋಗ್ಯ ಸೇತು ಆ್ಯಪ್ ಉಪಯೋಗಿಸುತ್ತಿರುವ 9 ಕೋಟಿ ದೇಶವಾಸಿಗಳ ಗೌಪ್ಯ ಮಾಹಿತಿಯೂ ಅಪಾಯದಲ್ಲಿದೆ ಎಂದು ಹೇಳಿದ್ದು. ಇದೀಗ ಇವೆಲ್ಲಾ ಅಂಶಗಳಿಗೆ ಬೆನ್ನು ನಿಲ್ಲುವಂತೆ ಇಂಟರ್ನೆಟ್ ಫ್ರೀಡಂ ಫೌಂಡೇಷನ್ ಒಂದು ವರದಿಯನ್ನು ತಯಾರಿಸಿ ತಮ್ಮ ಅಧಿಕೃತ ಜಾಲದಲ್ಲಿ ಪ್ರಕಟಿಸಿದೆ.
ಆರೋಗ್ಯ ಸೇತು ಆ್ಯಪ್ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮೇಲ್ನೋಟದಲ್ಲಿದೆ. ಈ ಸಚಿವಾಲಯದ ಶಿಷ್ಟಾಚಾರದ (Protocol) ಅನ್ವಯ ಆರೋಗ್ಯ ಸೇತು ಕಾರ್ಯನಿರ್ವಹಿಸುತ್ತಿದೆ. ಆದರೆ ಈ ಆ್ಯಪ್‌ನ ಎಲ್ಲಾ ಮಾಹಿತಿಗಳನ್ನು ಶೇಖರಿಸುವ ಕೆಲಸ ಮಾತ್ರ ಕೇಂದ್ರ ಸರ್ಕಾರದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಕೈಯಲ್ಲಿದೆ. ಈ ಆ್ಯಪ್ ಕುರಿತಾಗಿ ಹಲವು ಅನುಮಾನಗಳು ವ್ಯಕ್ತವಾದ ಮೇಲೂ ರೈಲ್ವೇ ಇಲಾಖೆ ವಿಶೇಷ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕಡ್ಡಾಯವಾಗಿ ಆ್ಯಪ್ ಅನ್ನು ಹೊಂದಿರಬೇಕು ಎಂದು ಟ್ವೀಟ್ ಮಾಡಿತ್ತು. ಈ ಹಿನ್ನೆಲೆ ಇಂಟರ್ನೆಟ್ ಫ್ರೀಡಂ ಫೌಂಡೇಷನ್ ಎಂಬ ಸಂಸ್ಥೆ ಈ ಕುರಿತ ಸಂಪೂರ್ಣ ಮಾಹಿತಿ ಕಲೆ ಹಾಕಿ ವರದಿಯೊಂದನ್ನು ಮಾಡಿದೆ. ಈ ವರದಿಯಲ್ಲಿ ಆರೋಗ್ಯ ಸೇತು ಆ್ಯಪ್‌ನಿಂದಾಗಿ ದೇಶವಾಸಿಗಳ ಗೌಪ್ಯತೆಗೆ ಧಕ್ಕೆಯಾಗಬಹುದು ಎಂದು ಹೇಳಿದೆ.
ಪ್ರಮುಖ ಮೂರು ಅಂಶಗಳನ್ನು ಮುಂದಿಟ್ಟುಕೊಂಡು ಐಎಫ್ಎಫ್ ಸಂಸ್ಥೆ ವರದಿಯನ್ನು ಪ್ರಕಟಿಸಿದೆ. ಆರೋಗ್ಯ ಸೇತು ಆ್ಯಪ್ನಲ್ಲಿ ಕಾನೂನುಬದ್ಧತೆಯ ತತ್ವಗಳು ಉಲ್ಲಂಘನೆಯಾಗಿದೆ, ಸದ್ಯಕ್ಕೆ ಈ ಆ್ಯಪ್‌ನ ಅವಶ್ಯಕತೆ ಏನಿತ್ತು ಮತ್ತು ಇದು ಪ್ರಮಾಣಿಕವಾಗಿಲ್ಲ ಎಂದು ಹೇಳಿದೆ.
ಸಂವಿಧಾನ ಬದ್ಧವಾಗಿ ದೇಶವಾಸಿಗಳಿಗೆ ಮೂಲಭೂತವಾಗಿ ನೀಡಲಾದ ಹಕ್ಕುಗಳಿಗೆ ಈ ಆ್ಯಪ್ ಚ್ಯುತಿ ತರಲಿದೆ ಎಂದು ಹೇಳಿದೆ. ಈ ವಿಷಯದಲ್ಲಿನ ಅನುಮಾನಸ್ಪಾದ ಅಂಶವೆಂದರೆ, ಆ್ಯಪ್‌ನ ಬಳಕೆಯನ್ನು ಜವಾಬ್ದಾರಿಯುತವಾಗಿ ಕಾಪಿಟ್ಟುಕೊಳ್ಳಲು ಆಧಾರವಾಗಿರುವ ಶಾಸನವನ್ನು ರಚಿಸುವ ಯಾವುದೇ ಯೋಜನೆಗಳಿಲ್ಲ. ಸದ್ಯಕ್ಕೆ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವುದು ನಮ್ಮ ಆಧ್ಯತೆಯಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ಹೇಳಿದ್ದರು. ಹೀಗೆ ಯಾವುದೇ ಶಿಷ್ಟಾಚಾರ ಬಹಿರಂಗಗೊಳಿಸದಿರುವ ಕೇಂದ್ರ ಸರ್ಕಾರದ ನಡೆ ಅನುಮಾನಸ್ಪದವಾದದ್ದು ಎಂದು ಐಎಫ್ಎಫ್ ಉಲ್ಲೇಖಿಸಿರುವ ಪ್ರಮುಖ ವಿಚಾರ.
ಆರೋಗ್ಯ ಸೇತು ಆ್ಯಪ್ ಅನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಒಟ್ಟು 11 ವಿಭಾಗಗಳನ್ನು ರಚಿಸಿದೆ. ಈ ಪೈಕಿ 9ನೇ ವಿಭಾಗ ಇದರ ಮಾಹಿತಿ ಮತ್ತು ನಿರ್ವಹಣೆಯ ಹೊಣೆ ಹೊತ್ತುಕೊಂಡಿದೆ. ಆದರೆ ಈ ಆ್ಯಪ್‌ನಲ್ಲಾಗಲಿ, ಸರ್ಕಾರದ ಅಧಿಕೃತ ಸುತ್ತೋಲೆಯಲ್ಲಾಗಲಿ, ಈ ಕುರಿತು ಬಿಡುಗಡೆಗೊಳಿಸಿದ ಪತ್ರಿಕಾ ಪ್ರಕಟಣೆಯಲ್ಲಾಗಲಿ ಈ ಬಗ್ಗೆ ಉಲ್ಲೇಖಿಸಿಲ್ಲ. ಅಲ್ಲದೇ ಈ 9ನೇ ವಿಭಾಗದಲ್ಲಿರುವ ಸದಸ್ಯರ ವಿವರ ಮತ್ತು ಆ್ಯಪ್‌ನ ದತ್ತಾಂಶಗಳನ್ನು ಕಲೆಹಾಕುವ ವಿಧಾನದ ಬಗ್ಗೆಯಾಗಲಿ ಸರ್ಕಾರ ಎಲ್ಲೂ ಕೂಡ ಹೇಳಲಿಲ್ಲ. ಈ ಎಲ್ಲಾ ಅಂಶಗಳನ್ನು ಕೆದಕಿರುವ ಐಎಫ್ಎಫ್ ಈ ಆ್ಯಪ್‌ನ ಆಧಾರ ಮತ್ತು ತರ್ಕಬದ್ಧತೆ ಪ್ರಶ್ನಾರ್ಹವಾಗಿದೆ ಎಂದು ಹೇಳಿದೆ.
ಆರೋಗ್ಯ ಸೇತು ಆ್ಯಪ್‌ನ ಶಿಷ್ಟಾಚಾರವನ್ನು ಈ ಕೆಳಗಿನ ಕೆಲವು ಅಂಶಗಳು ಪ್ರಶ್ನಿಸುವಂತಿದೆ. ಏನೆಂದರೆ, ಈ ಅಪ್ಲಿಕೇಶನ್ ರೂಪಿಸಲು ಸರ್ಕಾರ ಕೆಲವೊಂದು ದತ್ತಾಂಶವನ್ನು ಈ ಮೊದಲೇ ಕಲೆಹಾಕಿದೆ. ಇದನ್ನ ಆಸ್ಪತ್ರೆಗಳು, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ಇಂಟಿಗ್ರೇಟೆಡ್ ಡಿಸೀಸ್ ಕಣ್ಗಾವಲು ತಂಡಗಳ ಮೂಲಕ ಕಲೆಹಾಕಿ ಆ್ಯಪ್ನ ಬೇಸಿಕ್ ಪ್ಲಾಟನ್ನು ನಿರ್ಮಿಸಲಾಗಿದೆ. ಈ ಬಗ್ಗೆಯೂ ಸರ್ಕಾರ ಒಂದೇ ಒಂದು ಸ್ಪಷ್ಟನೆ ಅಥವಾ ಈ ರೀತಿ ಮಾಹಿತಿ ಕಲೆಹಾಕಿದರ ಕುರಿತಾಗಲಿ ಎಲ್ಲೂ ಉಲ್ಲೇಖವಿಲ್ಲ. ಇವೆಲ್ಲವೂ ಪಾರದರ್ಶಕವಾಗಿ ನಡೆಯಬೇಕಿದ್ದ ಕಾರ್ಯಗಳು. ಇವೆಲ್ಲವನ್ನೂ ಕೇಂದ್ರ ಸರ್ಕಾರ ಗೌಪ್ಯವಾಗೇ ನಡೆಸಿ ಅಪ್ಲಿಕೇಶನನ್ನು ರೂಪಿಸಿದೆ. ಇಂತಹಾ ಚಲನಶೀಲತೆ ಮಾಹಿತಿಗಳನ್ನು ಓಪನ್ ಸೋರ್ಸ್ (ತೆರೆದ ಮೂಲಗಳು) ಮೂಲಕ ಕಲೆಹಾಕಿದರೆ ಆ್ಯಪ್ ಅನ್ನು ಅತ್ಯಂತ ವಿಶ್ವಾಸರ್ಹ ಮತ್ತು ಪಾರದರ್ಶಕವಾಗಿರಿಸಲು ಸಾಧ್ಯವಾಗುತ್ತದೆ.
ಆರೋಗ್ಯ ಸೇತು ಆ್ಯಪ್‌ನ ಸೇವಾ ನಿಯಮಗಳನ್ನು ಮತ್ತು ಗೌಪ್ಯತಾ ನೀತಿಯನ್ನು ಹೇಗೆ ನಿರ್ದಿಷ್ಟ ಪಡಿಸಬೇಕಿತ್ತು ಎಂಬುವುದನ್ನು ಸ್ಪಷ್ಟಪಡಿಸುವಲ್ಲಿ ಕೇಂದ್ರ ಸಂಪೂರ್ಣವಾಗಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಗೌಪ್ಯತಾ ನೀತಿಯನ್ನು ಸಂಗ್ರಹಿಸುವಲ್ಲಿ ಮತ್ತು ಸಂಗ್ರಹಿಸಿದ ಮಾಹಿತಿಯನ್ನು ನಿಯಂತ್ರಿಸುವ ಬಗ್ಗೆ ಹಲವು ಗೊಂದಲಗಳಿವೆ. ಉದಾಹರಣೆಗೆ ಡೇಟಾವನ್ನು ನಿಯಂತ್ರಿಸುವ ಮತ್ತು ನಿರ್ವಹಣೆ ಮಾಡುವ ಗುಂಪಿಗೊಂದು ನಿಯಮಾವಳಿಗಳು ಮತ್ತು ಆ್ಯಪ್‌ಗೆ ಭಿನ್ನವಾದ ಶಿಷ್ಟಾಚಾರ ನೀಡಲಾಗಿದೆ. ಹಾಗಿದ್ದರೆ ಇದು ಯಾಕೆ ಹೀಗೆ ಎಂಬುದುವುದನ್ನು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಬೇಕಾದ ಮತ್ತೊಂದು ಅಂಶ. ಒಂದು ವೇಳೆ ಈ ಗೊಂದಲಗಳಿಗೆ ಉತ್ತರ ಸಿಗದೆ ಹೋದರೆ, ಜನರ ವೈಯಕ್ತಿಕ ಮಾಹಿತಿಗಳು ನಮ್ಯತೆಯ ಅಪಾಯ ಎದುರಿಸುತ್ತಿದೆ ಎಂಬುವುದು ಸ್ಪಷ್ಟ.
ಇನ್ನೊಂದು ಮುಖ್ಯ ವಿಚಾರವೆಂದರೆ, 180 ದಿನಗಳಿಗಿಂತ ಹೆಚ್ಚಿನ ಅವಧಿಗೆ ಸರ್ಕಾರವು ಜನರ ಸಂಪರ್ಕ, ಸ್ಥಳ ಮತ್ತು ಸ್ವಯಂ ಮೌಲ್ಯಮಾಪನ ಡೇಟಾವನ್ನು ಏಕಪಕ್ಷೀಯವಾಗಿ ಉಳಿಸಿಕೊಳ್ಳುವ ಅಸಾಮಾನ್ಯ ಸಂದರ್ಭಗಳು ಯಾವುವು ಎಂಬುದನ್ನು ಸ್ಪಷ್ಟಪಡಿಸುವಲ್ಲಿ ಆ್ಯಪ್‌ನ ಪ್ರೊಟೋಕಾಲ್ ವಿಫಲವಾಗಿದೆ. ಹೀಗೆ ನೋಡಿದರೆ ಈ ಆರೋಗ್ಯ ಸೇತು ಆ್ಯಪ್ ನಿಂದ ಸಿಗುವ ಲಾಭ ನಿರ್ವಾತ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಿದ್ದರೂ ಈ ಆ್ಯಪ್ ಅನ್ನು ಕಡ್ಡಾಯವಾಗಿ ಎಲ್ಲರೂ ಹೊಂದಿರಲೇ ಬೇಕು ಎಂಬುದು ಎಷ್ಟರ ಮಟ್ಟಿಗೆ ಸರಿ ಎಂಬುದು ಮತ್ತೊಂದು ಪ್ರಶ್ನೆ.
ಇಷ್ಟೊಂದು ಅಯೋಮಯವಾಗಿರುವ ಆ್ಯಪ್ ಅನ್ನು ಉಪಯೋಗಿಸುವುದು ಕಡ್ಡಾಯ ಮಾಡಿರುವ ಕೇಂದ್ರ ಸರ್ಕಾರದ ಉದ್ದೇಶವೇನು ಎಂಬುವುದು ಗುಮಾನಿ ಹುಟ್ಟಿಸುವಂತದ್ದು, ದಕ್ಷಿಣ ಕೊರಿಯಾ ಮತ್ತು ಸಿಂಗಾಪುರದಲ್ಲಿ ಇಂತಹದ್ದೊಂದು ಆ್ಯಪ್‌ನ ಸಹಾಯದಿಂದಲೇ ಇಂತಹಾ ಹಲವು ವಿಷಮ ಪರಿಸ್ಥಿತಿಗಳನ್ನು ಹತೋಟಿಗೆ ತರಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಅಲ್ಲೆಲ್ಲವೂ ಆ್ಯಪ್ ಪಾರದರ್ಶಕವಾಗಿ ರೂಪಿಸಿ ವಿಶ್ವಾಸಾರ್ಹವಾಗಿ ಸೃಷ್ಟಿಸಿ ಜನರ ಮುಂದಿಡಲಾಗಿದೆ. ಈ ರೀತಿಯಾದ ಹತ್ತು ಹಲವು ಗೊಂದಲಗಳಿಗೆ ಅವು ಕಾರಣವಾಗಿಲ್ಲ ಎಂಬುದು ಗಮನಾರ್ಹ ವಿಚಾರ.