ದೇಶವನ್ನು ಬೆಚ್ಚಿ ಬೀಳಿಸಿದ್ದ ದೆಹಲಿಯ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳಿಗೆ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆಯನ್ನು ಕಾಯಂಗೊಳಿಸಿದೆ.
ಗಲ್ಲು ಶಿಕ್ಷೆಯಿಂದ ಮುಕ್ತಿ ನೀಡುವಂತೆ ಅಪರಾಧಿಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದ್ದು, ಅಪರಾಧಿಗಳನ್ನು ನೇಣುಗಂಭಕ್ಕೆ ಏರಿಸುವುದು ಕಾಯಂ ಆದಂತಾಗಿದೆ.
2012 ರ ಡಿಸೆಂಬರ್ 16 ರಂದು ನಿರ್ಭಯಾಳ ಮೇಲೆ ಆರು ಮಂದಿ ದುಷ್ಕರ್ಮಿಗಳು ಚಲಿಸುತ್ತಿದ್ದ ಬಸ್ಸಿನಲ್ಲಿ ಅತ್ಯಾಚಾರ ಎಸಗಿ, ಹಿಂಸೆ ನೀಡಿ ಭೀಕರವಾಗಿ ಹತ್ಯೆ ಮಾಡಿದ್ದರು. ಸುದೀರ್ಘ ಐದು ವರ್ಷಗಳ ವಿಚಾರಣೆ ನಡೆಸಿದ್ದ ನ್ಯಾಯಾಲಯ 2017 ರಲ್ಲಿ ನಾಲ್ವರು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ನಾಲ್ವರು ಅಪರಾಧಿಗಳ ಪೈಕಿ ಮುಕೇಶ್, ವಿನಯ್ ಮತ್ತು ಪವನ್ ಈ ಹಿಂದೆ ಗಲ್ಲು ಶಿಕ್ಷೆಯನ್ನು ರದ್ದು ಮಾಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು. ಇದೀಗ ಮತ್ತೋರ್ವ ಅಪರಾಧಿ ಅಕ್ಷಯ್ ಸಿಂಗ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟು ತಳ್ಳಿ ಹಾಕಿರುವುದರಿಂದ ಈ ನಾಲ್ವರಿಗೂ ಗಲ್ಲು ಶಿಕ್ಷೆ ಕಾಯಂ ಆಗಿದ್ದು, ಅವರನ್ನು ನೇಣಿಗೇರಿಸುವ ಪ್ರಕ್ರಿಯೆಗೆ ಸದ್ಯದಲ್ಲೇ ಚಾಲನೆ ದೊರೆಯುವ ಸಾಧ್ಯತೆಗಳಿವೆ.
ಸುಪ್ರೀಂಕೋರ್ಟಿನ ನ್ಯಾಯಾಧೀಶರಾದ ಆರ್.ಭಾನುಮತಿ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು, ಇಂದು ಅಕ್ಷಯ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡು ಗಲ್ಲು ಶಿಕ್ಷೆ ತೀರ್ಪನ್ನು ಮರುಪರಿಶೀಲನೆ ನಡೆಸಲು ಯಾವುದೇ ಆಧಾರಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಸುಪ್ರೀಂಕೋರ್ಟ್ ಈಗಾಗಲೇ ಎಸಗಿರುವ ತಪ್ಪಿಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಮತ್ತೆ ಅರ್ಜಿಯ ವಿಚಾರಣೆಯನ್ನು ನಡೆಸುವ ಅಗತ್ಯವೇ ಇಲ್ಲ ಎಂದು ಪೀಠ ಹೇಳಿದೆ.
ಗಲ್ಲು ಶಿಕ್ಷೆ ವಿಧಿಸಿರುವ ತೀರ್ಪಿನಲ್ಲಿ ಯಾವುದೇ ಲೋಪ ಕಂಡುಬರುತ್ತಿಲ್ಲ. ಹೀಗಾಗಿ ಆ ತೀರ್ಪನ್ನು ಪುನರ್ ಪರಿಶೀಲಿಸುವ ಅಗತ್ಯವಿಲ್ಲ. ನ್ಯಾಯಾಲಯ ಈ ತೀರ್ಪನ್ನು ನೀಡುತ್ತಿದ್ದಂತೆಯೇ ಅರ್ಜಿದಾರನ ಪರ ವಕೀಲ ಎ.ಪಿ.ಸಿಂಗ್ ಅವರು, ಕ್ಷಮಾದಾನ ನೀಡುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲು ಮೂರು ವಾರಗಳ ಕಾಲಾವಕಾಶವನ್ನು ಕೋರಿದರು.
ಇದಕ್ಕೆ ಪ್ರತಿಯಾಗಿ ವಾದಿಸಿದ ದೆಹಲಿ ಪರ ವಕೀಲರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಕಾನೂನಿನ ಪ್ರಕಾರ ಒಂದು ವಾರದೊಳಗೆ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಈ ಸಮಯಾವಕಾಶದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ನ್ಯಾಯಪೀಠ, ನಿಗದಿತ ಅವಧಿಯೊಳಗೆ ಕ್ಷಮಾದಾನದ ಅರ್ಜಿ ಸಲ್ಲಿಸುವುದು ಬಿಡುವುದು ಅರ್ಜಿದಾರರಿಗೆ ಬಿಟ್ಟ ವಿಚಾರವಾಗಿದೆ ಎಂದಷ್ಟೇ ತಿಳಿಸಿತು.
ಅಕ್ಷಯ್ ಕುಮಾರ್ ಸಿಂಗ್ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖ ಮಾಡಿರುವ ಅಂಶಗಳನ್ನೇ ಉಳಿದ ಮೂವರು ಅಪರಾಧಿಗಳು ಕಳೆದ ವರ್ಷ ಸಲ್ಲಿಸಿದ್ದ ಕ್ಷಮಾದಾನದ ಅರ್ಜಿಯಲ್ಲಿ ಪ್ರಸ್ತಾಪ ಮಾಡಿದ್ದರು. ಅಲ್ಲದೇ, ತನಿಖೆಯಲ್ಲಿ ನಡೆದಿರುವ ಲೋಪಗಳ ಅಂಶಗಳನ್ನೂ ಉಲ್ಲೇಖ ಮಾಡಿದ್ದರು. ಆದರೆ, ಈ ಎಲ್ಲಾ ಅಂಶಗಳನ್ನು ಕಳೆದ ವರ್ಷವೇ ನ್ಯಾಯಾಲಯ ಪರಿಶೀಲನೆ ಮಾಡಿದ ನಂತರವೇ ಆ ಮೂವರು ಅಪರಾಧಿಗಳ ಅರ್ಜಿಗಳನ್ನು ವಜಾ ಮಾಡಿತ್ತು. ಈ ಹಿನ್ನೆಲೆಯಲ್ಲಿ ಈ ಅಪರಾಧಿಯ ಅರ್ಜಿಯ ಮನವಿಯಂತೆ ತೀರ್ಪನ್ನು ಮರುಪರಿಶೀಲಿಸುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಈ ಮಧ್ಯೆ, ಸುಪ್ರೀಂಕೋರ್ಟ್ ಕ್ಷಮಾದಾನದ ಅರ್ಜಿಯನ್ನು ವಜಾ ಮಾಡಿದ್ದನ್ನು ನಿರ್ಭಯಾಳ ತಾಯಿ ಸ್ವಾಗತಿಸಿದ್ದಾರೆ. ನ್ಯಾಯಾಲಯದ ಈ ತೀರ್ಪಿನಿಂದ ನನಗೆ ಸಂತಸವಾಗಿದೆ. ಪಾಟಿಯಾಲ ಹೈಕೋರ್ಟಿನಿಂದ ಮರಣ ದಂಡನೆಯ ವಾರಂಟನ್ನು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.