ನಾವು ಆರೋಗ್ಯ ಕೆಟ್ಟಾಗ ಔಷಧಿಗಳ ಮೊರೆ ಹೋಗುತ್ತೇವೆ. ಇದು ಖಾಯಿಲೆ ಗುಣವಾಗಲು ಅನಿವಾರ್ಯ ಅವಶ್ಯಕತೆ ಆಗಿದೆ. ಆದರೆ ನಾವು ಬಳಸುವ ಔಷಧಗಳೇ ಕಲುಷಿತ ಅಗಿದ್ದರೆ ? ಔಷಧಗಳ ಸುರಕ್ಷತೆ ಬಗ್ಗೆ ಮೊದಲಿನಿಂದಲೂ ದೇಶದಲ್ಲಿ ಚರ್ಚೆ ನಡೆಯುತ್ತಿದೆಯಾದರೂ ನಾವು ನಂಬಿಕೆ ಇಟ್ಟಿರುವ ಪ್ರತಿಷ್ಟಿತ ಕಂಪೆನಿಗಳ ಔಷಧಗಳಲ್ಲೇ ದೋಷ ಪತ್ತೆಯಾದರೆ ಹೇಗನ್ನಿಸುತ್ತೆ ? ಈಗ ಭಾರತದಿಂದ ರಫ್ತಾಗುವ ಔಷಧಗಳಲ್ಲಿ ದೋಷ ಪತ್ತೆಯಾಗಿದ್ದು ಇದನ್ನು ಕಂಡು ಹಿಡಿದಿರುವುದು ಅಮೇರಿಕಾದ ಆಹಾರ ಮತ್ತು ಔಷಧ ನಿಯಂತ್ರಣ ಆಡಳಿತ (ಯುನೈಟೆಡ್ ಸ್ಟೇಟ್ಸ್ ಫುಡ್ ಅಂಡ್ ಡ್ರಗ್ಸ್ ಅಡ್ಮಿನಿಸ್ಟ್ರೇಷನ್)
ದೇಶದ ಪ್ರತಿಷ್ಠಿತ ಔಷಧ ಕಂಪೆನಿಗಳು ತಮ್ಮ ಔಷಧ ತಯಾರಿಕಾ ಕಾರ್ಖಾನೆಗಳಲ್ಲಿ ಗುಣಮಟ್ಟ ಕಾಯ್ದು ಕೊಳ್ಳದ ಕಾರಣ ಅಮೇರಿಕಾದ ಔಷಧ ನಿಯಂತ್ರಣ ಆಡಳಿತ 2019 ರಲ್ಲಿ ಭಾರತದ ಔಷಧ ತಯಾರಕರಿಗೆ 23 ಎಚ್ಚರಿಕೆ ಪತ್ರಗಳನ್ನು ಬರೆದಿದೆ. ಅಮೇರಿಕಾ ಆಮದಾಗುವ ಪ್ರತಿಯೊಂದು ವಸ್ತುವನ್ನೂ ಮುಖ್ಯವಾಗಿ ಆಹಾರ ಪದಾರ್ಥಗಳನ್ನು ಕಟ್ಟು ನಿಟ್ಟಿನ ಗುಣಮಟ್ಟ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ತೇರ್ಗಡೆಯಾದ ವಸ್ತುಗಳನ್ನು ಮಾತ್ರ ದೇಶದೊಳಗೆ ಬಿಡಲಾಗುತ್ತದೆ.
ಈ ವರ್ಷ ಅಮೇರಿಕಾದ ಔಷಧ ನಿಯಂತ್ರಣ ಘಟಕದಿಂದ ಪತ್ರ ಎಚ್ಚರಿಕೆ ಪತ್ರ ಪಡೆದಿರುವ ಪ್ರಮುಖ ಕಂಪೆನಿಗಳೆಂದರೆ ಲುಪಿನ್ , ಗ್ಲೆನ್ ಮಾರ್ಕ್ ಫಾರ್ಮಾಸ್ಯೂಟಿಕಲ್ಸ್ , ಟೊರ್ರೆಂಟ್ ಫಾರ್ಮಾಸ್ಯೂಟಿಕಲ್ಸ್ , ಅರಬಿಂದೋ ಫಾರ್ಮಾ ಮತ್ತು ಕ್ಯಾಡಿಲಾ. ಇದರಿಂದಾಗಿ ಅಮೇರಿಕಾದಲ್ಲಿ ದೇಶದ ಔಷದ ಆಡಳಿತವು ತಪಾಸಣೆಯನ್ನು ಇನ್ನಷ್ಟು ಬಿಗಿಗೊಳಿಸಿದೆ. ಕಳೆದ 2018 ರ ಅಕ್ಟೋಬರ್ ನಿಂದ ಈ ವರ್ಷದ ಅಕ್ಟೋಬರ್ ವರೆಗೆ ಅಮೇರಿಕಾದ ಆಡಳಿತ ತಪಾಸಣೆ ಮಾಡಲಾದ ಔ಼ಷಧಗಳಲ್ಲಿ ಭಾರತೀಯ ಕಂಪೆನಿಗಳೇ ಮೂರನೇ ಒಂದರಷ್ಟು ಭಾಗ ಇದ್ದವು.
ಅಮೇರಿಕದ ತನಿಖಾ ಪತ್ರಕರ್ತೆ ಕ್ಯಾಥರೀನ್ ಇಬನ್ ಕಳೆದ ಮೇ ತಿಂಗಳಿನಲ್ಲಿ ಪ್ರಕಟಿಸಿದ ದಿ ಬಾಟಲ್ ಆಫ್ ಲೈಸ್ ಪುಸ್ತಕದಲ್ಲಿ ಭಾರತೀಯ ಔಷಧ ಕಂಪೆನಿಗಳ ವಿರುದ್ದ ತಮ್ಮ ಉತ್ಪಾದನಾ ಘಟಕದಲ್ಲಿ ಗುಣಮಟ್ಟದ ನಿಯಂತ್ರಣ ಮತ್ತು ವಿಷಕಾರಿ ಕಲ್ಮಶಗಳ ಬಗ್ಗೆ ದತ್ತಾಂಶವನ್ನು ತಿರುಚಲಾಗುತ್ತಿದೆ ಮತ್ತು ಉತ್ಪಾದನಾ ಘಟಕಗಳಲ್ಲಿ ಪಕ್ಷಿ ಜ್ವರ ಬ್ಯಾಕ್ಟೀರಿಯಾಗಳನ್ನೂ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಅವರು ಭಾರತೀಯ ಔಷಧಿಗಳನ್ನು ‘ಅಲ್ಪಬೆಲೆಯ ಮಾರುಕಟ್ಟೆ ಗುಣಮಟ್ಟ’ ಎಂದು ಹಣೆಪಟ್ಟಿ ಕೊಟ್ಟಿದ್ದಾರೆ. ಅದರೆ ಇದರಿಂದ ದೇಶದ ಔಷಧಿ ಕಂಪೆನಿಗಳ ಮೇಲೆ ಹೆಚ್ಚಿನ ಪರಿಣಾಮವೇನೂ ಆಗಿಲ್ಲ. ಔಷಧ ರಂಗ ಅಮೇರಿಕಾದ ಮಾರುಕಟ್ಟೆಯಲ್ಲಿ ಜನರಿಕ್ ಔಷಧಗಳ ಮಾರಾಟಕ್ಕೆ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಹೊಸ ಔಷಧಗಳ ಮಾರಾಟಕ್ಕೆ ಅನುಮತಿ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ.
ಅಮೇರಿಕಾದ ಔಷಧ ಆಡಳಿತ 2019 ರಲ್ಲಿ ಅನುಮೋದನೆ ನೀಡಿದ 476 ಬಗೆಯ ಔಷಧಗಳಲ್ಲಿ ಭಾರತೀಯ ಕಂಪೆನಿಗಳದ್ದು ಶೇಕಡ 43 ರಷ್ಟು ಪಾಲು ಆಗಿದ್ದು 207 ಔಷಧಗಳು ಅನುಮೋದನೆ ಗಳಿಸಿವೆ. 2017 ರಲ್ಲಿ ಭಾರತೀಯ ಔಷಧಗಳ ಅನುಮೋದನೆಯ ಪಾಲು ಶೇಕಡಾ 27 ರಷ್ಟಿದ್ದು 2018 ರಲ್ಲಿ ಶೇಕಡಾ 36 ರಷ್ಟಿತ್ತು. ಈ ಸಂಖ್ಯೆ ಎಚ್ಚರಿಕೆ ಪತ್ರಗಳ ಪರಿಣಾಮ ನಗಣ್ಯ ಎಂದು ಸೂಚಿಸುತ್ತಿದೆ.
ದೇಶದ ೫೦೦ ಕ್ಕೂ ಅಧಿಕ ಕಂಪೆನಿಗಳು ಅಮೇರಿಕಾದಲ್ಲಿ ಔಷಧ ಮಾರಾಟಕ್ಕೆ ಅನುಮತಿ ಪಡೆದಿದ್ದು ಎಚ್ಚರಿಕೆ ಪತ್ರಗಳು ಬರೀ ಭಾರತಕ್ಕೆ ಸೀಮಿತವಲ್ಲ ರಪ್ತು ಮಾಡುವ ವಿಶ್ವದ ನೂರಾರು ಕಂಪೆನಿಗಳಿಗೂ ಪತ್ರ ಬರೆಯಲಾಗಿದೆ ಎಂದು ಔಷದ ತಯಾರಕರೊಬ್ಬರ ಅಭಿಪ್ರಾಯವಾಗಿದೆ. ದೇಶದ ಕಂಪೆನಿಗಳು ತಯಾರಿಕೆಯಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚಿಸುವುದರ ಜತೆಗೇ ಉನ್ನತ ಗುಣಮಟ್ಟದ ತಂತ್ರಜ್ಞಾನವನ್ನು ಬಳಸುವುದರಿಂದ ಮಾನವ ದೋಷಗಳನ್ನು ಕಡಿಮೆಗೊಳಿಸಬೇಕಿದೆ ಎಂದೂ ಅವರು ಹೇಳುತ್ತಾರೆ.
ಉದ್ಯಮಿಯೊಬ್ಬರ ಪ್ರಕಾರ ಈಗ ಅಮೇರಿಕಾದಲ್ಲಿ ಭಾರತ ಮಾತ್ರವಲ್ಲದೆ ರಫ್ತು ಮಾಡುವ ಇತರ ಎಲ್ಲ ದೇಶಗಳ ಔಷಧಿಯನ್ನೂ ಕಟ್ಟು ನಿಟ್ಟಿನ ಗುಣಮಟ್ಟ ತಪಾಸಣೆ ಮಾಡಲಾಗುತ್ತಿದೆ. ಈಗ ಕಳಿಸಲಾಗಿರುವ ಎಚ್ಚರಿಕೆ ಪತ್ರಗಳು ಕೆಟ್ಟ ಅಥವಾ ದೋಷ ಪೂರಿತ ಔಷಧ ಮಾರಾಟಕ್ಕಾಗಿ ಅಲ್ಲ ,ಕೆಲವು ಪ್ರೊಸೀಜರಲ್ ಲ್ಯಾಪ್ಸ್ ಆಗಿದ್ದಕ್ಕೂ ಪತ್ರ ಬರೆಯಲಾಗಿದೆ. ಹಾಗಿದ್ದಿದ್ದರೆ ಕೂಡಲೇ ಅಮೆರಿಕ ಆಡಳಿತ ನಿಷೇಧ ಹೇರುತಿತ್ತು ಎನ್ನುತ್ತಾರೆ.
ಈಗ ವಿಶ್ವಾದ್ಯಂತ ಔಷಧಗಳ ಬೇಡಿಕೆ ದಿನೇ ದಿನೇ ಹೆಚ್ಚುತಿದ್ದು ಇವುಗಳ ಬೆಲೆ ಇಳಿಸುವಂತೆ ಜನತೆ ಒತ್ತಾಯಿಸುತಿದ್ದಾರೆ. ಅಮೇರಿಕಾದಲ್ಲೂ ಇದೇ ಪರಿಸ್ಥಿತಿ ಇದೆ. ಅಗ್ಗದ ಔಷಧ ಮಾರುಕಟ್ಟೆಗಳಾಧ ಭಾರತ ಮತ್ತು ಚೀನಾದಿಂದ ಹೆಚ್ಚಿನ ಗುಣಮಟ್ಟದ ಜೆನೆರಿಕ್ ಔಷಧಗಳನ್ನು ಅಮೇರಿಕದ ಔಷಧ ಆಡಳಿತ ಆಮದು ಮಾಡಿಕೊಳ್ಳಲು ಅಲ್ಲಿಯೇ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ. ಅಮೇರಿಕಾದ ಸರ್ಕಾರಿ ಮೂಲಗಳ ಪ್ರಕಾರ ಅಮೇರಿಕಾ ಆಡಳಿತ ತನ್ನ ಔಷಧ ನಿಯಂತ್ರಣಾ ಇನ್ಸ್ಪೆಕ್ಟರ್ ಗಳನ್ನು ತಾನು ಆಮದು ಮಾಡಿಕೊಳ್ಳುವ ವಿಶ್ವದ ಎಲ್ಲ ದೇಶಗಳ ಉತ್ಪಾದನಾ ಘಟಕಗಳಿಗೂ ದಿಢೀರ್ ಅಗಿ ಕಳಿಸುತಿದ್ದು ಇದರಿಂದ ಗುಣಮಟ್ಟದ ಹೆಚ್ಚಿನ ಮಾಹಿತಿಯನ್ನು ಸ್ಥಳದಲ್ಲೇ ಪಡೆಯಲು ಅನುಕೂಲವಾಗುತ್ತಿದೆ.
ಅಮೇರಿಕವು ತೆಗೆದುಕೊಂಡಿರುವ ಕಟ್ಟುನಿಟ್ಟಿನ ಕ್ರಮಗಳನ್ನು ನಮ್ಮ ಸರ್ಕಾರವೂ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಏಕೆಂದರೆ ಜನಸಾಮಾನ್ಯರು ದಿನೇ ದಿನೇ ಔಷಧಿಗಳಿಗಾಗಿ ಮಾಡುತ್ತಿರುವ ವೆಚ್ಚ ಗಣನೀಯವಾಗಿ ಏರಿಕೆ ದಾಖಲಿಸುತಿದ್ದು ದುಬಾರಿ ಔಷಧಗಳು ಜನರ ಆರೋಗ್ಯದ ಮೇಲೆ ದುಷ್ಪರಿಣಾಂ ಬೀರಬಾರದು ಅಲ್ಲವೇ ?