ಪ್ರಧಾನಿ ನರೇಂದ್ರ ಮೋದಿಯವರ ಮನೆಯಲ್ಲಿ ನವಿಲು ಇರುವುದು ಕೇವಲ ಟ್ರೋಲ್ ಮಾಡುವ, ವ್ಯಂಗ್ಯ ಮಾಡುವ ವಿಚಾರವಲ್ಲ. ನವಿಲಿನ ಜೊತೆಗಿನ ಪ್ರಧಾನಿ ಮೋದಿ ಫೋಟೋ ಶೂಟ್ ಅನ್ನು ಹಲವು ಕೋನಗಳಲ್ಲಿ ಚರ್ಚೆ ಮಾಡಬೇಕಾಗುತ್ತದೆ. ಅದರಲ್ಲಿ ಅತ್ಯಂತ ಪ್ರಮುಖವೆನಿವುದು ಪರಿಸರ ದೃಷ್ಟಿಕೋನ.
ಪ್ರಧಾನಿ ನರೇಂದ್ರ ಮೋದಿಯವರು ತನ್ನ ಮನೆಯಲ್ಲಿ ನವಿಲು ಸಾಕಿದ್ದರೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ 7 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾದ ಅಪರಾಧ ಮಾಡಿದ್ದಾರೆ ಎಂದರ್ಥ. ನವಿಲು ಸಾಕಿಲ್ಲ, ಅದಾಗಿಯೇ ಬರುತ್ತದೆ ಮತ್ತು ಅದಕ್ಕೆ ರೂಢಿಯಾಗಿದೆ ಎನ್ನುವುದಾದರೆ ಅದಕ್ಕೆ ಪ್ರಧಾನಿ ಮೋದಿ ಸಹಿತ ಈವರೆಗೆ ಆಳಿದ ಎಲ್ಲಾ ಸರ್ಕಾರಗಳು ಮತ್ತು ಜನರು ತಲೆತಗ್ಗಿಸಬೇಕಾಗಿದೆ.
ಪ್ರಕೃತಿ ಸರಣಿಯಲ್ಲಿ ನವಿಲು ಅತೀ ಮುಖ್ಯವಾದ ಪಕ್ಷಿ. ಗುಡ್ಡ ಬೆಟ್ಟ ಮತ್ತು ಕಾಡಿನ ಬಯಲು ಪ್ರದೇಶದಲ್ಲಿ ಇರಬೇಕಾದ ನವಿಲು ಈಗ ರಸ್ತೆ ಬದಿ, ಮನೆಗಳು, ಗದ್ದೆಗಳಲ್ಲಿ ಕಾಣಿಸಿಕೊಳ್ಳಲಾರಂಬಿಸಿದೆ. ನವಿಲುಗಳು ಈ ರೀತಿ ಅನಿವಾರ್ಯವಾಗಿ ಮಾನವ ಪ್ರದೇಶಗಳಿಗೆ ಬರಲು ಕಾರಣವಾಗಿದ್ದು ಕಾಡಿನ ಅತಿಕ್ರಮಣ ಮತ್ತು ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆಗಳು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಒಣ ಗುಡ್ಡ ಪ್ರದೇಶಗಳಲ್ಲೂ ಬದುಕುವ ನವಿಲುಗಳ ವಾಸ ಸ್ಥಾನವನ್ನು ಕೈಗಾರಿಕೆಗಳು, ಗಣಿಗಾರಿಕೆಗಳು ಅತಿಕ್ರಮಿಸಿಕೊಂಡಿವೆ. ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆಂದು ಸ್ವಾಧೀನಪಡಿಸಲಾಗಿದ್ದ ಕುತ್ತೆತ್ತೂರು, ಪೆರ್ಮುದೆ, ಬಾಳ, ಕಳವಾರು ಗುಡ್ಡಗಳು ನವಿಲುಗಳು ವಾಸಸ್ಥಾನವಾಗಿತ್ತು. ಯಾವಾಗ ಈ ಗುಡ್ಡಗಳಲ್ಲಿ ಪೆಟ್ರೋಲಿಯಂ ಕಾರ್ಖಾನೆಗಳು ಕಾರ್ಯಾಚರಿಸಲು ಆರಂಭಿಸಿದವೋ ಆಗ ನವಿಲುಗಳಿಗೆ ದಿಕ್ಕು ತೋಚದಂತಾಯಿತು. ಮನುಷ್ಯರಿಗೇನೋ ಪುನರ್ವಸತಿ ಪ್ಯಾಕೇಜ್ ನೀಡಬಹುದು, ನವಿಲುಗಳಿಗೆಲ್ಲಿ ಪುನರ್ವಸತಿ ಎಂದು ಪ್ರಶ್ನಿಸಿ ಆಗ ತಾಲೂಕು ವರದಿಗಾರನಾಗಿದ್ದ ನಾನು ಪತ್ರಿಕೆಯಲ್ಲಿ ಲೇಖನ ಬರೆದಿದ್ದೆ.
ಈಗಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಬೆಟ್ಟ ಗುಡ್ಡಗಳಿಲ್ಲದ ನವಿಲುಗಳು ಅಬ್ಬೇಪಾರಿಗಳಾಗಿವೆ. ರಸ್ತೆ, ಮನೆಗಳ ಛಾವಣಿಯಲ್ಲಿ ಕೂರುವ, ನಲಿಯುವ ನವಿಲುಗಳು ನಮಗೆ ಚಂದ ಕಾಣಬಹುದು. ಆದರೆ ಅದು ಸರಿಯಾದ ನಿಯಮವಲ್ಲ.
ಪ್ರಧಾನಿ ಮೋದಿಯವರ ಮನೆಗೆ ಬಂದ ನವಿಲಿನ ಕಷ್ಟ ಅದಕ್ಕೇ ಗೊತ್ತು. ಗಂಡು ನವಿಲು ತನ್ನ ಸಂಗಾತಿಯೊಂದಿಗೆ ಲೈಂಗಿಕ ಕ್ರೀಯೆ ನಡೆಸುವ ಸಲುವಾಗಿ ಗರಿ ಬಿಚ್ಚಿ ಕುಣಿಯುತ್ತದೆ. ಆ ಸಂದರ್ಭದಲ್ಲಿ ಹಚ್ಚಹಸುರಿ, ತಂಪಾದ ನಿಶ್ಯಬ್ಧ ಸ್ಥಳವೊಂದನ್ನು ನವಿಲು ಬಯಸುತ್ತದೆ. ಆದರೆ ಇಲ್ಲಿ ನವಿಲು ಗರಿ ಬಿಚ್ಚಿದಾಗ ದೂರದಲ್ಲಿ ಕಂಡ ಮೋದಿಯವರು ತಾವಿದ್ದಲ್ಲೇ ತಟಸ್ಥರಾಗೊದು ಬಿಟ್ಟು ನವಿಲಿನ ಸನಿಹದಲ್ಲೇ ಹಾದು ಫೋಟೊ, ವಿಡಿಯೋಗೆ ಪೋಸು ಕೊಡುತ್ತಾರೆ. ಪ್ರಧಾನಿ ಮೋದಿಯವರು ಪ್ರಾಣಿ ಪಕ್ಷಿ, ಪರಿಸರದ ವಿಷಯದಲ್ಲಿ ಸಂವೇದನಾರಹಿತ ಮನುಷ್ಯರ ಅಪ್ಪಟ ಪ್ರತಿನಿಧಿಯಾಗಿ ಕಾಣುತ್ತಾರೆ.

ಇಷ್ಟಕ್ಕೂ ಪ್ರಧಾನಿ ಮೋದಿಯವರ ಮನೆಗೆ ಬಂದ ನವಿಲು ಎಲ್ಲರ ಮನೆಗೂ ಬರುತ್ತದೆ. ಮೋದಿಯವರ ಮನೆಯಲ್ಲಿ ನವಿಲು ಚಂದ ಕಾಣುತ್ತದೆ. ಜಿಂಕೆ, ಕಾಡೆಮ್ಮೆ, ಕಾಡುಕೋಣಗಳು ಕಾಡಿನಿಂದ ಬಂದರೂ ಚಂದ ಕಾಣುತ್ತದೆ. ಆದರೆ ಒಬ್ಬ ಕೃಷಿಕನ ಗದ್ದೆಗೆ ಇಳಿದರೆ ಆತನ ಬದುಕು ಸರ್ವನಾಶವಾಗುತ್ತದೆ. ಕಾಡಿನಲ್ಲಿರಬೇಕಾದ ನವಿಲು ಮನೆಗಳ ಅಂಗಳ ತಲುಪಿದ್ದು ಪ್ರಧಾನಿ ಮೋದಿಯಾದಿಯಾಗಿ ಎಲ್ಲರೂ ಪಶ್ಚಾತಾಪ ಪಟ್ಟು, ವ್ಯವಸ್ಥೆಯನ್ನು ಸರಿಪಡಿಸಬೇಕಾದ ವಿಚಾರವಾಗಿದೆಯೇ ಹೊರತು ಫೋಟೊ ಶೂಟ್ ಮಾಡಿ ಹೆಮ್ಮೆಪಡುವ ವಿಷಯವಂತೂ ಅಲ್ಲವೇ ಅಲ್ಲ.