ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ಕನಿಷ್ಠ 10 ಮಕ್ಕಳು ಸಾವನ್ನಪ್ಪಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ.
ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಜನರಲ್ ಆಸ್ಪತ್ರೆಯಲ್ಲಿ ಈ ಘಟನೆ ಸಂಭವಿಸಿದ್ದು, ರಾತ್ರಿ 2 ಗಂಟೆ ಸುಮಾರಿಗೆ ನವಜಾತ ಶಿಶುಗಳ ತೀವ್ರ ನಿಗಾಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ನಿಮಿಷಗಳಲ್ಲಿ ಇಡೀ ವಾರ್ಡ್ಗೆ ಬೆಂಕಿ ವ್ಯಾಪಿಸಿದ್ದು, ವಾರ್ಡ್ ನಲ್ಲಿದ್ದ 10 ಮಕ್ಕಳು ಸಾವನ್ನಪ್ಪಿವೆ.
ಮೃತ ಪಟ್ಟ ಎಲ್ಲಾ ಶಿಶುಗಳು ಮೂರು ತಿಂಗಳಿನ ಒಳಗಿನವು ಎಂದು ವೈದ್ಯರು ತಿಳಿಸಿರುವುದಾಗಿ ದಿ ಹಿಂದೂ ವರದಿ ಮಾಡಿದೆ. ಘಟಕದಲ್ಲಿ 17 ಶಿಶುಗಳಿದ್ದು, ಏಳು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾಘಟಕದಲ್ಲಿ ಹೊಗೆ ಬರುತ್ತಿರುವುದು ಮೊದಲು ನರ್ಸ್ ಗಮನಕ್ಕೆ ಬಂದಿದೆ. ಅವರು ವೈದ್ಯರನ್ನು ಮತ್ತು ಇತರ ಸಿಬ್ಬಂದಿಯನ್ನು ಎಚ್ಚರಿಸಿದ್ದಾರೆ. ಆದರೆ, ಕ್ಷಿಪ್ರವಾಗಿ ಬೆಂಕಿ ಹರಡಿದೆ.
ಐಸಿಯು ವಾರ್ಡ್, ಡಯಾಲಿಸಿಸ್ ವಿಂಗ್ ಮತ್ತು ಲೇಬರ್ ವಾರ್ಡ್ (ಹೆರಿಗೆಗಾಗಿ ಮೀಸಲಿಟ್ಟ ಆಸ್ಪತ್ರೆಯ ಕೊಠಡಿ) ಯ ರೋಗಿಗಳನ್ನು ಕೂಡಾ ಸುರಕ್ಷಿತವಾಗಿ ಇತರ ಕಡೆಗೆ ವರ್ಗಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಸ್ಪತ್ರೆಯು ನಾಲ್ಕು ಅಂತಸ್ತಿನಲ್ಲಿದ್ದು, ಕಟ್ಟಡದಲ್ಲಿನ ಬೆಂಕಿಯ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಪರಿಣಾಮವಾಗಿರಬಹುದು ಎಂದು ಅಂದಾಜಿಸಲಾಗಿದೆ.