ನರಗುಂದದ ಭೂಕುಸಿತಗಳು ನೂರಾರು ಕುಟುಂಬದ ಜನರ ನಿದ್ದೆ ಹಾಳುಬಿಟ್ಟಿವೆ. ನಗರದ ಕಸಬಾ, ಅರ್ಭಾಣ ಮತ್ತು ಹಗೇದಕಟ್ಟೆ ಪ್ರದೇಶಗಳಲ್ಲಿ ಬಹುತೇಕ ರಾತ್ರಿ ಸಮಯದಲ್ಲಿ ಏಕಾಏಕಿ ಭೂಕುಸಿತವಾಗುತ್ತಿತ್ತು. ಇದೇ ವರ್ಷ ಜನವರಿಯಿಂದ ಇಲ್ಲಿಯವೆರೆಗೆ ಒಟ್ಟು 45 ಭೂಕುಸಿತಗಳಾಗಿದ್ದು ಯಾವುದೇ ಜೀವಹಾನಿಯಾಗಿಲ್ಲ ಎಂಬುದೇ ಸಮಾಧಾನಕರ ಸಂಗತಿ.
ಇದರಿಂದ ಬೇಸತ್ತ ಮತ್ತು ಬೇಸ್ತು ಬಿದ್ದ ಜನರು ಸಂಪೂರ್ಣ ತನಿಖೆಗೆ ಆಗ್ರಹಿಸುತ್ತಲೇ ಇದ್ದರು. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ದೇಶಪಾಂಡೆ ಎಂಬುವವರ ಮನೆಯ ಕಾಂಪೌಂಡ್ ಭಾಗದಲ್ಲಿ ಭೂಕುಸಿತವಾಗಿದ್ದು ವೃದ್ಧರೊಬ್ಬರು ಅದರಲ್ಲಿ ಸಿಕ್ಕಿ ಹಾಕಿಕೊಂಡರು. ಅಂದು ಮುಂಜಾನೆ ರತ್ನಾಕರ ದೇಶಪಾಂಡೆ ಎಂಬ ನಿವೃತ್ತ ಶಿಕ್ಷಕರು, ತಮ್ಮ ಮನೆಯ ಕಾಂಪೌಂಡ್ ನಲ್ಲಿರುವ ಹೂವಿನ ಗಿಡದ ಹತ್ತಿರ ಪೂಜೆಗೆಂದು ಹೂ ತೆಗೆದುಕೊಳ್ಳಲು ಬಂದರು. ಅಲ್ಲಿ ನಿಂತಾಗ ಏಕಾಏಕಿ ಭೂಕುಸಿತವಾಗಿ 8 ರಿಂದ 10 ಅಡಿಗಳಷ್ಟು ಆಳದ ಭೂಕುಸಿತದಲ್ಲಿ ರತ್ನಾಕರ ಅವರು ಸಿಕ್ಕಿಹಾಕಿಕೊಂಡರು. ಪಕ್ಕದ ಗೋಡೆಗಳನ್ನು ಗಟ್ಟಿಯಾಗಿ ಹಿಡಿದು ಕತ್ತಲಲ್ಲಿ ಏನೂ ತಿಳಿಯದೇ ಜೋರಾಗಿ ಕಿರುಚಿಕೊಂಡರು. ತಕ್ಷಣ ನೆರೆಹೊರೆಯವರು ಧಾವಿಸಿ ಏಣಿಯನ್ನು ಕೊಟ್ಟು ಮೇಲೆ ಬರಲು ಅನುವು ಮಾಡಿಕೊಟ್ಟರು. ಇದಾದ ಮೇಲೆ ಜನರು ಸುಮ್ಮನಿರಲಿಲ್ಲ. ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನರಗುಂದದ ಶಾಸಕರೇ ಆದ ಮಂತ್ರಿಗಳಾದ ಸಿ ಸಿ ಪಾಟೀಲರಿಗೆ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ಅದಕ್ಕೆ ಸ್ಪಂದಿಸಿದ ಮಂತ್ರಿಗಳು ಸ್ಥಳ ಪರಿಶೀಲನೆ ಮಾಡಿ ಭೂಗರ್ಭ ಶಾಸ್ತ್ರಜ್ಞರಿಗೆ ಬಂದು ಅಧ್ಯಯನ ನಡೆಸಲು ಆದೇಶಿಸಿದರು.
ನವೆಂಬರ್ 1 ರಿಂದ 14 ನೇ ತಾರೀಖಿನ ವರೆಗೆ ತನಿಖೆ ನಡೆಯಿತು. ಭೂಗರ್ಭ ಶಾಸ್ತ್ರಜ್ಞರು ಈಗ ಗುಡ್ಡಕ್ಕೆ ಹೊಂದಿಕೊಂಡಿರುವ ಕೆಂಪಗೆರೆಯನ್ನು ಸಂಪೂರ್ಣ ಖಾಲಿ ಮಾಡುವಂತೆ ತಿಳಿಸಿ ಮಧ್ಯಂತರ ವರದಿ ನೀಡಿದ್ದಾರೆ. ಈಗ ಮಧ್ಯಂತರ ವರದಿ ನೀಡಲು ಕಾರಣ ಕೆಂಪಗೆರೆಯನ್ನು ಖಾಲಿ ಮಾಡಲು ಬಹಳಷ್ಟು ಸಮಯ ಬೇಕು. ಅದಕ್ಕೋಸ್ಕರ ಜನರಿಗೆ ಏನಾಗಿದೆ ಎಂಬುದನ್ನು ತಿಳಿಸಲು ಈ ಮಧ್ಯಂತರ ವರದಿ.
ಏನಿದೆ ಈ ವರದಿಯಲ್ಲಿ?
ನರಗುಂದ ಪುರಸಭೆ ಮುಖ್ಯಾಧಿಕಾರಿ ಎನ್ ಎಸ್ ಪೆಂಡ್ಸೆ ‘ಪ್ರತಿಧ್ವನಿ’ ತಂಡದೊಂದಿಗೆ ಭೂ ವಿಜ್ಞಾನಿಗಳು ನೀಡಿದ ಮಧ್ಯಂತರ ವರದಿಯ ಬಗ್ಗೆ ತಿಳಿಸಿದರು. ಆ ವರದಿಯ ಪ್ರಕಾರ ತೀವ್ರ ಅಂತರ್ಜಲ ಬಾಧಿತ ಪ್ರದೇಶಗಳಲ್ಲಿ ಅಂತರ್ಜಲದ ಮೇಲ್ಮುಖ ಚಲನೆಯಿಂದ ಭೂಕುಸಿತ ಸಂಭವ ಹೆಚ್ಚಾಗಿರುವ ಅಂಶಗಳಲ್ಲಿ ಒಂದು. ಇಲ್ಲಿ ಹೆಚ್ಚಳಗೊಂಡ ನೀರನ್ನು ಹೊರಹಾಕಿದರೆ ಭೂಕುಸಿತ ತಡೆಗಟ್ಟಬಹುದು ಎಂಬುದು ಭೂಗರ್ಭ ಶಾಸ್ತ್ರಜ್ಞರ ಅಂಬೋಣ.
ಭೂಗರ್ಭ ಶಾಸ್ತ್ರಜ್ಞರು ಈ ಕೆಳಗಿನ ಅಂಶಗಳನ್ನು ಸೂಚಿಸಿದ್ದಾರೆ:
ಮೊದಲು ಫೀಡರ್ ಕಾಲುವೆಯಿಂದ ಕೆಂಪಗೇರಿ ಕೆರಿಗೆ ನೀರು ಹರಿಸುವುದು ಸ್ಥಗಿತ ಮಾಡಲಾಗಿದೆ, ನೀರಿನ ಮೂಲವಾದ ಕೆರೆ ನೀರು ಖಾಲಿ ಮಾಡಿ ತಳ ಭಾಗವನ್ನು ಅಂದರೆ ಕ್ಲೇ ಪದರ ಅಥವಾ ಎಚ್ ಡಿಪಿಇ ಪದರ ಅಥವಾ ಸೂಕ್ತ ಇತರೆ ವಿಧಾನದಿಂದ ಪದರವನ್ನು ಅಳವಡಿಸಿ ನೀರು ಇಂಗುವಿಕೆ ತಡೆಹಿಡಿದಲ್ಲಿ ಮಾತ್ರ ಸದರಿ ಪ್ರದೇಶದಲ್ಲಿ ನೀರಿನ ಹೊರಹರಿವು ನಿಯಂತ್ರಿಸಿ ಭೂಕುಸಿತ ತಡೆಗಟ್ಟಬಹುದು. ಭೂಗತ ಆಹಾರ ಧಾನ್ಯ ತುಂಬುವ ಬಂಕರ್ ಗಳನ್ನು ಭೌದ್ಧಿಕವಾಗಿ ಗುರುತಿಸಿ ಕೆಂಪು ಮಣ್ಣಿನಿಂದ ಮುಚ್ಚಬೇಕು. ಈ ಪ್ರದೇಶದಲ್ಲಿ ಅಂತರ್ಜಲ ಜಿನುಗುವಿಕೆಯಿಂದ ಸಂಗ್ರಹವಾದ ನೀರನ್ನು ಹೊರಹಾಕಲು ಸೂಕ್ತ ವ್ಯವಸ್ಥೆ ಮಾಡಬೇಕು.
ಮುಖ್ಯ ರಸ್ತೆಯು ಸವದತ್ತಿ ತಾಲೂಕಿಗೆ ಸಂಪರ್ಕಿಸುತ್ತದೆ. ಈ ಹಗೇದಕಟ್ಟೆ, ಕಸಬಾ, ಶಂಕರಲಿಂಗನ ಓಣಿ ಇರುವ ಪ್ರದೇಶ ಮುಂಭಾಗದಲ್ಲಿ ಹಾದು ಹೋಗಿದೆ. ರಸ್ತೆಯು ಸೆಬ್ ಸರ್ ಫೇಸ್ ಡೈಕ್ (ಅಂದರೆ ಮೇಲ್ಮುಖ) ರೀತಿಯಲ್ಲಿ ವರ್ತಿಸುತ್ತಿದ್ದರಿಂದ ಮೇಲ್ಕಂಡ ಸ್ಥಳಗಳಿಂದ ಬರುತ್ತಿರುವ ನೀರಿನ ಸೆಲೆಯು ಬ್ಲಾಕ್ ಆಗಿರುವುದು ಕಂಡುಬಂದಿದೆ. ಹೀಗಾಗಿ ಅಂತರ್ಜಲ ಸರಾಗವಾಗಿ ಹರಿಯುವಿಕೆಗೆ ಅಡಚಣೆಯಾಗಿದೆ. ಆದ್ದರಿಂದ ಅಂತರ್ಜಲ ಮೇಲ್ಮುಖ ಚಲನೆಯಿಂದ ಭೂಕುಸಿತ ಹೆಚ್ಚಾಗಿದೆ. ದೇಸಾಯಿ ಬಾವಿ ಇರುವ ಪ್ರದೇಶದ ಮುಂಭಾಗದಲ್ಲಿ ಸವದತ್ತಿ ರಸ್ತೆಗೆ ಪೈಪ್ ಅಳವಡಿಸಿದಲ್ಲಿ ನೀರಿನ ಸೆಲೆಯು ಸರಾಗವಾಗಿ ಚಲಿಸುವುದರಿಂದ ಅಂತರ್ಜಲ ಜಿನುಗುವಿಕೆ ಕಡಿಮೆ ಮಾಡಬಹುದು ಎಂಬಿತ್ಯಾದಿ ಐದು ಸೂಚನೆ ಮಧ್ಯಂತರ ವರದಿಯಲ್ಲಿ ನೀಡಲಾಗಿದೆ.
ಇಲ್ಲಿ ಎರಡು ಎರಡು ವಿಧವಾದ ಕಪ್ಪು ಮತ್ತು ಕೆಂಪು ಮಣ್ಣು ಇದೆ. ಕಪ್ಪು ಮಣ್ಣಿನ ಪದರವು 0.1 ಮೀಟರನಿಂದ 5 ಮೀಟರ್ ದಪ್ಪವಿದೆ. ಕೆಂಪು ಮಣ್ಣು ಎತ್ತರ ಪ್ರದೇಶದಲ್ಲಿ ಮತ್ತು ಭೂಕುಸಿತ ಪ್ರದೇಶಗಳ ಇಳಿಜಾರಿನಲ್ಲಿ ಲಭ್ಯವಿದೆ.
ಇದೇ ರೀತಿ ಗುಡ್ಡದ ಪ್ರದೇಶದಲ್ಲಿ ಹಳೆ ರಾಜ ಮಹಾರಾಜರ ಕಾಲದಲ್ಲಿ ಹಗೇವುಗಳನ್ನು ಅಂದರೆ ಕಾಳು ಕಡಿಗಳನ್ನು ಸಂರಕ್ಷಿಸಲು ಅನೇಕ ದೊಡ್ಡ ದೊಡ್ಡ ನೆಲ ಗುಂಡಿಗಳನ್ನು ತೆರೆಯಲಾಗಿತ್ತು. ಅದರ ಜೊತೆಗೆ ಸಂಕಟದ ಸಮಯದಲ್ಲಿ ರಹಸ್ಯವಾಗಿ ಪಾರಾಗಲು ಕೆಲವು ನೆಲ ಮಾರ್ಗಗಳನ್ನು ಮಾಡಲಾಗಿದೆ ಎಂದು ಊಹಿಸಲಾಗಿದೆ. ಆದರೆ ಭೂಕುಸಿತದ ಪ್ರದೇಶದಲ್ಲಿ ಅವುಗಳು ಇಲ್ಲಿವರೆಗೂ ಲಭ್ಯವಾಗಿಲ್ಲ ಹಾಗೂ ಇವುಗಳು ಕಾರಣವೆಂಬ ಅಂಶವನ್ನು ತಳ್ಳಿಹಾಕುವಂತಿಲ್ಲ.
ಗದುಗಿನ ಎಂಬತ್ತರ ವಯೋಮಾನದವರಾದ ಹಾಗೂ ಆಯುರ್ವೇದ ಪಂಡಿತರಾದ ಡಾ ಕೆ. ಯೋಗೇಶನ್ ಹೇಳುವ ಪ್ರಕಾರ, “ನರಗುಂದವನ್ನು ರಾಜ ಮಹಾರಾಜರ ಕಾಲದಲ್ಲಿ ಐದು ಗ್ರಾಮಗಳಾಗಿ ವಿಂಗಡನೆ ಮಾಡಲಾಗಿತ್ತು. ಈ ಪ್ರದೇಶಗಳಲ್ಲಿ ಹಗೇವು ಗಳನ್ನು ನಿರ್ಮಿಸಿದ್ದರಿಂದ ಇದಕ್ಕೆ ಹಗೇದಕಟ್ಟೆ ಎಂದೂ ಹೆಸರು ಬಂದಿದೆ. ಕಾಲಾನಂತರದಲ್ಲಿ ಇವುಗಳನ್ನು ಮುಚ್ಚಲಾಗಿತ್ತು. ಈಗ ಭಾರಿ ಮಳೆ ಹಾಗೂ ಅಂತರ್ಜಲ ಹೆಚ್ಚಾಗಿದ್ದರಿಂದ ಪದೇ ಪದೇ ಭೂಕುಸಿತವಾಗುತ್ತಿದೆ. ಈ ಹಗೇವುಗಳನ್ನು ಗುರುತಿಸಿ ಕೆಂಪು ಮಣ್ಣಿನಿಂದ ಮುಚ್ಚಬೇಕು. ನಂತರ ನೀರು ಹರಿಯದಂತೆ ವ್ಯವಸ್ಥೆ ಮಾಡಬೇಕು”.
ನರಗುಂದದ ಸಾಮಾಜಿಕ ಕಾರ್ಯಕರ್ತರಾದ ರವಿ ಚಿಂತಾಲ ಅವರು ಪ್ರತಿಧ್ವನಿ ತಂಡದೊಂದಿಗೆ ಮಾತನಾಡಿ “ನಾವೆಲ್ಲ ಭೂಕುಸಿತಕ್ಕೆ ಏನು ಕಾರಣ ಎಂಬುದನ್ನು ಕಾತುರದಿಂದ ಕಾಯುತ್ತಿದ್ದೇವೆ ಹಾಗೆಯೇ ಪ್ರಾಣಹಾನಿಯಾಗದೆಂದು ಭಯಭೀತರೂ ಆಗಿದ್ದೇವೆ. ಭೂಗರ್ಭ ಶಾಸ್ತ್ರಜ್ಞರು ಆದಷ್ಟು ಬೇಗ ಪರಿಹಾರ ಕಂಡು ಹಿಡಿದು ಸಾವಿರಾರು ಜನರ ಪ್ರಾಣ ರಕ್ಷಣೆ ಮಾಡಿದರೆ ಅವರಿಗೆಲ್ಲ ಅನುಕೂಲ ಮಾಡಿದಂತಾಗುತ್ತದೆ” ಎಂದು ಹೇಳಿದ್ದಾರೆ.
ನರಗುಂದ ಪುರಸಭೆ ಅಧಿಕಾರ ಎನ್ ಎಸ್ ಪೆಂಡ್ಸೆ ಹೇಳಿದ್ದು ಹೀಗೆ, “ಭೂಗರ್ಭ ಶಾಸ್ತ್ರಜ್ಞರ ಆದೇಶದ ಮೇರೆಗೆ ಕೆಂಪಗೆರೆಯನ್ನು ಖಾಲಿ ಮಾಡಲಾಗುತ್ತಿದೆ. ಆ ನೀರನ್ನು ತೆಗೆದ ಮೇಲೆಯೇ ಖಚಿತ ಕಾರಣವೇನು ಎಂಬುದನ್ನು ತಿಳಿಯಬಹುದು. ಅಲ್ಲಿಯವರೆಗೆ ಜನರಿಗೆ ಜಾಗರೂಕರಾಗಿರಲು ಸೂಚಿಸಿದೆ ಮತ್ತು ಪುರಸಭೆ ಅಧಿಕಾರಿಗಳು 24 ಗಂಟೆಯೂ ಜನರಿಗಾಗಿ ಲಭ್ಯವಿದ್ದು, ತುರ್ತು ಪರಿಸ್ಥಿತಿ ಅಥವಾ ಏನೇ ದೂರುಗಳಿದ್ದರೂ ಸ್ಪಂದಿಸಲು ಸದಾ ಸಿದ್ಧ”.